Wednesday, April 2, 2014

ಕುರುಕ್ಷೇತ್ರ ನಡೆದ ಭೂಮಿಯಲ್ಲಿ ಮಹಾಯುದ್ಧ..!

                         ಹೊರಗೆ ಬಂದೊಡನೆ ಗಾಳಿ... ಬಿಸಿ ಅಂದರೆ ಬಿಸಿ. ಅಷ್ಟು ದೂರದಲ್ಲಿ ಮೊಳಕಾಲ ತನಕ ಪ್ಯಾಂಟ್ ಏರಿಸಿಕೊಂಡು ಆಟೋದಲ್ಲಿ ಕುಳಿತಿದ್ದವನು "ಕಿಧರ್ ಜಾನಾ ಹೈ..?" ಅಂತ ಕೇಳಿದ. ಉತ್ತರಿಸಬೇಕು ಅನ್ನುವಷ್ಟರಲ್ಲಿ ಇನ್ನೊಂದು ಆಟೋ ಯಮವೇಗದಲ್ಲಿ ಬಂದು ಎದುರಿಗೆ ನಿಂತಿತು. "ಆ ಜಾವೋ ಸಾಬ್" ಅಂದ ಅವನು. ಅದು ಅರ್ಧ ಮನವಿಯಂತೆಯೂ ಇನ್ನರ್ಧ ಆಜ್ಞೆಯಂತೆಯೂ ಇತ್ತು. ಅಷ್ಟರಲ್ಲಿ ಅದೆಲ್ಲಿಂದಲೋ ಬಂದ ಭಿಕ್ಷೆಯ ಹುಡುಗಿ ಅಂಗಿ ಹಿಡಿದು ಎಳೆಯೋದಕ್ಕೆ ಶುರು ಮಾಡಿದಳು. ನಾನು ಹೊರಗೆ ಬಂದದ್ದು ವಿಮಾನ ನಿಲ್ದಾಣದಿಂದಲಾ - ರೇಲ್ವೆ ಸ್ಟೇಷನ್ನಿಂದಲಾ..? ಹಿಂದಿರುಗಿ ನೋಡಿದೆ. ವಿಮಾನ ನಿಲ್ದಾಣವೇ..! ಒಂದು ಲಡಕಾಸಿ ಸುಝುಕಿ ಬೈಕ್ನಲ್ಲಿ ಬಂದು ನಿಂತವನೊಬ್ಬ ಇಬ್ಬರೂ ಆಟೋದವರಿಗೆ ಹಿಂದಿಯ ಹೋಲಿಕೆಯಿದ್ದ ಭಾಷೆಯಲ್ಲಿ ಅದೇನೋ ಬೈಯ್ಯತೊಡಗಿದ. ಅವನು ಕೈ ಎತ್ತಿದಾಗ ಶರ್ಟು ಮೇಲಕ್ಕೇರಿತು. ಬೆಲ್ಟಿನಲ್ಲಿ ಪಿಸ್ತೂಲು..! ಈಗ ಖಚಿತವಾಯ್ತು, ನಾವು ಬಂದಿರುವುದು ಉತ್ತರ ಪ್ರದೇಶಕ್ಕೇ... ಇದು ರಾಜಧಾನಿ ಲಖ್ನೋ..!
                        "ಆಜ್ ಕಲ್ ತೋ ಮೋದಿ ಕಾ ನಾಮ್ ಬಹುತ್ ಚಲ್ ರಹಾ ಹೈ" (ಇತ್ತೀಚೆಗೆ ಮೋದಿ ಬಗ್ಗೆ ತುಂಬಾ ಚಚರ್ೆ ಆಗ್ತಿದೆ) ಅಂದ ಆಟೋ ಡ್ರೈವರ್ ಕಲೀಂ. ನಾವು ಚುನಾವಣೆ ವರದಿಗೆ ಬೆಂಗಳೂರಿನಿಂದ ಬಂದಿರೋ ಪತ್ರಕರ್ತರು ಅನ್ನೋದು ಗೊತ್ತಾದ ನಂತರ ಅವನಲ್ಲಿ ಮಾತನಾಡುವ ಉತ್ಸಾಹ ಗರಿಗೆದರಿತ್ತು. ಉತ್ತರ ಪ್ರದೇಶದ ರಾಜಕೀಯವನ್ನು ವಣರ್ಿಸೋದಕ್ಕೆ ಕಲೀಂ ಬಳಸುತ್ತಿದ್ದ ಭಾಷೆ ಬಹಳ ಆಕರ್ಷಕವಾಗಿತ್ತು. "ನೋಡಿ ಸಾಬ್ ಇಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬ ಬಡವ ಆಗಿರ್ತಾನೆ. ಇನ್ನೊಬ್ಬ ಗೂಂಡಾ. ಮೂರನೆಯವನು ನೇತಾ..!" ಒಂದೇ ವಾಕ್ಯದಲ್ಲಿ ಇಡೀ ಉತ್ತರ ಪ್ರದೇಶವನ್ನು ವರ್ಣಿಸಿಬಿಟ್ಟ ಪುಣ್ಯಾತ್ಮ. "ಮಾಯಾವತಿ ಇದ್ದಾಗ ಹಿಂಗಿರಲಿಲ್ಲ ಸಾಬ್... ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದಾಗಿನಿಂದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಎರಡು ಗುಟುಕು ಕುಡಿದುಬಿಟ್ಟರೆ ಎಲ್ಲರೂ ಗೂಂಡಾಗಳೇ. ಯಾವನು ಯಾವಾಗ ಬಂದೂಕು ತೆಗೀತಾನೋ ಗೊತ್ತೇ ಆಗಲ್ಲ" ಅಂದ. "ಆದರೂ ಮುಸ್ಲಿಮರ ಓಟು ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷಕ್ಕೇ ಅಲ್ಲವಾ..?" ಅಂತ ಸುಮ್ಮನೇ ಕಿಚಾಯಿಸಿದೆ. ಕಲೀಂನ ಮುಖ ಏಕಾಏಕಿ ಗಂಭೀರವಾಯಿತು. "ಯಾವನು ಹೇಳಿದ ನಿಮಗೆ..? ಮುಜಫರ್ನಗರದಲ್ಲಿ ಇದೇ ಅಖಿಲೇಶ್ ಯಾದವ್ *********** ಮುಸ್ಲಿಮರದು" ಅಂತ ಕೆಟ್ಟ ಶಬ್ದವೊಂದನ್ನ ಬಳಸಿದ. "ರಾಯಚೂರಿಗೆ ಬಂದಂಗೆ ಅನ್ನಿಸ್ತಿದೆ ಸಾರ್" ಅಂತ ಕ್ಯಾಮರಾಮ್ಯಾನ್ ಕಿರಣ್ ಹೇಳುವದರೊಂದಿಗೆ ಆಟೋ ಪ್ರಯಾಣ ಮುಕ್ತಾಯಗೊಂಡಿತ್ತು. ನಾವು ಲಖ್ನೋದ ಹೃದಯ ಭಾಗ ಚಾರ್ ಬಾಗಿಗೆ ಬಂದು ತಲುಪಿದ್ವಿ.
ಗೋಮತಿ ಪಾರ್ಕ್ ನಲ್ಲಿರುವ ಮಾಯಾವತಿ ಮೂರ್ತಿ

                         ಇದಷ್ಟನ್ನೂ ಓದಿ ಉತ್ತರ ಪ್ರದೇಶ ಅಂದರೆ ಒಂದು ಅತಿ ಹಿಂದುಳಿದ ಪ್ರದೇಶ ಅನ್ನೋ ನಿರ್ಧಾರಕ್ಕೆ ಬಂದುಬಿಡಬೇಡಿ. ಅಲ್ಲಿನ ವಿಧಾನ ಭವನದ ಸುತ್ತ ಅಡ್ಡಾಡಿದರೆ ಇದೊಂದು ಶ್ರೀಮಂತ ಊರು ಅನ್ನೋದು ಗೊತ್ತಾಗತ್ತೆ. ಇಲ್ಲಿನ ಮಂತ್ರಿ ಮಹೋದಯರ ಬಂಗಲೆಗಳ ಎದುರು ನಮ್ಮವರ ಬಂಗಲೆಗಳು ಏನೇನೂ ಅಲ್ಲ. ಮಾಯಾವತಿ ಮನೆಯ ಹಿತ್ತಾಳೆಯ ಗೇಟು ಕಡಿಮೆ ಅಂದರೂ ಒಂದು ಅಡಿ ದಪ್ಪ ಇದೆ. ಅದ್ಹೇಗೆ ತೆಗೆದು - ಹಾಕಿ ಮಾಡ್ತಾರೋ ಯಾವನಿಗೆ ಗೊತ್ತು..? ಗೋಮತಿನಗರದ ಡಾ. ಬಿ. ಆರ್ ಅಂಬೇಡ್ಕರ್ ಸಾಮಾಜಿಕ್ ಪರಿವರ್ತನ್ ಸ್ಥಳಕ್ಕೆ ಗ್ರಾನೈಟ್ ಅಲ್ಲ - ದುಡ್ಡಿನ ಕಂತೆ ಹೊದಿಸಿದ್ದಾರೇನೋ ಅನ್ನಿಸತ್ತೆ. ಆದರೆ ಅಷ್ಟೆತ್ತರದ ಮಾಯಾವತಿಯ ಪುತ್ಥಳಿ ಮತ್ತು ಸಾಲುಸಾಲಾದ ಆನೆಯ ಮೂರ್ತಿ (ಆನೆ, ಬಿ.ಎಸ್.ಪಿಯ ಚುನಾವಣಾ ಚಿನ್ಹೆ) ಗಳನ್ನು ನೋಡಿದಾಗ ಮಾತ್ರ ವಾಕರಿಕೆ ಬರತ್ತೆ. ಸಾರ್ವಜನಿಕರ ದುಡ್ಡಿನಲ್ಲಿ ಇದನ್ನೆಲ್ಲ ಮಾಡುವ ವಿಕೃತಿ ಅದ್ಯಾಕಾದರೂ ಬರತ್ತೋ ನಾಯಕರಿಗೆ. ಇಂಥ ಇನ್ನೂ ಏಳು ಪಾಕರ್್ಗಳಿವೆ ಲಖ್ನೋದಲ್ಲಿ..! ಆಳುವವರು ಮತ್ತು ಆಳಿಸಿಕೊಳ್ಳುವವರ ಮಧ್ಯದ ಕಂದಕ ಇಲ್ಲಿ ಕಂಡಷ್ಟು ಸ್ಪಷ್ಟವಾಗಿ ಮತ್ತು ವಿಸ್ತಾರವಾಗಿ ಇನ್ನೆಲ್ಲೂ ಕಂಡಿರಲಿಲ್ಲ. ಬಿಡಿ, ವಿಷಯಕ್ಕೆ ಬರೋಣ...
                  ಎಂಭತ್ತು ಲೋಕಸಭಾ ಕ್ಷೇತ್ರಗಳಿರೋ ರಾಜ್ಯ ಇದು. ದೆಹಲಿ ಸಿಂಹಾಸನದ ದಾರಿ ಉತ್ತರ ಪ್ರದೇಶದ ಮೂಲಕವೇ ಹಾದು ಹೋಗತ್ತೆ ಅನ್ನೋ ಮಾತು ಸವಕಲಾಗಿರಬಹುದು. ಆದರೆ, ಸುಳ್ಳಾಗಿಲ್ಲ. ಪಿ.ವಿ ನರಸಿಂಹರಾವ್ ಒಬ್ಬ ಅಪವಾದ ಅನ್ನೋದು ಬಿಟ್ಟರೆ, ಉತ್ತರ ಪ್ರದೇಶವವನ್ನು ಒಲಿಸಿಕೊಳ್ಳದೇ ಬಂದವರನ್ನ ದೆಹಲಿ ಒಳಗೆ ಬಿಟ್ಟುಕೊಂಡಿಲ್ಲ. ಅವರಿಗೆ ಕಿರೀಟ ದಕ್ಕಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ತನಗೆ ಇರುವ ಪ್ರಾಮುಖ್ಯತೆಯನ್ನು ಸರಿಯಾಗಿ ಬಳಸಿಕೊಂಡಿದ್ದರೆ ಈ ರಾಜ್ಯ ಹೀಗಿರುತ್ತಿರಲಿಲ್ಲ. "ಇಲ್ಲಿ ಜನ ಚುನಾವಣೆಯ ಹಿಂದಿನ ದಿನದ ತನಕ ಅಭಿವೃದ್ಧಿಯ ಬಗ್ಗೆ ಮಾತಾಡ್ತಾರೆ. ಓಟು ಹಾಕೋದು ಮಾತ್ರ ಜಾತಿಯನ್ನ ನೋಡಿಯೇ" ಅಂತ ಮಾರ್ಮಿಕವಾಗಿ ನಕ್ಕವರು ಪ್ರತ್ಯುಷ್ ಮಣಿ ತ್ರಿಪಾಠಿ. ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನ ಸದಸ್ಯ. ಉತ್ತರ ಪ್ರದೇಶದ ರಾಜಕಾರಣವನ್ನು ಆಳವಾಗಿ ಅಧ್ಯಯನ ಮಾಡಿದ ಮನುಷ್ಯ. "ಬಿ.ಜೆ.ಪಿ ದೊಡ್ಡ ಮಟ್ಟದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಅದಕ್ಕೆ ಮೋದಿ ಅಲೆ ಒಂದೇ ಕಾರಣ ಅಲ್ಲ. ಇಲ್ಲಿ ಕಾಂಗ್ರೆಸ್ ಸ್ಥಿತಿ ದಯನೀಯವಾಗಿದೆ. ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ಅಖಿಲೇಷ್ ಯಾದವ್ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಅಮಿತ್ ಶಾ ಬಂದ ನಂತರ ಮೇಲ್ವರ್ಗದ ಹಿಂದೂ ಮತಗಳ ಮೇಲೆ ಬಿ.ಜೆ.ಪಿ ಹಿಡಿತ ಹೆಚ್ಚಾಗಿದೆ. ಬ್ರಾಹ್ಮಣ - ದಲಿತ ಮತಬ್ಯಾಂಕ್ ಇಟ್ಟುಕೊಂಡು ಗೆಲ್ಲುತ್ತಿದ್ದ ಮಾಯಾವತಿ ಈ ಸಲ ಬ್ರಾಹ್ಮಣರ ಮತಗಳನ್ನ ಮರೆಯಬೇಕು. ಬಿ.ಜೆ.ಪಿ ಗೆಲ್ಲೋದಕ್ಕೆ ಏನೇನು ಬೇಕೋ ಎಲ್ಲಾ ಇಲ್ಲಿದೆ" ಅನ್ನೋದು ತ್ರಿಪಾಠಿಯವರ ವಾದ. ಹೆಚ್ಚೂ ಕಡಿಮೆ ಎಲ್ಲಾ ಚುನಾವಣೆ ಪೂರ್ವ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿಯ ದೊಡ್ಡ ಗೆಲುವಿನ ಭವಿಷ್ಯ ನುಡಿಯುತ್ತಿವೆ. 30 ರಿಂದ 47 ಸ್ಥಾನಗಳಂತೆ. ಸಧ್ಯಕ್ಕೆ ಹತ್ತೇ ಜನ ಬಿ.ಜೆ.ಪಿ ಸಂಸದರಿರೋದು ಇಲ್ಲಿ. ಕನಿಷ್ಠ ಮೂವತ್ತು ಸ್ಥಾನಗಳಲ್ಲಿ ಗೆದ್ದರೂ, ಕಳೆದ ಚುನಾವಣೆಯ ಮೂರು ಪಟ್ಟು ಹೆಚ್ಚು..! ಅದೇನು ಕಡಿಮೆ ಸಾಧನೆ ಅಲ್ಲ.
ಅಮಿತ್ ಶಾ

                  ತುಂಬ ಕುತೂಹಲ ಇದ್ದದ್ದು ಈ ಸಂಭವನೀಯ ಗೆಲುವಿನಲ್ಲಿ ಅಮಿತ್ ಶಾ ಪಾತ್ರ ಏನು ಅನ್ನೋದರ ಬಗ್ಗೆ. ಹತ್ತು ತಿಂಗಳ ಹಿಂದೆ ಏಕಾಏಕಿ ಉತ್ತರ ಪ್ರದೇಶದ ಬಿ.ಜೆ.ಪಿ ಉಸ್ತುವಾರಿ ವಹಿಸಿಕೊಂಡು ಗುಜರಾತದಿಂದ ಬಂದಿಳಿದರು ಅಮಿತ್ ಶಾ. ಸ್ಥಳೀಯ ಮುಖಂಡರ ಮೊದಲ ಸಭೆಯಲ್ಲಿ ಶಾ ಮಾಡಿದ ಘೋಷಣೆ "ಬೂತ್ ಜೀತೊ - ಚುನಾವ್ ಜೀತೊ" (ಬೂತ್ ಗೆಲ್ಲಿ - ಚುನಾವಣೆ ಗೆಲ್ಲಿ). ಅಮಿತ್ ಶಾ ಪಾಲಿಗೆ ಉತ್ತರ ಪ್ರದೇಶದಲ್ಲಿ ಸ್ಥಧರ್ೆ ಇರೋದು ಎಂಭತ್ತು ಲೋಕಸಭಾ ಕ್ಷೇತ್ರಗಳಲ್ಲಲ್ಲ. ಒಂದು ಲಕ್ಷ ಅರವತ್ತೇಳು ಸಾವಿರದ ಚಿಲ್ಲರೆ ಪೋಲಿಂಗ್ ಬೂತ್ಗಳಲ್ಲಿ..! ಇದು ಅವರಿಗೆ ಸೂತ್ರ ಸಂಬಂಧ ಇಲ್ಲದ ರಾಜ್ಯ. ಏಳೆಂಟು ಬಣಗಳಾಗಿ ಒಡೆದು ಹೋಗಿದ್ದ ಬಿ.ಜೆ.ಪಿ ಯಾವ ಬಣದ ಯಾವ ಮುಖಂಡನ ಜೊತೆಗೂ ಅಮಿತ್ ಶಾಗೆ ಗಾಢ ಸಂಬಂಧಗಳಿರಲಿಲ್ಲ. ಇದು ಉತ್ತರ ಪ್ರದೇಶದಲ್ಲಿ ಇವರಿಗೆ ದೊಡ್ಡ ಪ್ಲಸ್ ಪಾಯಿಂಟ್. ಯಾವುದೇ ಭಿಡೆ ಇಲ್ಲದೇ ತಪ್ಪುಗಳನ್ನ ಸರಿ ಮಾಡೋದಕ್ಕೆ ನಿಂತರು. ಹಿರಿಯ ನಾಗರಿಕರ ಸಾಲಿಗೆ ಸೇರಿದ್ದ ಮುಖಂಡರಿಗೆ ಸಲಹಾ ಸಮಿತಿಯ ಕೆಲಸ ಕೊಟ್ಟು ಯುವ ನಾಯಕರನ್ನ ಕೆಲಸಕ್ಕೆ ಹಚ್ಚಿದರು. ಪಕ್ಷಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಲ್ಲಿ ವರುಣ್ ಗಾಂಧಿಯಂಥವರ ಮಾತು ನಡೆಯೋದಕ್ಕೆ ಶುರುವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಅಮಿತ್ ಶಾ ಆರ್.ಎಸ್.ಎಸ್ ಮೂಲದಿಂದ ಬಿ.ಜೆ.ಪಿಗೆ ಬಂದು ನಂತರದ ಬೆಳವಣಿಗೆಗಳಿಂದ ದೂರವಾಗಿದ್ದವರನ್ನ ವಾಪಸ್ ಕರೆದುಕೊಂಡು ಬಂದರು. ಗೆಲುವಿನ ಸಾಧ್ಯತೆ ಬಿಟ್ಟರೆ ಇನ್ನೊಂದೇ ಒಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳದೇ ಅಭ್ಯರ್ಥಿಗಳ ಆಯ್ಕೆ ಮಾಡಿದರು. (ಎಂಭತ್ತು ಕ್ಷೇತ್ರಗಳ ಪೈಕಿ ಇಪ್ಪತ್ತೈದು ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳಿಂದ ಬಂದವರಿಗೆ ಟಿಕೆಟ್ ಕೊಡಲಾಗಿದೆ. ಅದು ಸ್ಥಳೀಯ ಬಿ.ಜೆ.ಪಿ ಮುಖಂಡರಿಗೆ ಸರಿ ಬಂದಿಲ್ಲ. ಎಲ್ಲೇನಾದರೂ ಹೆಚ್ಚೂ ಕಡಿಮೆಯಾದರೆ ಅಮಿತ್ ಶಾ ತಲೆಗೆ ಬರತ್ತೆ..!) ಆತ ಎಲ್ಲೂ ಕೋಮುವಾದಿ ಮಾತುಗಳನ್ನ ಆಡಲಿಲ್ಲ. ಅಯೋಧ್ಯೆಯ ರಾಮಮಂದಿರದ ದರ್ಶನ ಮಾಡಿಕೊಂಡು ಬಂದು ತಲುಪಿಸಬೇಕಾದ ಸಂದೇಶವನ್ನು ತಲುಪಿಸಬೇಕಾದಲ್ಲಿ ತಲುಪಿಸಿದರು. ಜಡ್ಡುಗಟ್ಟಿಹೋಗಿದ್ದ ಬಿ.ಜೆ.ಪಿ ಕೇಡರ್ಗಳಲ್ಲಿ ಮಿಂಚಿನ ಸಂಚಾರ ಉಂಟಾಗಿದ್ದೇ ಈ ಮನುಷ್ಯ ಬಂದ ಮೇಲೆ. ಕೋಮುವಾದಿ ಅಜೆಂಡಾ, ಅವರ ಮೈಮೇಲಿನ ಕೇಸುಗಳು, ಗುಜರಾತ್ ಅಭಿವೃದ್ಧಿಯ ವೈಭವೀಕರಣ ಇವೆಲ್ಲಾ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ, ಅಮಿತ್ ಶಾರ ಸಂಘಟನಾ ಶಕ್ತಿಯನ್ನ ಒರೆಗೆ ಹಚ್ಚಿದ್ದು ಉತ್ತರ ಪ್ರದೇಶ. ನರೇಂದ್ರ ಮೋದಿ ಅದೆಂಥಾ ಸಶಕ್ತ ದಂಡನಾಯಕನೊಬ್ಬನನ್ನ ತಯಾರು ಮಾಡಿಟ್ಟುಕೊಂಡಿದ್ದಾರೆ ಅನ್ನೋದು ಕರೆಕ್ಟಾಗಿ ಅರ್ಥ ಆಗಬೇಕು ಅಂದರೆ ಇಲ್ಲಿಗೆ ಬಂದ ಹತ್ತು ತಿಂಗಳಲ್ಲಿ ಅಮಿತ್ ಶಾ ಮಾಡಿದ ಕೆಲಸವನ್ನ ನೋಡಬೇಕು.
                 ನಾವು ಕರ್ನಾಟಕದಲ್ಲಿ ಜಾತಿ ರಾಜಕೀಯ ಜಾಸ್ತಿ ಅಂತ ಮಾತಾಡಿಕೊಳ್ತೀವಿ. ಉತ್ತರ ಪ್ರದೇಶಕ್ಕೆ ಹೋಲಿಸಿದರೆ ನಮ್ಮದು ಏನೇನೂ ಅಲ್ಲ. ಸ್ವಾತಂತ್ರ್ಯಾ ನಂತರ ಎಲ್ಲಾ ಕಡೆ ಇದ್ದಂತೆ ಇಲ್ಲಿ ಕೂಡ ಕಾಂಗ್ರೆಸ್ ಬಲಿಷ್ಠವಾಗಿತ್ತು. ದಲಿತರು - ಹಿಂದುಳಿದವರು - ಮುಸ್ಲಿಮರು. ಕಾಂಗ್ರೆಸ್ಗೆ ಇನ್ನೇನು ಬೇಕು..? "ಅಜಗರ್" ಅಂದರೆ "ಆಹಿರ್, ಜಾಟ್, ಗೂಜರ್, ರಾಜಪೂತ್" ಅವರು ಯಾವ ಕಡೆಗಿರ್ತಾರೋ ಗೆಲುವು ಆ ಕಡೆ ಅನ್ನೋದು ಪ್ರಚಲಿತವಿತ್ತು. ಅಂಥದ್ದರಲ್ಲಿ, ಇತರ ಹಿಂದುಳಿದ ವರ್ಗಗಳ ಮತಗಳನ್ನ ಕಾಂಗ್ರೆಸ್ನಿಂದ ಸೆಳೆದುಕೊಂಡು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಚಿಗಿತುಕೊಂಡರು. ಅದರಿಂದ ಕಾಂಗ್ರೆಸ್ಗೆ ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ರಾಮ ಜನ್ಮಭೂಮಿ ಹೋರಾಟ ಮೇಲ್ವರ್ಗದ ಹಿಂದೂಗಳನ್ನ ಕಾಂಗ್ರೆಸ್ನಿಂದ ದೂರ ಮಾಡಿ ಬಿ.ಜೆ.ಪಿಯನ್ನು ಬೆಳೆಸಿತು. ಇದರಿಂದ ಕೊನೆಪಕ್ಷ ಮುಸ್ಲಿಂ ಮತಗಳಾದರೂ ಕಾಂಗ್ರೆ ಗಟ್ಟಿಯಾದವಾ ಅಂದರೆ ಅದೂ ಇಲ್ಲ. ಕಾಂಗ್ರೆಸ್ ಬಾಬರಿ ಮಸೀದಿ ವಿಷಯದಲ್ಲಿ ತಮ್ಮ ಬೆನ್ನಿಗೆ ಚೂರಿ ಇರಿಯಿತು ಅಂದುಕೊಂಡ ಅನೇಕ ಮುಸ್ಲಿಂ ಮುಖಂಡರು ಮುಲಾಯಂ ಸಿಂಗ್ ಯಾದವ್ ಜೊತೆ ಗುರುತಿಸಿಕೊಂಡರು.
ಕಾನ್ಶೀರಾಮ್
 ಅದೇ ಹೊತ್ತಿಗೆ ಕಾನ್ಶಿರಾಮ್ ದಲಿತ ಚಳವಳಿ ಶುರುಮಾಡಿ ಬಹುಜನ ಸಮಾಜ ಪಾರ್ಟಿ ಮೂಲಕ ಕಾಂಗ್ರೆಸ್ ಓಟ್ ಬ್ಯಾಂಕಿಗೆ ಕನ್ನ ಕೊರೆದುಬಿಟ್ಟರು. ಬ್ರಾಹ್ಮಣ ಮತ್ತು ಮೇಲ್ವರ್ಗದ ಹಿಂದೂ ವಿರೋಧಿ ಘೋಷಣೆಗಳಿಂದ ಗುರುತಿಸಲ್ಪಟ್ಟ ಚಳವಳಿ ಅದು. "ಭೂರಾಬಾಲ್ ಸಾಫ್ ಕರೋ" (ಭೂಮಿಹಾರ್, ರಾಜಪೂತ್, ಬ್ರಾಹ್ಮಣ, ಲಾಲಾರನ್ನು ಬಡಿದುಹಾಕಿ) ಅಂತ ಬಿಹಾರದಿಂದ ಹೊರಟ ಘೋಷಣೆ ಉತ್ತರ ಪ್ರದೇಶದ ದಲಿತರನ್ನ ರೋಮಾಂಚನಕ್ಕೀಡು ಮಾಡಿತ್ತು. "ತಿಲಕ್, ತರಾಜೂ, ತಲವಾರ್... ಇನ್ ಕೋ ಮಾರೋ ಜೂತೆ ಚಾರ್" ಅನ್ನೋ ಘೋಷಣೆ ಉತ್ತರ ಪ್ರದೇಶದ ಮೂಲೆಮೂಲೆಯಲ್ಲಿ ಮೊಳಗಿತು. ತಿಲಕ ಅಂದರೆ ಬ್ರಾಹ್ಮಣ. ತರಾಜೂ ಅಂದರೆ ತಕ್ಕಡಿ. ಅದು ವೈಶ್ಯರ ಪ್ರತೀಕ. ಇನ್ನು ತಲವಾರ್ ಅಂದರೆ ಖಡ್ಗ. ಅದು ಕ್ಷತ್ರಿಯರ ಗುರುತು. ಇವಕ್ಕೆ ಚಪ್ಪಲಿಯಲ್ಲಿ ಹೊಡೆಯಿರಿ ಅನ್ನೋ ಘೋಷಣೆ ಕೂಗಿತು ಬಹುಜನ ಸಮಾಜ ಪಕ್ಷ. ಕಾಂಗ್ರೆಸ್ ಪಾಳೆಯದಿಂದ ದಲಿತ ಮತಗಳು ಒಕ್ಕಲೆದ್ದು ಬಿ.ಎಸ್.ಪಿ ತೆಕ್ಕೆಗೆ ಬಂದವು. ತುತರ್ು ಪರಿಸ್ಥಿತಿ ನಂತರ ಅಡ್ರೆಸ್ಸಿಗಿಲ್ಲದಂತೆ ಆಗಿದ್ದ ಕಾಂಗ್ರೆಸ್ ನಿಧಾನವಾಗಿ ಚಿಗಿತುಕೊಳ್ಳಬೇಕು ಅನ್ನುವಷ್ಟರಲ್ಲಿ ಮೇಲಿಂದ ಮೇಲೆ ಹೊಡೆತ ಬಿದ್ದವು ಅದಕ್ಕೆ. ಬರೀ ದಲಿತ ಪರ ಹೋರಾಟದಿಂದ ಅಧಿಕಾರದ ಗದ್ದುಗೆ ಏರಲು ಸಾಧ್ಯವಿಲ್ಲ ಅನ್ನೋದನ್ನ ಅರ್ಥ ಮಾಡಿಕೊಂಡ ಮಾಯಾವತಿ "ಸೋಷಿಯಲ್ ಎಂಜನಿಯರಿಂಗ್" ಅನ್ನೋ ಪರಿಕಲ್ಪನೆ ತಂದರು. ಬ್ರಾಹ್ಮಣ ದಲಿತರು ಒಂದಾಗಿ ಸಿಂಹಾಸನ ಏರುವ ಕಾನ್ಸೆಪ್ಟ್ ಅದು. "ತಿಲಕ್, ತರಾಜೂ, ತಲವಾರ್... ಇನ್ಕೋ ಮಾರೋ ಜೂತೆ ಚಾರ್" ಅಂದಿದ್ದ ಇದೇ ಮಾಯಾವತಿ "ಪಂಡಿತ್ - ಬ್ರಾಹ್ಮಣ ಶಂಖ್ ಬಜಾಯೇಗಾ... ಹಾಥಿ ಬಢತಾ ಜಾಯೇಗಾ..." (ಪಂಡಿತ ಬ್ರಾಹ್ಮಣರು ಶಂಖ ಬಾರಿಸುತ್ತಿದ್ದರೆ - ಆನೆ ಮುನ್ನಡೆಯುತ್ತದೆ..!) ಅಂದುಬಿಟ್ಟರು..!  "ಹಾಥಿ ನಹೀ ಹೈ ಯೇ ಗಣೇಶ್ ಹೈ... ಬ್ರಹ್ಮ, ವಿಷ್ಣು, ಮಹೇಶ್ ಹೈ" ಅನ್ನೋದು ತಮ್ಮ ಚುನಾವಣಾ ಗುರುತಿನ ಚಿನ್ಹೆ ಆನೆಯ ಜೊತೆ ಬ್ರಾಹ್ಮಣ ಸಮುದಾಯವನ್ನು ಗುರುತಿಸಲು ಮಾಯಾವತಿ ಮಾಡಿದ ಇನ್ನೊಂದು ಘೋಷಣೆ. ಅದು ವಕರ್್ಔಟ್ ಆಯಿತು. ನಂತರ ಮುಸ್ಲಿಂ - ಯಾದವ್ ಫ್ಯಾಕ್ಟರ್ ಇಟ್ಟುಕೊಂಡು ಸಮಾಜವಾದಿ ಪಕ್ಷ ಚುನಾವಣೆ ಗೆದ್ದು ಅಖಿಲೇಶ್ ಯಾದವ್ ಮುಖ್ಯಮಂತ್ರಿ ಆದರು. ಲಖ್ನೋದ ಪುರಾತನ ಕಾಫಿ ಹೌಸ್ನಲ್ಲಿ ಕುಳಿತು ಪಾಲಿಟಿಕಲ್ ಸೈನ್ಸ್ನ ನಿವೃತ್ತ ಪ್ರಾಧ್ಯಾಪಕ ರಮೇಶ್ ದೀಕ್ಷಿತ್ ಇವೆಲ್ಲವನ್ನೂ ವಿವರಿಸುತ್ತಿದ್ದರೆ, ಜಾತಿ ಸಮೀಕರಣಗಳ ಅಧ್ಯಯನಕ್ಕೆ ಉತ್ತರ ಪ್ರದೇಶಕ್ಕಿಂತ ಸೂಕ್ತ ರಾಜ್ಯ ಇನ್ನೊಂದಿಲ್ಲ ಅನ್ನಿಸುತ್ತಿತ್ತು.
                   ಆದರೆ, ಈ ಸಲ ಬಿ.ಜೆ.ಪಿಯ ಸಂಭವನೀಯ ಗೆಲುವಿನಲ್ಲಿ ಜಾತಿ ಹೇಗೆ ಕೆಲಸ ಮಾಡುತ್ತೆ ಅನ್ನೋ ಕುತೂಹಲ ಸಹಜ. ಮೇಲ್ವರ್ಗದ ಹಿಂದೂಗಳೂ ಮತ್ತು ಇತರ ಹಿಂದುಳಿದ ವರ್ಗಗಳ ಮತಗಳು ನಮ್ಮ ಪಾಲಿಗೆ ಇವೆ ಅನ್ನೋ ಉತ್ಸಾಹದಲ್ಲಿ ಕಮಲ ಪಕ್ಷ ಇದೆ. ಇನ್ನು ಈ ಸಲ ಮುಸ್ಲಿಂ ಮತಗಳು ಸಾರಾಸಗಟಾಗಿ ಒಂದು ಪಕ್ಷಕ್ಕೆ ಹೋಗುವುದಿಲ್ಲ. ಬಾಬರಿ ಮಸೀದಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಮುಜಫರ್ನಗರ ದಂಗೆ ವಿಷಯದಲ್ಲಿ ಸಮಾಜವಾದಿ ಪಕ್ಷಗಳು ತಮ್ಮ ಬೆನ್ನಿಗೆ ಇರಿದಿವೆ ಅನ್ನೋ ನಂಬಿಕೆ ಮುಸ್ಲಿಮರದು. ಅವರ ಪೈಕಿ ಕೆಲವರು ಬಿ.ಎಸ್.ಪಿ ಕಡೆ ವಾಲಬಹುದಾದರೂ ಬಹುತೇಕರು ತಮ್ಮ - ತಮ್ಮ ಕ್ಷೇತ್ರಗಳಲ್ಲಿ ಬಿ.ಜೆ.ಪಿ ವಿರುದ್ಧ ತೊಡೆ ತಟ್ಟಬಹುದಾದ ಅಭ್ಯರ್ಥಿಯನ್ನು ಬೆಂಬಲಿಸ್ತಾರೆ. ವಾರಾಣಾಸಿಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಜೊತೆ ದೊಡ್ಡ ಮಟ್ಟದಲ್ಲಿ ಸ್ಥಳೀಯ ಮುಸ್ಲಿಮರು ಕಾಣಿಸಿಕೊಂಡಿದ್ದು ಇದಕ್ಕೆ ಸಣ್ಣ ಉದಾಹರಣೆ ಅಷ್ಟೇ. ಇನ್ನು ಶಿಯಾ ಸಮುದಾಯದ ಕೆಲವರು ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಬಿ.ಜೆ.ಪಿ ಬೆಂಬಲಕ್ಕಿದ್ದಾರೆ. ಅದು ಅಪವಾದವೇ ಹೊರತು ನಿಯಮವಲ್ಲ..!
                   ಹಿಂಗಿದೆ ಉತ್ತರ ಪ್ರದೇಶದ ಸಧ್ಯದ ಪರಿಸ್ಥಿತಿ. ಇನ್ನೂ ಸರಳವಾಗಿ ಹೇಳಬೇಕು ಅಂದರೆ, ಇಲ್ಲಿ ಮೇಲ್ವರ್ಗದ ಹಿಂದೂ, ಇತರ ಹಿಂದುಳಿದ ವರ್ಗ, ದಲಿತ ಮತ್ತು ಮುಸ್ಲಿಂ ಅನ್ನೋ ನಾಲ್ಕು ಪ್ರಮುಖ ವರ್ಗಗಳಿವೆ. ಇವುಗಳ ಪೈಕಿ ಎರಡು ವರ್ಗಗಳ ಸಾಲಿಡ್ ಬೆಂಬಲ ಪಡೆದು ಮೂರನೇ ವರ್ಗದ ಮತಬ್ಯಾಂಕ್ನೊಳಕ್ಕೆ ಕೈ ಹಾಕಬಲ್ಲವನಿಗೆ ಗದ್ದುಗೆ ಒಲಿಯುತ್ತದೆ.

1 comment: