Thursday, July 28, 2011

ತಾವೇ ತೋಡಿಕೊಂಡ ಗುಂಡಿಯಲ್ಲಿ ಅಸಹಾಯಕ ಯಡಿಯೂರಪ್ಪ..!

                               "ನಿಮ್ಮ ಫೈಲ್ ನೋಡಿದೆ, ಸೈನ್ ಮಾಡಿಟ್ಟಿರ್ತೀನಿ, ತಗೊಂಡ್ಹೋಗಿ" ಅಂದರು. ನನಗೆ ಒಂದು ಕ್ಷಣ ಏನೂ ಅರ್ಥ ಆಗಲಿಲ್ಲ. "ಯಾವ್ ಫೈಲು ಸಾರ್" ಅಂದೆ. "ಅದೇ, ಕೆ.ಆರ್ ಮಾರ್ಕೆಟ್ ಶಿಫ್ಟ್ ಮಾಡೋದು, ಗುಡ್ ಪ್ರಾಜೆಕ್ಟ್, ಸೈನ್ ಮಾಡಿಟ್ಟಿರ್ತೀನಿ ತಗೊಂಡ್ಹೋಗಿ" ಮತ್ತೆ ಅದೇ ಮಾತು. ನನಗೆ ಮತ್ತೆ ಕನ್ ಫ್ಯೂಷನ್ನು.  ಏನೊಂದೂ ತಿಳಿಯದೇ ಅವರ ಮುಖಾನೇ ನೋಡಿದೆ. ಅಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಆಫೀಸರ್ ಒಬ್ರು ಅವರ ಕಿವೀಲಿ ಅದೇನೋ ಹೇಳಿದರು. ಕಿವಿ ಗಮನಿಸಿದೆ, ಮಷಿನ್ ಇಲ್ಲ. ಅದಿಲ್ಲದಿದ್ದರೆ ಆ ವಯ್ಯನಿಗೆ ಕೇಳಿಸೋದಿಲ್ಲ, ಕೂಗಿ ಹೇಳಬೇಕು. ಕೂಗಿ ಹೇಳೋದಕ್ಕೆ ಆ ಅಧಿಕಾರಿಗೆ ಮಜುಗರ, ಎರಡು ಮಾರು ದೂರದಲ್ಲಿ ಕುಳಿತಿದ್ದ ನನಗೆ ಕೇಳುವಷ್ಟು ಗಟ್ಟಿಯಾಗಿ ಪಿಸುಗುಟ್ಟಿದರು. ಅದನ್ನ ಕೇಳಿಸಿಕೊಂಡ ಆತ, "ಓಹೋ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ನೀವಲ್ಲವಾ..?" ಅಂದುಬಿಟ್ಟ. "ಅಲ್ಲ ಸಾರ್ ನಾನು ನರೇಂದ್ರಸ್ವಾಮಿ ಅಂತ, ಮಳವಳ್ಳಿ ಎಂ.ಎಲ್.ಎ, ಸೋಷಿಯಲ್ ವೆಲ್ಫೇರ್ ಮಿನಿಸ್ಟ್ರು" ಅಂತ ಹೇಳಿದವನೇ ಫೈಲ್ ಎತ್ತುಕೊಂಡು ಎದ್ದುಬಂದುಬಿಟ್ಟೆ ಸಾರ್, ನಂಗೆ ತುಂಬ ಅವಮಾನ ಆಗಿತ್ತು ಅಂದವರೇ ಎದುರಿಗಿದ್ದ ಗ್ಲಾಸ್ ಕೈಗೆತ್ತಿಕೊಂಡು ಒಂದು ಗುಟುಕು ಕುಡಿದರು. ಅವರ ಕಣ್ಣಲ್ಲಿ ನೀರಿದ್ದದ್ದು ಸ್ಪಷ್ಟವಾಗಿ ಕಾಣಿಸಿತ್ತು.
ನರೇಂದ್ರ ಸ್ವಾಮಿ

                 ಹಾಗೆ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ಹಿತ್ತಲಲ್ಲಿ ಲಾನ್ ಮೇಲೆ ಹಾಕಲಾಗಿದ್ದ ಟೇಬಲ್ ಎದುರು ಕುಳಿತು ಮಾತಾಡ್ತಿದ್ದವರು ಸಮಾಜಕಲ್ಯಾಣ ಸಚಿವ ನರೇಂದ್ರಸ್ವಾಮಿ. ಅಷ್ಟೊತ್ತಿಗಾಗಲೇ ಅವರ ಮಂತ್ರಿಗಿರಿ ಹೊರಟುಹೋಗಿ ಶಾಸಕ ಸ್ಥಾನ ಕೂಡ ಅಪಾಯದಲ್ಲಿತ್ತು. ಬಂಡಾಯ ಎದ್ದು ಗೋವಾಕ್ಕೆ ಹೋಗಿದ್ದ ಹದಿನೆಂಟು ಜನರ ಪೈಕಿ ಅವರೂ ಒಬ್ಬರು. ಸರ್ಕಾರ ಕೆಡವಬೇಕು ಅನ್ನೋ ಹಟಕ್ಕೆ ಬಿದ್ದಿದ್ದ ಅವರನ್ನ ಎಚ್.ಡಿ ಕುಮಾರಸ್ವಾಮಿ ಕರಕೊಂಡು ಬಂದಿದ್ದರು. ಅವರದೊಂದು ಇಂಟರ್ವ್ಯೂ ಮಾಡಬೇಕು ಅಂತ ಹಮೀದ್ ಪಾಳ್ಯ ಮತ್ತು ನಾನು ಆವತ್ತು ಸಂಜೆ ಹೋಗಿದ್ವಿ. ಇಂಟರ್ವ್ಯೂ ಮುಗಿಸಿ ಸುಮ್ಮನೆ ಲೋಕಾಭಿರಾಮವಾಗಿ ಮಾತಾಡ್ತಾ ಕುಳಿತಿದ್ದಾಗ, "ನಿಮಗೇನ್ ಕಡಿಮೆ ಆಗಿತ್ತು ಸಾರ್, ಮೊದಲ ಸಲ ಎಂ.ಎಲ್.ಎ ಆದಾಗಲೇ ಕ್ಯಾಬಿನೆಟ್ ಮಂತ್ರಿಗಿರಿ ಸಿಕ್ಕಿತ್ತು, ಗೂಟದ ಕಾರು, ಎಸ್ಕಾರ್ಟ್ ಗೆ ಪೊಲೀಸರು, ಸರಕಾರಿ ಬಂಗಲೆ, ಇಷ್ಟೆಲ್ಲಾ ಇದ್ರೂ ಯಾಕೆ ಬಂಡಾಯ ಎದ್ರಿ..?" ಅಂತ ಕೇಳಿದಾಗ ಅದೊಂದು ಇನ್ಸಿಡೆಂಟ್ ಹೇಳಿದರು ನರೇಂದ್ರಸ್ವಾಮಿ. ಸಂಪುಟ ರಚಿಸಿ ಒಂದೂವರೆ ವರ್ಷವಾಗಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ಯಾರು - ಸಮಾಜ ಕಲ್ಯಾಣ ಸಚಿವ ನರೇಂದ್ರಸ್ವಾಮಿ ಯಾರು ಅನ್ನೋ ಕನ್ಫ್ಯೂಷನ್ನಿತ್ತು.
ಶಿವರಾಜ್ ತಂಗಡಗ

                of course, ಇದೊಂದೇ ಕಾರಣಕ್ಕೆ ಬಂಡಾಯವಾಗಿರಲಿಲ್ಲ. ಆವತ್ತು ಮೂರು ತಾಸು ಮಾತಾಡ್ತಾ ಕುಳಿತಿದ್ದ ನರೇಂದ್ರಸ್ವಾಮಿ ತುಂಬ ವಿಷಯ ಹೇಳಿದರು. ಕ್ಷೇತ್ರದ ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳೋದಕ್ಕೂ ಆಗ್ತಿದ್ದ ಕಷ್ಟಗಳು, ಸಿ.ಎಂ ಆಪ್ತ ಸಚಿವರ ಕಿರಿಕಿರಿಗಳು, ಟೆಂಡರ್ ವಿಷಯಗಳಲ್ಲಿ ಯಡಿಯೂರಪ್ಪನವರ ಕುಟುಂಬದವರ ಹಸ್ತಕ್ಷೇಪಗಳು, ಸಂಪುಟ ಸಭೆ ಕರೆದರೆ ಅಲ್ಲಿ ಪಕ್ಷೇತರರನ್ನ ನಡೆಸಿಕೊಳ್ತಿದ್ದ ರೀತಿ, ಆವಾಗಾವಾಗ ಆಗ್ತಿದ್ದ ಅವಮಾನಗಳು, ಹೀಗೆ. ಒಂದು ಸಲ ಅದ್ಯಾಕೋ ಅಟಲ್ ಬಿಹಾರಿ ವಾಜಪೇಯಿ ನೆನಪಾದರು. ಹದಿಮೂರು ಪಕ್ಷ ಕಟ್ಟಿಕೊಂಡು ಹೆಣಗಿದ ಆ ತಾತಯ್ಯ ಅದೆಷ್ಟು ಯಶಸ್ವಿಯಾಗಿ ಸರಕಾರ ತೂಗಿಸಿಕೊಂಡು ಹೋದರಲ್ಲ, ಆರು ಜನ ಪಕ್ಷೇತರ ಶಾಸಕರನ್ನ ಸಂಭಾಳಿಸೋದಕ್ಕಾಗಲಿಲ್ಲವಾ ಯಡಿಯೂರಪ್ಪನಿಗೆ ಅಂತ.
                Human resource management ಅನ್ನೋದು ಬರಿ corporate sectorಗೆ ಮಾತ್ರ ಅಂದವರಾರು..? ಅದು ರಾಜಕೀಯಕ್ಕೂ apply ಆಗತ್ತೆ, ಆಗಬೇಕು. ಅದೊಂದು ಯಡಿಯೂರಪ್ಪನವರಿಗೆ ಸರಿಯಾಗಿ ಬಂದುಬಿಟ್ಟಿದ್ದರೆ, ಮೂರು ವರ್ಷಗಳಲ್ಲಿ ಬಂದ ಮುಕ್ಕಾಲು ಭಾಗ ಸಮಸ್ಯೆಗಳು ಬರ್ತಾನೇ ಇರಲಿಲ್ಲ. (ರಣ ಹಸಿವು ಮತ್ತು ಮಕ್ಕಳ ಬಗೆಗಿನ ಧೃತರಾಷ್ಟ್ರ ಪ್ರೇಮ ಇರದೇ ಹೋಗಿದ್ದರೆ ಉಳಿದ ಕಾಲು ಭಾಗ ಸಮಸ್ಯೆಗಳೂ ಇರ್ತಿರಲಿಲ್ಲ..!) ಇದೆಲ್ಲ ನಮಗೆ - ನಿಮಗೆ ಸಿಲ್ಲಿ ವಿಷಯ ಅನ್ನಿಸಬಹುದು. ಆದ್ರೆ, ಒಬ್ಬ ಶಾಸಕನಿಗೆ, ಅದರಲ್ಲೂ ಕ್ಯಾಬಿನೆಟ್ ದರ್ಜೆ ಮಂತ್ರಿಗಲ್ಲ. ಅವರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋದರೆ ಮತದಾರರು ಹೆಗಲ ಮೇಲೆ ಹೊತ್ತುಕೊಂಡು ಕುಣೀತಾರೆ. ಅದೇ ಬೆಂಗಳೂರಿಗೆ ಬಂದು ಯಡಿಯೂರಪ್ಪನವರ ಎದುರಿಗೆ ನಿಂತರೆ "ನಿಮ್ಮ ಹೆಸರೇನು..?" ಅಂದುಬಿಡೋರು.
                ರಾಜಕಾರಣಿ ಬೇಸಿಕಲಿ ಒಬ್ಬ egoistic ಮನುಷ್ಯ. ಹೆಜ್ಜೆ - ಹೆಜ್ಜೆಗೂ, ಘಳಿಗೆ ಘಳಿಗೆಗೂ ಆತನ ego satisfy ಆಗ್ತಿರಬೇಕು. ಆತ ಎಲೆಕ್ಷನ್ ಗೆಲ್ಲೋದು ಕೂಡ ಆ ego satisfactionನ ಒಂದು ಭಾಗವೇ. ತಾನು ಆಡಳಿತ ಪಕ್ಷದವನು, ತನ್ನೊಬ್ಬನ ಬೆಂಬಲ ಕೂಡ ಈ ಸರಕಾರ ಭದ್ರವಾಗಿರೋದಕ್ಕೆ ಕಾರಣ ಅನ್ನೋ ಯೋಚನೆ ಕೂಡ ಅವನ ego ತಣ್ಣಗಾಗಿಸತ್ತೆ. ಅದು ಯಡಿಯೂರಪ್ಪನವರಿಗೆ ಗೊತ್ತೇ ಇರಲಿಲ್ಲ ಅಂತ ಅನ್ನಿಸೋದು ಭಿನ್ನಮತೀಯ ಶಾಸಕರನ್ನ ಮಾತಾಡಿಸಿದಾಗ. "ಸಹಿ ಮಾಡಿ ಅಂತ ಯಾವ್ದೋ ಫೈಲ್ ತಗೊಂಡು ಹೋದ್ರೆ ಪ್ಲಾಸ್ಟಿಕ್ ಚೇರ್ ಎತ್ತಿ ಹೊಡೆಯೋದಕ್ಕೆ ಬಂದುಬಿಟ್ರು" ಅಂತ ಇನ್ನೊಬ್ಬ ಶಾಸಕರು ಹೇಳಿದರು. "ಮನಸಿಗೆ ತುಂಬ ಬೇಜಾರಾಗಿ ಎಸ್ಕಾರ್ಟ್ ಜೀಪು, ಬೆಂಗಾವಲಿನ ಪೊಲೀಸರನ್ನ ಬಿಟ್ಟು ಒಬ್ಬನೇ ಹೋಗಿ ನನ್ನ ಮನೆದೇವರ ದೇವಸ್ಥಾನದ ಗರ್ಭ ಗುಡಿಯಲ್ಲಿ ಬಾಗಿಲು ಹಾಕಿಕೊಂಡು ಕುಂತು ಸಾಕು ಸಾಕಾಗೋ ತನಕ ಅತ್ತುಬಿಟ್ಟೆ" ಅಂತ ಹೇಳಿದವರು ಒಬ್ಬ ಸಚಿವ. ಅಂಥವರೆಲ್ಲ ಸೇರಿಕೊಂಡು ಯಡಿಯೂರಪ್ಪನಿಗೆ ಮರೆಯಲಾಗದ ಪಾಠ ಕಲಿಸ್ತೀವಿ ಅಂತ ಹೊರಟಾಗ ನಡೆದದ್ದೇ ಗೋವಾ ಬಂಡಾಯ.
                ಪರಿಸ್ಥಿತಿ ಎಲ್ಲಿಗೆ ಬಂದಿತ್ತೆಂದರೆ, ವಿರೋಧ ಪಕ್ಷದಲ್ಲಿ ಒತ್ತಟ್ಟಿಗಿರಲಿ, ಆಡಳಿತ ಪಕ್ಷದಲ್ಲೇ ಯಡಿಯೂರಪ್ಪನವರ ಸಿಟ್ಟಿನ ಬಗ್ಗೆ ಕಥೆಗಳು ಹುಟ್ಟಿಕೊಂಡುಬಿಟ್ಟಿದ್ದವು. ಯಾರೇ ಹೋದರೂ "ಸಾಹೇಬರ ಮೂಡ್ ಹೆಂಗಿದೆ" ಅಂತ ಮೊದಲೇ ಕೇಳೋರು. ಅದೊಂದು ಸಲ "ಇನ್ನು ಮುಂದೆ ನಾನು ಬದಲಾಗ್ತೀನಿ" ಅಂತ ಅಷ್ಟೂ ಚಾನೆಲ್ಲುಗಳ ಎದುರು ಮಾತಾಡಿದರಲ್ಲ, ಆವತ್ತೇ ಮನೆಗೆ ಹೋಗಿ ಗನ್ ಮ್ಯಾನ್ ಒಬ್ಬನ ಮೇಲೆ ಪೇಪರ್ ವೇಟ್ ಎಸೆದರಂತೆ. ಇದು ಯಡಿಯೂರಪ್ಪನವರ ಪತನಕ್ಕೆ ಕಾರಣವಾದ ಹಲವು ವಿಷಯಗಳಲ್ಲಿ ಒಂದು ಮಾತ್ರ. ಹೇಳ್ತಾ ಹೋದ್ರೆ ದೊಡ್ಡ ಪಟ್ಟಿ ಆಗತ್ತೆ. ಅದೊಂದು ಸಲ, ಇದೆಲ್ಲವನ್ನೂ ಸೇರಿಸಿ ಒಂದು ಪುಸ್ತಕ ಯಾಕೆ ಮಾಡಬಾರದು ಅಂತ ಯೋಚಿಸಿದ್ದೂ ಆಗಿತ್ತು. ಆದರೆ, ಆ ಯೋಚನೆಗೆ ದಿನ ತುಂಬೋ ಮೊದಲೇ ಗರ್ಭಪಾತವಾಗಿದ್ದು ಬೇರೆ ಮಾತು.
               ಇವತ್ತು, ಅವರ ರಾಜೀನಾಮೆ ಪ್ರಹಸನದ ಪ್ರತಿ ಬೆಳವಣಿಗೆಯನ್ನೂ ನೋಡ್ತಿದ್ದವನಿಗೆ ಇದೆಲ್ಲ ನೆನಪಾಯಿತು. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಸಲ ಬಿ.ಜೆ.ಪಿಯನ್ನ ಅಧಿಕಾರಕ್ಕೆ ತಂದ ಯಡಿಯೂರಪ್ಪನವರು ಹೇಗೆ ಮೂರು ವರ್ಷಗಳ ಕಾಲ ತಮ್ಮ ಗುಂಡಿಯನ್ನ ತಾವೇ ತೋಡಿಕೊಂಡರಲ್ಲ ಅಂತ ಯೋಚಿಸಿದರೆ ಆಶ್ಚರ್ಯ ಆಗತ್ತೆ. ಇವತ್ತು ಆ ಗುಂಡಿಯಲ್ಲಿ ಅವರೇ ಬಿದ್ದಿದಾರೆ. ಉಳಿದವರು ಮೇಲಿನಿಂದ ಮಣ್ಣು ಸುರಿಯದಿದ್ದರೆ ಅದು ಯಡಿಯೂರಪ್ಪನವರ ಪೂರ್ವ ಜನ್ಮದ ಪೂಜಾ ಫಲ

Tuesday, July 26, 2011

ಯುದ್ಧ ಅನ್ನೋ ಶಬ್ದ ಕಿವಿಗೆ ಬಿದ್ದರೆ ಸಾಕು...                     ಹನ್ನೆರಡು ವರ್ಷಗಳ ಹಿಂದಿನ ಮಾತು... ಆಗಷ್ಟೇ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಮುಗಿಸಿದ್ದೆ. ಕಾರ್ಗಿಲ್  ಯುದ್ಧ ಉತ್ತುಂಗದಲ್ಲಿದ್ದ ದಿನಗಳವು. ಪೇಪರ್ ತೆಗೆದರೂ ಅದೇ ಸುದ್ದಿ - ಟಿ.ವಿ ಹಾಕಿದರೂ ಅದೇ ಸುದ್ದಿ. ಮನೆಯಲ್ಲಿ ದೂರದರ್ಶನ್ ಮಾತ್ರ ಬರ್ತಿತ್ತು. ಆವತ್ತೊಂದು ಮಧ್ಯಾಹ್ನದ ಹೊತ್ತು ಊಟ ಮಾಡ್ತಾ ಟಿ.ವಿ ಹಾಕಿದರೆ, ಒಬ್ಬ ಮಧ್ಯವಯಸ್ಕ ಮಹಿಳೆ ಸ್ಪಷ್ಟ ಹಿಂದಿಯಲ್ಲಿ ಮಾತಾಡ್ತಾ, ತಮ್ಮ ಮಗ ಸೌರಭ್ ಐದನೇ ಕ್ಲಾಸಿನಲ್ಲಿ ಓದ್ತಿದ್ದಾಗ ನಡೆದ ಘಟನೆಯೊಂದನ್ನ ನೆನಪು ಮಾಡಿಕೊಳ್ತಿದ್ರು.
                    "ಒಂದು ಸಲ ನಾನು ಟಿ.ವಿ ನೋಡ್ತಾ ಕುಳಿತಿದ್ದೆ. ಅದರಲ್ಲಿ ಕಪಿಲ್ ದೇವ್ ತಾಯಿಯ ಇಂಟರ್ವ್ಯೂ ಬರ್ತಿತ್ತು. ಸೌರಭ್ ಪಕ್ಕದಲ್ಲೇ ಆಟ ಆಡ್ತಾ ಕುಂತಿದ್ದ. ನಾನು ಅವನನ್ನ ಕರೆದು, ನೋಡು ಸೌರಭ್ ಕಪಿಲ್ ದೇವ್ ಎಷ್ಟು ದೊಡ್ಡ ಮನುಷ್ಯ, ಅವನಿಂದಾಗಿ ಅವನ ತಾಯಿ ಕೂಡ ಟಿ.ವೀಲಿ ಬರ್ತಿದಾರೆ ಅಂದೆ. ಅದಕ್ಕೆ ಸೌರಭ್, ನೋಡ್ತಿರು ಅಮ್ಮಾ ನಾನು ಮುಂದೆ ಎಷ್ಟು ದೊಡ್ಡ ಮನುಷ್ಯ ಆಗ್ತೀನಿ ಅಂದ್ರೆ, ನನ್ನಿಂದಾಗಿ ನೀನು ಕೂಡ ಟಿ.ವೀಲಿ ಬರ್ತಿಯಾ, ಅಂದುಬಿಟ್ಟ. ಇವತ್ತು ಅವನಿಂದಾಗಿ ನಾನು ಟಿ.ವೀಲಿ ಬರ್ತಿದೀನಿ, ನೋಡೋದಕ್ಕೆ ಅವನೇ ಇಲ್ಲ" ಅನ್ನುವಷ್ಟರಲ್ಲಿ ಅವರಿಗೆ ದುಃಖ ತಡೆದುಕೊಳ್ಳೋದಕ್ಕಾಗಲಿಲ್ಲ. ಮಾತು ಗದ್ಗದ.
                     ಆಕೆ ಸೌರಭ್ ಕಾಲಿಯಾ ತಾಯಿ. ಸೋಲು ಅನ್ನೋ ಶಬ್ದ ಅವರ ಮಗನಿಗೆ ಹತ್ತಿರಕ್ಕೂ ಸುಳಿದಿರಲಿಲ್ಲ. ಬಿ.ಎಸ್.ಸಿ ಮುಗಿಸಿದವನು ಮಿಲಿಟರಿಗೆ ಸೇರಿಕೊಳ್ತೀನಿ ಅಂತ ಹೋದ. ಡೆಹರಾಡೂನ್ ಇಂಡಿಯನ್ ಮಿಲಿಟರಿ ಅಕ್ಯಾಡಮಿ ಕೈ ಬೀಸಿ ಕರೆಯಿತು. ಒಂದು ವರ್ಷ ತರಬೇತಿ ಮುಗಿಸಿದವನು ಜಾಟ್ ರೆಜಿಮೆಂಟಿನಲ್ಲಿ ಕ್ಯಾಪ್ಟನ್ ಆದ. ಮೊದಲನೇ ಪೋಸ್ಟಿಂಗೇ ಕಾರ್ಗಿಲ್ ಸೆಕ್ಟರ್ನ ಕಸ್ಕರ್ ಗೆ. ಜನವರಿ ತಿಂಗಳ ಎರಡನೇ ವಾರದಲ್ಲಿ ಸೌರಭ್ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಾಗ ಅಲ್ಲಿ ಕಟಿಕಟಿ ಚಳಿ. ಬೆಟ್ಟದ ಮೇಲೆ ಮಂಜು ಬೀಳೋದಕ್ಕೆ ಶುರುವಾದ ನಂತರ ಅಲ್ಲಿನ ಬಂಕರುಗಳಲ್ಲಿ ಗಡಿ ಕಾಯೋ ಸೈನಿಕರು ಕೆಳಗಿಳಿದು ಬಂದುಬಿಡ್ತಾರೆ. ಮತ್ತೆ ಬರ್ಫು ಕರಗಿದ ನಂತರ ಮೇಲೆ ಹತ್ತಿ ಹೋಗಿ ಬಂಕರ್ ಸೇರಿಕೊಂಡು ಗಡಿಯ ದಿಕ್ಕಿಗೆ ಬಂದೂಕು ನೆಟ್ಟುಕೊಂಡು ನಿಲ್ತಾರೆ. ಅದು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಪದ್ಧತಿ. ಆ ಸಲ ಮೇ ಮಧ್ಯದಲ್ಲಿ ಮಂಜೆಲ್ಲ ಕರಗಿದ ಮೇಲೆ, ನಮ್ಮ ಬಂಕರುಗಳು ಸುಸ್ಥಿತಿಯಲ್ಲಿವೆಯಾ ಅಂತ ನೋಡಿಕೊಂಡು ಬರೋದಕ್ಕೆ ಒಂದು ಪೆಟ್ರೋಲಿಂಗ್ ಟೀಮ್ ಕಳಿಸಿದಾಗ ಅದರ ನೇತೃತ್ವ ವಹಿಸಿದವನು ಸೌರಭ್. ಅವನನ್ನೂ ಸೇರಿಸಿ ಆರು ಜನ ಇದ್ದರು.

                    ಬೆಟ್ಟ ಹತ್ತಿ ಹೋದ ಸೌರಭ್, ಇಲ್ಲಿ ಶತೃ ನೂರಾರು ಸಂಖ್ಯೆಯಲ್ಲಿ ಒಳಗೆ ನುಸುಳಿದಾನೆ ಅಂತ ವೈರ್ ಲೆಸ್ ಮೆಸೇಜ್ ಕೊಟ್ಟ. ತಾನು ಐದೇ ಐದು ಜನ ಸಿಪಾಯಿಗಳ ಸಮೇತ ಭಜರಂಗ್ ಪೋಸ್ಟ್ ಅಂತ ಕರೆಸಿಕೊಳ್ಳೋ ಬಂಕರಿನಲ್ಲಿ ಕಾಲೂರಿಕೊಂಡು ನಿಂತು ಶತೃವನ್ನ ಎದುರಿಸ್ತೀನಿ ಅಂತ ತಯಾರಾದ. ಅಷ್ಟೊತ್ತಿಗಾಗಲೇ ಆತನ ವೈರ್ ಲೆಸ್ ಸೆಟ್ ಕೆಟ್ಟು ಹೋಗಿ ಹೆಡ್ಕ್ವಾರ್ಟರ್ ಜೊತೆ ಸಂಪರ್ಕ ಇಲ್ಲದಂತಾಗಿತ್ತು. ಪರಿಸ್ಥಿತಿ ಹೇಗಿದೆ ಅಂತ ನೋಡಿಕೊಂಡು ಬರೋದಕ್ಕೆ ಇನ್ನೊಂದು ತಂಡ ಕಳೆಸಿದರೆ ಅವರ ಮೇಲೆ ಗುಂಡಿನ ಸುರಿಮಳೆ. ನೋಡ ನೋಡ್ತಿದ್ದಂತೆಯೇ ಕಾರ್ಗಿಲ್ ಯುದ್ಧಾನೇ ಶುರುವಾಗಿ ಹೋಗಿತ್ತು. ಭರ್ತಿ ಇಪ್ಪತ್ತೆರಡು ದಿನಗಳ ನಂತರ ಸೌರಭ್ ಕಾಲಿಯಾ ಮತ್ತು ಆತನ ಐವರು ಸಿಪಾಯಿಗಳ ಶವಗಳನ್ನ ಭಾರತಕ್ಕೆ ಕೊಟ್ಟಿತು ದುಷ್ಟ ಪಾಕಿಸ್ತಾನ. ಶವಗಳು ಗುರುತು ಹಿಡಿಯೋ ಸ್ಥಿತಿಯಲ್ಲಿರಲಿಲ್ಲ. ಅವರನ್ನ ಜೀವಂತವಾಗಿ ಸೆರೆಹಿಡಿದು ಚಿತ್ರಹಿಂಸೆ ಕೊಟ್ಟು ಸಾಯಿಸಲಾಗಿದೆ ಅಂತ postmortem report ಹೇಳಿತ್ತು. ಆ ಸೌರಭ್ ಕಾಲಿಯಾನ ತಾಯಿ ಆವತ್ತು "ನನ್ನ ಮಗ ನನಗೆ ಮಾತು ಕೊಟ್ಟಿದ್ದ, ತನ್ನಿಂದಾಗಿ ನಾನು ಟಿ.ವೀಲಿ ಬರ್ತೀನಿ ಅಂತ" ಅನ್ನೋ ಮಾತುಗಳನ್ನಾಡ್ತಿದ್ರೆ ಯಾಕೋ ಕೈಗೆತ್ತಿಕೊಂಡಿದ್ದ ತುತ್ತು ಹಂಗೇ ತಟ್ಟೆಯೊಳಕ್ಕೆ ಬಿದ್ದುಬಿಟ್ಟಿತ್ತು. ಅಷ್ಟಕ್ಕೇ ಊಟ ಬಿಟ್ಟು ಎದ್ದುಬಿಟ್ಟೆ.
                    ಧಾರವಾಡ ತಾಲೂಕಿನಲ್ಲಿ ಕೊಟಬಾಗಿ ಅಂತ ಒಂದು ಸಣ್ಣ ಹಳ್ಳಿ ಇದೆ, ಅಲ್ಲಿ ಕಲ್ಲಪ್ಪ ಪಾಗಾದ್ ಅನ್ನೋ ನನ್ನ ಪರಿಚಯದ ಸಿಪಾಯಿಯೊಬ್ಬ ಇದಾನೆ. ಆವತ್ತು ಗಡಿಯಲ್ಲಿ ಸೌರಭ್ ಮತ್ತು ಇತರ ಐವರ ಶವಗಳನ್ನ ಪಡೆದ ತಂಡದಲ್ಲಿ ಆತ ಕೂಡ ಇದ್ದ. ಯುದ್ಧ ಮುಗಿದು ಐದಾರು ತಿಂಗಳ ನಂತರ ಕಲ್ಲಪ್ಪ ರಜೆಗೆ ಬಂದಿದ್ದ. ಆವತ್ತೊಂದು ರಾತ್ರಿ ತೋಟದ ಮನೆಯ ಕಟ್ಟೆ ಮೇಲೆ ಮಾತಾಡ್ತಾ ಕುಳಿತಿದ್ದಾಗ ಆತ ಹೇಳಿದ್ದ. " ಆರೂ ಜನರ ಕಿವಿ ಕತ್ತರಿಸಿದ್ರು, ಇಕ್ಕಳ ಹಾಕಿ ಅಷ್ಟೂ ಹಲ್ಲು - ಉಗುರು ಕಿತ್ತಿದ್ರು, ಕಣ್ಣ ಗುಡ್ಡಿ ಮೀಟಿ ತೆಗೆದುಬಿಟ್ಟಿದ್ರು. ಅದರಲ್ಲೂ ಸೌರಭ್ ಗೆ, ಆತನ ಮರ್ಮಾಂಗ  ಕತ್ತರಿಸಿ ಅವನದೇ ಬಾಯಲ್ಲಿಟ್ಟು ಕಳಿಸಿದ್ದ ದುಶ್ಮನ್. ಹೆಣ ತಗೊಳ್ಳೋದಕ್ ಹೋದ ನಮ್ಮನ್ನ ನೋಡಿ ಅಪಹಾಸ್ಯ ಮಾಡಿ ನಕ್ಕರು. ಅವಡುಗಚ್ಚಿಕೊಂಡು ತಗೊಂಡು ಬಂದುಬಿಟ್ವಿ. ಆ ಸುದ್ದಿ ಸೈನ್ಯದ ತುಂಬ ಅದ್ಯಾವ ಪರಿ ಹರಡಿತೆಂದರೆ, ಹುಚ್ಚೆದ್ದು ನುಗ್ಗಿದ್ವಿ, ರಣಕೇಕೆ ಹಾಕಿಕೊಂಡು ಬೆಟ್ಟಹತ್ತಿ ಗುಂಡು ಹಾರಿಸಿದ್ವಿ, ಬಂಕರ್ ತಲುಪೋ ಹೊತ್ತಿಗೆ ಅಳಿದುಳಿದ ಶತೃಗಳು ಪಾಕಿಸ್ತಾನದ ದಿಕ್ಕಿಗೆ ಓಡಿ ಹೋಗಿರ್ತಿದ್ರು, ಉಳಿದವರ ಶವಗಳು ಅಲ್ಲೇ ಬಿದ್ದಿರ್ತಿದ್ವು, ಅವುಗಳ ನಡುವೆ ಗಾಯಗೊಂಡವರು ನರಳ್ತಾ ಮಲಗಿರ್ತಿದ್ರಲ್ಲ, ಅವರು ನಾವು ಹೋದ ಕೂಡಲೇ ಪ್ರಾಣ ಭಿಕ್ಷೆ ಬೇಡೋರು. ಮನೇಲಿ ವಯಸ್ಸಾದ ತಂದೆ - ತಾಯಿ ಇದಾರೆ, ಸಣ್ಣ - ಸಣ್ಣ ಮಕ್ಕಳಿದಾರೆ, ಹೆಂಡತಿ ಗರ್ಭಿಣಿ ಅನ್ನೋರು. ಅವರನ್ನ ನೋಡಿದ ಕೂಡಲೇ ಸೌರಭ್ ಕಾಲಿಯಾ ಮತ್ತು ಅವನ ಜೊತೆಗಿದ್ದ ಐದು ಜನ ಸೈನಿಕರು ನೆನಪಾಗಿಬಿಡ್ತಿದ್ರು. ಅವರಿಗಿರಲಿಲ್ಲವಾ ತಂದೆ - ತಾಯಿ, ಹೆಂಡತಿ ಮಕ್ಕಳು..? ಸಿಟ್ಟು ತಡೆಯೋದಕ್ಕಾಗ್ತಿರಲಿಲ್ಲ..." ಅಂತ ಇನ್ನೂ ಏನೇನೋ ಹೇಳಿದ್ದ ಕಲ್ಲಪ್ಪ. ಆವತ್ತು ನಾನು ಮೊಟ್ಟಮೊದಲ ಸಲ ಅವನ ಕಣ್ಣಿನಲ್ಲಿ ನೀರು ನೋಡಿದ್ದೆ. ಅನ ಕಣ್ಣು ಹಿಂದ್ಯಾವತ್ತೂ ಅಷ್ಟು ಕೆಂಪಗಾಗಿರಲಿಲ್ಲ...
                    ಹನ್ನೆರಡು ವರ್ಷಗಳಾಗಿ ಹೋದವು. ಇವತ್ತಿಗೂ ಕಾರ್ಗಿಲ್ ಅನ್ನೋ ಶಬ್ದ ಕಿವಿಗೆ ಬಿದ್ದರೆ ಸಾಕು, ಸೌರಭ್ ಕಾಲಿಯಾನ ತಾಯಿಯ ಮುಖ ಕಣ್ಣ ಮುಂದೆ ಬಂದಂತಾಗತ್ತೆ. ಯುದ್ಧ ಅನ್ನೋ ಶಬ್ದ ಕೇಳಿದರೆ ಸಾಕು, ನಿಗಿ ಕೆಂಡದಷ್ಟು ಕೆಂಪಗೆ ಕಣ್ಣು ಮಾಡಿಕೊಂಡು ಬಂದೂಕು ಹಿಡಿದ ಕಲ್ಲಪ್ಪ ಪಾಗಾದನ ಎದುರಿಗೆ ಪ್ರಾಣ ಭಿಕ್ಷೆ ಬೇಡ್ತಿರೋ ಪಾಕಿ ಸೈನಿಕ ನೆನಪಾಗ್ತಾನೆ. ಯಾಕೋ ಅವೆರಡು ಮುಖ ಮರೆಯೋದಕ್ಕೆ ಆಗ್ತಾನೇ ಇಲ್ಲ.

Tuesday, July 19, 2011

ಒಂದು ಬಾಂಬ್ ಬ್ಲಾಸ್ಟ್ ಸುತ್ತ ಎಷ್ಟೊಂದು ಅವಿವೇಕಗಳು..?

                         ಎಷ್ಟು ನೆಮ್ಮದಿಯಾಗಿತ್ತು ಮುಂಬೈ. ಹಿಂದ್ಯಾವತ್ತೂ ಇಲ್ಲಿ ಟೆರರಿಸ್ಟ್ ಅಟ್ಯಾಕೇ ಆಗಿಲ್ಲವೇನೋ - ಬಾಂಬುಗಳೇ ಸಿಡಿದಿಲ್ಲವೇನೋ ಅನ್ನೋ ಹಾಗೆ ಎಲ್ಲವನ್ನೂ ಮರೆತು ಮತ್ತೆ ಜನ normal lifeಗೆ ಯಾವತ್ತೋ ಮರಳಿದ್ದರು. ಅದೇ ಧಡಂ ಧಡಕಿಯ ಬದುಕು, ಅಪಾರ್ಟಮೆಂಟ್ ಜೀವನ, ಲೋಕಲ್ ಟ್ರೇನು, ಸಂಜೆಯ ಚಾಟ್ ಮಸಾಲ, ವೀಕೆಂಡ್ ಪಿಕ್ನಿಕ್ಕು ಅಂದುಕೊಂಡು ತಮ್ಮ ತಮ್ಮ ಬದುಕುಗಳನ್ನ ಹಳಿಗೆ ತಂದುಕೊಂಡಿದ್ದರು. ಈಗ ನೋಡಿದರೆ, ಮತ್ತೆ ಧಡಂ - ಧುಡುಂ...

                        ಇವತ್ತು ಬೇಕಿದ್ರೆ ಮುಂಬೈಗೆ ಹೋಗಿ ನೋಡಿ, ಇಲ್ಲಿ ಬಾಂಬು ಸಿಡಿದದ್ದೇ ಸುಳ್ಳೇನೋ ಅನ್ನಿಸುವಷ್ಟು ನೆಮ್ಮದಿಯಾಗಿ ಇರ್ತಾರೆ ಜನ. ಸಾಯೋರು ಸತ್ತರು. ಅವರ ಮನೆಗವರು ಮಣ್ಣು ಕೊಡ್ತಾರೆ. ಗಾಯಗೊಂಡು ಆಸ್ಪತ್ರೆ ಸೇರಿರೋರು ಗ್ಲುಕೋಸು ಏರಿಸಿಕೊಳ್ತಿದಾರೆ. ಅವರಿಗೆ ಅವರ ಮನೆ ಜನ ಇಡ್ಲಿ ಸಾಂಬಾರ್ ತಂದು ಕೊಡ್ತಾರೆ. ಸತ್ತವರಿಗೆ - ಸಾಯದೇ ಉಳಿದವರಿಗೆ ಸರ್ಕಾರ ಯೋಗ್ಯತೆಗನುಸಾರವಾಗಿ ಪರಿಹಾರ ಕೊಡತ್ತೆ. ಬ್ಲಾಸ್ಟ್ ಆದ ಜಾಗಕ್ಕೆ ಒಂದಷ್ಟು ಜನ ಮಂತ್ರಿ ಮಾಗಧರು - ಆಫೀಸರ್ಗಳು ಬಂದು ಹೋಗ್ತಾರೆ. ಟಿ.ವಿ ಚಾನೆಲ್ಲುಗಳವರು ಹೊಸಾ ಸುದ್ದಿ ಸಿಗೋ ತನಕ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳ್ತಿರ್ತಾರೆ. ಆಗಿರೋ ಮೂರು ಬ್ಲಾಸ್ಟಿಗೆ ಮೂವತ್ತು angleನ ಸ್ಟೋರಿಗಳು. "ಕ್ಯಾ ಏ ಕಸಬ್ ಕೆ ಲಿಯೇ ಬರ್ತ್ ಡೇ ಗಿಫ್ಟ್ ಹೈ..? ಧಮಾಕೆ ಕೆ ಪೀಛೆ ಲಷ್ಕರೆ ತಯ್ಯಬಾ ಕಾ ಹಾಥ್, ಪೆಹಲೆ ಫೋನ್ ಕಿಯೆ ಥೆ ಆತಂಕವಾದಿ, ಸಿ.ಸಿ.ಟಿ.ವಿ ಮೆ ಆತಂಕವಾದಿಯೋಂಕಾ ಎಕ್ಸ್ಕ್ಲೂಸೀವ್ ದೃಶ್ಯ್... ಹೀಗೆ. ಕೈಯಲ್ಲಿ ರಿಮೋಟ್ ಹಿಡಿದು ಕುಂತ ಮುಂಬೈಕರ್ " ಸಾಲಾ ಏ ತೋ ರೋಜ್ ರೋಜ್ ಕಾ ನಾಟಕ್ ಹೈ " ಅಂತ ಚಾನಲ್ ಬದಲಿಸ್ತಾನೆ. ಮತ್ತೆ ಬೆಳಿಗ್ಗೆದ್ದು ಬುತ್ತಿ ಕಟಗೊಂಡು ಲೋಕಲ್ ಟ್ರೇನಿಗೆ ಓಡ್ತಾನೆ. ಈ ಊರಿನಲ್ಲಿ ಬಾಂಬ್ ಬ್ಲಾಸ್ಟ್ ಅನ್ನೋದು ಸತ್ತವರ - ಗಾಯಗೊಂಡವರ ಮನೆಗಳವರು, ಕೆಲವೇ ಕೆಲವು ಪೊಲೀಸರು ಮತ್ತು ನ್ಯೂಸ್ ಚಾನೆಲ್ಲುಳವರಿಗೆ ಮಾತ್ರ ಸಂಬಂಧಪಟ್ಟ ವಿಷಯ ಅಂತ ಉಳಿದವರು ನಿರ್ಧರಿಸಿರುವುದರಿಂದ, ಇಂಥ ಇನ್ನೂ ಹತ್ತು ಬ್ಲಾಸ್ಟುಗಳಾದರೂ ಪರಿಸ್ಥಿತಿ ಹೀಗೇ ಇರತ್ತೆ. and its a shame... ಇಂಥದ್ದೊಂದು ಶೇಮ್ ಏಕಾಏಕಿ ಆಗಿರೋದಲ್ಲ. ಇದಕ್ಕೆ ಹದಿನೇಳು ವರ್ಷಗಳ ಇತಿಹಾಸ ಇದೆ.
                        ಹದಿನೇಳು ವರ್ಷಗಳಾದವು ಅದೊಂದು ಸೀರಿಯಲ್ ಬಾಂಬ್ ಬ್ಲಾಸ್ಟ್ ನಡೆದು. ದಾವೂದ್ ತನ್ನ ಹುಡುಗರ ಜೊತೆ ಸೇರಿಕೊಂಡು ನಡೆಸಿದ ಹದಿಮೂರು ಸ್ಫೋಟಗಳಲ್ಲಿ 257 ಜನ ಸತ್ತರು. ಇವತ್ತಿನ ತನಕ ದಾವೂದ್ ಸಿಕ್ಕಿಲ್ಲ. ಆತನನ್ನ ನಮಗೆ ಕೊಡಿ ಅಂತ ಭಾರತ ಪಾಕಿಸ್ತಾನದ ಎದುರು ಮಂಡಿಯೂರಿ ಕುಂತು ಬೇಡಿಕೊಳ್ಳತ್ತೆ. ಕೊಡದಿದ್ರೆ ಅಮೇರಿಕಕ್ ಹೇಳ್ತೀನ್ ನೋಡೂ ಅಂತ ಹೆದರಿಸತ್ತೆ. ಪಾಕಿಸ್ತಾನಕ್ಕೆ "ದಾದ್ ನೈ ಫಿರಾದ್ ನೈ". ಆ ಕೇಸಿನಲ್ಲಿದ್ದ ಕಾಂಜಿ ಪೀಂಜಿಗಳಿಗೆಲ್ಲ ಶಿಕ್ಷೆ ಕೊಟ್ಟು ಮೀಸೆ ತಿರುವಿಕೊಳ್ಳತ್ತೆ ನಮ್ಮ ಸರಕಾರ. ಆ ಕಡೆ ಅಮೇರಿಕಾನ್ನ ನೋಡಿ. 2001 ರ ಸಪ್ಟೆಂಬರ್ 11 ಕ್ಕೆ ಡಬ್ಲು.ಟಿ.ಸಿ ಮೇಲೆ ಅಟ್ಯಾಕ್ ಆದದ್ದು. ಇದು ತಾಲಿಬಾನಿಗಳ ಜೊತೆ ಸೇರಿಕೊಂಡು ಅಲ್ ಖೈದಾದವರು ಮಾಡಿದ ಕೆಲಸ ಅಂತ ಒಂದು ಸಣ್ಣ ಸಂಶಯ ಬಂದದ್ದೇ ಬಂದದ್ದು. ಹದಿನೈದು ದಿನಗಳಲ್ಲಿ ದಂಡು ಕಟ್ಟಿಕೊಂಡು ಬಂದು ಬಿಟ್ಟರಲ್ಲ ಅಫಘಾನಿಸ್ತಾನದ ಮೇಲೆ. ಅಲ್ ಖೈದಾನ್ನ ಸತ್ಯಾನಾಶ ಮಾಡಿ ಹಾಕಿದ್ರು. ತಾಲೀಬಾನಿಗಳ ಸರ್ಕಾರ ಕಿತ್ಹಾಕಿ ತಮಗೆ ಬೇಕಾದ ನಾರ್ದನ್ ಅಲಯನ್ಸ್ ಸರ್ಕಾರ ಮಾಡಿದರು. ಕಳ್ಳಬಿದ್ದು ತಪ್ಪಿಸಿಕೊಂಡ ಬಿನ್ ಲಾಡೆನ್ ನನ್ನ ಪಾಕಿಸ್ತಾನದೊಳಕ್ಕೆ ಹೊಕ್ಕು ಹೊಡೆದು ಬಂದ್ರು. target accomplished. ನಾವು..? ದಾವೂದ್ ಬೇಕು, ಟೈಗರ್ ಮೆಮೋನ್ ಬೇಕು, ಛೋಟಾ ಶಕೀಲ್ ಬೇಕು ಅಂತ ಬೇಡಿಕೊಳ್ತಾನೇ ಇದೀವಿ.
                        ವರ್ಲ್ಡ್ ಟ್ರೇಡ್ ಸೆಂಟರಿನೊಳಕ್ಕೆ ವಿಮಾನಗಳು ನುಗ್ಗಿದ್ದೇ ಕೊನೆ. ಅಮೇರಿಕದಲ್ಲಿ ಮತ್ತೊಂದೇ ಒಂದು ಭಯೋತ್ಪಾದಕ ದಾಳಿ ಆಯ್ತಾ ನೋಡಿ. ಊಹ್ಞೂಂ... ಹಂಗಂತ ಉಗ್ರರಾರೂ ಅಲ್ಲಿ ಬಾಂಬ್ ಸಿಡಿಸೋ ಪ್ರಯತ್ನ ಮಾಡಲೇ ಇಲ್ಲ ಅಂತಲ್ಲ. ಅಪ್ಪಿ ತಪ್ಪಿ ಕೂಡ ಅವರು ಒಳಕ್ಕೆ ಬರದಂತೆ ತನ್ನ ಗಡಿಗಳನ್ನ ಬಂದೋಬಸ್ತು ಮಾಡ್ಕೊಂಡ್ತು ಆ ದೇಶ. ಇವತ್ತು ಯಾರಾದರೂ ವಿದೇಶಿ ಆ ದೇಶಕ್ಕೆ ಹೋಗೋದಕ್ಕೆ ವೀಸಾ ಕೇಳಿದರೆ ಆತನ ಜನ್ಮಾನೇ ಜಾಲಾಡಿ ಬಿಡ್ತಾರೆ. ಬಾಂಬು - ಬಂದೂಕು ಒತ್ತಟ್ಟಿಗಿರಲಿ, ಸೆಂಟ್ ಬಾಟಲ್ ಇಟ್ಕೊಂಡು ಅವರ ವಿಮಾನ ನಿಲ್ದಾಣದೊಳಕ್ ಹೋಗೋದಕ್ಕಾಗಲ್ಲ. ಅಷ್ಟೆಲ್ಲಾ ಮುನ್ನೆಚ್ಚರಿಕೆ ತಗೊಂಡು ಕೂಡ ಅಕಸ್ಮಾತ್ ವಿಮಾನ ಅಪಹರಣ ಆದ್ರೆ ಹಿಂದೆ ಮುಂದೆ ನೋಡದೇ ಹೊಡೆದುರುಳಿಸಬೇಕು ಅಂತ ಕಾನೂನು ಮಾಡ್ಕೊಂಡಿದಾರೆ.
                       ಅದಕ್ಕೇ ನಾವು ಇಚ್ಛಾ ಶಕ್ತಿ ಅನ್ನೋದು. ಅಫಘಾನಿಸ್ತಾನದಲ್ಲಿ, ಇರಾಕಿನಲ್ಲಿ ಅಮೇರಿಕದವರು ಮಾಡಿದ ಅನಾಹುತಗಳಿಗೆ ಸೇಡು ತೀರಿಸಿಕೊಳ್ತೀವಿ ಅಂತ ಅಲ್ಲಿನ ಜನರೇನಾದರೂ ಹೊರಟಿದ್ರೆ, ಅಮೇರಿಕದಲ್ಲಿ ದಿನಕ್ಕೊಂದು ಬಾಂಬ್ ಸಿಡೀತಿದ್ವು. ಈ ದೇಶ ಅದಕ್ಕೆ ಅವಕಾಶಾನೇ ಕೊಡಲಿಲ್ಲ. ಈ ಕಡೆ ನಮ್ಮಲ್ಲಿ ಮಾತ್ರ ಆರ್.ಎಸ್.ಎಸ್ ನವರು ಬಾಬರಿ ಮಸೀದಿ ಕೆಡವಿದ್ದಕ್ಕೇ ಮುಸ್ಲಿಂ ಸಂಘಟನೆಗಳು ಸೇಡುತೀರಿಸಿಕೊಳ್ಳೋದಕ್ಕೆ ಬಾಂಬ್ ಸಿಡಿಸಿದ್ವು, ಗುಜರಾತ್ನಲ್ಲಿ ನರೇಂದ್ರ ಮೋದಿ ಮುಸ್ಲಿಮರ ವಿರುದ್ಧ ಗಲಭೆ ಮಾಡಿಸಿದ್ದೇ ಈ ಎಲ್ಲಾ ಅನಾಹುತಗಳಿಗೆ ಕಾರಣ ಅಂತ ಮಾತಾಡೋ ದೀಡು ಪಂಡಿತರಿದ್ದಾರೆ. nonsense... ನರೇಂದ್ರ ಮೋದಿಯನ್ನ ಕೊಲ್ತೀನಿ ಅಂತ ಯಾರಾದರೂ ಉಗ್ರ ಹೇಳಿದರೆ ಅದಕ್ಕೆ ಲಾಜಿಕ್ ಇದೆ. ಆದರೆ, ಗುಜರಾತ್ ಗಲಭೆಗೆ ಮುಂಬೈ ಜನರ ಮೇಲೆ ಸೇಡು ತೀರಿಸಿಕೊಳ್ತೀನಿ ಅಂದ್ರೆ ಅದ್ಯಾವ ಲೆಕ್ಕಾಚಾರ..?
                      ಫೈನ್, ಇದು ಮುಸ್ಲಿಂರ ವಿರುದ್ಧ ನಡೆದ ದೌರ್ಜನ್ಯಕ್ಕೆ ಸೇಡು ಅಂತಾನೇ ಇಟ್ಕೊಳ್ಳಿ. ಆದರೆ, ಪಾಕಿಸ್ತಾನದಲ್ಯಾವ ಬಾಬರಿ ಮಸೀದಿ ಬಿದ್ದಿತ್ತು..? ಅಲ್ಯಾಕೆ ಬಾಂಬ್ ಸಿಡಿದವು..? ಬೆನಜಿರ್ ಭುಟ್ಟೋ ಏನು ನರೇಂದ್ರ ಮೋದಿಯಾ..? ಬಾಂಗ್ಲಾ ದೇಶದಲ್ಲಿ ಗುಜರಾತ್ ಗಲಭೆ ಆಗಿತ್ತಾ..? ಬೇಸಿಕಲಿ ಒಂದು ಮಾತು ಮಾತ್ರ ಸತ್ಯ. ಉಗ್ರರಿಗೆ ಹಾಕೋದಕ್ಕೆ ಬಾಂಬ್ ಬೇಕು - ಸಾಯೋದಕ್ ಜನ ಬೇಕು. ಅಂಥವರನ್ನ ಎದುರಿಸೋದಕ್ಕೆ ಒಂದು ಬೇರೆಯದೇ ಮನಸ್ಥಿತಿ ಬೇಕು. ಅದನ್ನ ನಮ್ಮ ನಾಯಕರುಗಳ್ಯಾವತ್ತೂ ತೋರಿಸಲಿಲ್ಲ ಅನ್ನೋದೇ ವಿಷಯ. ಅದಕ್ಕೇ 1993ರ ಮುಂಬೈ ಸೀರಿಯಲ್ ಬಾಂಬ್ ಬ್ಲಾಸ್ಟ್ ನಂತರ ಇಲ್ಲಿ ನಲವತ್ತೆರಡು ಬೇರೆ ಬೇರೆ ಟೆರಿಸ್ಟ್ ಅಟ್ಯಾಕ್ ಆಗಿವೆ. ಅವುಗಳಲ್ಲಿ ಮುಂಬೈಯೊಂದರಲ್ಲೇ ಐದು ದಾಳಿಗಳು. ಈ ದೇಶದಲ್ಲಿ ಏನು ಬೇಕಾದರೂ ಮಾಡಿ ಸೇಫ್ ಆಗಿ ಹೊರಗೆ ಹೋಗಿಬಿಡಬಹುದು ಅನ್ನಿಸಿಬಿಟ್ಟಿದೆಯೇನೋ ಟೆರರಿಸ್ಟುಗಳಿಗೆ. ವಿದೇಶಕ್ ಹೋದ್ರೆ, ವಾಪಸ್ ಕರಿಸಿಕೊಳ್ಳೋದಕ್ಕಂತೂ ಆಗಲ್ಲ. ಅಕಸ್ಮಾತ್ ಸಿಕ್ಕಿಬಿದ್ರೆ ಹಿಡಿದು ನೇಣಿಗೆ ಹಾಕಿಬಿಡ್ತಾರೆ ಅನ್ನೋ ಭಯಾನೂ ಇಲ್ಲ. ನಮ್ಮ ವಿಮಾನ ಒತ್ತೆ ಇಟ್ಕೊಂಡು ಬಿಡಿಸಿಕೊಂಡು ಹೋದ ಮೌಲಾನಾ ಮಸೂದ್ ಅಜರ್ ಈಗ ಪಾಕಿಸ್ತಾನದಲ್ಲಿ ಓಪನ್ ಆಗಿ ಓಡಾಡ್ಕೊಂಡಿದಾನೆ. ಇಲ್ಲಿನ ಜೈಲಿನಿಂದ ಹೊರಗೆ ಹೋದ ಈತ ಸುಮ್ಮನೆ ಕುಂತಿದ್ದರೆ ಆ ಮಾತು ಬೇರೆ. ತನ್ನ ಹುಡುಗರನ್ನ ಬಿಟ್ಟು ನಮ್ಮ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿಸಿದ. ಈ ದಾಳಿಯಲ್ಲಿ ಅರೆಸ್ಟ್ ಆದವನು ಅಫ್ಜಲ್ ಗುರು. ಆತನನ್ನ ಗಲ್ಲಿಗೆ ಹಾಕಬೇಕು ಅಂದರೆ, ಬೇಡ ಅಂತ ಹೇಳೋದಕ್ಕೆ ಕಾಶ್ಮೀರದಿಂದ ನಿಯೋಗ ಬರತ್ತೆ. ಅವನ್ನ ಬಿಡಿ. ಈ ಅಜ್ಮಲ್ ಕಸಬನ ಕಥೆ ಏನು..? ಇವನ ಜೊತೆಗೆ ಬಂದ ಇನ್ನೂ ಒಂಭತ್ತು ಜನ ಮತ್ತು ಈತ ಮುಂಬೈಯಲ್ಲಿ ಮಾಡಿದ ಅನಾಹುತವೇನು ಸಣ್ಣದಾ..?

                        ಅದೊಂದೇ ದಾಳಿಯಲ್ಲಿ ಸತ್ತವರು ಮುನ್ನೂರ ಹತ್ತು ಜನ. ಜೀವಂತವಾಗಿ ಸಿಕ್ಕಿಬಿದ್ದವನು ಇವನೊಬ್ಬನೇ. ನಂಬ್ತೀರೋ ಇಲ್ವೋ. ಈ ಒಬ್ಬ ಕಸಬ್ಗಾಗಿ ನಾವು ಪ್ರತಿ ತಿಂಗಳೂ ಮಾಡ್ತಿರೋ ಖರ್ಚು ಎರಡು ಕೋಟಿ ರುಪಾಯಿ. ಇವನ ಬೆಂಗಾವಲಿಗೆ ಒಂದು ಸಾವಿರ ಜನ ಪೊಲೀಸರಿದ್ದಾರೆ. ಆರ್ಥರ್ ರೋಡ್ ಜೈಲಿನಲ್ಲಿ ಟ್ರಕ್ ತುಂಬ ಆರ್.ಡಿ.ಎಕ್ಸ್ ನುಗ್ಗಿಸಿದರೂ ಅಲ್ಲಾಡದಂಥ ಒಂದು ಸೆಲ್ ಇವನಿಗಾಗಿ ಕಟ್ಟಲಾಗಿದೆ. ಒಂದು ವೇಳೆ ಆ ನರಹಂತಕನಿಗೆ ಅನಾರೋಗ್ಯವಾದರೆ ಟ್ರೀಟ್ಮೆಂಟ್ ಕೊಡೋದಕ್ಕೆ ಜೆ.ಜೆ ಆಸ್ಪತ್ರೆಯಲ್ಲೊಂದು ಸ್ಪೆಷಲ್ ವಾರ್ಡ್ ಕಟ್ಟಿಸಲಾಯ್ತು. ಆದ್ರೆ, ಅಲ್ಲಿಗ್ಯಾವತ್ತೂ ಈತ ಅಡ್ಮಿಟ್ ಆಗಲೇ ಇಲ್ಲ. ಬೇಕಾದರೆ ಡಾಕ್ಟರುಗಳನ್ನ ತಾನಿದ್ದಲ್ಲಿಗೇ ಕರೆಸಿಕೊಳ್ತಾನೆ. ವಿಚಾರಣೆಗೆ ಕಸಬ್ ಕೋರ್ಟಿಗೆ ಬರಬೇಕು ಅಂತಾನೂ ಇಲ್ಲ. ಕುಳಿತಲ್ಲಿಂದಲೇ ವಿಡಿಯೋ ಕಾನ್ಫರೆನ್ಸು. ಅದು ಕೂಡ ಅವನು ಮೂಡಿದ್ದರೆ ಬರಬಹುದು - ಇಲ್ಲದಿದ್ರೆ ಇಲ್ಲ. ಎಂಭತ್ತು ರುಪಾಯಿಯದೊಂದು ಗುಂಡಿನಲ್ಲಿ ಮುಗಿದುಹೋಗಬಹುದಾಗಿದ್ದ ಕೆಲಸಕ್ಕೆ ತಿಂಗಳಿಗೆರಡು ಕೋಟಿ ಖರ್ಚು. ಇಷ್ಟೆಲ್ಲಾ ಮಾಡಿ ಈ ಹುಡುಗನನ್ನ ಬದುಕಿಸಿಕೊಳ್ತಿರೋದ್ಯಾಕೆ ಅಂತ ಕೇಳಿದ್ರೆ, ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಅನ್ನೋದನ್ನ ಪ್ರೂವ್ ಮಾಡೋದಕ್ಕೆ ಅನ್ನೋ ಉತ್ತರ ಬರತ್ತೆ. ಅದನ್ನ ಪ್ರೂವ್ ಮಾಡೋದಕ್ಕೆ, ಕಸಬ್ ಮತ್ತು ಇತರ ಒಂಭತ್ತು ಜನರಿಗೆ ಪಾಕಿಸ್ತಾನದಲ್ಲಿ ಕುಂತೇ ಫೋನಿನಲ್ಲಿ ಗೈಡನ್ಸ್ ಕೊಡ್ತಿದ್ದ ಹ್ಯಾಂಡ್ಲರ್ಗಳ ವಾಯ್ಸ್ ಸ್ಯಾಂಪಲ್ ಬೇಕು. ಅದನ್ನ ಕೇಳಿದ್ರೆ, "ವಾಟ್ ನಾನ್ಸೆಸ್, ಅದಕ್ಕೆಲ್ಲ ನಮ್ಮ ಕಾನೂನಿನಲ್ಲಿ ಅವಕಾಶಾನೇ ಇಲ್ಲ" ಅಂತ ಒಂದೇ ಮಾತಿಗೆ ತಳ್ಳಿ ಹಾಕಿಬಿಟ್ತು ಪಾಕಿಸ್ತಾನ. ಈಗ ಇವನಿಗೆ ಗಲ್ಲು ಶಿಕ್ಷೆ ಆಗಬಾರದು ಅಂತ ವಾದಿಸೋ ಜನ ಕೂಡ ನಮ್ಮಲ್ಲಿದಾರೆ.
                        2008ರ ನವೆಂಬರ್ 26ರ ಟೆರರಿಸ್ಟ್ ಅಟ್ಯಾಕಿನಿಂದ ಭಾರತ ಪಾಠ ಕಲಿತಿಲ್ಲ. ಕಲಿತಿದ್ದರೆ ಇವತ್ತು ಈ ಘಟನೆ ಆಗ್ತಿರಲಿಲ್ಲ ಅಂತ ಮೊನ್ನೆ ಯಾರೋ ಟಿ.ವೀಲಿ ಹೇಳ್ತಿದ್ರು. ಅದಕ್ಕೂ ಇದಕ್ಕೂ ಸಂಬಂಧಾನೇ ಇಲ್ಲ. ಆ ದಾಳಿಯಿಂದ ಪಾಠ ಕಲಿತದ್ದಕ್ಕೇ ನಮ್ಮ ಕರಾವಳಿ ತೀರಗಳು ತಕ್ಕ ಮಟ್ಟಿಗೆ ಬಂದೋಬಸ್ತಾಗಿವೆ. ದೊಡ್ಡ - ದೊಡ್ಡ ಊರುಗಳಿಗೆ ಎನ್.ಎಸ್.ಜಿ ಥರದ ಟ್ರೂಪು ಕೊಡಲಾಗಿದೆ, ಆ ಊರುಗಳ ಇಂಪಾರ್ಟಂಟ್ ಜಾಗಗಳಲ್ಲಿ ಸೆಕ್ಯುರಿಟಿ ಹೆಚ್ಚಿಸಲಾಗಿದೆ. ಆದರೆ, ಅದ್ಯಾವುದರಿಂದಲೂ ಈ ಬಾಂಬ್ ಬ್ಲಾಸ್ಟುಗಳನ್ನ ತಡೆಯೋದಕ್ಕಾಗ್ತಿರಲಿಲ್ಲ. ಇಲ್ಲಿ ಉಪಯೋಗಕ್ಕೆ ಬರಬೇಕಾದದ್ದು 1993ರಲ್ಲೇ ಕಲಿತ ಪಾಠ. ಹೆಂಗೆ ನಮ್ಮವರೇ ಸೇರಿಕೊಂಡು ಬಾಂಬುಗಳನ್ನ ಮಾಡಿ ಕಾರಿಗೆ ತುಂಬಿ ಸದ್ದಿಲ್ಲದೇ ಜನಸಂದಣಿಯ ಜಾಗಗಳಲ್ಲಿ ನಿಲ್ಲಿಸಿ ಹೋಗಿಬಿಡ್ತಾರೆ ಅನ್ನೋದು ಹದಿನೇಳು ವರ್ಷಗಳ ಹಿಂದೇನೇ ಗೊತ್ತಾಗಿರೋ ವಿಷಯ. ಆದರೆ, ನಮ್ಮವರು ಹೊಸ ಪಾಠ ಕಲಿಯೋ ಭರದಲ್ಲಿ, ಕಲಿತ ಪಾಠಗಳನ್ನೆಲ್ಲ ಮರೆತು ಬಿಟ್ಟರೇನೋ ಅನ್ನಿಸತ್ತೆ.
                       of course, ಈ ವಿಷಯದಲ್ಲಿ ತುಂಬ ಬಾಲಿಶವಾಗಿ ಮಾತಾಡೋದು ಕೂಡ ಕಷ್ಟಾನೇ. ಒಂದೂ ಕಾಲು ಕೋಟಿ ಜನಸಂಖ್ಯೆ ಇರೋ ಮಹಾನಗರ ಅದು. ಇಲ್ಲಿ ಪ್ರತಿದಿನ ದಶದಿಕ್ಕುಗಳಿಂದಲೂ ಲಕ್ಷಾಂತರ ಜನ ಬರ್ತಾರೆ. ಬಂದಷ್ಟೇ ಸಂಖ್ಯೆಯಲ್ಲಿ ಹೊರಗೆ ಹೋಗ್ತಾರೆ. ಅವರ ಪೈಕಿ ಯಾವನು ಬಾಂಬು ತರ್ತಾನೆ - ಯಾವನು ಬಂದೂಕು ತರ್ತಾನೆ ಅಂತ ಹುಡುಕೋದು ಕಷ್ಟ. but, ದೇಶದಲ್ಲಿಲ್ಲದಂಥ ಪೊಲೀಸ್ ವ್ಯವಸ್ಥೆ ಮುಂಬೈಗಿದೆ. ಬೇಹುಗಾರಿಕೆ ವಿಷಯಕ್ಕೆ ಬಂದರೂ ಅವರದು ಎತ್ತಿದ ಕೈ. ಅಂಥದ್ದರಲ್ಲಿ, ಒಂದು ಪಕ್ಕಾ ಇಂಟೆಲಿಜೆನ್ಸ್ ವ್ಯವಸ್ಥೆಗೆ ಇಂಥ ವಿಷಯಗಳು ಗೊತ್ತಾಗಬೇಕು, ಅಮೇರಿಕದವರಿಗೆ ಗೊತ್ತಾಗ್ತವೆ ನೋಡಿ, ಹಾಗೆ. ಇಲ್ಲಿ ಕೂಡ ಒಂದು ಸಮಸ್ಯೆ ಇದೆ. ಮೊದಲಾದರೆ, ಭಯೋತ್ಪಾದಕ ಕೆಲಸಕ್ಕೆ ತುಂಬ ದೊಡ್ಡ ಮಟ್ಟದ ತಯಾರಿ ಬೇಕಾಗ್ತಿತ್ತು. ಅಲ್ಲೆಲ್ಲೋ ಪಾಕಿಸ್ತಾನದಲ್ಲಿ ಕುಂತವನು, ಅಲ್ಲಿಂದ ಜನರನ್ನ ಕಳಿಸಿ ಅವರಿಗೆ ಇಲ್ಲಿ ಬಾಂಬು - ಬಂದೂಕು, ಕಾರು, ದುಡ್ಡು, ಹುಡುಗರನ್ನ ಹೊಂದಿಸಿಕೊಟ್ಟು ಒಂದು ಕೆಲಸ ಮಾಡಿಸ್ತಿದ್ದ. ಒಂದು ಷಡ್ಯಂತ್ರದಲ್ಲಿ ಜಾಸ್ತಿ ಜನ ಭಾಗವಹಿಸಿದಷ್ಟೂ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗೋ ಸಾಧ್ಯತೆಗಳು ಹೆಚ್ಚಾಗ್ತಾ ಹೋಗ್ತವೆ. ಆದರೆ ಈಗ ಹಾಗಲ್ಲ. ಎಲ್ಲೋ ರಿಮೋಟ್ ಜಾಗಗಳಲ್ಲಿ ಕುಳಿತವನು ಇಂಟರ್ನೆಟ್ ಮೂಲಕಾನೇ ಧರ್ಮಾಂಧತೆ ಬೆಳೆಸಿಕೊಂಡು ಬಿಡ್ತಾನೆ. ಅವನಿಗೆ ಬಾಂಬು ತಯಾರಿಸೋ ತರಬೇತಿ ಕೂಡ ಈ ಹಾಳು ಇಂಟರ್ನೆಟ್ಟೇ ಕೊಡತ್ತೆ. ಮೊದಲಾದರೆ ಆರ್.ಡಿ.ಎಕ್ಸು, ಅದಕ್ಕೊಂದು ಡಿಟೋನೇಟರು, ಒಂದು ಟೈಮರು ಅಂತ ನೂರು ತಲೆನೋವುಗಳಿದ್ದವು. ಈಗ ಅಮೋನಿಯಂ ನೈಟ್ರೇಟ್ನಲ್ಲೇ ಬಾಂಬು ತಯಾರಿಸೋದನ್ನ ಕಲಿತುಕೊಂಡಿದಾರೆ. ಯಾರೋ ಐದಾರು ಹುಡುಗರು ಸೇರಿಕೊಂಡು ತಾವುತಾವೇ ತಮ್ಮದೇ ದುಡ್ಡಿನಲ್ಲಿ ಬಾಂಬು ತಯಾರಿಸಿ ಸಿಡಿಸಿ ಹೋಗಿಬಿಡ್ತಾರೆ. ನಾಳೆ ದಿನ ಅವರು ಸಿಕ್ಕಿಬೀಳಬಹುದು, ಆ ಮಾತು ಬೇರೆ. ಆದರೆ, ಆ ಷಡ್ಯಂತರದ ವಾಸನೆ ಪೊಲೀಸರಿಗೆ ಸಿಗೋ ಚಾನ್ಸು ಕಡಿಮೆ. ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ನಲ್ಲಿ ಆದದ್ದೂ ಅದೇ. ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಬ್ಲಾಸ್ಟ್ ಕೂಡ ಅಂಥದ್ದೇ ಕೆಲಸ ಅನ್ನೋದು ಇವತ್ತಲ್ಲ ನಾಳೆ ಗೊತ್ತಾಗತ್ತೆ.
                       ಆದರೆ, ಬಾಂಬು ಸಿಡಿದ ತಕ್ಷಣ ಲಷ್ಕರೆ ತಯ್ಯಬಾ ಕೆಲಸ ಅಂತ ಬ್ರೇಕಿಂಗ್ ನ್ಯೂಸ್ ಕೊಡೋದು ನಮ್ಮವರ ಹಳೇ ಚಾಳಿ. ಅದಕ್ಕೊಂದು ಕ್ವಶ್ಚನ್ ಮಾರ್ಕ್ ಹಾಕಿ, ಸೂತ್ರಗಳ ಹೇಳಿಕೆ ಅಂತ ಕೊಟ್ಟುಬಿಟ್ಟರೆ ಮುಗೀತು. ಬಾಂಬೆ ಬಾಂಬ್ ಬ್ಲಾಸ್ಟ್ನಲ್ಲೂ ಅದೇ ಆಗಿದ್ದು. ಇದರಲ್ಲಿ ಇಂಡಿಯನ್ ಮುಜಾಹಿದೀನ್ ಕೈವಾಡ ಇದೆ ಅಂದರೆ, ಅದನ್ನ ತಕ್ಕಮಟ್ಟಿಗೆ ಒಪ್ಪಿಕೊಳ್ಳಬಹುದು. ಸಿಮಿ ನಿಷೇಧ ಆದಾಗ ಅದರಲ್ಲಿದ್ದವರೇ ಆ ಸಂಘಟನೆ ಕಟ್ಕೊಂಡಿದಾರೆ. ಅದರ ಸ್ಥಾಪಕ ರಿಯಾಜ್ ಭಟ್ಕಳ್. ಅವನನ್ನ ನಾನೇ ಕರಾಚಿಯಲ್ಲಿ ಕೊಲ್ಲಿಸಿದೀನಿ ಅಂತ ಇತ್ತೀಚೆಗೆ ಛೋಟಾ ರಾಜನ್ ಹೇಳಿಕೊಂಡಿದ್ದ. ಆ ಮಾತಿರಲಿ. ಅದೆಷ್ಟು ಸತ್ಯಾನೋ ಗೊತ್ತಿಲ್ಲ. ಆದರೆ, ಇದರ ಹಿಂದೆ ಕೂಡ ಅದೇ ಸಂಘಟನೆ ಕೈವಾಡ ಇದೆ ಅನ್ನೋ ಸಂಶಯ ಪೊಲೀಸರಿಗಿಂತಲೂ ಮೊದಲು ಟಿ.ವಿ ಚಾನಲ್ಗಳವರಿಗೆ ಬಂದಿದೆ. ಪೊಲೀಸರು ಅದನ್ನ ಸೀರಿಯಸ್ಸಾಗಿ ತಗೊಂಡಿರೋ ಹಂಗಿದೆ.
                       ಇನ್ನು ಇದೊಂದು ಬಾಂಬ್ ಬ್ಲಾಸ್ಟ್ನ ತನಿಖೆ ಶುರುವಾಗತ್ತೆ. ಅದ್ಯಾವಾಗ ಮುಗಿಯತ್ತೋ ಯಾರಿಗೂ ಗೊತ್ತಾಗಲ್ಲ. ಇದರ ಆರೋಪಿಗಳನ್ನ ನಮಗೆ ಕೊಡಿ ಅಂತ ಮತ್ತೆ ನಮ್ಮ ಸರಕಾರ ಪಾಕಿಸ್ತಾನಕ್ಕೆ ಮನವಿ ಮಾಡಿಕೊಳ್ಳತ್ತೆ. ಅದು ಯಥಾ ಪ್ರಕಾರ ನಮ್ಮವರ ಮನವಿಯನ್ನ ಕಸದ ಬುಟ್ಟಿಗೆಸೆದು ಅಮೇರಿಕದ ಜೊತೆ ಸೇರಿಕೊಂಡು ಭಯೋತ್ಪಾದನೆ ವಿರುದ್ಧ ಸಮರದ ಭಾಷಣ ಮಾಡತ್ತೆ. ಇಲ್ಲಿ ಸಿಕ್ಕಿಬಿದ್ದಿರೋ ಆರೋಪಿಗಳಿಗಾಗಿ ಜೈಲುಗಳಲ್ಲಿ ಝೆಡ್ ಪ್ಲಸ್ ಸೆಕ್ಯುರಿಟಿ ಕೊಟ್ಟು, ವರ್ಷಗಟ್ಟಲೆ ಅವರ ವಿಚಾರಣೆ ನಡೆಸಿ ಕೊನೆಗೊಂದು ದಿನ ಗಲ್ಲು ಶಿಕ್ಷೆ ಕೊಟ್ಟರೆ, ನೇಣಿಗೆ ಹಾಕಬೇಡಿ ಅನ್ನೋ ಜನ ಹುಟ್ಟಿಕೊಳ್ತಾರೆ. ಅಷ್ಟೊತ್ತಿಗಾಗಲೆ ಮತ್ತಷ್ಟು ಬಾಂಬುಗಳು ಸಿಡಿದಿರುತ್ತವಾದ್ದರಿಂದ ಇದನ್ನೆಲ್ಲ ಜನ ಮರೆತೇ ಬಿಟ್ಟಿರ್ತಾರೆ. ಇದನ್ನೆಲ್ಲ ಹೊರತು ಪಡಿಸಿ ಮತ್ತೇನಾದರೂ ಆದರೆ, ಖಂಡಿತ ಬರೆದೇನು...

Tuesday, May 10, 2011

ಅಂಥ ಅಮೇರಿಕ ಕೂಡ ಅದೆಷ್ಟು ಹೆಣಗಿತು..?                      ಮಹಾನ್ ಪ್ರಚಂಡ ಬಿನ್ ಲಾಡೆನ್ ಅಮೇರಿಕಾ ಅನ್ನೋ ಕಬ್ಬಿಣದ ಕೋಟೆಯೊಳಕ್ಕೆ ತನ್ನ ಹುಡುಗರನ್ನು ನುಸುಳಿಸಿ, ಅಲ್ಲೇ ಅವರಿಗೆ ವಿಮಾನ ಹಾರಿಸೋದನ್ನ ಕಲಿಸಿದ. ಅವರು ಅದೇ ಅಮೇರಿಕಾದ ನಾಗರಿಕ ವಿಮಾನಗಳೊಳಕ್ಕೆ ಹತ್ತಿ ಕುಳಿತು ಅವನ್ನ ಹೈಜಾಕ್ ಮಾಡಿ world trade centerನೊಳಕ್ಕೆ ನುಗ್ಗಿಸಿದರು. ಅಮೇರಿಕನ್ ಮಿಲಿಟರಿ ಹೆಡ್ ಕ್ವಾರ್ಟರ್, ಪೆಂಟಗಾನನ್ನ ಪುಡಿಗುಟ್ಟಿದರು. ಅವರದೇ ದೊಣ್ಣೆ - ಅವರದೇ ಅಂಡು. ಬಾಸುಂಡೆ ಬರುವಂತೆ ಬಾರಿಸಿದವನು ಲಾಡೆನ್. ಅಂಥದ್ದೊಂದು ಮರ್ಮಾಘಾತ ತಿಂದ ನಂತರ, ಈತನ ಹೆಣ ಹಾಕ್ತೀವಿ ಅಂತ ಹೊರಟಿತು ಅಮೇರಿಕ. ಅದು ಅಷ್ಟು ಈಸಿ ಆಗಿರಲಿಲ್ಲ.                      2001ರಲ್ಲಿ ಡಬ್ಲು.ಟಿ.ಸಿ ಧರಾಶಾಹಿಯಾದಾಗ ಲಾಡೆನ್ ಅಫಘಾನಿಸ್ತಾನದಲ್ಲಿದ್ದ ಅನ್ನೋದರ ಬಗ್ಗೆ ಅಮೇರಿಕ ಸೇರಿದಂತೆ ಯಾರಿಗೂ ಸಂಶಯಗಳಿರಲಿಲ್ಲ. ಆ ಅಫಘಾನಿಸ್ತಾನವನ್ನು ಬುಡಮೇಲು ಮಾಡಿಯಾದರೂ ಆತನನ್ನ ಕೊಲ್ತೀನಿ ಅಂತ ಹೊರಟಿತು ಅಮೇರಿಕಾ. ಆ ದೇಶದ ಮಿಲಿಟರಿಯ ಆಯಕಟ್ಟಿನ ಜಾಗಗಳಲ್ಲಿ ಕುಳಿತವರಾರೂ, ಅಫಘಾನಿಸ್ತಾನ ಅನ್ನೋ ಈ ದುರ್ಗಮ ದೇಶದ ಇತಿಹಾಸ ಓದಿಕೊಂಡೇ ಇರಲಿಲ್ಲ. ಈ ದೇಶವನ್ನ ಇವತ್ತಿನ ತನಕ ಯಾವೊಬ್ಬ ದಂಡನಾಯಕನೂ ಇಡಿ ಇಡಿಯಾಗಿ ಗೆದ್ದಿಲ್ಲ, ಯಾವೊಬ್ಬ ಸಾಮ್ರಾಟನೂ ಪುಟ್ಟಾ ಪೂರ್ತಿಯಾಗಿ ಆಳಿಲ್ಲ. ಅಸಲಿಗೆ ಇದನ್ನು ಗೆಲ್ಲತ್ತೇವೆ ಅಂತ ಬಂದವರೆಲ್ಲ ಬಳಲಿ ಬೆಂಡೆದ್ದು ವಾಪಸ್ ಹೋಗಿದ್ದಾರೆ ಅಥವಾ ಇಲ್ಲಿನ ಅನಾಮಿಕ ಬೆಟ್ಟಗಳ ಕೊರಕಲಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ಇಂಥಾ ದೇಶದಲ್ಲೆಲ್ಲೋ ಗುಹೆಗಳಲ್ಲಿದ್ದುಕೊಂಡು ಪ್ರಪಂಚದ ಮೂಲೆ ಮೂಲೆಗಳಲ್ಲಿ ಬಾಂಬು ಸಿಡಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದ ಲಾಡೆನ್ ನನ್ನ ಹಿಡಿದು, ಆತನ ಅಲ್ ಖೈದಾ ಸಂಘಟನೆಯನ್ನ ಹೂತುಹಾಕುತ್ತೇನೆ ಅಂತ ಅಮೇರಿಕಾ ತೊಡೆತಟ್ಟಿತ್ತು. ಇದಕ್ಕಿದ್ದ ಅತಿ ದೊಡ್ಡ ಧೈರ್ಯ ಅಂದ್ರೆ ತನ್ನ ಸೈನ್ಯ.
                      ಅಂಥ ದೊಡ್ಡ ಸೈನ್ಯ ಇಟ್ಟುಕೊಂಡು ಅಫಘಾನಿಸ್ತಾನದ ಮೇಲೆ ದಾಳಿ ನಡೆಸೋದಕ್ಕೆ ಹೊರಟ ಅಮೇರಿಕಾ, ಇದನ್ನು ಭಯೋತ್ಪಾದನೆಯ ವಿರುದ್ಧದ ಯುದ್ಧ ಅಂದಿತು. ಆದರೆ, ಅದು ಅಷ್ಟು ಈಸಿ ಆಗಿರಲಿಲ್ಲ. ಅವರಿಗೆ ಇಡೀ ಯುದ್ಧ operate ಮಾಡೋದಕ್ಕೆ ಅಫಘಾನಿಸ್ತಾನದ ಹತ್ತಿರದಲ್ಲೇ ಒಂದು ಮಿಲಿಟರಿ ನೆಲೆ ಬೇಕಾಗಿತ್ತು. ಸೈನಿಕರನ್ನ ತಂದಿಳಿಸೋದಕ್ಕೆ, ಮದ್ದು ಗುಂಡು ಸ್ಟೋರ್ ಮಾಡ್ಕೊಳ್ಳೋದಕ್ಕೆ, ವಿಮಾನಗಳಿಗೆ ಪೆಟ್ರೋಲ್ ತುಂಬಿಸೋದಕ್ಕೆ ಒಂದು ಶಾಂತ ಪ್ರದೇಶ ಬೇಕಾಗಿತ್ತು. ಅದೇ ಟೈಮಿಗೆ ಇಂಥದ್ದೇ ಆಫರ್ ಕೊಟ್ಟವರು ಪಾಕಿಸ್ತಾನದ ಸರ್ವಾಧಿಕಾರಿ ಪರ್ವೇಜ್ ಮುಷರಫ್. ಅಮೇರಿಕಾ ಥಟ್ಟಂತ ಮುಷರಫ್ ಆಫರ್ ಒಪ್ಪಿಕೊಂಡುಬಿಟ್ಟಿತ್ತು. ಅದು ಜಾಣತನ. ದಾಳಿ ಮಾಡಬೇಕಾಗಿದ್ದ ಅಫಘಾನಿಸ್ತಾನಕ್ಕೆ ಆದಷ್ಟು ಹತ್ತಿರದಲ್ಲೇ ಸೈನಿಕ ನೆಲೆ ಮಾಡಿಕೊಂಡರೆ, ಖರ್ಚು, ಟೈಮು ಎಲ್ಲಾ ಉಳಿಸಬಹುದು. ಒಟ್ಟಿನಲ್ಲಿ ಪಾಕಿಸ್ತಾನದಲ್ಲಿ ಸೈನಿಕ ನೆಲೆ ಮಾಡಿಕೊಂಡು ಅಫಘಾನಿಸ್ತಾನದ ಮೇಲೆ ಯುದ್ಧ ಮಾಡುವುದು ಅದ್ಭುತ war strategyಯಾಗಿತ್ತು. ಆಗಲೇ ಅಮೇರಿಕದ ಸೈನ್ಯ ಕರಾಚಿಯಲ್ಲಿ ಬಂದಿಳಿದದ್ದು.

                     ತಮಾಷೆ ಅಂದ್ರೆ, ಇದು ಅಫಘಾನಿಸ್ತಾನ ಅನ್ನೋ ಟೆರರಿಸ್ಟ್ ದೇಶದ ಮೇಲೆ, ಪಾಕಿಸ್ತಾನ ಅನ್ನೋ ಟೆರರಿಸ್ಟ್ ದೇಶದ ಸಹಾಯ ಪಡೆದು, ಅಮೇರಿಕಾ ಅನ್ನೋ ಟೆರರಿಸ್ಟ್ ದೇಶ ದಾಳಿಗೆ ಬಂದಂತಾಗಿತ್ತು. ಆದರೆ, ಅಲ್ಲಿಂದ ಅಫಘಾನಿಸ್ತಾನದ ದಿಕ್ಕಿಗೆ ಹೊರಟ ಅಮೇರಿಕಾದ ಮಿಲಿಟರಿ ಟ್ರಕ್ಕುಗಳ ಮೇಲೆ ಪಾಕಿಸ್ತಾನದಲ್ಲೇ ಬಾಂಬುಗಳು ಬಿದ್ದವು.
                    ಅಸಲಿಗೆ ಅಮೇರಿಕಾದೊಂದಿಗೆ ಕೂಡಿಕೆ ಮಾಡಿಕೊಂಡು ಅಫಘಾನಿಸ್ತಾನದ ಮೇಲೆ ಯುದ್ಧ ಮಾಡುವುದು ಜನರಲ್ ಪರ್ವೇಜ್ ಮುಷರಫ್ ಗೆ ಮಾತ್ರ ಬೇಕಿತ್ತು. ಪಾಕಿಸ್ತಾನದ ಜನಸಾಮನ್ಯರ ಪಾಲಿಗೆ ಅಫಘಾನಿಸ್ತಾನ ಕೂಡ ಒಂದು ಮುಸ್ಲಿಂ ದೇಶ. ಒಂದು ಮುಸ್ಲಿಂ ದೇಶದ ಮೇಲೆ ಕಾಫಿರ್ ಅಮೇರಿಕಾ ದಾಳಿ ಮಾಡೋದಕ್ಕೆ ಬಂದಿದ್ದು, ಅದಕ್ಕೆ ತನ್ನ ದೇಶದ ನೆಲ ಬಳಸಿಕೊಂಡಿದ್ದು ಪಾಕಿಸ್ತಾನಿಯರಿಗೆ ಆಗಿ ಬರಲಿಲ್ಲ. ಅಲ್ಲೇನು ಟೆರರಿಸ್ಟುಗಳಿಗೆ ಕೊರತೆಯೇ. ಅವರೇ ಅಮೇರಿಕದ ಮಿಲಿಟರಿ ಟ್ರಕ್ಕುಗಳನ್ನ ಬಾಂಬಿಟ್ಟು ಸಿಡಿಸೋದಕ್ಕೆ ಶುರು ಮಾಡಿದರು. ಅಫಘಾನಿಸ್ತಾನ ಮೇಲೆ ದಂಡೆತ್ತಿ ಬಂದವರು ಪಾಕಿಸ್ತಾನದಲ್ಲೇ ಶತೃವನ್ನೆದುರಿಸಬೇಕಾಗಿ ಬಂದಿತ್ತು. ಗಟ್ಟಿಯಾಗಿ ಕಾಲೂರಿಕೊಂಡು ನಿಂತವನು ಮಾತ್ರ ಆಕಾಶಕ್ಕೆ ಏಣಿ ಹಾಕಬಲ್ಲ ಅನ್ನೋದು ಕಾಮನ್ ಸೆನ್ಸ್. ಆದರೆ, ಬಹುಶಃ ಅಮೇರಿಕಕ್ಕದು ಅರ್ಥ ಆಗಿರಲೇ ಇಲ್ಲ. ಅಫಘಾನಿಸ್ತಾನವನ್ನು ಪುಡಿಗಟ್ಟೋದಕ್ಕೆ ಬಂದವರಿಗೆ ಪಾಕಿಸ್ತಾನದ ತಮ್ಮ ಸೈನಿಕ ನೆಲೆಯನ್ನ ಉಳಿಸಿಕೊಳ್ಳೋದೇ ಕಷ್ಟ ಅನ್ನೋ ಸ್ಥಿತಿ ಬಂದಿತ್ತು. ಅದನ್ನ ಹಂಗೂ ಹಿಂಗೂ ಸಂಭಾಳಿಸಿಕೊಂಡು ಅಫಘಾನಿಸ್ತಾನದೊಳಕ್ಕೆ ಹೆಜ್ಜೆ ಇಟ್ಟರೆ, ಅಮೇರಿಕದ ಸೈನಿಕರು ಅಲ್ ಖೈದಾ ದಾಳಿಗೆ ಅಲ್ಲ, ಅಲ್ಲಿನ ಬಿಸಿಲು, ಧೂಳು, ರಾತ್ರಿಯ ಛಳಿಗೆ ಪತರಗುಟ್ಟಿಹೋದರು.
                    ಸೈನಿಕ ಭಾಷೆಯಲ್ಲಿ ಅದಕ್ಕೆ hostile territory ಅಂತಾರೆ. ಅಮೇರಿಕದ ಸೈನಿಕರಿಗೆ ಅಫಘಾನಿಸ್ತಾನದೊಳಕ್ಕೆ ಕಾಲಿಡುವ ತನಕ ಇಂಥ ಪರಿಸರದಲ್ಲಿ ಯುದ್ಧ ಮಾಡಿದ ಅನುಭವ ಇರಲಿಲ್ಲ. of course, ಇಲ್ಲಿ ಪಡೆದ ಅನುಭವ ಇರಾಕ್ ಯುದ್ಧದಲ್ಲಿ ಸಹಾಯಕ್ಕೆ ಬಂತು, ಆ ಮಾತು ಬೇರೆ. ಇಲ್ಲಿನ ಆ ಬಿಸಿಲು, ಆ ಧೂಳಿನ ಬಿರುಗಾಳಿ, ಕಣ್ಣು ಹಾಯಿಸಿದಷ್ಟೂ ದೂರದ ಒಣ ಗುಡ್ಡಗಳು, ಒಂದಿಡೀ ತುಕಡಿಯನ್ನ ಒಳಗೆ ಮುಚ್ಚಿಕೊಳ್ಳಬಲ್ಲಂಥಾ ಕೊರಕಲುಗಳು, ಎಲ್ಲವೂ ಅವರಿಗೆ ಹೊಸತು. ಅಸಲಿಗೆ ಈ ಪ್ರದೇಶ ಮತ್ತು ಇದರಲ್ಲಿನ war strategyಯನ್ನ ಅಮೇರಿಕ ಅರ್ಥ ಮಾಡಿಕೊಳ್ಳಲಿಲ್ಲ.
           
                    ಒಂದು ಕಡೆಯಿಂದ ಒಳಗೆ ನುಗ್ಗಿ ಅಲ್ ಖಾಯದಾದವರ ಎದೆ ಸೀಳಿ ರಕ್ತ ಕುಡಿದು, ಬಿನ್ ಲಾಡೆನ್ನ ಹೆಡಮುರಿ ಕಟ್ಟಿಕೊಂಡು ವಾಪಸ್ ಬಂದುಬಿಡೋಣ ಅಂದುಕೊಂಡು ಇಲ್ಲಿಗೆ ಬಂದರು. ಆದರೆ, ಇಲ್ಲಿಗೆ ಬಂದಾಗ ಪರಿಸ್ಥಿತಿ ಬೇರೆಯದೇ ಇತ್ತು. ಮುಕ್ಕಾಲು ಅಫಘಾನಿಸ್ತಾನ ತಾಲಿಬಾನಿಗಳ ಹಿಡಿತದಲ್ಲಿತ್ತು. ಪೂರ್ತಿ ತಾಲಿಬಾನ್ ಬಿನ್ ಲಾಡೆನ್ನ ಹಿಡಿತದಲ್ಲಿತ್ತು..! ಇನ್ನು ತಾಲಿಬಾನಿಗಳ ವಿರುದ್ಧ northern allianceನ ಕೆಲವರು ಹೋರಾಡ್ತಿದ್ದರಾದರೂ ಅವರು ಇದ್ದೂ ಇಲ್ಲದಂತಿದ್ದರು. ಅವರನ್ನ ಬೆಂಬಲಿಸಿ ತನ್ನ ಕೆಲಸ ಸಾಧಿಸೋ ನಿರ್ಧಾರಕ್ಕೆ ಅಮೇರಿಕಾ ಬಂದಿತ್ತು. ಆದರೆ, ಅಲ್ಲಿ ಮುಖ್ಯವಾಗಿ ಬೇಕಾದದ್ದು ಬೇಹುಗಾರಿಕೆ ಮಾಹಿತಿ. ಯಾವ ತಾಲಿಬಾನಿ ನಾಯಕ ಎಲ್ಲೆಲ್ಲಿದಾನೆ, ಅವರು ಮಾಡಿಕೊಳ್ತಿರೋ ಯುದ್ಧ ತಯಾರಿ ಏನು, ಅವರ ಬಳಿ ಇರುವ ಆಯುಧಗಳು, ಸೈನಿಕರು, ಈ ಎಲ್ಲಾ ಮಾಹಿತಿಗಳು ಕರೆಕ್ಟಾಗಿ ಸಿಕ್ಕರೆ ಅರ್ಧ ಯುದ್ಧ ಗೆದ್ದಂತೆ. ಆದರೆ, ನೀವು ನಂಬ್ತೀರೋ ಇಲ್ಲವೋ. ಈ ಬೇಹುಗಾರಿಕೆ ಕೆಲಸವನ್ನ ಅಮೇರಿಕಾ out source ಮಾಡಿಬಿಟ್ಟಿತು..! ಯಸ್... ಸತ್ಯ ಅದು. ತನಗೆ ಬೇಕಾದ softwareಗಳನ್ನ ತಯಾರಿಸಿಕೊಡುವ ಕೆಲಸವನ್ನ ಇಲ್ಲಿ ನಮ್ಮಲ್ಲಿರೋ ಇನ್ಫೋಸಿಸ್, ವಿಪ್ರೋದಂಥ ಐ.ಟಿ ಕಂಪನಿಗಳಿಗೆ ಗುತ್ತಿಗೆ ಕೊಡೋದಿಲ್ವಾ, ಹಂಗೇ ಬೇಹುಗಾರಿಕೆ ಕೆಲಸವನ್ನ ಖಾಸಗಿ ಕಂಪನಿಗಳಿಗೆ ಗುತ್ತಿಗೆ ಕೊಟ್ಟುಬಿಟ್ಟಿತು. It was a blunder. ಅದಕ್ಕಿಂತ ದುರಂತ ಅಂದರೆ, ಕೆಲವು ಪ್ರಮುಖ ಯುದ್ಧಗಳನ್ನ ಕೂಡ ಗುತ್ತಿಗೆ ಕೊಟ್ಟಿದ್ದು. ತೋರಾಬೋರಾ ಪ್ರದೇಶದಲ್ಲಿ ಬಿನ್ ಲಾಡೆನ್ ಇದಾನೆ ಅನ್ನೋ ಮಾಹಿತಿ ಇವರಿಗಿತ್ತು. ಇವರು ಅದ್ಯಾರೋ ಜಲಾಲಾಬಾದ್ನ ಹಜರತ್ ಅಲಿ ಅನ್ನೋ ನಾರ್ದರ್ನ್ ಅಲಯನ್ಸ್ ಕಮಾಂಡರನ ಕರೆದು ಲೋಡುಗಟ್ಟಲೆ ದುಡ್ಡು ಬಂದೂಕು ಕೊಟ್ಟು, ತೋರಾಬೋರಾನ್ನ ಗೆದ್ದುಕೊಡು ಅಂದರು. ಅವನು ಗೆದ್ದೂ ಕೊಟ್ಟ. ಆದರೆ, ಹಜರತ್ ಅಲಿ ಇವರ ಹತ್ರ ದುಡ್ಡು ತಗೊಂಡಂಗೇ ಬಿನ್ ಲಾಡೆನ್ ಹತ್ರಾನೂ ದುಡ್ಡು ತಗೊಂಡು ಅವನನ್ನ ಸುರಕ್ಷಿತವಾಗಿ ಬಿಟ್ಟುಬಿಟ್ಟ ಅನ್ನೋದು ಅಮೇರಿಕದವರಿಗೆ ಗೊತ್ತಾಗೋವಷ್ಟರಲ್ಲಿ ತುಂಬ ತಡ ಆಗಿತ್ತು.
                     ಅಳಿದುಳಿದ ಸಹಚರರ ಜೊತೆ ವಜೀರಿಸ್ತಾನದ ಕೊರಕಲುಗಳನ್ನ ಸೇರಿಕೊಂಡ ಬಿನ್ ಲಾಡೆನ್. ಅಮೇರಿಕದ ಅನಾಹುತಕಾರಿ ಪ್ರಿಡೇಟರ್ ಡ್ರಾನ್ಗಳು ಅಲ್ಲಿ ಬಾಂಬ್ ಸುರಿದವು. at last, ಪ್ರಾಣ ಉಳಿಸಿಕೊಳ್ಳೋದಕ್ಕೆ ಹೆಣಗಾಡಿದ ಒಸಾಮಾ ಬಿನ್ ಲಾಡೆನ್ ಬಂದು ತಲುಪಿದ್ದು ಪಾಕಿಸ್ತಾನದ ಹೃದಯ ಭಾಗವಾದ ಅಬೂತಾಬಾದಗೆ. ಅಲ್ಲಿ ಆತನನ್ನ ಪತ್ತೆ ಹಚ್ಚೋದಕ್ಕೆ ಮಾತ್ರ ಹ್ಯೂಮನ್ ಇಂಟೆಲಿಜನ್ಸ್ ಸಹಾಯಕ್ಕೆ ಬಂತು. ಆ ನಂತರ ಹೆಂಗೆ ಅಮೇರಿಕ ಅವನ ಹೆಣ ಹಾಕಿತು ಅನ್ನೋದನ್ನ ತುಂಬ ಜನ ಹೇಳಿದಾರೆ. ಆ ಪ್ರಳಯಾಂತಕನ ಶವ ಅರಬ್ಬಿ ಸಮುದ್ರದ ಪಾಲಾಗಿರೋದು ಹೆಚ್ಚೂ ಕಡಿಮೆ ಕನ್ಫರ್ಮ್ ಆಗಿದೆ. ಅದೇನೇ ಇರಲಿ. ಅಮೇರಿಕದ ಪಾಲಿಗಿದು ಹತ್ತು ವರ್ಷಗಳ ಹೋರಾಟ. ಹತ್ತು ವರ್ಷಗಳ ನಂತರ ಕೂಡ ಪೂರ್ತಿ ಅಫಘಾನಿಸ್ತಾನ ಇವರ ಹಿಡಿತಕ್ಕೆ ಸಿಕ್ಕಿಲ್ಲ. ಅದು ಸಿಕ್ಕುವುದೂ ಇಲ್ಲ. ಅದನ್ನ ಅರ್ಥ ಮಾಡಿಕೊಂಡು ಅಮೇರಿಕಾ ವಾಪಸ್ ಬಂದರೆ ಜಾಣ ಅನ್ನಿಸಿಕೊಳ್ಳುತ್ತದೆ

Friday, April 8, 2011

ಅಜ್ಜನ ಗುಡುಗಿಗೆ ಪಾರ್ಲಿಮೆಂಟ್ ನಡುಗಿದ್ಯಾಕೆಂದರೆ...

                                    ಅಣ್ಣಾ ಹಜಾರೆ. ಒಂದೇ ಒಂದು ವಾರದ ಹಿಂದೆ, ಎಲೆಕ್ಟ್ರಾನಿಕ್ ಸಿಟಿಯ ಯಾವುದೇ ಸಾಫ್ಟವೇರ್ ಕಂಪನಿಯೆದುರಿಗೆ ನಿಂತು ಅಣ್ಣಾ ಹಜಾರೆ ಯಾರು ಅಂತ ಕೇಳಿದ್ರೆ, ಯಾರೋ ರಾಜಕಾರಣಿ ಇರಬೇಕು ಅನ್ನೋ ಉತ್ತರ ಬರ್ತಿತ್ತೇನೋ. ಅಲ್ಪ ಸ್ವಲ್ಪ ಓದಿಕೊಂಡವರ ಪಾಲಿಗೆ ಕೂಡ ಅಣ್ಣಾ ಹಜಾರೆ ಅಂದರೆ, ಅಲ್ಲೆಲ್ಲೋ ಮಹಾರಾಷ್ಟ್ರದಲ್ಲಿ ಗ್ರಾಮೀಣಾಭಿವೃದ್ಧಿಗೆ ಶ್ರಮಿಸ್ತಿರುವ ಗಾಂಧಿವಾದಿ ಅಷ್ಟೇ. ಆದರೆ, ಈ ವೃದ್ಧ ದೆಹಲಿಯ ಜಂತರ್ ಮಂತರ್ ಗೆ ಬಂದು, ನೀವು ಜನಲೋಕಪಾಲ್ ಮಸೂದೆ ಅಂಗೀಕರಿಸೋತನಕ ನಾನು ಊಟ ಮಾಡಲ್ಲ ಅಂತ ಸಂಸತ್ ಭವನಕ್ಕೊಂದು ಮೆಸೇಜ್ ಕಳಿಸಿ ಕುಳಿತುಬಿಟ್ಟರು ನೋಡಿ. ಸರಕಾರ ನಡುಗಿ ಹೋಯಿತು. ದೇಶದ ತುಂಬ ಸಂಚಲನ.
                                  ವರ್ಷಗಳ ಕಾಲ ಬಿ.ಜೆ.ಪಿಯವರು ತಮ್ಮ ಮಿತ್ರ ಪಕ್ಷಗಳ ಜೊತೆ ಸೇರಿಕೊಂಡು ಗಂಟಲು ಹರಕೊಂಡರು. ಆ ಸಭಾತ್ಯಾಗಗಳೇನು, ಧರಣಿ ಸತ್ಯಾಗ್ರಹಗಳೇನು, ಅಬಾಬಾಬಾ... ಯು.ಪಿ.ಎ ಸರಕಾರ ಕ್ಯಾರೆ ಅಂತ ಕೂಡ ಕೇಳಲಿಲ್ಲ. ಪೇಪರುಗಳವರು ಥಾನುಗಟ್ಟಲೆ ಬರೆದರು. ಟಿ.ವಿ ಗಳವರು ಗಂಟೆಗಟ್ಟಲೆ ಚರ್ಚೆ ಮಾಡಿದರು. ಸೋನಿಯಾಗಾಂಧಿ ಧೂಳು ಝಾಡಿಸಿಕೊಂಡು ಎದ್ದು ಹೋದರು. ಈಗ ಈ ತಾತಯ್ಯ, ನಾನು ಉಪವಾಸ ಸತ್ಯಾಗ್ರಹ ಮಾಡ್ತೀನಿ ಅಂತ ಒಂದು ಮಾತು ಹೇಳಿದರು ನೋಡಿ, ಸಿಂಹಾಸನದ ಮೇಲೆ ಕುಂತವರ ಬೆವರಿಳಿದು ಹೋಯಿತು. ದಟ್ ಈಸ್ ಅಣ್ಣಾ ಹಜಾರೆ.
                                 ನಮ್ಮ ನಿಮ್ಮೆಲ್ಲರ ಮನೆಯಲ್ಲಿದ್ದಿರಬಹುದಾದ ತಾತನಂಥವರೇ ಇವರು. ತಮ್ಮ ಹೆಸರು, ಕಿಸನ್ ಬಾಪಟ್ ಬಾಪುರಾವ್ ಹಜಾರೆ ಅನ್ನೋದು ಇವರಿಗೇ ಮರೆತು ಹೋಗಿದ್ಯೇನೋ. ಐದೆಕರೆ ಒಣ ಭೂಮಿ ಇದ್ದ ದಟ್ಟದರಿದ್ರ ರೈತ ಕುಟುಂಬದಲ್ಲಿ ಹುಟ್ಟಿದವರು. ಏಳನೇ ಕ್ಲಾಸಿಗಿಂತ ಮುಂದೆ ಓದಲಿಲ್ಲ. ಚಿಕ್ಕಂದಿನಿಂದಲೇ ಮಹಾತ್ಮಾ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕ ಓದೋ ಗೀಳು. ಭಾರತದ ಸೈನ್ಯದಲ್ಲಿ ಡ್ರೈವರ್ ನೌಕರಿಗೆ ಸೇರಿದರು. 1970ರಲ್ಲಿ ಆದ ಆಕ್ಸಿಡೆಂಟ್ನಲ್ಲಿ ಬದುಕುಳಿದದ್ದೇ ಹೆಚ್ಚು. ಐದು ವರ್ಷಗಳ ನಂತರ ವಾಲಂಟರಿ ರಿಟೈರ್ಮೆಂಟ್ ತೆಗೆದುಕೊಂಡು ವಾಪಸ್ ತಮ್ಮ ಊರು ರಾಲೇಗಾನ್ ಸಿದ್ದಿಗೆ ಬಂದವರು, ಸಾರಾಯಿ ವಿರುದ್ಧ ಹೋರಾಟ ಶುರುಮಾಡಿದರು. ಈ ವ್ಯಕ್ತಿಗೆ ಸ್ವಾರ್ಥ ಇಲ್ಲ ಅನ್ನೋದು ಗೊತ್ತಾಗಿ ಜನ ಬೆಂಬಲಿಸಿಕೊಂಡು ಬಂದರು. ಬರಗಾಲದಿಂದ ಬಸವಳಿದುಹೋಗಿದ್ದ ಊರಿನಲ್ಲಿ ಈ ಮನುಷ್ಯ ಸರಕಾರದಿಂದ ನಯಾಪೈಸೆ ಕೇಳದೇ ಕೆರೆ ಕಟ್ತೀನಿ ಅಂತ ಹೊರಟರು. ಊರ ಜನ ರೊಟ್ಟಿ ಕಟ್ಟಿಕೊಂಡು ಬಂದರು. ನೋಡನೋಡ್ತಿದ್ದಂತೆ ಎಪ್ಪತ್ತೈದು ಊರುಗಳಲ್ಲಿ ಕೆರೆ, ಕಾಲುವೆಗಳಾದವು. ಅದೇ ಜನರನ್ನು ಕಟ್ಟಿಕೊಂಡು ಈ ತಾತ ಶಾಲೆ, ಆಸ್ಪತ್ರೆ ಕಟ್ಟಿದರು. ಆ ಕಟ್ಟುವಿಕೆಯ ಕೆಲಸದಲ್ಲಿ, ಕಿಸನ್ ಬಾಪಟ್ ಬಾಪುರಾವ್ ಹಜಾರೆ, ಅದ್ಯಾವಾಗ ಅಣ್ಣಾ ಹಜಾರೆ ಆದರೋ ಇವರಿಗೇ ಗೊತ್ತಾಗಲಿಲ್ಲ. 1992ರಲ್ಲಿ ಕೇಂದ್ರ ಸರಕಾರ ಅಣ್ಣಾ ಹಜಾರೆಯವರನ್ನ ಹುಡುಕಿಕೊಂಡು ಬಂದು ಪದ್ಮ ಭೂಷಣ ಪ್ರಶಸ್ತಿ ಕೊಟ್ಟಿತು. ಅದರಿಂದ ಸಮಾಧಾನ ಪಟ್ಟುಕೊಂಡು ಮನೇಲಿ ಕುಳಿತುಕೊಳ್ಳದ ಅಣ್ಣಾ, ಇದೇ ರೀತಿ ಹರತಾಳಕ್ಕಿಳಿದು, ಮಹಾರಾಷ್ಟ್ರ ಸರಕಾರ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತರುವಂತೆ ನೋಡಿಕೊಂಡರು. ಅಲ್ಲಿಗೆ, ಅಣ್ಣಾ ಹಜಾರೆ, ಮಹಾರಾಷ್ಟ್ರದ ನೊಂದ ಜನರ ಪಾಲಿನ ನಾಯಕನಾಗಿಹೋಗಿದ್ದರು.


                                        ಮಹಾರಾಷ್ಟ್ರದ ಕಟ್ಟಕಡೆಯ ವ್ಯಕ್ತಿಯ ಕೈಯಲ್ಲಿ ಕೂಡ ಸರಕಾರ ಮಾಡುವ ಲೆಕ್ಕ ಹೊರತೆಗೆಯೋ ಅಸ್ತ್ರ ಕೊಟ್ಟ ಅಣ್ಣನಿಗಿದ್ದದ್ದು ಒಂದೇ ಆಸೆ. ಸಂಸತ್ ಭವನದಲ್ಲಿ ಕುಳಿತಿರುವವರ ನೇತಾಗಳ ಹಗಲುದರೋಡೆಗೊಂದು ಮೂಗುದಾರ ಹಾಕಬೇಕು ಅನ್ನೋದು. ಅದರ ಅಸ್ತ್ರ ಅದೇ ಪಾರ್ಲಿಮೆಂಟಿನ ಮೂಲೆಯೊಂದರಲ್ಲಿ ನಲವತ್ತೆರಡು ವರ್ಷಗಳಿಂದ ಧೂಳು ತಿನ್ನುತ್ತಾ ಬಿದ್ದಿತ್ತು.
                                       ಪ್ರಧಾನಮಂತ್ರಿ, ಕೇಂದ್ರಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗ ಅವುಗಳನ್ನ ತನಿಖೆ ಮಾಡೋದಕ್ಕೆ ಒಂದು ಸಮಿತಿ ಇರಬೇಕು ಅನ್ನೋ ಮಸೂದೆ 1968ರಲ್ಲೇ ಲೋಕಸಭೆಗೆ ಬಂತು. ಅಲ್ಲಿಂದ ಪಾಸಾಗಿ ರಾಜ್ಯಸಭೆಯಲ್ಲಿ ಉಳಿದ ಅದು, ಇವತ್ತಿನ ತನಕ ಅಲ್ಲೇ ಇದೆ. ಅದು ಜಾರಿಗೆ ಬಂದರೆ ಭ್ರಷ್ಠರೆಲ್ಲಾ ಜೈಲಿಗೆ ಹೋಗ್ತಾರೆ ಅಂತೇನೂ ಇಲ್ಲ. ಸಂಸತ್ತಿನಲ್ಲಿರುವ ಹಗಲುದರೋಡೆಕೋರರು ಅದರ ನರ ಕತ್ತರಿಸಿಟ್ಟಿದ್ದಾರೆ. ಅದನ್ನೇ ನಮ್ಮ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯಂಥವರು ಮತ್ತೆ ಬರೆದು ಜನಲೋಕಪಾಲ್ ಬಿಲ್ ಅಂತ ಹೆಸರಿಟ್ಟರು. ಅದು ಒಂದು ವೇಳೆ ಜಾರಿಗೆ ಬಂದರೆ, ಇವತ್ತು ಸಂಸತ್ತಿನಲ್ಲಿರುವವರ ಪೈಕಿ ಅರ್ಧ ಜನ ಜೈಲಲ್ಲಿರ್ತಾರೆ. ಅಂಥ ಮಸೂದೆಯನ್ನ ಅಂಗೀಕರಿಸಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ತಾರಾ ಆ ಕಳ್ಳರು..? ಜನಲೋಕಪಾಲ್ ಮಸೂದೆಯನ್ನ ಕಸದ ಬುಟ್ಟಿಗೆಸೆದು, ಮತ್ತೆ ಅಂಧಾದುಂಧಿ ಶುರುವಿಟ್ಟುಕೊಂಡರು. ಹಾಗೆ ಪಂಕ್ತಿ ಊಟಕ್ಕೆ ಕುಂತಿದ್ದ ಖಬರುಗೇಡಿಗಳು ಬೆಚ್ಚಿಬಿದ್ದದ್ದು, ಈ ತಾತಯ್ಯ ಆ ಮಸೂದೆ ಜಾರಿಗೆ ಬರೋ ತನಕ ನಾನು ಊಟ ಮಾಡಲ್ಲ ಅಂದಾಗ.
                                      ಈ ಅಜ್ಜ, ನಾನು ಉಪವಾಸ ಸತ್ಯಾಗ್ರಹ ಮಾಡ್ತೀನಿ ಅಂತ ಘೋಷಿಸಿದಾಗ, ಏನ್ ಮಾಡ್ತೀಯೋ ಮಾಡ್ಕೋ ಅಂತ ಪಾರ್ಲಿಮೆಂಟಿನಲ್ಲಿ ಕೆಲವರಾದರೂ ಅಂದಿದ್ದರೇನೋ. ಆದರೆ, ದೇಶಕ್ಕೆ ದೇಶವೇ ಇವರ ಜೊತೆ ಎದ್ದು ನಿಂತ ರೀತಿ ನೋಡಿ, ಸಂಸತ್ ಭವನದ ಅಡಿಪಾಯವೇ ಅಲುಗಾಡಿತ್ತು. ಸುಮ್ನೆ ಯೋಚ್ನೆ ಮಾಡಿ, ದೇವರನ್ನೇ ನೆಟ್ಟಗೆ ನಂಬದ ಜನ ನಾವು. ಎಲ್ಲಿಂದಲೋ ಬಂದ ಈ ಅಜ್ಜನ್ನ ಯಾಕೆ ನಂಬಿದ್ವಿ..? ಯಾಕಂದ್ರೆ, ಈ ಅಣ್ಣಾ ಹಜಾರೆ ಸ್ವಾರ್ಥ ಇಲ್ಲ. ಸಮಾಜ ಸೇವೆಗೆ ನಿಂತ ಮೇಲೆ ಮದುವೆ ಮಾಡಿಕೊಳ್ಳುವುದನ್ನೂ ಮರೆತ ವ್ಯಕ್ತಿ ಇವರು. ಹಳ್ಳಿಯ ದೇವಸ್ಥಾನದ ಮೂಲೆಯೊಂದರಲ್ಲಿ ಮಲಗ್ತಾರೆ. ಯಾರು ಕರೆದರೆ ಅವರ ಮನೆಗೆ ಹೋಗಿ ಉಂಡು ಬರ್ತಾರೆ. ಉಳಿದ ಸಮಯವೆಲ್ಲ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಮೀಸಲು. ಯಾವಾಗ ಹೀಗೆ ಸತ್ಯಾಗ್ರಹ ಮಾಡೋದಕ್ಕೆ ತಯಾರಾದ ವ್ಯಕ್ತಿಗೆ ಅದರಿಂದ ವಯಕ್ತಿಕ ಲಾಭ ಏನೂ ಆಗಬೇಕಾಗಿಲ್ಲ ಅನ್ನೋದು ಗೊತ್ತಾಯ್ತೋ, ಜನ ತಿರುಗಿ ನೋಡಿದರು. ಅದೇ ಹೊತ್ತಿಗೆ ಟಿ.ವಿ ಗಳಲ್ಲಿ ಪೇಪರುಗಳಲ್ಲಿ ಇದೇ ಸುದ್ದಿ.
                                   ತಮ್ಮ ಹೋರಾಟಕ್ಕೆ ಇಷ್ಟು ದೊಡ್ಡ ಬೆಂಬಲ ಸಿಗತ್ತೆ ಅಂತ ಸ್ವತಃ ಇವರಾದರೂ ಅಂದುಕೊಂಡಿದ್ದರೋ ಇಲ್ಲವೋ. ದೆಹಲಿಯ ಜಂತರ್ ಮಂತರ್ ಗೆ ಜನ ಸಾಲುಗಟ್ಟಿ ಬರೋದಕ್ಕೆ ಶುರು ಮಾಡಿದರು. ಅದರಲ್ಲೂ ಹುಡುಗ - ಹುಡುಗಿಯರು.
                               ನೆನಪಿರಲಿ, ಅಣ್ಣಾ ಹಜಾರೆ ಜನರೇಷನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಬಡಿದಾಡಿತು. ಜೈಲಿಗೆ ಹೋದವರೆಷ್ಟೋ, ನೇಣುಗಂಭ ಹತ್ತಿದವರೆಷ್ಟೋ. ಅವರು ಭವ್ಯ ಭಾರತದ ಕನಸು ಕಂಡರು. ನಂತರ ಬಂದ ಒಂದಿಡೀ ಜನಾಂಗಕ್ಕೆ ಅದೇನಾಯಿತೋ ಏನೋ. ಭ್ರಷ್ಟಾಚಾರವನ್ನ ಒಪ್ಪಿಕೊಂಡುಬಿಟ್ಟರು. ಕೊಡೋದು ಕೊಟ್ಟರಾಯಿತು ನಮ್ಮ ಕೆಲಸ ಆದರೆ ಸಾಕು ಅನ್ನೋ ಮನೋಭಾವ. ದೇಶದ ಕೊಳ್ಳೆ ಹೊಡೆದ ರಾಜಕಾರಣಿ, ನನ್ನ ಆಸ್ತಿಯನ್ನೇನು ಮುಟ್ಟಿಲ್ಲವಲ್ಲ ಅನ್ನೋ ನಿರ್ಲಜ್ಜ ಸಮರ್ಥನೆ. ಆದರೆ, ನಂತರ ಬಂದ ಈ ಹೊಸ ಜನರೇಷನ್ನಿದೆ ನೋಡಿ. ಇವರಲ್ಲಿ ಪ್ರಶ್ನೆ ಕೇಳೋ ಹುರುಪು. ಈ ಹುಡುಗ ಹುಡುಗಿಯರು ದೇಶ ವಿದೇಶ ನೋಡಿದವರು. ಹೆಂಗೆ, ಸುರೇಶ್ ಕಲ್ಮಾಡಿ ಎಂಬ ನುಂಗುಬಾಕ ಕಾಮನ್ವೆಲ್ತ್ ಗೇಮ್ ಹೆಸರಿನಲ್ಲಿ ಕೊಳ್ಳೆ ಹೊಡೆದ, 2 ಜಿ ಸ್ಪೆಕ್ಟ್ರಮ್ ನೆಪದಲ್ಲಿ ರಾಜಾ ಎಂಬ ಮಂತ್ರಿ ಲಕ್ಷಾಂತರ ಕೋಟಿ ರುಪಾಯಿ ಮನೆಗೆ ಒಯ್ದ ಅನ್ನೋದು ಇವರಿಗೆ ಗೊತ್ತು. ಯುದ್ಧದಲ್ಲಿ ಸತ್ತ ಸೈನಿಕರ ಹೆಂಡತಿ ಮಕ್ಕಳಿಗೆ ಕೊಡಬೇಕಾದ ಮನೆಗಳನ್ನೂ ಕೂಡ ಬಿಡದಷ್ಟು ಬರಗೆಟ್ಟ ರಾಜಕಾರಣಿಗಳು ನಮ್ಮಲ್ಲಿದಾರೆ ಅನ್ನೋದನ್ನ ಇವರು ತಿಳಿದುಕೊಂಡಿದ್ದಾರೆ. ಇವರಿಗೆ ಒಳಗೊಳಗೇ frustration. ಅದೇ ಹೊತ್ತಿಗೆ ಕಂಪ್ಯೂಟರ್ ಎದುರಿಗೆ ಕುಳಿತು ಇಂಟರ್ನೆಟ್ ಓಪನ್ ಮಾಡಿದರೆ ಈಜಿಪ್ತಿನ ಹುಡುಗರು ತಮ್ಮ ಭ್ರಷ್ಟ ಅಧ್ಯಕ್ಷನನ್ನ ಮನೆಗೆ ಕಳಿಸಿದ ಸುದ್ದಿ ಬರತ್ತೆ. ಲಿಬಿಯಾದ ಯುವಕ ಯುವತಿಯರು ಕ್ರೂರಿ ಸರ್ವಾಧಿಕಾರಿಯ ವಿರುದ್ಧ ಯುದ್ಧ ಘೋಷಿಸಿದ ವಿಷಯ ಗೊತ್ತಾಗತ್ತೆ. ಇವರ ಪೈಕಿ ಎಷ್ಟು ಜನರಿಗೆ ಅಂಥದ್ದೊಂದು ಕ್ರಾಂತಿ ನಮ್ ದೇಶದಲ್ಯಾಕೆ ನಡೆಯೋದಿಲ್ಲ ಅಂತ ಒಳಗೊಳಗೇ ಅನ್ನಿಸ್ತಿತ್ತೋ ಏನೋ. ಅಣ್ಣಾ ಹಜಾರೆ ಜಂತರ್ ಮಂತರ್ ಗೆ ಬಂದು ಕುಳಿತುಕೊಳ್ತಿದ್ದಂತೆ, ಕ್ರಾಂತಿಯ ಕಾಲ ಬಂದೇಬಿಟ್ಟಿತು ಅಂತ ಅನ್ನಿಸಿಬಿಟ್ಟಿತೇನೋ ಇವರಿಗೆ. ಎಷ್ಟು ಜನ ಬಂದರು ನೋಡಿ.
                                    ದೆಹಲಿಗೆ ಬರೋದಕ್ಕಾಗದವರು ತಮ್ಮ ತಮ್ಮ ಊರುಗಳಲ್ಲೇ ಧರಣಿಗಿಳಿದರು. ಕರ್ನಾಟಕದಲ್ಲೇ ಕನಿಷ್ಠ ಇಪ್ಪತ್ತು ಊರುಗಳಲ್ಲಿ ಆಂದೋಲನ ಶುರುವಾಗಿದೆ. ಜನ್ಮದಲ್ಯಾವತ್ತೂ ಈ ದೇಶ ಸತ್ತಿದೆಯಾ ಬದುಕಿದೆಯಾ ಅಂತ ನೋಡದ ಸಾಫ್ಟವೇರಿಗಳು, ಶ್ರೀಮಂತರು, ಉದ್ಯಮಿಗಳು ಮೊಟ್ಟಮೊದಲ ಸಲ ಬೀದಿಗಿಳಿದಿದಾರೆ. ಎಲ್ಲರದೂ ಒಂದೇ ಬೇಡಿಕೆ. ಇನ್ನು ಈ ದೇಶ ಲೂಟಿಯಾಗೊದಕ್ ಬಿಡಲ್ಲ, ಜನಲೋಕಪಾಲ್ ಮಸೂದೆ ಜಾರಿಗೆ ಬರಲಿ ಅನ್ನೋದು. ಈಗ ಬಿ.ಜೆ.ಪಿಯವರು ಸೇರಿದಂತೆ ವಿರೋಧ ಪಕ್ಷಗಳವರು ಅಣ್ಣಾ ಹಜಾರೆಯವರಿಗೆ ಬೆಂಬಲ ಕೊಡ್ತಿದಾರೆ. ಕಳ್ರು. ತಾವು ಅಧಿಕಾರದಲ್ಲಿದ್ದಾಗ ಇವರು ಮನಸು ಮಾಡಿದ್ರೆ, ಆ ಮಸೂದೆ ಯಾವತ್ತೋ ಜಾರಿಗೆ ಬಂದಿರೋದು. ಈಗ ಭಾಷಣ ಮಾಡೋದಕ್ ಬಂದಿದಾರೆ. ಹೋರಾಟದ ಕಿಚ್ಚು ನೋಡಿದರೆ, ಇವರ ಮುಖವಾಡ ಕಳಚಿ ಬೀಳೋ ದಿನ ದೂರವಿಲ್ಲ.
                                   ಇದು, ಎಪ್ಪತ್ತು ವರ್ಷಗಳಿಂದ ಜನಸಾಮಾನ್ಯರಲ್ಲಿ ಹೆಪ್ಪುಗಟ್ಟಿದ್ದ ಫ್ರಸ್ಟ್ರೇಷನ್ ಪರಿಣಾಮ. ಇಷ್ಟು ದಿನ ಈ ದೇಶವನ್ನ ಹರಿದು ತಿಂದಿರಿ. ಇನಫ್ ಈಸ್ ಇನಫ್. ಇನ್ನು ಸಾಕು. ಇದನ್ನ ಸಹಿಸಿಕೊಳ್ಳೋದಿಲ್ಲ ಅಂತ ಸಂಸತ್ನಲ್ಲಿ ಕುಳಿತಿರುವ ಗಂಟುಗಳ್ಳರಿಗೆ ಸ್ಪಷ್ಟವಾದ ಸಂದೇಶವನ್ನ ದೇಶದ ಪರವಾಗಿ ಅಲ್ಲಿಗೆ ತಲುಪಿಸೋದಕ್ಕೆ ಬಂದಿರುವವರು ಅಣ್ಣಾ ಹಜಾರೆ. ಅದನ್ನವರು ಸಮರ್ಥವಾಗಿ ಮಾಡ್ತಿದಾರೆ.
                                    ಈ ಚಳವಳಿಗೆ ಇತ್ತೀಚೆಗೆ ತುನೇಷಿಯಾ, ಈಜಿಪ್ತ್, ಲಿಬಿಯಾಗಳಲ್ಲಿ ನಡೆದ ಕ್ರಾಂತಿ ಪ್ರೇರಣೆ ಕೊಟ್ಟಿತಾ..? ಹೌದು ಅಂತ ಹೇಳೋದು ಕಷ್ಟ. ಅಲ್ಲಿ ನಡೆದ ಕ್ರಾಂತಿ ಕ್ರೂರಿ ಸರ್ವಾಧಿಕಾರಿಗಳ ವಿರುದ್ಧ. ಪುಣ್ಯಕ್ಕೆ ಇಲ್ಲಿ ಅಂಥದ್ದಿಲ್ಲ. ಅಲ್ಲಿ ನಡೆದ ದಂಗೆಗಳಿಗೆ ಇಂಥವನೇ ನಾಯಕ ಅಂತಲೇ ಇರಲಿಲ್ಲ. ಅದರಲ್ಲೂ ಈಜಿಪ್ತಿನಲ್ಲಿ. ಅಲ್ಲಿನ ಹುಡುಗ-ಹುಡುಗಿಯರು ಫೇಸ್ ಬುಕ್ನಲ್ಲಿ, ಟ್ವಿಟರ್ನಲ್ಲಿ ಮಾತಾಡಿಕೊಂಡು ಒಂದು ಮುಂಜಾನೆ ಕೈರೋದ ತೆಹರೀರ್ ಸ್ಕ್ವೇರ್ನಲ್ಲಿ ಸೇರಿದರು. ನೋಡನೋಡ್ತಿದ್ದಂತೆಯೇ ಆ ಸಂಖ್ಯೆ ಒಂದು ಲಕ್ಷದಷ್ಟಕ್ಕೆ ಬಂದು, ಅಧ್ಯಕ್ಷ ಮುಬಾರಕ್ ಕುರ್ಚಿ ಬಿಟ್ಟು ಇಳಿಯಬೇಕು ಅಂತ ಒತ್ತಾಯಿಸಿದರು. ಕ್ರಾಂತಿ ದೇಶದ ತುಂಬ ಹರಡಿತು. ಬಂಡಾಯವೆದ್ದವರ ಮೇಲೆ ಗುಂಡು ಹಾರಿಸೋದಿಲ್ಲ ಅಂತ ಪೊಲೀಸರು, ಮಿಲಿಟರಿಯವರು ಘೋಷಿಸಿಬಿಟ್ಟರು. ಮುಬಾರಕ್ ಟಿ.ವಿ, ರೇಡಿಯೋ, ಪೇಪರು, ಇಂಟರ್ನೆಟ್ಟುಗಳನ್ನೆಲ್ಲ ಬ್ಯಾನ್ ಮಾಡಿದರೂ ಜನಾಂದೋಲನ ನಿಲ್ಲಿಸೋದಕ್ಕಾಗಲಿಲ್ಲ. ಬದಲಾವಣೆ ಬಂದೇ ಬಿಟ್ಟಿತು.
 
                                   ಆದರೆ ಇಲ್ಲಿ ಯಾರನ್ನೂ ಕುರ್ಚಿ ಬಿಟ್ಟು ಇಳಿಸೋದಕ್ಕೆ ಅಣ್ಣಾ ಹಜಾರೆ ಉಪವಾಸ ಕುಳಿತಿಲ್ಲ. ಗದ್ದುಗೆಯ ಮೇಲೆ ಕುಳಿತವರು ಹಗಲುದರೋಡೆಗಿಳಿಯದಂತೆ ಕಾಯೋದಕ್ಕೆ ಒಂದು ಸಮಿತಿ ಇರಬೇಕು ಅನ್ನೋದೊಂದೇ ಇವರ ಬೇಡಿಕೆ. ಆ ಸಮಿತಿಯಲ್ಲಿ ಅರ್ಧದಷ್ಟು ಜನ ಸಾಮಾನ್ಯ ಜನರಿರಲಿ. ಭ್ರಷ್ಟಾಚಾರದ ಆರೋಪ ಬಂದಾಗ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಶಿಕ್ಷೆ ಕೊಡೋ ಅಧಿಕಾರ ಆ ಸಮಿತಿಗಿರಲಿ ಅಂತ ಇವರಂತಾರೆ. ಅದಕ್ಕೊಂದು ವೇಳೆ ಹ್ಞೂಂ ಅಂದುಬಿಟ್ಟರೆ, ಪಾರ್ಲಿಮೆಂಟಿನಲ್ಲಿರೋ ಅರ್ಧಕ್ಕರ್ಧ ಜನ ಜೈಲಿನಲ್ಲಿ ಮುದ್ದೆ ಮುರೀಬೇಕಾಗತ್ತೆ ಅಂತ ಗೊತ್ತು ಅವರಿಗೆ. ಅದಕ್ಕೇ ಸಮಿತಿ ಮಾಡೋದಕ್ಕೆ ಒಪ್ತಿಲ್ಲ. ನೂರೆಂಟು ನೆಪ ಹೇಳ್ತಿದಾರೆ. ಸಮಿತಿ ಮಾಡಿದ್ರೂ ಅದಕ್ಕೆ ಅಧ್ಯಕ್ಷರಾಗಿ ಮಂತ್ರಿಗಳೇ ಇರಬೇಕು ಅನ್ನೋದು ಕೇಂದ್ರ ಸರಕಾರದ ಇತ್ತೀಚಿನ ಮಾತು.
              ಇದಕ್ಕೆ ಆಂದೋಲನಕ್ಕೆ ನಿಂತವರು ಒಪ್ತಿಲ್ಲ. ಈ ಸಲ ಆಗಿದ್ದು ಆಗಿಹೋಗಲಿ ಅನ್ನೋದು ಇವರ ನಿರ್ಧಾರ. ಒಂದು ಮಾತು ನೆನಪಿರಲಿ, ಇದೊಂದು ಚಳವಳಿಯಿಂದ ಭ್ರಷ್ಟರೆಲ್ಲ ಜೈಲಿಗೆ ಹೋಗ್ತಾರೆ, ಭಾರತ ರಾಮರಾಜ್ಯ ಆಗಿಬಿಡತ್ತೆ ಅಂತಲ್ಲ. ಒಬ್ಬ ಮುಬಾರಕ್ ಹೋದ ಮಾತ್ರಕ್ಕೆ ಈಜಿಪ್ತ್ ಉದ್ಧಾರವಾಗಲ್ಲ. ಒಬ್ಬ ಗಡಾಫಿ ತೊಲಗಿದ ಮಾತ್ರಕ್ಕೆ ಲಿಬಿಯಾದಲ್ಲಿ ಸುವರ್ಣ ಯುಗ ಶುರುವಾಗಲ್ಲ. ಒಂದು ಬದಲಾವಣೆಯ ಗಾಳಿ ಬೀಸತ್ತೆ ಅಷ್ಟೆ. ಈಗ ಬೀದಿಗಿಳಿದಿರುವವರ ಪೈಕಿ ಕಾಲು ಭಾಗ ಜನ, ಇನ್ಯಾವತ್ತೂ ನಾವು ಯಾರಿಗೂ ಲಂಚ ಕೊಡಲ್ಲ, ಲಂಚ ಕೇಳಿದವರನ್ನ ಸುಮ್ಮನೆ ಬಿಡಲ್ಲ ಅಂತ ಪ್ರತಿಜ್ಞೆ ಮಾಡಿದ್ರೆ ಅಷ್ಟು ಸಾಕು. ಮುಂದ್ಯಾವತ್ತಾದ್ರೂ, ಎ ರಾಜಾನಂಥ ಮಂತ್ರಿ ಕೋಟಿಗಟ್ಟಲೆ ಲಂಚ ತೆಗೆದುಕೊಳ್ಳುವಾಗ ಒಂದು ಸಲ ಇದನ್ನೆಲ್ಲ ನೆನಪು ಮಾಡಿಕೊಂಡರೂ ಸಾಕು. ಅದು ಆಗಲಿ ಅಂತಾನೇ ಇದನ್ನ ಬೆಂಬಲಿಸ್ತಿರೋದು. ಏನೇ ಆಗಲಿ, ತಮ್ಮ ದೇಶಕ್ಕಾಗಿ ಹೋರಾಡೋ ಸೌಭಾಗ್ಯ ಎಲ್ಲರಿಗೂ ಸಿಗಲ್ಲ. ನಮ್ಮ ತಾತನ ಪೀಳಿಗೆಯವರಿಗೆ ಸ್ವಾತಂತ್ರ್ಯ ಹೋರಾಟ ಮಾಡೋ ಅವಕಾಶ ಸಿಕ್ಕಿತ್ತು. ನಮ್ಮ ತಂದೆಯ ಪೀಳಿಗೆಯವರು ಕೊನೆಪಕ್ಷ ಎಮರ್ಜನ್ಸಿ ವಿರುದ್ಧದ ಹೋರಾಟ ನೋಡಿದರು. ನಮಗೆ, ಯುವ ಜನರಿಗೆ ಈ ಆಂದೋಲನದಲ್ಲಿ ಭಾಗವಹಿಸುವ ಸೌಭಾಗ್ಯ. ಮಿಸ್ ಮಾಡಿಕೊಂಡರೆ ನಮ್ಮಷ್ಟು ಅವಿವೇಕಿಗಳು ಇನ್ಯಾರೂ ಇಲ್ಲ. 

Tuesday, March 15, 2011

ಸರ್ವನಾಶದ ಘಳಿಗೆಯಲ್ಲೂ ಕರುಳು ಚುರ್ರೆನ್ನದಿದ್ದರೆ...

                      ಅದ್ಯಾಕೋ, ಇದೊಂದು ಡಾಕ್ಯುಮೆಂಟರಿ ತುಂಬ ಮನಸು ಕಲಕಿಬಿಟ್ಟಿತು. "If you don't want to be Nero's guests, then resist" ಅಂತ ಹೆಸರು. "ನಿಮಗೆ ನೀರೋನ ಅತಿಥಿಗಳಾಗಲು ಇಷ್ಟವಿಲ್ಲದಿದ್ದರೆ, ವಿರೋಧಿಸಿ" ಅನ್ನೋದು ಅದರ ಕೆಟ್ಟ ಕನ್ನಡ ಟ್ರಾನ್ಸ್ಲೇಷನ್ನು. ರೈತರ ಆತ್ಮಹತ್ಯೆಗಳ ಬಗ್ಗೆ ಇದೆ. ಹಿಂದೂ ಪತ್ರಿಕೆಯ ರೂರಲ್ ಅಫೇರ್ಸ್ ಎಡಿಟರ್ ಪಿ ಸಾಯಿನಾಥರನ್ನ ಮುಂದಿಟ್ಟುಕೊಂಡು ದೀಪಾ ಭಾಟಿಯಾ ಇದನ್ನ ಮಾಡಿದಾರೆ. ಒಬ್ಬ ಟಿ.ವಿ ಪತ್ರಕರ್ತನಾಗಿ ನನಗೆ ಇದರ ನರೇಷನ್ನು ಅದ್ಭುತ ಅನ್ನಿಸಿತು. ಒಂದೇ ಒಂದು ಸಾಲಿನ ಸ್ಕ್ರಿಪ್ಟ್ ಬರೆಯದೇ ಇಡೀ ಕಥೇನ ಇಷ್ಟು ಚನ್ನಾಗಿ ಹೇಳಬಹುದಾ..? straight to the viewers heart..? ಅದು ನನಗೆ ಈ ಹೊತ್ತಿನ ತನಕ ಆಶ್ಚರ್ಯ. ಡಾಕ್ಯುಮೆಂಟರಿಯನ್ನ ಎಡಿಟ್ ಮಾಡಿದ ರೀತಿ amazing. ಕ್ಯಾಮೆರಾ ಕೆಲಸದ ಬಗ್ಗೆ ದೂಸರಾ ಮಾತೇ ಇಲ್ಲ. ಡಾಕ್ಯುಮೆಂಟರಿ ಮುಗಿಯುವ ರೀತಿ ಇದೆಯಲ್ಲ, ಅದು mind blowing. ಇದಕ್ಕಿಂತ ಚನ್ನಾಗಿರುವ screen playನ ನಾನು ಇದುವರೆಗಂತೂ ನೋಡಿಲ್ಲ. ಇವೆಲ್ಲ, ನನ್ನೊಳಗಿನ ಪತ್ರಕರ್ತನ observationಗಳಾದವು.
                      ಆದರೆ ಒಳಗೊಬ್ಬ ಮನುಷ್ಯನಿದಾನಲ್ಲ..? ಅವನು ಕಂಡಿದ್ದನ್ನ ಏನು ಅಂತ ಹೇಳಲಿ..? "If you don't want..." ನನ್ನನ್ನ ಈ ಪರಿ ಹಿಡಿದಿಟ್ಟಿದ್ದು, ನಾನು ಕೂಡ ಇದರಲ್ಲಿ ಬರುವಂಥಾ ದಟ್ಟ ದರಿದ್ರ ಹಳ್ಳಿಗಳ ಪೈಕಿ ಒಂದರಲ್ಲಿ ಹುಟ್ಟಿ ಬೆಳೆದೆ ಅನ್ನೋ ಕಾರಣಕ್ಕಾ..? ನನ್ನ ಅಪ್ಪ ಕೂಡ, ಸಾಕಷ್ಟು ಜಮೀನಿದ್ದರೂ, ಅದರಲ್ಲಿ ಹರಿಸಿದ ಬೆವರಿಗೆ ಬೆಲೆ ಸಿಗದೇ ಕಂಗಾಲಾಗಿದ್ದ ಅಂತಾನಾ..? ಮೈತುಂಬ ಸಾಲ ಮಾಡಿಕೊಂಡು, ಬೆಳೆ ಕೈಕೊಟ್ಟು, ಬಂದಷ್ಟು ಬೆಳೆಗೆ ನೆಟ್ಟಗೆ ಬೆಲೆ ಕೂಡ ಸಿಗದೇ ಕಂಗಾಲಾಗಿ ಓಡಾಡ್ತಿದ್ದ ನನ್ನ ಹಳ್ಳಿಯ ರೈತರು, ಇನ್ನೂ ಯಾಕೆ ನೇಣು ಹಾಕಿಕೊಂಡಿಲ್ಲ ಅಂತ ಆಶ್ಚರ್ಯ ಪಡ್ತಿದ್ದೆ ಅನ್ನೋ ಕಾರಣಕ್ಕಾ ಅಥವಾ ಇದರಲ್ಲಿ ಬರುವ ಹಲವು ರೈತರಂತೆ ನನ್ನ ಸ್ವಂತ ದೊಡ್ಡಪ್ಪ ಕೂಡ ವಿಷ ಕುಡಿದು ಸತ್ತು ಹೋಗಿದ್ದ ಮತ್ತು ಆತನ ಚಿತೆಗೆ ನಾನೇ ಬೆಂಕಿ ಇಟ್ಟಿದ್ದೆ ಅನ್ನೋ ಕಾರಣಕ್ಕಾ, ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ರೈತರ ಆತ್ಮಹತ್ಯೆಗಳಿಗೂ ನಮಗೂ ಸಂಬಂಧವೇ ಇಲ್ಲ ಅಂತ ತಮ್ಮಷ್ಟಕ್ಕೆ ತಾವು ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟವೇರ್ ಆಫೀಸುಗಳಲ್ಲಿ ಕುಳಿತು ಅಮೇರಿಕಕ್ಕೆ ಜೀತ ಮಾಡುವವರಿಗೆ, ಸೆನ್ಸೆಕ್ಸು, ಅಂಡರ್ ಪಾಸು, ಫ್ಲೈ ಓವರು, ಮೆಟ್ರೋ ಟ್ರೇನು, ಇಂಟರ್ನ್ಯಾಷನಲ್ ಏರ್ಪೋರ್ಟುಗಳನ್ನೇ ಅಭಿವೃದ್ಧಿ ಅಂದುಕೊಂಡಿರುವವರಿಗೆ, ಗ್ಲೋಬಲ್ ರಿಸೆಷನ್ನಿಗಿಂತ ದೊಡ್ಡ ಸಂಕಟ ಜಗತ್ತಿಗೆ ಬಂದೇ ಇಲ್ಲ ಅಂತ ನಂಬಿಕೊಂಡವರಿಗೆ ಮತ್ತು ಯಾರಿಗೂ ಬೇಡವಾದ ಸುದ್ದಿಯನ್ನ ಮೊದಲ ಬ್ರೇಕ್ ಮಾಡಿ ಖಾಲಿ - ಪೀಲಿ ಸಂಭ್ರಮ ಪಡುವ ನಮಗೆ, ರೈತರ ಆತ್ಮಹತ್ಯೆಗಳು ಅಂದ್ರೆ ಅದ್ಯಾರೋ ಹಳ್ಳೀ ಜನರ ಪರ್ಸನಲ್ ಪ್ರಾಬ್ಲಮ್ ಅಂತ ಅನ್ನಿಸುವುದಿದೆಯಲ್ಲ, ಅದಕ್ಕಿಂತ ದುರಂತ ಇಲ್ಲ. ಆ ದುರಂತವನ್ನೇ ಈ ಡಾಕ್ಯುಮೆಂಟರಿ ಎಳೆಎಳೆಯಾಗಿ ಬಿಡಿಸಿಡ್ತಾ ಹೋಗತ್ತೆ.
                       ಸ್ವಲ್ಪ ದೊಡ್ಡದಿದೆ, ಪುರುಸೊತ್ತಿದ್ರೆ ಮಾತ್ರ ನೋಡಿ. ಇದನ್ನ ನೋಡಿದ ಮೇಲೂ ಯಾವುದಾದರೂ ರೈತ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಅನ್ನೋ ಸುದ್ದಿ ಕೇಳಿದಾಗ ಹೃದಯಕ್ಕೆ ಕೊಕ್ಕೆ ಹಾಕಿ ಎಳೆದ ಅನುಭವ ಆಗದಿದ್ರೆ, ಆತನ ಸಾವಿಗೆ ಎಲ್ಲೋ ಒಂದು ಕಡೆ ನಾವು ಕೂಡ ಪರೋಕ್ಷ ಕಾರಣ ಅಂತ ಅನ್ನಿಸದಿದ್ದರೆ, ಪೂರ್ ಫಾರ್ಮರ್ ಅಂತ ಲೊಚಗುಟ್ಟಿ ಚಾನಲ್ ಚೇಂಜ್ ಮಾಡಿದ್ರೆ, ಪೇಪರ್ ಮಡಚಿಟ್ಟು ಎದ್ದುಬಿಟ್ಟರೆ, I really feel sorry for you...

                                            0-0-0-0-0-0-0-0-0-0-0-0-0-0-0

                       ತುಂಬ ಹಿಂದೆ ರೋಮ್ ಸಾಮ್ರಾಜ್ಯವನ್ನ ನೀರೊ ದೊರೆ ಆಳ್ತಿದ್ದ. ಚಿಂತೆ ಇಲ್ಲದವನಿಗೆ ಸಂತೇಲೂ ನಿದ್ದೆ ಅನ್ನೋ ಅರ್ಥದಲ್ಲಿ, ರೋಮ್ ನಗರ ಹೊತ್ತಿ ಉರೀತಿದ್ದಾಗ ನೀರೊ ದೊರೆ ಪಿಟೀಲು ಬಾರಿಸ್ತಿದ್ನಂತೆ ಅನ್ನೋ ಗಾದೆ ಮಾತಿದೆಯಲ್ಲ..? ಅದರಲ್ಲಿನ ನೀರೊ ಇವನೇ. ಹಾಗೆ ರೋಮ್ ಹೊತ್ತಿ ಉರೀತಿದ್ದಾಗ, ಇವನಿಗೆ ತನ್ನ ಇಮೇಜ್ ಏನಾಗಿಬಿಡತ್ತೋ ಅನ್ನೋ ಚಿಂತೆ ಶುರುವಾಯಿತು. ಆವಾಗ ಆತ, ತನ್ನ ಸಾಮ್ರಾಜ್ಯದ ಪ್ರಭಾವಿಗಳಿಗೆ, ಬುದ್ಧಿವಂತರಿಗೆ, ಗಣ್ಯರಿಗೆ ತನ್ನ ಅರಮನೆಯ ಉದ್ಯಾನದಲ್ಲಿ ಒಂದು ಪಾರ್ಟಿ ಕೊಡ್ತಾನೆ. ರೋಮ್ ಸಾಮ್ರಾಜ್ಯದ ಇತಿಹಾಸದಲ್ಲೇ ಯಾರೂ ಕೊಟ್ಟಿರದಂಥಾ ಪಾರ್ಟಿ ಅದು. ಆ ಪಾರ್ಟಿಗೂ ಭಾರತದ ರೈತರ ಆತ್ಮಹತ್ಯೆಗಳಿಗೂ ಇರುವ ಒಂದು common factorನ ಸಣ್ಣ ಎಳೆ ಇಟ್ಟುಕೊಂಡು ಮಾತು ಶುರುಮಾಡ್ತಾರೆ ಸಾಯಿನಾಥ್. ಆ ಎಳೆ ಅರ್ಥ ಆಗಬೇಕಾದರೆ, ಇದನ್ನ ನೀವು ಪೂರ್ತಿ ನೋಡಬೇಕು. ನನಗೆ, ನೀರೋನ ಬಗ್ಗೆ ಬೇಸರ ಇಲ್ಲ. ಆದರೆ, ಆತ ಕೊಟ್ಟ ಪಾರ್ಟಿಗೆ ಬಂದಿದ್ದ ಗಣ್ಯರು, ಬುದ್ಧಿ ಜೀವಿಗಳು, ಬರಹಗಾರರು ಮತ್ತು ಸೆಲೆಬ್ರಿಟಿಗಳ ಬಗ್ಗೆ ಯೋಚಿಸುತ್ತೇನೆ ಅಂತ ಸಾಯಿನಾಥ್ ಯಾಕೆ ಹೇಳ್ತಾರೆ ಅನ್ನೋದು ಆವಾಗಲೇ ಅರ್ಥ ಆಗೋದು...


                       ಸಾಯಿನಾಥ್, ಸ್ವತಃ ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿದ್ಯಮಾನಗಳ ಸಂಪಾದಕರಾದರೂ, ಒಟ್ಟಾರೆ ಮಾಧ್ಯಮದ ಸೋಗಲಾಡಿತನದ ಬಗ್ಗೆ ಮಾತಾಡೋದಕ್ಕೆ ಹಿಂದೆ - ಮುಂದೆ ನೋಡುವುದಿಲ್ಲ.
                        ಜಗತ್ತಿನಲ್ಲೇ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ನಮ್ಮ ದೇಶದ್ದು. ಇದು ರಾಜಕೀಯದ ಕಪಿಮುಷ್ಠಿಯಲ್ಲಿಲ್ಲ ( ಈ ಮಾತು ಇವತ್ತಿಗೆ ಅದೆಷ್ಟು ಸತ್ಯವೋ..! ) ಆದರೆ, ಲಾಭ ಅನ್ನೋ ಕಬ್ಬಿಣದ ಕೋಳ ಮಾಧ್ಯಮವನ್ನ ಅಲ್ಲಾಡೋದಕ್ಕೂ ಆಗದಂತೆ ಕಟ್ಟಿ ಹಾಕಿದೆ. ನಮ್ಮಲ್ಲಿ ಫ್ಯಾಷನ್ ವರದಿಗಾರರಿದ್ದಾರೆ, ಗ್ಲಾಮರ್, ಸೊಸೈಟಿ, ಪೇಜ್ ಥ್ರೀ, ಎಲ್ಲದಕ್ಕೂ ವಿಶೇಷ ವರದಿಗಾರರಿದ್ದಾರೆ. ಆದರೆ, ಯಾವ ನ್ಯೂಸ್ ಚಾನೆಲ್ - ಯಾವ ಪತ್ರಿಕೆ ಬಡತನದ ವರದಿ ಮಾಡೋದಕ್ಕೆ ರಿಪೋರ್ಟರನ್ನ ಇಟ್ಟುಕೊಂಡಿದೆ..?
                       ಈ ಸಲದ ಲ್ಯಾಕ್ಮೆ ಫ್ಯಾಷನ್ ವೀಕ್ ಮುಂಬೈಯಲ್ಲಿ ನಡೀತು. ಬೇರೆ ಬೇರೆ ಟಿ.ವಿ ಚಾನೆಲ್, ಪತ್ರಿಕೆಗಳಿಂದ ಐನೂರ ಹನ್ನೆರಡು ಜನ ಪತ್ರಕರ್ತರು ಅದನ್ನ ವರದಿ ಮಾಡೋದಕ್ಕೆ ಬಂದಿದ್ರು. ಅದರಲ್ಲಿ ಮಾಡೆಲ್ಗಳು ಹತ್ತಿ ಬಟ್ಟೆ ಹಾಕಿಕೊಂಡು ರಾಂಪ್ ಮೇಲೆ ನಡೆದರು. ಆದರೆ, ದುರಂತ ನೋಡಿ. ಅವರು ಹಾಕಿಕೊಂಡ ಡಿಸೈನರ್ ಬಟ್ಟೆಗಳಿಗೆ ಹತ್ತಿ ಬೆಳೆದು ಕೊಟ್ಟ ರೈತರು ಅದೇ ಮಹಾರಾಷ್ಟ್ರದ ವಿದರ್ಭದಲ್ಲಿದ್ದರು. ಅವರು ಸಾಲದ ಹೊಡೆತ ತಾಳಲಾರದೇ ದಿನಕ್ಕೆ ಆರರಿಂದ ಎಂಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅದನ್ನ ವರದಿ ಮಾಡೋದಕ್ಕೆ ಒಬ್ಬೇ ಒಬ್ಬ ಪತ್ರಕರ್ತ ಹಳ್ಳಿಗೆ ಹೋಗಲಿಲ್ಲ.ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಮನೆ. ಅಂಗಳದಲ್ಲಿ ಹೆಂಡತಿ ಬದುಕಿನ ಅಷ್ಟೂ ಭರವಸೆಗಳು ಮುಗಿದುಹೋದವಳಂತೆ ಕುಳಿತಿದ್ದಾಳೆ. ಪಕ್ಕದಲ್ಲಿ ಮಗ. ತಂದೆಯ ಅಂಗಿ ಹಾಕಿಕೊಂಡು ಕುಳಿತಿದ್ದಾನೆ. ಅವನಿಗೆ ತನ್ನ ಅಪ್ಪನ ಆತ್ಮಹತ್ಯೆಯ ಕಾರಣಗಳನ್ನ ಹೇಳಿ ಹೇಳಿ ಸಾಕಾಗಿಹೋಗಿದೆ. ಅವನ ಹೆಗಲ ಮೇಲೆ ಮನೆಯ ಜವಾಬ್ದಾರಿ ಬಿದ್ದಿದೆ. ಅದನ್ನ ಹೊರಲಾರದಷ್ಟು ಎಳಸು ಆತ. ಅಪ್ಪ ವಿಷ ಕುಡಿದು ಸತ್ತು ಹೋದ ಮೇಲೆ ಆ ಹುಡುಗ ಜವಾಬ್ದಾರಿಯುತ ಗಂಡಸಾಗಬೇಕು. ಆತನ ಕಣ್ಣುಗಳಲ್ಲಿ ಆ ಭಯ.
                          ಐದೂವರೆ ವರ್ಷಗಳ ಕಾಲ ನಿರಂತರವಾಗಿ ರೈತರ ಆತ್ಮಹತ್ಯೆಗಳ ವರದಿ ಮಾಡಿದ ಸಾಯಿನಾಥ್ ಇಂಥ ಅವೆಷ್ಟು ಹುಡುಗರ ಕಣ್ಣುಗಳಲ್ಲಿನ ಬೇಗುದಿ ನೋಡಿದರೋ.ಟೈಮ್ಸಾಫ್ ಇಂಡಿಯಾದ ಸಂಪಾದಕೀಯ ಪುಟದಲ್ಲಿ ರಾಹುಲ್ ಬಜಾಜ್ ಒಂದು ಲೇಖನ ಬರೆದಿದ್ರು. "ಸರಕಾರಕ್ಕೆ ನಿಜವಾಗಿಯೂ ಬಡವರನ್ನ ಉದ್ಧಾರ ಮಾಡುವ ಮನಸಿದ್ರೆ, ಮೊದಲು ಶ್ರೀಮಂತರಿಗೆ ಸಹಾಯ ಮಾಡಬೇಕು" ಅನ್ನೋದು ಅದರ ಸಾರಾಂಶ. ಬಡತನ ನಿವಾರಣೆಗೆ ತೆಗೆದುಕೊಳ್ಳಲಾಗ್ತಿರುವ ಕ್ರಮಗಳೆಲ್ಲ ಬೊಗಳೆ, ಬಡವರಿಗೆ ಸಹಾಯ ಮಾಡುವ ಹಳೇ ಯೋಜನೆಗಳೆಲ್ಲ ಅವಿವೇಕಿತನಗಳು. ಅವೆಲ್ಲ ವಿಫಲವಾಗಿವೆ. ಅದಕ್ಕೆ, ನಮ್ಮ ಸಮಾಜದಲ್ಲಿರುವ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿ. ಟೇಬಲ್ ತನ್ನ ಶಕ್ತಿ ಮೀರಿ ತುಂಬಿ ಹೋದಾಗ ಅದರಿಂದ ಏನಾದರೂ ಕೆಳಗೆ ಬೀಳಲೇ ಬೇಕಲ್ಲ. ಅದು ಬಡವರಗೆ ಸಿಗುತ್ತದೆ ಅಂತಾರೆ ರಾಹುಲ್ ಬಜಾಜ್. ಇಂಥವರಿಂದ ರೈತರ ಆತ್ಮಹತ್ಯೆ ಬಗ್ಗೆ ವರದಿ ನಿರೀಕ್ಷೆ ಮಾಡೋದಕ್ಕಿಂತ ದೊಡ್ಡ ದಡ್ಡತನ ಇದೆಯಾ..?ಮುಂಬೈನಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಅಲ್ಲಿ ಇಪ್ಪತ್ತನಾಲ್ಕು ಗಂಟೆಯೂ ವಿದ್ಯುತ್ ಸರಬರಾಜು. ಅದನ್ನ ಹೊರತು ಪಡಿಸಿ ಮಹಾರಾಷ್ಟ್ರದ ಉಳಿದ ಕೆಲವು ದೊಡ್ಡ ಊರುಗಳಲ್ಲಿ ಎರಡು ತಾಸು ಲೋಡ್ ಶೆಡ್ಡಿಂಗ್ ಇದೆ. ಇನ್ನು ಹಳ್ಳಿಗಳಲ್ಲಿ ಎಂಟು ತಾಸು ಲೋಡ್ ಶೆಡ್ಡಿಂಗ್. ಆದರೆ, ಭಾರತದಲ್ಲೇ ಮೊಟ್ಟಮೊದಲ ಸಲ ವಿದರ್ಭದ ನಾಲ್ಕು ಜಿಲ್ಲೆಗಳಲ್ಲಿ ಶವಾಗಾರ ಮತ್ತು ಪೋಸ್ಟ್ ಮಾರ್ಟಂ ಸೆಂಟರ್ ಗಳಿಗೆ ದಿನದ ಇಪ್ಪತ್ತನಾಲ್ಕೂ ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿದೆ ಸರಕಾರ. ಅಲ್ಲಿ ಹಗಲೂ ರಾತ್ರಿ ಕೆಲಸ ನಡೆಯುತ್ತಿದೆ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಶವಗಳ ಪೋಸ್ಟ್ ಮಾರ್ಟಂ ಮಾಡುವುದು ಕಷ್ಟವಾಗಿಬಿಡುತ್ತದೆ.ಹದಿನೈದು ವರ್ಷಗಳಿಂದ ಭಾರತದಲ್ಲಿ ತೀವ್ರವಾಗಿ ಬೆಳೆಯುತ್ತಿರುವುದು ಏನು..? ಐ.ಟಿ..? ಊಹ್ಞೂಂ. ಸಾಫ್ಟ್ ವೇರ್..? ಅಲ್ಲ. ಅಸಮಾನತೆ. ಬ್ರಿಟಿಷ್ ವಸಾಹತುಷಾಹಿ ಆಡಳಿತದ ನಂತರ ಮೊಟ್ಟಮೊದಲ ಸಲ ಈ ಸ್ಥಿತಿ ಬಂದಿರೋದು. ಹಸಿವಿನಿಂದ ಜನ ಸಾಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆರು ರಾಜ್ಯ ಸರಕಾರಗಳನ್ನ ತರಾಟೆಗೆ ತೆಗೆದುಕೊಂಡಿದೆ. 1943ರ ಬಂಗಾಲ ಬರಗಾಲದ ನಂತರ ಇಂಥ ಸ್ಥಿತಿ ಬಂದಿರುವುದು ಇದೇ ಮೊದಲು. ಇಲ್ಲಿ ಜನ ಹಸಿವಿನಿಂದ ಸಾಯ್ತಿದ್ರೆ, ನಮ್ಮ ಸರಕಾರ ಐದು ರುಪಾಯಿ ನಲವತ್ತೈದು ಪೈಸೆ ಪ್ರತಿ ಕೆ.ಜಿ ಬೆಲೆಗೆ ಎರಡು ಕೋಟಿ ಟನ್ ಆಹಾರ ಧಾನ್ಯ ರಫ್ತು ಮಾಡಿದೆ. ಭಾರತದ ಬಡವರಿಗಾದರೆ ಅದನ್ನೇ ಆರು ರುಪಾಯಿ ನಲವತ್ತು ಪೈಸೆಗೆ ಕೆ.ಜಿಯಂತೆ ಮಾರಲಾಗುತ್ತಿತ್ತು. ಹೋಗಲಿ, ಆಹಾರ ಧಾನ್ಯ ರಫ್ತು ಮಾಡಿರುವುದಾದರೂ ಯಾರಿಗೆ..? ಯುರೋಪಿನ ಹಸುಗಳಿಗೆ. ಯುರೋಪಿನ ಹಸುಗಳು ಜಗತ್ತಿನಲ್ಲೇ ಅತಿ ಹೆಚ್ಚು ಆಹಾರ ಭದ್ರತೆಹೊಂದಿರುವ ಜೀವಿಗಳು. ಅವುಗಳ ಆಹಾರಕ್ಕಾಗಿ ಪ್ರತಿದಿನ 2.7 ಡಾಲರ್ ಖರ್ಚು ಮಾಡಲಾಗತ್ತೆ.
                       ವಿದರ್ಭದ ರೈತ ಪರ ಹೋರಾಟಗಾರ ವಿಜಯ್ ಝಾವಂಡಿಯಾರನ್ನ ಅದ್ಯಾರೋ ಪತ್ರಕರ್ತ ಕೇಳಿದನಂತೆ, ಭಾರತದ ರೈತರ ಅತಿ ದೊಡ್ಡ ಕನಸು ಯಾವುದು ಅಂತ. ಅದಕ್ಕೆ ಝಾವಂಡಿಯಾ ಕೊಟ್ಟ ಮಾರ್ಮಿಕ ಉತ್ತರ, "ಮುಂದಿನ ಜನ್ಮ ಅಂತಿದ್ದರೆ, ಯುರೋಪಿನಲ್ಲಿ ಹಸುವಾಗಿ ಹುಟ್ಟುವುದು."
                                         ನಿದ್ದೆಯಿಂದೆದ್ದ ಮಗು ಅಮ್ಮನನ್ನ ಕೇಳಿತು,
                                         ಅಮ್ಮಾ ಹಸಿವು, ರೊಟ್ಟಿ ಕೊಡು.

                                         ಕಣ್ತುಂಬ ನೀರು ತುಂಬಿಕೊಂಡ ಅಮ್ಮ,
                                         ಮುಳುಗುತ್ತಿದ್ದ ಸೂರ್ಯನನ್ನ ತೋರಿಸದಳು.

                                         ಹಾಗಾದರೆ, ಆ ರೊಟ್ಟಿ ತಾ.
                                         ನಾನು ನಿನ್ನೆ ರಾತ್ರಿಯಿಂದ ಏನೂ ತಿಂದಿಲ್ಲ, ಮಗುವಿನ ಹಟ.
      
                                         ಸುಡುತ್ತಿರುವ ರೊಟ್ಟಿ ತಣ್ಣಗಾಗಲಿ ಇರು ಮಗು, ಅದು ಬಿಸಿ ಇದೆ.
                                         ಈಗಲೇ ತಿಂದರೆ ಬಾಯಿ ಸುಟ್ಟೀತು, ಅಮ್ಮನ ಸಮಾಧಾನ.

                                         ದಿನದ ವ್ಯವಹಾರ ಮುಗಿಸಿದ ಸೂರ್ಯ
                                         ಬೆಟ್ಟಗಳಾಚೆ ಮುಳುಗಿ ಮರೆಯಾದ.
  
                                         ರೊಟ್ಟಿಯ ನಿರೀಕ್ಷೆಯಲ್ಲಿದ್ದ ಮಗು,
                                         ಹಸಿದ ಹೊಟ್ಟೆಯಲ್ಲೇ ಮತ್ತೆ ನಿದ್ದೆಗೆ ಜಾರಿತು.

                                                                    ಕವಿ - ದಿ. ಕೃಷ್ಣ ಕಲಂಬ್
                                                                           (ಆತ್ಮಹತ್ಯೆಗೆ ಶರಣಾದ ವಿದರ್ಭದ ರೈತ)
ಸಾಯಿನಾಥ್ ಮನೆಗೆ ಫಿನ್ಲೆಂಡಿನಿಂದ ಒಬ್ಬ ಬಂದಿರ್ತಾನೆ. ಅವನಿಗಿವರು ಕಾಫಿ ಮಾಡಿ ಕೊಡ್ತಿದಾರೆ. ಅವನು ತೆಪ್ಪಗೆ ಕಾಫಿ ಕುಡಕೊಂಡು ವಾಪಸ್ ಹೋಗೋದ್ ಬಿಟ್ಟು, ಕ್ಯಾಲಿಫೋರ್ನಿಯಾದಲ್ಲಿ ಸಿಗುವಷ್ಟು ಒಳ್ಳೇ ಕಾಫಿ ನಿಮ್ಮಲ್ಲೂ ಸಿಗತ್ತಾ ಅಂತ ಕೇಳಿಬಿಟ್ಟ.  ಎಲ್ಲಿತ್ತೋ ಇವರಿಗೆ ಸಿಟ್ಟು...ಒಂದು ಸಲ ಮುಂಬೈ ಷೇರ್ ಮಾರ್ಕೆಟ್ ಏಕಾಏಕಿ ಕುಸಿದು ಹೋಯಿತು. ತಕ್ಷಣ ಸ್ವತಃ ಹಣಕಾಸು ಮಂತ್ರಿಯೇ ದೆಹಲಿಯಿಂದ ಎರಡೇ ತಾಸುಗಳಲ್ಲಿ ವಿಶೇಷ ವಿಮಾನದಲ್ಲಿ ಹೊರಟು ಬಂದರು. ಕಂಗಾಲಾಗಿದ್ದ ಕೋಟ್ಯಾಧೀಶರಿಗೆ ಸಮಾಧಾನ ಹೇಳಿ, ಷೇರು ಮಾರುಕಟ್ಟೆ ಚೇತರಿಸೋದಕ್ಕೆ ಬೇಕಾದ ಕ್ರಮ ಕೈಗೊಂಡರು. ಆದರೆ, ವಿದರ್ಭಕ್ಕೆ.? ಸರಕಾರಿ ಅಂಕಿ ಅಂಶಗಳ ಪ್ರಕಾರ ನಲವತ್ತು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿದರ್ಭಕ್ಕೆ ಸಂಬಂಧಪಟ್ಟವರು ಭೇಟಿ ಕೊಟ್ಟು ರೈತರ ಆತ್ಮಹತ್ಯೆ ತಡೆಗಟ್ಟುವ ಯೋಜನೆ ಜಾರಿ ಮಾಡುವುದಕ್ಕೆ ತೆಗೆದುಕೊಂಡಿದ್ದು..?  ಹತ್ತು ವರ್ಷ..! ಅದೇ ಮಹಾರಾಷ್ಟ್ರದ ರಾಜಧಾನಿ ಮುಂಬೈನ ದಲಾಲ್ ಸ್ಟ್ರೀಟ್ನಲ್ಲಿರುವ ಷೇರ್ ಮಾರ್ಕೆಟ್ - ಅದೇ ಮಹಾರಾಷ್ಟ್ರದ ವಿದರ್ಭ. ಈ ಸರಕಾರ ಯಾರ ಪರವಾಗಿದೆ ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ..?
                      ಕಡಿಮೆ ಬಡ್ಡಿಗೆ ಎಂಟು ಸಾವಿರ ಸಾಲ ಸಿಗಲಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ವರದಿ ಬರೆದು ಮನೆಗೆ ಬಂದರೆ, ಅಲ್ಲೊಂದು ಪತ್ರ ಇತ್ತು. ನನ್ನ ಬ್ಯಾಂಕಿನ ಪತ್ರ. ನಿಮಗೆ, ಆರು ಪರ್ಸೆಂಟ್ ಬಡ್ಡಿಗೆ ಮರ್ಸಿಡೀಸ್ ಬೆಂಝ್ ಕಾರು ಕೊಳ್ಳೋದಕ್ಕೆ ಸಾಲ ಕೊಡ್ತೀವಿ, ಜಾಮೀನುದಾರರ ಅವಶ್ಯಕತೆ ಇಲ್ಲ ಅಂತಿತ್ತು ಅದರಲ್ಲಿ. ಇದು ಯಾವ ಸೀಮೆ ನ್ಯಾಯ..?
                                                                                       ಪಿ ಸಾಯಿನಾಥ್ನೀರೋ ಕೊಟ್ಟ ಪಾರ್ಟಿ ಅದ್ಭುತವಾಗಿತ್ತು. ಆದರೆ ಒಂದೇ ಸಮಸ್ಯೆ. ಅಷ್ಟು ದೊಡ್ಡ ಗಾರ್ಡನ್ನಿಗೆ ಬೆಳಕು ಎಲ್ಲಿಂದ ತರೋದು ಅಂತ. ಆಗ ಆ ಮಹಾರಾಜ ಒಂದು ಐಡಿಯಾ ಮಾಡಿದ. ಜೈಲಿನಲ್ಲಿ ಖೈದಿಗಳನ್ನ ಒಬ್ಬೊಬ್ಬರನ್ನಾಗಿ ಕರೆಸಿ ಬೆಂಕಿ ಹಚ್ಚಿಸಿದ. ಅವರು ಧಗಧಗನೇ ಹೊತ್ತಿ ಉರೀತಿದ್ರೆ ಗಾರ್ಡನ್ ತುಂಬ ಬೆಳಕು.
                     ನನಗೆ ನೀರೋ ಮಹಾರಾಜನ ಬಗ್ಗೆ ಬೇಜಾರಿಲ್ಲ. ಬೇಜಾರಿರೋದು ಆ ಪಾರ್ಟಿಗೆ ಬಂದಿದ್ದ ಗಣ್ಯರ ಬಗ್ಗೆ. ಅವರು ಸಮಾಜದಲ್ಲಿ ಪ್ರತಿಷ್ಠಿತರೆನ್ನಿಸಿಕೊಂಡಿದ್ದವರು. ಶ್ರೀಮಂತರು, ಬರಹಗಾರರು, ಬುದ್ಧಿ ಜೀವಿಗಳು, ಸೆಲೆಬ್ರಿಟಿಗಳು. ಅಲ್ಲಿ, ತಮ್ಮಂತಹ ಮನುಷ್ಯನೊಬ್ಬ ಬೆಂಕಿಯ ಧಗೆಯಲ್ಲಿ ಬೆಂದು ಹೋಗ್ತಿದ್ರೆ, ಇವರು ಆ ಬೆಳಕಿನಲ್ಲಿ ಒಂದೊಂದೇ ಗುಟುಕು ವೈನ್ ಕುಡಿದರಲ್ಲ, ಒಂದೊಂದೇ ತುತ್ತು ಊಟ ಮಾಡಿದರಲ್ಲ, ದ್ರಾಕ್ಷಿ ಹಣ್ಣನ್ನ ಒಂದೊಂದಾಗಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿಕೊಂಡು ತಿಂದರಲ್ಲ. ಅವರು ಅದಿನ್ನೆಂಥವರಿರಬೇಕು.
                     ಐದೂವರೆ ವರ್ಷಗಳ ಕಾಲ ರೈತರ ಆತ್ಮಹತ್ಯೆಗಳ ಬಗ್ಗೆ ವರದಿ ಮಾಡಿ - ಮಾಡಿ, ನನಗೆ ನೀರೋನ ಅತಿಥಿಗಳ್ಯಾರು ಅನ್ನೋದು ಅರ್ಥ ಆಗಿದೆ. ಈಗ ಅದು ನಿಮಗೆ ಕೂಡ ಅರ್ಥ ಆಗಿರಬಹುದು.Mahatma Gandhi who was the most prolific journalists India has ever produced, said, "recall the face of the weakest and the poorest  person you have met and ask yourself, how the action you contemplate will place him in a greater control of his life." I will give the same principle to journalism.

                                                                                                * P SainathFriday, March 11, 2011

ಯಾವನು ಅದೇನ್ ಕಿತ್ಕೊತಾನೆ ಅನ್ನೋ ಗಾಂಚಾಲಿ...


                                          ಸುಮ್ಮನೆ ಕಲ್ಪಿಸಿಕೊಳ್ಳಿ. ಒಬ್ಬ ವ್ಯಕ್ತಿಯನ್ನ ಆತ ಕಳ್ಳ ಅನ್ನೋ ಸಂಶಯದ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡು ಸ್ಟೇಷನಗೆ  ಕರೆತಂದಿದ್ದಾರೆ. ಆತನನ್ನ ಎದುರಿಗೆ ಕೂಡಿಸಿಕೊಂಡು, "ನೀನು ಕಳ್ಳತನ ಮಾಡಿದ್ದು ನಿಜವಾ" ಅಂತ ಪೇದೆ ಕೇಳ್ತಾನೆ. ಅದಕ್ಕವನು, "ಆ ಆರೋಪದ ಬಗ್ಗೆ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ" ಅಂದರೆ, ಬೆನ್ನಕೆಳಗೆರಡು ಲಾಠಿ ಏಟು ಬೀಳಬೇಕು ತಾನೆ..? ಬಿದ್ದೇ ಬೀಳತ್ವೆ. ಯಾಕಂದ್ರೆ ಆತನ ಮೇಲಿರುವುದು ಆಫ್ಟರಾಲ್, ಒಂದಷ್ಟು ಲಕ್ಷ ಕಳ್ಳತನದ ಆರೋಪ. ಆದರೆ, ಒಬ್ಬ ದೊಡ್ಡ ಮನುಷ್ಯನ ಮೇಲೆ ಇಪ್ಪತ್ತೈದು ಮೂವತ್ತು ಕೋಟಿಯ ಅಪರಾತಪರಾ ಆರೋಪ ಬಂದಾಗ, ಆತ ಹೀಗೆ ಹೇಳಿದರೆ..? ಇಲ್ಲಿ ಆಗಿರುವುದೂ ಅದೇ.                                        
                                         "ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ." ಇದು ಸಿ.ಎಂ ಯಡಿಯೂರಪ್ಪನವರ ಒಂದು ಸಾಲಿನ ಪ್ರತಿಕ್ರಿಯೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಥಾನುಗಟ್ಟಲೆ ದಾಖಲೆಗಳನ್ನ ಹಿಡಕೊಂಡು ಕುಳಿತು, ಮುಖ್ಯಮಂತ್ರಿಗಳು ಕಂಡ ಕಂಡವರಿಗೆ ಅಕ್ರಮವಾಗಿ ಉಪಕಾರ ಮಾಡಿಕೊಟ್ಟು ಅದಕ್ಕೆ ಪ್ರತಿಯಾಗಿ ತಮ್ಮ ಮಕ್ಕಳ ಶಿಕ್ಷಣ ಸಂಸ್ಥೆಗೆ ಕೋಟಿಗಟ್ಟಲೆ ದೇಣಿಗೆ ಪಡೆದಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ರು. ಅದಕ್ಕೇನ್ ಹೇಳ್ತೀರಿ ಅಂತ ಪತ್ರಕರ್ತರು ಹೋಗಿ ಕೇಳಿದರೆ, ಹತ್ತಾರು ಕ್ಯಾಮೆರಾಗಳೆದುರಿಗೇ  ಯಡಿಯೂರಪ್ಪನವರು, "ಅದಕ್ಕೆಲ್ಲ ಈಗ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ" ಅಂದು ಸರಸರನೇ ನಡೆದುಹೋಗಿಬಿಟ್ಟರು. ಅರೆ ಇಸ್ಕಿ, ಈಗ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ ಅಂದರೆ ಏನರ್ಥ..? ಈಗ ನನಗೆ ಮೂಡಿಲ್ಲ, ಮೂಡು ಬಂದಾಗ ಮಾತಾಡ್ತೀನಿ, ಅಲ್ಲೀ ತನಕ ಅದುಮಿಕೊಂಡಿರಿ ಅಂತಾನಾ..? ನಾನು ಮುಖ್ಯಮಂತ್ರಿ ಕಣ್ರೀ, ಏನಾದ್ರೂ ಮಾಡ್ಕೋತೀನಿ, ಅದನ್ನೆಲ್ಲ ಕೇಳೋಕ್ ನೀವ್ಯಾರು ಅಂತಾನಾ..? ಗಾಂಚಾಲಿ ಅಂದ್ರೆ ಇದೇ ಅಲ್ಲವಾ..?


                                          ನಿಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಏನ್ ಹೇಳ್ತೀರಿ ಅಂತ ಕೇಳೋದಕ್ಕೆ ಹೋದ ಯಾವ ಪತ್ರಕರ್ತರಿಗೂ, ಹಲಾಲುಕೋರ ಕೆಲಸ ಮುಚ್ಚಿಕೊಳ್ಳುವುದಕ್ಕೆ ಮುಖ್ಯಮಂತ್ರಿಯ ಮಕ್ಕಳ ಟ್ರಸ್ಟ್ ಗೆ  ದೇಣಿಗೆ ಕೊಟ್ಟ ಕಂಪನಿ ಜೊತೆಗಾಗಲಿ, ಟ್ರಸ್ಟ್ ಜೊತೆಗಾಗಲಿ, ಕುಮಾರಸ್ವಾಮಿ ಜೊತೆಗಾಗಲಿ, ಸ್ವತಃ ಮುಖ್ಯಮಂತ್ರಿ ಜೊತೆಗಾಗಲಿ, ಸ್ನೇಹ ಸಂಬಂಧವೂ ಇಲ್ಲ - ರಾಗ ದ್ವೇಷಗಳೂ ಇಲ್ಲ. ತಮ್ಮ ಓಟು ಪಡೆದು ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಿಂಹಾಸನ ಏರಿರುವ ಮನುಷ್ಯ ಅಲ್ಲಿ ಕುಳಿತು ಅದೇನ್ ಕಡಿದು ಕಟ್ಟೆ ಹಾಕ್ತಿದಾನೆ ಅಂತ ತಿಳಿದುಕೊಳ್ಳೋ ಅಧಿಕಾರ ರಾಜ್ಯದ ಪ್ರತಿಯೊಬ್ಬರಿಗೂ ಇದೆ. ಆ ವಿಷಯವನ್ನ ಅವರಿಗೆ ತಿಳಿಸುವ ಮೀಡಿಯೇಟರ್ ಆಗಿ ಕೆಲಸ ಮಾಡೋರು ಪತ್ರಕರ್ತರು. ಅವರೆದುರಿಗೆ ಎಡಸೊಕ್ಕಿನ ಮಾತಾಡಿ ಹೊರಟುಹೋದವರು ಯಡಿಯೂರಪ್ಪ.
                                         ಈ ಎಡಸೊಕ್ಕು ಅವರೊಬ್ಬರದು ಮಾತ್ರ ಅಲ್ಲ. ಇತ್ತೀಚೆಗೆ ಅವರ ರಾಜಕೀಯ ಕಾರ್ಯದರ್ಶಿ  ಬಿ.ಜೆ ಪುಟ್ಟಸ್ವಾಮಿಯವರೊಂದು ಪ್ರೆಸ್ ಮೀಟ್ ಮಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅತ್ತೆ ಮತ್ತು ಇನ್ನೊಬ್ಬ ಸಂಬಂಧಿಗೆ ಅಕ್ರಮವಾಗಿ ಬಿ.ಡಿ.ಎ ಸೈಟ್ ಕೊಟ್ಟಿದ್ದಾರೆ ಅಂತ ಆರೋಪ ಮಾಡಿ ದಾಖಲೆ ಕೊಟ್ಟರು. ಇದರ ಬಗ್ಗೆ ಏನ್ ಹೇಳ್ತೀರಿ ಅಂತ ಕುಮಾರಸ್ವಾಮಿಯವರ ಹತ್ರ ಹೋದ್ರೆ, "ಅವನ್ಯಾರೋ ಪುಟ್ಟಸ್ವಾಮಿ ಹೇಳಿದ್ದಕ್ಕೆಲ್ಲ ರಿಯಾಕ್ಟ್ ಮಾಡಕಾಗತ್ತಾ ಬ್ರದರ್, ಬಿಟ್ಟಾಕಿ ಅದನ್ನ, ಮತ್ತೇನ್ ಸಮಾಚಾರ..?" ಅಂತ, ಅದು ಮಾತಾಡಬೇಕಾದ ವಿಷಯವೇ ಅಲ್ಲ ಅನ್ನೋಹಾಗೆ ಮಾತು ಬದಲಿಸಿಬಿಟ್ಟರು. ಇಲ್ಲಿ ಅವನ್ಯಾರೋ ಪುಟ್ಟಸ್ವಾಮಿ ಮುಖ್ಯ ಅಲ್ಲ. ಇನ್ಯಾರೋ ವೆಂಕ, ಸೀನ, ನಾಣಿ ಆರೋಪ ಮಾಡಿದ್ರೂ ಅದಕ್ಕೆ ಉತ್ತರ ಕೊಡಬೇಕಾದದ್ದು ಕುಮಾರಸ್ವಾಮಿಯವರ ಜವಾಬ್ದಾರಿ ಅಲ್ಲವಾ..? ಪಾತಿವೃತ್ಯದ ಬಗ್ಗೆ ಪ್ರವಚನ ಕೇಳೋದಕ್ಕೆ ಬಂದ ಜನ, ಪ್ರವಚನ ಮಾಡುತ್ತಿರುವವಳು ಎಷ್ಟರ ಮಟ್ಟಿಗೆ ಶೀಲವಂತೆ ಅಂತ ತಿಳಿದುಕೊಳ್ಳಬಾರದಾ..? ಒಂದು ಆರೋಪ ಅಂತ ಬಂದಾಗ, ಅದಕ್ಕಿರುವ ದಾಖಲೆಗಳಿಗೆ, ವ್ಯಾಪಕತೆಗೆ ಬೆಲೆ ಬರಬೇಕೇ ಹೊರತು, ಆರೋಪ ಮಾಡಿದವರಾರು ಅನ್ನೋದಕ್ಕಲ್ಲ.

 
                                        ಇದಕ್ಕೆಲ್ಲ ಕಾರಣ, ನಾವು ಮತದಾರರಿಗೆ ಆನ್ಸರೇಬಲ್ ಅಲ್ಲ ಅನ್ನೋ ರಾಜಕಾರಣಿಗಳ ಉದ್ಧಟತನ. ಕುಮಾರಸ್ವಾಮಿಯವರ ಮೇಲೆ ಬಂದಿರುವ ಆರೋಪಗಳ ಬಗ್ಗೆ ಅಬ್ಬಬ್ಬಾ ಅಂದರೆ, ದೇವೇಗೌಡರು ಕೇಳಬಹುದು. ಅದು, ಅವರ ಫ್ಯಾಮಿಲಿ ಮ್ಯಾಟರ್ ಆಗಿಬಿಡತ್ತೆ. ಯಡಿಯೂರಪ್ಪನವರು ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸ್ಪಷ್ಟೀಕರಣ ಕೊಡ್ತಾರೆ. ಬಿ.ಜೆ.ಪಿ ಹೈಕಮಾಂಡಿಗೆ  ಯಾವಾಗಲೂ ಕ್ಲೀನ್ ಚಿಟ್ ಕೊಡೋ ಅವಸರ. ಅವರ ನಡುವೆ ಅದೇನು ವ್ಯವಹಾರವೋ ಯಾರಿಗೆ ಗೊತ್ತು..? ಒಟ್ಟಿನಲ್ಲಿ, ಓಟ್ ಹಾಕಿದವರು ಲೆಕ್ಕಕ್ಕೇ ಬರಲ್ಲ. ಅವರು after all ಮತದಾರರು. ಹಂಗಾದಾಗಲೇ, "ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ" ಅನ್ನೋ ಹೇಳಿಕೆಗಳು ಬರೋದು. ಆ ಹೇಳಿಕೆಯ ನಂತರ " ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ನಿರಾಕರಣೆ " ಅನ್ನೋ ಬ್ರೇಕಿಂಗ್ ನ್ಯೂಸ್ ಬೇರೆ. ಸಣ್ಣಪುಟ್ಟ ಕಳ್ಳರಾದರೆ, ಲಾಠಿ ಏಟು ಬೀಳತ್ವೆ. ಈ ಹಗಲುದರೋಡೆಕೋರರಿಗೆ ಜೈಕಾರ, ಭೋಪರಾಕುಗಳು. ಇದಕ್ಕಿಂತ ದುರಂತ ಇದೆಯಾ..?

Wednesday, March 9, 2011

ಬೈಕ್ ಹತ್ತಿಕೊಂಡು ದೇಶ ಸುತ್ತೋ ಸುಖ...Four wheels move the body,
Two wheels move the soul..!

we four in chitradurga...

                    ನಾಲ್ಕು ಗಾಲಿಗಳು ದೇಹವನ್ನ ಮುನ್ನಡೆಸಿದರೆ, ಎರಡು ಗಾಲಿಗಳು ಆತ್ಮವನ್ನ ಮುನ್ನಡೆಸುತ್ತವೆ. ಹುಚ್ಚಿಗೆ ಬಿದ್ದು ಬೈಕ್ ಓಡಿಸೋರ ಪಾಲಿಗೆ ಘೋಷ ವಾಕ್ಯದಂತಿರುವ ಸಾಲುಗಳಿವು. ನಮ್ಮದೂ ಅಂಥವರದ್ದೇ ಒಂದು ಗುಂಪು. ಎಲ್ಲ ಸೇರಿದರೆ ಸುಮಾರು ಇನ್ನೂರ ಹತ್ತು ಜನ ಇದ್ದೇವೆ. Royal Indians Enfield Owners Club ಅಂತ ಹೆಸರು. ಎಲ್ಲರೂ, ಬುಲೆಟ್ ಅಂತಲೇ ಗುರುತಿಸಿಕೊಳ್ಳುವ ರಾಯಲ್ ಎನ್ಫೀಲ್ಡ್ ಕಂಪನಿಯ ಬೈಕ್ ಗಳ  ಹೆಮ್ಮೆಯ ಮಾಲೀಕರು. ಬುಲೆಟ್ ಬೆನ್ನ ಮೇಲೆ ಕುಳಿತು ದೇಶ ಸುತ್ತೋದರಲ್ಲೇ ಸುಖ, ಸಂತೋಷ ಮತ್ತು ಥ್ರಿಲ್ಲು ಕಂಡುಕೊಂಡವರು. ಕಾರಿನಲ್ಲಿ ಪ್ರವಾಸಕ್ಕೆ ಹೊರಡೋರನ್ನ, ತಿಂಗಳುಗಳ ಮೊದಲೇ ಟ್ರೇನ್ ಟಿಕೆಟ್ ಬುಕ್ ಮಾಡಿಸೋರನ್ನ, ವಿಮಾನದ ಬ್ಯುಸಿನೆಸ್ ಕ್ಲಾಸ್ ಸೀಟಿನಲ್ಲಿ ಬೆಚ್ಚಗೆ ಮಲಗಿಕೊಂಡು ಪ್ರಯಾಣ ಮಾಡೋರನ್ನ ಆಡಿಕೊಂಡು ನಗೋರು. ವೀಕೆಂಡು ಬಂದರೆ ಸಾಕು, ಬೈಕ್ ಹತ್ತಿಕೊಂಡು ಊರು ಬಿಡೋರು. ಯಾರ್ಯರ್ದು  ಯಾವ್ಯಾವ ಊರೊ, ಯಾವ ಜಾತಿಯೋ, ಏನು ಕೆಲಸವೋ... ಬೈಕಿಂಗ್ ಅನ್ನೋ ಹುಚ್ಚನ್ನು ಹೋಲ್ ಸೇಲಾಗಿ  ಅಂಟಿಸಿಕೊಂಡವರು. www.royalindians.com ಎಂಬ ವೆಬ್ಸೈಟ್  ನಮ್ಮ ಕ್ಲಬ್ಬಿನ ಪಾಲಿಗೆ ಚರಾಸ್ತಿ ಮತ್ತು ಸ್ಥಿರಾಸ್ಥಿ. ಉಳಿದಂತೆ, ಕ್ಲಬ್ಬಿನ ಪ್ರತಿ ಸದಸ್ಯನನ್ನ ಮಾತಾಡಿಸಿ ನೋಡಿದರೂ, ಲಾಂಗ್ ರೈಡಿಂಗ್ನ ಥ್ರಿಲ್ಲಿಂಗ್ ಅನುಭವಗಳ ಕಂತೆ ಬಿಚ್ಚಿಡುತ್ತಾನೆ. ಹಾಗೆ ಮಾಸಿ ಹೋಗದ ನೆನಪಾಗಿ ಉಳಿದುಹೋಗಿರುವುದು ಇತ್ತೀಚೆಗೆ ನಡೆಸಿದ ಗೋವಾ ರೈಡ್.
                     ಈ ರಾಯಲ್ ಎನ್ಫೀಲ್ಡ್ ಕಂಪನಿಯವರು ಪ್ರತಿ ವರ್ಷ ರೈಡರ್ ಮೇನಿಯಾ ಅಂತ ಮಾಡ್ತಾರೆ. ಹುಚ್ಚಿಗೆ ಬಿದ್ದು ಬುಲೆಟ್ ಓಡಿಸೋರನ್ನ ಒಂದು ಕಡೆ ಸೇರಿಸುವ ಮೂರು ದಿನಗಳ ಜಾತ್ರೆ ಅದು. ಭಾರತದ ಮೂಲೆ ಮೂಲೆಗಳಿಂದ ಹುಡುಗರು - ಹುಡುಗೀರು ತಮ್ಮ ತಮ್ಮ ಬುಲೆಟ್ ಗಳಲ್ಲಿ ಅಲ್ಲಿಗೆ ಬರ್ತಾರೆ.  ಯಾವ ಕಡೆಯಿಂದ ಲೆಕ್ಕ ಹಾಕಿದರೂ ಐದಾರು ನೂರು ಜನರಿಗೆ ಕಡಿಮೆ ಇರಲ್ಲ. ಮೂರು ವರ್ಷಗಳಿಂದ ರೈಡರ್ ಮೇನಿಯಾ ಪಣಜಿಯ ಅಂಜುನಾ ಬೀಚ್ ಹತ್ತಿರ ಇರುವ  ಹಿಲ್ ಟಾಪ್ ಹೊಟೇಲ್ನಲ್ಲಿ ನಡೀತಿದೆ. ಈ ಸಲ ಕೂಡ ಅಲ್ಲೇ ಫಿಕ್ಸ್ ಆಗಿತ್ತು. ಲಾಂಗ್ ರೈಡ್ ಮಾಡೋದಕ್ಕೆ ರೈಡರ್ ಮೇನಿಯಾಕ್ಕಿಂತ ನೆಪ ಬೇಕಾ..? ಅನಾಮತ್ತು ಇಪ್ಪತ್ತನಾಲ್ಕು ಜನ ತಯಾರಾದ್ವಿ. ಆದರೆ, ಎಲ್ಲರಿಗೂ ಒಂದೇ ಸಲಕ್ಕೆ ರಜೆ ಸಿಗಬೇಕಲ್ಲ. ಮೂರು ತಂಡಗಳಲ್ಲಿ ಹೋಗೋ ನಿರ್ಧಾರ ಆಯ್ತು. ಮೊದಲ ತಂಡದಲ್ಲಿ ನನ್ನನ್ನೂ ಸೇರಿಸಿ ನಾಲ್ಕು ಜನ ನಸುಕಿನ ಜಾವ ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಹೊನ್ನಾವರ, ಕಾರವಾರ ಮೂಲಕ ಹೊರಟರೆ, ಅದರ ಮಾರನೇ ದಿನ ಅದೇ ರೂಟ್ನಲ್ಲಿ ಎಂಟು ಬುಲೆಟ್ ಗಳು ಹೊರಟವು. ಆವತ್ತೇ ರಾತ್ರಿ, ಹನ್ನೆರಡು ಬುಲೆಟ್ಗಳಲ್ಲಿ ದಾವಣಗೆರೆ, ಹುಬ್ಬಳ್ಳಿ, ಕಾರವಾರ ಮಾರ್ಗವಾಗಿ ಹೊರಟದ್ದು ಮುಉರನೆಯ ತಂಡ.  ಹೆಚ್ಚೂ ಕಡಿಮೆ ಏಳುನೂರ ಐವತ್ತು ಕಿಲೋಮೀಟಾರ್ ಗಳ  ರೈಡ್ ಅದು. ಒಂದೇ ಏಟಿಗೆ ಮುಗಿಸಬೇಕು. ಎಂಥಾ ಪಳಗಿದ ಲಾಂಗ್ ರೈಡರ್ ಆದರೂ, ಅದೊಂದು ಚಾಲೆಂಜೇ. ನಮ್ಮ ಪಾಲಿಗೆ ಇಪ್ಪತ್ತೆರಡು ತಾಸುಗಳ ಸಾಹಸ. ಕಲ್ಲಂಗೋಟ್ ಬೀಚ್ ಸೆರಗಿನಲ್ಲಿರೋ ಕಿಸ್ಮತ್ ಮಹಲ್ ಲಾಡ್ಜ್ ತಲುಪಿ ಅದೊಂದು ಸುಸ್ತನ್ನ ಒಂದು ದಿವ್ಯವಾದ ನಿದ್ದೆಯೊಂದಿಗೆ ಕಳೆದುಕೊಂಡು, ರೈಡರ್ ಮೇನಿಯಾ ನಡೀತಿದ್ದ ಹಿಲ್ ಟಾಪ್ ಹೊಟೇಲಿಗೆ ಹೋದರೆ, ಅಲ್ಲಿತ್ತು ಬೈಕಿಂಗ ನ  ಬಣ್ಣದ ಲೋಕ.

the Grand Entry...

                    ದೂರದಿಂದಲೇ ಕೇಳಿಸುವ ಬುಲೆಟ್ನ ಗುಟುರು. ಹತ್ತಿರ ಹೋದರೆ, ಕಣ್ಣು ಹಾಯಿಸಿದಷ್ಟು ದೂರ ಆ ದೈತ್ಯ ಬೈಕುಗಳು.  ಪ್ರತಿಯೊಬ್ಬರೂ ಕಾರ ಹುಣ್ಣಿಮೆಗೆ ರೈತರು ತಮ್ಮ ತಮ್ಮ ಹೋರಿಗಳನ್ನು ಸಿಂಗರಿಸಿಕೊಂಡು ತಂದಂತೆ ತಮ್ಮ ತಮ್ಮ ಬುಲೆಟ್ಗಳನ್ನ ಸಿಂಗರಿಸಿಕೊಂಡು ತಂದಿರ್ತಾರೆ. ಅವರ ಮಧ್ಯೆ, ಬುಲೆಟ್ ಓಡಿಸುವ ಹುಡುಗಿಯರ ಬಿನ್ನಾಣ, ಆಂಟಿಯರ ವಯ್ಯಾರಗಳು, ಭಾರತಕ್ಕೆ ಬಂದು ಬುಲೆಟ್ ಖರೀದಿಸಿ ದೇಶ ಸುತ್ತುವ ಪ್ಹಾರಿನರುಗಳ  ಸಂಭ್ರಮಗಳು. ಒಳಗೆ ಹೆಜ್ಜೆಯಿಟ್ಟರೆ, ಒಂದು ಕಡೆ ರಾಯಲ್ ಎನ್ಫೀಲ್ಡ್ ನ  ಲಾಂಛನ ಮೈಮೇಲೆ ಮೂಡಿಸಿಕೊಂಡಿರುವ ಟಿ ಶರ್ಟು, ಲೈಟರ್, ಬಿಯರ್  ಮಗ್ಗಳು, ಬುಲೆಟ್ ನ  ಇತಿಹಾಸ ತಿಳಿಸುವ ಪುಸ್ತಕಗಳ ಅಂಗಡಿ. ಹಾಗೇ ಎಡಕ್ಕೆ ತಿರುಗಿ ಒಳಗೆ ಹೋದರೆ, ಬೈಕ್ ಮೇಲೆ ಜಗತ್ತು ಸುತ್ತಿದವರು ಮಾಡಿರುವ ಡಾಕ್ಯುಮೆಂಟರಿಗಳ ಪ್ರದರ್ಶನ. ಮುಂದೆ, ಲಾಂಗ್ ರೈಡಿಂಗಿಗೆ  ಬೇಕಾದ ವಸ್ತುಗಳು, ಬೈಕಿನ ಸಿಂಗಾರದ ಸಾಮಾನುಗಳ ಅಂಗಡಿಗಳು. ಅದರ ಪಕ್ಕದಲ್ಲೇ, ಮಾಡಿಫೈಡ್ ಬುಲೆಟ್ ಗಳ ಜಗತ್ತು. ಒಂದು ಇನ್ನೊಂದರಂತಿಲ್ಲ, ಇನ್ನೊಂದು ಮತ್ತೊಂದರಂತಿಲ್ಲ. ಅವುಗಳಲ್ಲಿ ಅತ್ಯುತ್ತಮವಾದದ್ದು ಯಾವುದು ಅನ್ನೋದೇ ಒಂದು ಸ್ಪರ್ಧೆ. ಬೈಕ್ ಮಾಡಿಫೈ ಮಾಡೋದನ್ನೇ ವೃತ್ತಿಯಾಗಿಸಿಕೊಂಡವರು ಅಲ್ಲಿ ತಮ್ಮ ತಮ್ಮ ಬೈಕುಗಳ ಸಮೇತ ಬಂದಿರ್ತಾರೆ. ಇದನ್ನೆಲ್ಲ ನೋಡುತ್ತ ಓಡಾಡ್ತಿರುವಾಗ ಹಿನ್ನೆಲೆಯಲ್ಲಿ ಭೋರ್ಗರೆಯುವ ಸಂಗೀತ. ಹೊಟ್ಟೆಗೆ ಬೇಕು ಬೇಡಾದ ತಿಂಡಿ ತಿನಿಸುಗಳು. ಗೋವಾದ ರಣರಣ ಬಿಸಿಲಿಗೆ ಹತ್ತು ರುಪಾಯಿಗೊಂದು ಬಿಯರ್ ಮಾರುವ ಆಫರ್ ಇಟ್ಟ ವಿಜಯ್ ಮಲ್ಯರ ಧಾರಾಳತನವೂ ಸೇರಿಕೊಂಡು ಅಲ್ಲೊಂದು ಹೊಸ ಲೋಕವನ್ನೇ ಸೃಷ್ಠಿಸಿಬಿಟ್ಟಿದ್ದವು.

test riding a modified bull..!
                   ಅವೆಲ್ಲದರ ನಡುವೆ, ಬುಲ್ ರೈಡರುಗಳಿಗಾಗಿ  ನಡೆಯುವ ಸ್ಫರ್ಧೆಗಳನಂತೂ  ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಗುಡ್ಡದ ಏರಿಳಿಕೆಯನ್ನೇ ದಾರಿ ಅಂತ ಘೋಷಿಸಿ ಅದರಲ್ಲಿ ರೇಸ್ ಇಡ್ತಾರೆ. ಅದಕ್ಕೆ dirt track ಅಂತ ಹೆಸರು. ಇನ್ನು ಆ ದಾರಿಯಲ್ಲಿ ಕಲ್ಲು, ಟೈರು, ಹುಲ್ಲಿನ ಮೆದೆ ಇಟ್ಟು ಅದರ ಮೇಲೆ ಬೈಕ್ ಓಡಿಸಿದರೆ ಅದು ಟ್ರಯಲ್ಸ್. ಅವುಗಳಿಗಾಗಿ ಪುಣೆಯ ರೋಡ್ ಶೇಕರ್ಸ್  ಕ್ಲಬ್ನವರು ತಿಂಗಳುಗಟ್ಟಲೆ ತಯಾರಿ ಮಾಡಿಕೊಂಡು ಬಂದಿರ್ತಾರೆ . ಇನ್ನು, ಅದರಲ್ಲೆಲ್ಲಾ ಭಾಗವಹಿಸಿ, ತಮ್ಮನ್ನೂ - ತಮ್ಮ ಬೈಕುಗಳನ್ನು ಹೈರಾಣು ಮಾಡಿಕೊಳ್ಳಲಾರೆವು ಅನ್ನುವಂಥವರಿಗೆ ಬಿಯರ್ ಕುಡಿಯೋ ಸ್ಫರ್ಧೆ, ಪಂಜಾ, ಸ್ಲೋ ರೇಸಿಂಗ್ನಂಥ ಡೀಸೆಂಟ್ ಕಾಂಪಿಟೇಷನ್ನುಗಳು. ಇವೆಲ್ಲದರ ಮಧ್ಯೆ, ರೈಡರ್ ಮೇನಿಯಾಕ್ಕೆ ಬಂದಿರುವ ಅಷ್ಟೂ ಜನ ಒಂದೇ ಸಲಕ್ಕೆ ಒಂದು ರೌಂಡ್ ಪಣಜಿ ಕಡೆ ಹೋಗಿ ಬರ್ತಾರೆ. ಆರು ನೂರು ಬುಲೆಟ್ಗಳು ಸಾಲಾಗಿ ರೋಡಿಗಿಳಿದರೆ ಹೆಂಗಿರತ್ತೆ ಅನ್ನೋದು ನಿಮ್ಮ ಊಹೆಗೆ ಬಿಟ್ಟ ವಿಚಾರ.
                   ರೈಡರ್ ಮೇನಿಯಾ ಅನ್ನೋದು ತುಂಬ ಜನರಿಗೆ ಗೋವಾ ಸುತ್ತೋದಕ್ಕೊಂದು ನೆಪ. ನಾವು ಕೂಡ ಟೈಮು ಸಿಕ್ಕಾಗಲೆಲ್ಲ ನಮ್ಮ ನಮ್ಮ ಬೈಕ್ ಹತ್ತಿಕೊಂಡು ಹೊರಟು ಬಿಡ್ತಿದ್ವಿ. ಎಲ್ಲೆಲ್ಲಿಗೆ ಹೋಗ್ತೀವೋ ಅಲ್ಲಲ್ಲಿ, ಅಲ್ಲಿನ ಸ್ಪೆಷಲ್ ತಿಂಡಿ ತಿನಿಸು ಸವಿಯಬೇಕು. ಹೋದಲ್ಲೆಲ್ಲಾ ಮಸಾಲೆ ದೋಸೆ, ಇಡ್ಲಿ ವಡೆ ಹುಡುಕಿಕೊಂಡು ಅಲೆದರೆ ಅದು ದಡ್ಡತನ. ಅದರಲ್ಲೂ ಗೋವಾಕ್ಕೆ ಹೋದಾಗ, ಸಮುದ್ರ ತೀರದಲ್ಲಿ ಶಾಕ್ ಅಂತ ಕರೆಸಿಕೊಳ್ಳೋ ತೆಂಗಿನ ಗರಿಕೆಯ ಹೊಟೇಲುಗಳಲ್ಲಿ ಸೀ ಫುಡ್ ಸವಿಸೋ ಸಂತೋಷಾನೇ ಬೇರೆ. ನಾವು ಹೋದಾಗ, ಹುಣ್ಣಿಮೆ ಬೇರೆ. ಬೆಳದಿಂಗಳಿನಲ್ಲಿ, ಸಮುದ್ರದ ಅಲೆಗಳು ಕಾಲಿಗೆ ತಾಕುವಂಥ ಜಾಗದಲ್ಲಿ ಹೊಟೇಲಿನವರು ಟೇಬಲ್ಲು ಚೇರು ಹಾಕಿ ಕೊಟ್ಟು, ಟೇಬಲ್ ಮೇಲೊಂದು ಕ್ಯಾಂಡಲ್ ಹಚ್ಚಿಟ್ಟು ಕೊಡ್ತಾರೆ. ದೂರದಲ್ಲಿ, ಹಾಡೋರು ಹಾಡ್ತಿರ್ತಾರೆ-ಕುಣಿಯೋರು ಕುಣೀತಿರ್ತಾರೆ.  ಇಲ್ಲಿ, ಅದೆಲ್ಲದರ ಹಿನ್ನೆಲೆಯಲ್ಲಿ ಸಮುದ್ರದ ಭೋರ್ಗರೆತ ಕೇಳಿಸಿಕೊಳ್ಳುತ್ತಾ ಕುಳಿತು, ಒಂದೊಂದೇ ತುತ್ತು ಊಟ ಮಾಡುವುದರಲ್ಲಿ ಎಂಥಾ ಸುಖವಿದೆ..? ಗೋವಾಕ್ಕೆ ತಮ್ಮ ಹೆಂಡತಿಯರನ್ನು ಕರೆತಂದಿದ್ದ ನಾಲ್ಕು ಜನ ರೈಡರ್ಗಳು ದೂರದಲ್ಲಿ ಟೇಬಲ್ ಹಾಕಿಸಿಕೊಂಡು ಕುಳಿತು ಒಬ್ಬರ ಕೈಮೇಲೊಬ್ಬರು ಬೆರಳಿನಿಂದಲೇ ರಂಗೋಲಿ ಬಿಡಿಸುತ್ತಿದ್ದರು. ಕೆಲವರು ಬೆಂಗಳೂರಿಗೆ ಫೋನ್ ಮಾಡಿ "ಮಿಸ್ ಯೂ" ಅಂತ ಪಿಸುಗುಡುತ್ತಿದ್ದರು. ಇನ್ನು ಒಬ್ಬಂಟಿಯಾಗಿರುವ ಗುಂಡರಗೋವಿಗಳು, ವಿರಹದ ಹಿತ ಅನುಭವಿಸೋದಕ್ಕಾದರೂ ಸಂಗಾತಿ ಇರಬೇಕಿತ್ತು ಅಂತ ಹಳಹಳಿಸುತ್ತಾ ತಣ್ಣನೆಯ ಬಿಯರ್ ಹೀರುತ್ತಿದ್ದರು. ಒಟ್ಟಿನಲ್ಲಿ ರೋಮ್ಯಾಂಟಿಕ್ ಅನ್ನೋ ಶಬ್ದಕ್ಕೆ ಅನ್ವರ್ಥದಂಥ ಜಾಗ ಅದು. ಅಲ್ಲಿ ಎಲ್ಲರಿಗೂ ಇನ್ನೊಬ್ಬರ ಪ್ರೈವಸಿ ಗೌರವಿಸುವುದು ಗೊತ್ತು. ಏಕಾಂತಕ್ಕೆ ಭಂಗ ತರುವ ಪೀಪಿಂಗ್ ಟಾಮ್ಗಳಿಲ್ಲ, ಸೀಟಿ ಊದಿಕೊಂಡು ಬರುವ ಪೊಲೀಸರು, ಚಿಪ್ಸ್ ಮಾರೋ ಹುಡುಗರು, ಕಣಿ ಹೇಳೋರು... ಊಹ್ಞೂಂ... ಅಲ್ಲಿ ನೀವುಂಟು, ಭೋರ್ಗರೆಯುವ ಸಮುದ್ರವುಂಟು. ನೀವು ಗೋವಾಕ್ಕೆ ಹೋದ್ರೆ, ಏನು ಮಿಸ್ ಮಾಡಿಕೊಂಡ್ರೂ, ಅದೊಂದು ಕ್ಯಾಂಡಲ್ ಲೈಟ್ ಡಿನ್ನರ್ ಮಿಸ್ ಮಾಡ್ಕೋಬೇಡಿ.
                    ಹಾಗೆ ಕ್ಯಾಂಡಲ್ ಲೈಟ್ ಡಿನ್ನರ್ ಬಿಟ್ಟರೆ, ಗೋವಾದಲ್ಲಿ ಅನುಭವಿಸಬಹುದಾದ ಮತ್ತೊಂದು ಮೋಜು ವಾಟರ್ ಸ್ಪೋರ್ತ್ಸನದು. ನಾಲ್ಕೈದು ನೂರಕ್ಕೆಲ್ಲ, ಐದು ಗೇಮ್ಗಳ ಪ್ಯಾಕೇಜು. ಅದರಲ್ಲೂ ಸ್ಪೀಡ್ನ ಹುಚ್ಚಿರೋರು ಏಳುನೂರು ಸಿ.ಸಿ ಎಂಜಿನ್ನಿನ ಮೋಟರ್ ಬೋಟ್ನಲ್ಲಿ ಹೋಗಿ ಬರಬೇಕು. ಅದ್ಭುತ ಅದು. ಹಾಗೆ ರೈಡರ್ ಮೇನಿಯಾ - ಗೋವಾದಲ್ಲಿನ ಸುತ್ತಾಟದಲ್ಲಿ ನಾಲ್ಕು ದಿನಗಳು ಕಳೆದದ್ದು ಗೊತ್ತೇ ಆಗಲಿಲ್ಲ. ಐದನೇ ದಿನ ನಸುಕಿನಲ್ಲೆದ್ದು ಎಲ್ಲರೂ ಮತ್ತೆ ಬೆಂಗಳೂರ ದಿಕ್ಕಿಗೆ ಬುಲೆಟ್ ತಿರುಗಿಸಿದ್ವಿ. ರೈಡರ್ ಮೇನಿಯಾಕ್ಕೆ ಹುಬ್ಬಳ್ಳಿಯಿಂದ ಬಂದಿದ್ದ ಹುಡುಗರು, ರಾಮನಗರ, ಗಣೇಶಗುಡಿ, ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತಲುಪುವ ಹಾದಿ ತುಂಬ ಚನ್ನಾಗಿದೆ ಅಂದಿದ್ದರು. ಅದು, ಒಂದೈವತ್ ಕಿಲೋಮೀಟರ್ ಜಾಸ್ತಿ ಆದರೂ, ಅದೇ ರೂಟ್ನಲ್ಲಿ ಹೋಗೋದಕ್ಕೆ ಒಮ್ಮತದ ನಿರ್ಧಾರವಾಯಿತು. ಅಣಶಿ ಅಭಯಾರಣ್ಯದ ಹಚ್ಚ ಹಸುರಿನ ಕಾಡು ಹಾದಿ. ಬೈಕ್ನಲ್ಲಿ ಹಾವು ಹೊರಳಾಡಿದಂತೆ ಘಾಟ್ ಸೆಕ್ಷನ್ನ ಹತ್ತಿ ಇಳಿಯೋ ಮೋಜೇ ಬೇರೆ. ಐದೂ ಮುಕ್ಕಾಲಿಗೆ ಹೊರಟವರು, ಹನ್ನೊಂದೂವರೆಗೆ ಹುಬ್ಬಳ್ಳಿ. ಅಲ್ಲಿ, ತಿಂಡಿ ಮುಗಿಸಿ ಒಂದು ಗಂಟೆ ರೆಸ್ಟ್ ಮಾಡಿ ಹೊರಟರೆ ನಾನ್ನೂರು ಕಿಲೋಮೀಟರ್ ಕೆನ್ನೆನುಣುಪಿನ ಚತುಷ್ಪಥ ಹೆದ್ದಾರಿ. ದಾರಿಯಲ್ಲೊಂದು ಬೈಕ್ ಪಂಕ್ಚರ್ ಆಯಿತು, ಒಂದು ಬೈಕಿನ ಫೂಟ್ ರೆಸ್ಟ್ ಮುರಿದು ಸ್ವಲ್ಪ ತೊಂದರೆ ಆಯಿತು ಅನ್ನೋದು ಬಿಟ್ಟರೆ, ಹುಬ್ಬಳ್ಳಿಯಿಂದ ಬೆಂಗಳೂರು ಕೇವಲ ಏಳು ತಾಸಿನ ಹಾದಿ. ನೆಲಮಂಗಲ ಟೋಲ್ ಗೇಟ್ ಬಳಿ ನಿಂತು, ಒಂದು ಲಾಂಗ್ ರೈಡ್ನ ಯಶಸ್ವಿಯಾಗಿ ಮಾಡಿ ಮುಗಿಸಿದ ಸಂಭ್ರಮ ಹಂಚಿಕೊಂಡೆವು.

cruising through jungles..!
                     ಅಲ್ಲಿಂದ ಮುಂದೆ, ನಮ್ಮ ನಮ್ಮ ಮನೆ. ಒಂದು ಗಡದ್ದು ನಿದ್ರೆ ಮಾಡಿ ಎದ್ದರೆ, ಯಥಾ ಪ್ರಕಾರ ನೌಕರಿಗಳು, ವ್ಯವಹಾರಗಳು, ಜೀವನದ ಇತರ ಜಂಜಡಗಳು. ಗೋವಾ ರೈಡ್ ನ ನಂತರ ಶ್ರೀಶೈಲಂ ಮತ್ತು ಕೆಮ್ಮಣ್ಣುಗುಂಡಿಯ ಎರಡು ರೈಡ್ಗಳಾಗಿವೆ. ಸಧ್ಯಕ್ಕೆ, ಎಲ್ಲರೂ ತಯಾರಾಗ್ತಿರೋದು ಜೂನ್ನಲ್ಲಿನ ಲಾಂಗ್ ರೈಡ್ಗೆ. ಅದು, ಬುಲೆಟ್ ಬೆನ್ನ ಮೇಲೆ ಕುಳಿತು ಹಿಮಾಲಯ ಹತ್ತಿ ಬರುವ ಹುರುಪು. ಲೇಹ್ - ಲದಾಕ್ಗೆ ಹೋಗಿ ಬರುವುದು ಪ್ರತಿಯೊಬ್ಬ ಲಾಂಗ್ ರೈಡರ್ ನ  ಜೀವಮಾನದ ಕನಸು. ಆ ಕನಸು ಈಗ ಮನಸಿನಲ್ಲಿ ಮೊಳಕೆಯೊಡೆದಿದೆ.

Wednesday, January 5, 2011

ಆರು ವರ್ಷಗಳ ನಂತರ ಮತ್ತದೇ ಆಸೆ...

ಹಾ... ಎಷ್ಟು ದಿನಗಳಾಗಿವೆ ಅಂಥದ್ದೊಂದು ಲಾಂಗ್ ರೈಡ್ ಮಾಡಿ... ಹಾವಿನಂತೆ ಹೊರಳಾಡುವ ಹಚ್ಚ ಹಸುರ ಕಾಡು ದಾರಿಯ ನಡುವೆ ಬುಲೆಟ್ ಗುಡುಗುಡಿಸುತ್ತಾ ಸಾಗುವ ಮೋದ. ಹೇಳದೇ ಕೇಳದೇ ಸುರಿವ ಮಳೆಗೆ ಮುಖವೊಡ್ಡಿ ಒದ್ದೆಯಾಗುವ ಖುಷಿ. ಬೈಕು ಓಡಿಸ್ತಾ ಓಡಿಸ್ತಾ, ಮೈಯಲ್ಲಿನ ಸತುವೆಲ್ಲ ಮುಗಿದುಹೋಗಿ, ಕಣ್ಣು ಕತ್ತಲೆ ಬಂದಂತಾಗಿ ಇನ್ನು ನನ್ ಕೈಯಲ್ಲಾಗಲ್ಲ ಅಂದುಕೊಳ್ತಿರುವಾಗಲೇ, ತಲುಪಬೇಕಾದ ಗಮ್ಯ ತಲುಪಿಕೊಂಡುಬಿಡುವ ಸಂತೋಷ. ನನಗಿಂತ ಜಾಸ್ತಿ ಆ ರೋಮಾಂಚನವನ್ನ ನನ್ನ ಬುಲೆಟ್ ಮಿಸ್ ಮಾಡಿಕೊಳ್ತಿದೆಯೇನೋ. 

ಹುಬ್ಬಳ್ಳಿಯಲ್ಲಿದ್ದ ದಿನಗಳಲ್ಲಾದರೆ ಹೇಳೋರು ಕೇಳೋರು ಯಾರೂ ಇರಲಿಲ್ಲ. ಬೆಳ್ ಬೆಳಿಗ್ಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ಊರಲ್ಲಿ ಕಿಕ್ ಒದ್ದರೆ ತಡಸ, ಮುಂಡಗೋಡ ದಾಟಿ ಭರತನಹಳ್ಳಿ ಮಾವಿನಕಟ್ಟಾ. ಅಲ್ಲಿ ಗುಡಿಸಲಿನಂಥಾ ಹೊಟೇಲಿನೆದುರಿಗೆ ಹೋಗಿ ನಿಲ್ಲಿಸಿದರೆ, ಒಳಗಿದ್ದ ಅಜ್ಜಿಗೆ ಸ್ವಂತ ಮೊಮ್ಮಗನೇ ಬಂದನೇನೋ ಅನ್ನುವಷ್ಟು ಸಂತೋಷ. ಆ ದಾರಿಯಲ್ಲಿ ಅದೆಷ್ಟು ಸಲ ಹೋಗಿದ್ದೆನೋ, ಅದೆಷ್ಟು ಸಲ ಆಕೆಯ ಹೊಟೇಲ್ನಲ್ಲಿ ತಿಂಡಿಗೆ ನಿಲ್ಲಿಸಿದ್ದೆನೋ. ಆ ಅಜ್ಜಿ ಕೈಯಲ್ಲಿ ಮೊಸರವಲಕ್ಕಿ ತಿನ್ನುವ ಸುಖ ತಿಂದವರಿಗೇ ಗೊತ್ತು. ಹಿಂದಿನ ದಿನವೇ ಎಮ್ಮೆ ಹಾಲಿಗೆ ನೀರು ಸೋಕಿಸದೇ ಹದವಾಗಿ ಕಾಯಿಸಿ ಹೆಪ್ಪು ಹಾಕಿರ್ತಿದ್ದಳು. ಬೆಳಿಗ್ಗೆ ಹೊತ್ತಿಗೆ ಅದು ಗಿಣ್ಣದಷ್ಟು ಗಟ್ಟಿ ಮೊಸರು. ದಪ್ಪ ಅವಲಕ್ಕಿಯನ್ನ ನೀರಿನಲ್ಲಿ ಅದ್ದಿ ತೆಗೆದು, ಅದಕ್ಕೆ ಹದವಾಗಿ ಮೊಸರು ಹಾಕಿ ಕಲಸ್ತಿತ್ತು ಅಜ್ಜಿ. ಹಾಗೆ ತಯಾರಾದ ಮೊಸರವಲಕ್ಕಿಯನ್ನ ಮಡಿಕೆಗೆ ತುಂಬಿ ಅದರ ಸುತ್ತ ಒದ್ದೆ ಬಟ್ಟೆ ಹಾಕಿ ಹೊಟೇಲಿನ ಮೂಲೆಯ ತಂಪಿನಲ್ಲಿಟ್ಟಿರ್ತಿದ್ದಳು. ನಾನು ಬೈಕು ನಿಲ್ಲಿಸಿ ಕೈತೊಳೆದುಕೊಂಡು ಗುಡಿಸಲಿನ ಸಣ್ಣ ಬಾಗಿಲು ದಾಟಿಕೊಂಡು ಒಳಗಿದ್ದ ಬಾಕಿನ ಮೇಲೆ ಕುಳಿತುಕೊಳ್ಳುವಷ್ಟರಲ್ಲಿ, ದೊಡ್ಡ ತಟ್ಟೆಯ ಮೂಲೆಯಲ್ಲಿ ಮಿಡಿಗಾಯಿ ಉಪ್ಪಿನಕಾಯಿ ಹಾಕಿ, ಆ ತಟ್ಟೆಲ್ಲೊಂದು ಸಣ್ಣ ತಟ್ಟೆ ಇಟ್ಟು ಅದರಲ್ಲಿ ತುಂಬಿ ತುಳುಕುವಷ್ಟು ಮೊಸರವಲಕ್ಕಿ ಹಾಕಿ, ಅದರ ಮೇಲೆ ಹುರಗಡಲೆ ಚಟ್ನಿ ಉದುರಿಸಿ ಕೊಡ್ತಿತ್ತು. ಆರು ಪಾಯಿಯೇನೋ ಇತ್ತು ಒಂದು ಪ್ಲೇಟಿಗೆ. ಎರಡು ಪ್ಲೇಟ್ ತಿಂದುಬಿಟ್ಟರೆ, ಅಲ್ಲೇ ಮಲಗಿಬಿಡಬೇಕು ಅನ್ನಿಸೋದು. ಕೆಲವು ಸಲ ಹೋಗುವಾಗ ತೋಟದ ಸಪೋಟ ತಗೊಂಡು ಹೋಗ್ತಿದ್ದೆ. ಅವನ್ನ ಕೊಟ್ಟರೆ ಅಜ್ಜಿ ದುಡ್ಡೇ ಮುಟ್ತಿರಲಿಲ್ಲ. ಅಲ್ಲಿ ತಿಂಡಿ ಮುಗಿಸಿಕೊಂಡು ಮತ್ತೆ ಹೊರಟರೆ ನೇರವಾಗಿ ಸೋಂದಾ. ಅದಕ್ಕೆ ಬ್ರಾಹ್ಮಣರು ಸೋದೆ ಅಂತಾರೆ. ಅಲ್ಲಿಂದ ಹಂಗೇ ಶಿರಸಿಯ ದಿಕ್ಕಿಗೆ ಒಂದೈದಾರು ಕಿಲೋಮೀಟರ್ ಹೋದರೆ, ಎಡ ಮಗ್ಗುಲಿಗೆ 'ಪೇಟೆ ನಾರಾಯಣಸ್ವಾಮಿ ದೇವಸ್ಥಾನಕ್ಕೆ ದಾರಿ' ಅನ್ನೋ ಸಣ್ಣ ಬೋರ್ಡು. ಆ ಕಾಡು ದಾರೀಲಿ ಅರ್ಧ ಕಿಲೋಟಮೀಟರ್ ದೂರ ಹೋಗಿ ದೇವಸ್ಥಾನದ ಅಂಗಳದಲ್ಲಿ ಬುಲೆಟ್ ನಿಲ್ಲಿಸೋ ಹೊತ್ತಿಗೆ ಟೈಮು ಹತ್ತೂವರೇನೋ - ಹನ್ನೊಂದೋ ಆಗಿರ್ತಿತ್ತು.
 ಯಾವ ಕಾಲದಲ್ಲಿ, ಅದ್ಯಾವ ರಾಜ ಕಟ್ಟಿಸಿದ ಗುಡಿಯೋ ಅದು. ಒಳಗಿದ್ದ ದೇವರು, ಅದರ ಮಹಾತ್ಮೆಗಳೆಲ್ಲ ಈಗ ನೆನಪಿಲ್ಲ. ಆದರೆ, ಅದರ ಪ್ರಾಂಗಣದ ತಂಪು ಮರೆಯುವಂಥದ್ದಲ್ಲ. ಬೆಳಿಗ್ಗೆ ಪೂಜಾರಿ ಬಂದು ಪೂಜೆ ಮಾಡಿ ಗರ್ಭ ಗುಡಿಯ ಬಾಗಿಲು ಹಾಕಿಕೊಂಡು ಹೋಗಿಬಿಟ್ಟರೆ, ಅಲ್ಲಿ ಬೇರೆ ಯಾರಾದರೂ ಬಂದಿದ್ದನ್ನ ನಾನು ನೋಡಿಲ್ಲ. ದೇವರ ಮೂರ್ತಿಯೆದುರಿನ ದೀಪ ಮಾತ್ರ ಉರಿಯುತ್ತಿರುತ್ತಿತ್ತು. ಹೊರಗೆ ಬಂದು ದೇವಸ್ಥಾನದ ಸುತ್ತ ಒಂದು ಸುತ್ತು ಹಾಕಬೇಕು. ಗೋಡೆಯ ತುಂಬ ಮೈಥುನ ಶಿಲ್ಪಗಳು. ಗುಡಿಯೆದುರಿಗೆ ಬಿಲ್ವ ಪತ್ರೆ ಗಿಡ. ಮುಂದೆ ನಾಲ್ಕು ಹೆಜ್ಜೆ ನಡೆದರೆ ಪಾಳು ಬಿದ್ದ ಕಲ್ಯಾಣಿ. ಅದರಾಚೆಗೆ ಕಾಡು. ಬಿಸಿಲು ಏರೋ ಹೊತ್ತಿಗೆಲ್ಲ ಕಲ್ಯಾಣಿಯ ಕಲ್ಲಿನ ಕಟ್ಟೆ ಮೇಲೆ ಕಾಲು ಇಳಿಬಿಟ್ಟುಕೊಂಡು ಕುಳಿತು ನೆನಪಿಗೆ ಬಂದ ಯಾವುದೋ ಹಾಡು ಗುನುಗುನಿಸುವುದರಲ್ಲಿ ಅದೆಂಥಾ ಸುಖ ಇತ್ತು..?
                                        'ರಂಜಿಶ್ ಹಿ ಸಹಿ, ದಿಲ್ ಹಿ ದುಖಾನೆ ಕೆ ಲಿಯೆ ಆ,
                                         ಆ ಫಿರ್ ಸೆ ಛೋಡ್ ಕೆ ಜಾನೇ ಕೆ ಲಿಯೆ ಆ'
 ಕಾಡ ನಡುವಿನ ಪಾಳು ಗುಡಿಯೆದುರಿಗಿನ ಕಲ್ಯಾಣಿಯ ಕಟ್ಟೆಯ ಮೇಲೆ ಒಬ್ಬಂಟಿಯಾಗಿ ಕುಳಿತವನಿಗೆ ಯಾರದೋ ನೆನಪು. ಸುಮ್ಸುಮ್ನೆ ಕನವರಿಕೆ. ಅದೆಷ್ಟು ಹೊತ್ತು ನಿಶ್ಚಲನಾಗಿ, ಕಲ್ಲುಗಳ ನಡುವೆ ಕಲ್ಲಿನಂತೆ, ಪೊದೆಯ ಮಧ್ಯೆ ಪೊದೆಯಂತೆ ಕುಳಿತಿರುತ್ತಿದ್ದೆನೋ. ಅಲ್ಲಿ ನಾನು ಕುಳಿತದ್ದೇ ಸುಳ್ಳೇನೋ ಅನ್ನೋ ಹಾಗೆ ಕಾಡ ನಡುವಿನಿಂದ ನಿಧಾನವಾಗಿ ತವಳಿಕೊಂಡು ಬರುತ್ತಿದ್ದ ಹೆಬ್ಬಾವು ಕಲ್ಯಾಣಿಯಲ್ಲಿ ಈಜು ಬಿದ್ದದ್ದು ಅದೆಷ್ಟು ಸಲವೋ. ಅಲ್ಲಿಂದ ಮೇಲೇಳ್ತಿದ್ದದ್ದೇ ಮಧ್ಯಾಹ್ನದ ಹೊತ್ತಿಗೆ. ಮತ್ತೆ ಸೋಂದಾದ ಕಡೆ ಬುಲೆಟ್ ತಿರುಗಿಸಿದರೆ, ದಾರಿಯಲ್ಲಿ ಎಳನೀರು - ಏಲಕ್ಕಿ ಬಾಳೆಹಣ್ಣು. ಹಂಗೇ ಜೈನ ಮಠದ ದಾರಿಯಲ್ಲಿ ಹೋಗಿ, ಬಲಕ್ಕೆ ಕಚ್ಚಾ ರಸ್ತೆಯಲ್ಲಿ ಬೈಕು ತಿರುಗಿಸಿ ಆ ರಸ್ತೆ ಕಾಡಿನಲ್ಲಿ ಲೀನವಾಗುವ ತನಕ ಹೋಗಬೇಕು. ನಂತರ ಅಲ್ಲೇ ಸೈಡಿನಲ್ಲಿ ಬೈಕು ನಿಲ್ಲಿಸಿ ಕಾಡು ದಾರಿಯಲ್ಲಿ ನಡೆಯಲು ಶುರು ಮಾಡಿದರೆ, ಎರಡು ಮೂರು ಕಡೆ ಸಣ್ಣ ಸಣ್ಣ ತೊರೆಗಳು ಸಿಗ್ತವೆ. ಮೊಳಕಾಲ ತನಕ ಪ್ಯಾಂಟ್ ಏರಿಸಿಕೊಂಡು ಆ ತೊರೆಗಳನ್ನ ದಾಟಿಕೊಂಡು ನಡೆಯಬೇಕು. ದಟ್ಟ ಕಾಡದು. ಒಳಗೆ ಅರೆಗತ್ತಲು. ಅಲ್ಲಿ ಮರಗಳು ಒತ್ತಟ್ಟಿಗಿರಲಿ, ಬಳ್ಳಿಗಳೇ ಬಲಿಷ್ಠ ವ್ಯಕ್ತಿಯೊಬ್ಬನ ತೊಡೆ ಗಾತ್ರಕ್ಕಿವೆ. ಅವುಗಳ ನಡುವಿನಿಂದ ಯಾವತ್ತೂ ಕೇಳಿರದಂಥ ಹಕ್ಕಿಗಳ ಕೂಗು. ಮಳೆಗಾಲದಲ್ಲಾದರೆ, ಏಲಕ್ಕಿ ಬಾಳೆಹಣ್ಣಿನ ಅಂಗಡಿಯಲ್ಲಿ ದೊಡ್ಡದೊಂದು ಹೊಗೆಸೊಪ್ಪಿನ ಎಲೆಯನ್ನೂ ತೆಗೆದುಕೊಂಡಿತರ್ಿದ್ದೆ. ಕಾಡಿಗೆ ಹೆಜ್ಜೆ ಇಡುವ ಮೊದಲೇ ಅದನ್ನ ನೀರಿನಲ್ಲಿ ನೆನೆಸಿ ಕಾಲಿಗೆ ತಿಕ್ಕಿಕೊಳ್ಳಬೇಕು. ಇಲ್ಲದಿದ್ರೆ, ಉಂಬಳಗಳಿಗೆ (ಜಿಗಣೆ ಅಂತೀವಲ್ಲ, ಅವು) ನಾವೇ ಮೃಷ್ಠಾನ್ನ ಭೋಜನ. ಹಾಗೆ ಗಂವೆನ್ನುವ ದಾರಿಯಲ್ಲಿ ನಡೆದು ನಡೆದು, ದಾರಿ ತಪ್ಪಿಹೋಯಿತೇನೋ ಅಂತ ಭಯವಾಗುವ ಹೊತ್ತಿಗೆ ಛಕ್ಕಂತ ಕಾಡು ಮುಗಿದು ಹೋಗೋದು. ಅಲ್ಲೊಂದು ನದಿ. ಕಲ್ಲು ಬಂಡೆಗಳ ಸೊಂಟ ಬಳಸಿಕೊಂಡು ತುಂಬ ವ್ಯವಧಾನದಿಂದ ಹರಿಯೋ ನೀರು. ಅಲ್ಲೇ ಒಂದು ಬಂಡೆ ಮೇಲೆ, ಯಾವುದೋ ಕಾಲದಲ್ಲಿ ಕೆತ್ತಿದ ಪಾದುಕೆಗಳು. ಅವುಗಳ ಮೇಲೆ ಯಾರೋ ಆಸ್ತಿಕರು ಇಟ್ಟು ಹೋದ ದಾಸವಾಳದ ಹೂವು, ಅರಮರ್ಧ ಕುಂಕುಮ, ಕಪರ್ೂರ. ತಪೋವನ ಅಂತ ಆ ಜಾಗದ ಹೆಸರು. ಒಂದೊಂದೇ ಬಂಡೆ ಜಿಗಿದುಕೊಂಡು ಆಚೆ ಹೋದರೆ, ಬಿಳಿ ಮರಳು. ಅದರ ಮೇಲೆ ಮರದ ತಂಪು ನೆರಳಿನಲ್ಲಿ ಕುಳಿತರೆ ಮತ್ತೆ ಮನಸಿನ ತುಂಬ ಹಾಡು.
                                'ಜಾನೆ ವೋ ಕೈಸೆ ಲೋಗ ಥೆ ಜಿನಕೆ ಪ್ಯಾರ ಕೋ ಪ್ಯಾರ್ ಮಿಲಾ,
                                 ಹಮ್ ನೆ ಜಬ್ ಕಲಿಯಾ ಮಾಂಗೆ, ಕಾಂಟೊ ಕಾ ಹಾರ್ ಮಿಲಾ'
ಆ ಮರಳ ಮೇಲೆ ಚಿತ್ರ ಬಿಡಿಸ್ತಾ, ಹಾಡು ಗುನುಗುನಿಸ್ತಾ ಕುಳಿತಿದ್ರೆ ಸಂಜೆ ಆಗಿದ್ದೇ ಗೊತ್ತಾಗ್ತಿರಲಿಲ್ಲ. ಮತ್ತದೇ ಕಾಡು ದಾರಿ. ಅದೇ ಹಕ್ಕಿಯ ಹಾಡು. ಮತ್ತೆ ಬೈಕಿನ ಮೈ ತಡವಿ, ಕಿಕ್ಕು ಒದ್ದರೆ ವಾಪಸ್ ಯಲ್ಲಾಪುರ. ಅಲ್ಲಿಂದ ಹುಬ್ಬಳ್ಳಿ ತನಕ ಕೆನ್ನೆನುಣುಪಿನ ಹೈವೇ. ಬುಲೆಟ್ಟಿನ ತಾಕತ್ತು ಪರೀಕ್ಷಿಸುವಂತೆ ಆಕ್ಸಿಲರೇಟರ್ ತಿರುವಲು ಶುರು ಮಾಡಿದರೆ, ಒಡಗಟ್ಟಾ ನಾಕಾ ಅನ್ನೋ ಒಂದು ಫಾರೆಸ್ಟ್ ಚೆಕ್ಪೋಸ್ಟ್ನಲ್ಲಿ ನಿಲ್ಲಿಸಿ ಟೀ ಕುಡೀತಿದ್ದೆ. ನಂತರ ಊರು ತಲುಪಿಕೊಳ್ಳೋದು ಅದೆಷ್ಟು ಹೊತ್ತಿನ ಮಾತು..?
 ಇಂಥ ಒಬ್ಬಂಟಿ ಪ್ರವಾಸಗಳನ್ನ ಅವೆಷ್ಟು ಮಾಡಿದೆ ಆ ದಿನಗಳಲ್ಲಿ..? ಅಲ್ಲಿ ಪರಿಚಯವಾದ ಜನರೆಷ್ಟು, ಆ ಅನುಭವಗಳೇನು..? ನಟ್ಟ ನಡು ಕಾಡಿನಲ್ಲಿ ಇಳಿ ಸಂಜೆ ಹೊತ್ತಿನಲ್ಲಿ ಬುಲೆಟ್ಟಿನ ಕಿಕ್ ನಾಜ್ ಮುರಿದುಹೋಗಿ ಅನುಭವಿಸಿದ ಕಷ್ಟ ಏನ್ ಕಡಿಮೇನಾ..? ಪೇಟೆ ನಾರಾಯಣಸ್ವಾಮಿ ದೇವಸ್ಥಾನದ ಒಂದರ್ಧ ಕಿಲೋಮೀಟರ್ ದೂರದ ಹವ್ಯಕರ ಮನೆಯ ಯಜಮಾನ ಸೀತಾರಾಮ್ ಹೆಗಡೆ, ಬಾಯ್ತುಂಬ ಕವಳ ತುಂಬಿಕೊಂಡು, ಮಾತಿಗೊಮ್ಮೆ 'ಕಡೆಗೆ, ಕಡೆಗೆ' ಅನ್ತಿದ್ದರು. 'ಈ ಮಾಣಿಗೆ ಅದೆಂತ ಹುಚ್ಚು, ಬುಲೆಟ್ನಲ್ಲಿ ಹುಬ್ಬಳ್ಳಿಯಿಂದ ಬತ್ತದೆ' ಅನ್ನೋರು. ಅದೊಂದು ದಿನ ಎಷ್ಟು ಒಲ್ಲೆ ಅಂದರೂ ಕೇಳದೇ ಮನೆಗೆ ಕರಕೊಂಡು ಹೋಗಿ ಊಟ ಮಾಡಿಸಿದ್ದರು. ಅದೆಂಥದ್ದೋ ಅಪ್ಪೆ ಹುಳಿ ಅಂತೆ, ಅದರ ರುಚಿ ಮರೆತವರುಂಟಾ..? ಅಲ್ಲೇ ಪಕ್ಕದ ಕಕ್ಕಳ್ಳಿಯ ಹತ್ರ ದೊಡ್ಡ ಅಡಿಕೆ ತೋಟದ ಯಜಮಾನ ಬಾಳಾ ಸಾಹೇಬ್. ಓಶೋನ ಬಗ್ಗೆ ಮಾತು ಶುರು ಮಾಡಿದರೆ, ಹಗಲ್ಯಾವುದು ರಾತ್ರಿ ಯಾವುದು ಆತನಿಗೆ..? ಸಾವಿರಾರು ಜನ ಆಸ್ತಿಕರು ಭಕ್ತಿಯಿಂದ ಬಂದು ಪೂಜೆ ಮಾಡೋ ಸಹಸ್ರಲಿಂಗಕ್ಕೆ ಕರಕೊಂಡು ಹೋಗಿ, ಅಲ್ಲಿನ ನಂದಿ ವಿಗ್ರಹದ ಹಿಂಭಾಗದಲ್ಲಿ ನನ್ನನ್ನ ನಿಲ್ಲಿಸಿ, "ಅದು ಆ ಕಡೆಯಿಂದ ನಂದಿ ಕಣೋ, ಈ ಕಡೆಯಿಂದ ಬಂಡೆಯ ಮೇಲೆ ಬೆತ್ತಲೆ ಮಲಗಿರೋ ಹರೆಯದ ಹುಡುಗಿ. ಅದನ್ನ ಬಿಟ್ಟರೆ ಆಧ್ಯಾತ್ಮ ಪೂರ್ತಿ ಆಗಲ್ಲ. ಸೃಷ್ಠಿ ಮೂಲವನ್ನೇ ಅಲ್ಲಗಳೆದರೆ ಸೃಷ್ಠಿಕರ್ತನಿಗೆ ಅವಮಾನ ಮಾಡಿದಂತೆ" ಅಂತ ಫಿಲಾಸಫಿ ಮಾತಾಡ್ತಿದ್ನಲ್ಲ ಪುಣ್ಯಾತ್ಮ. ಯಾಣಕ್ಕೆ ಕಾಡನಡುವಿನ ದಾರಿ ಹುಡುಕಿಕೊಂಡು ಹೋಗ್ತಿದ್ದಾಗ ದಾರಿ ತಪ್ಪಿ ಮನೆಯೊಂದಕ್ಕೆ ಹೋಗಿದ್ದೆನಲ್ಲ, ಆ ಮನೆಯ ಅಂಗಳದಲ್ಲಿ ಪಾರಿಜಾತ ಗಿಡಕ್ಕೆ ಕಟ್ಟಿದ ಜೋಕಾಲಿಯಲ್ಲಿ ಕುಂತು ಹುಡುಗಿಯೊಬ್ಬಳು ಯಾವುದೋ ಕಾದಂಬರಿ ಓದ್ತಿದ್ದಳು. ಅದರಲ್ಲಿ ಬಿಳಿ ಕುದುರೆಯ ಮೇಲೆ ರಾಜಕುಮಾರ ಬರೋ ಸೀನಿಗೆ ಬಂದಿದ್ದಳೋ ಏನೋ. ಆಮರ್ಿ ಗ್ರೀನ್ ಕಲರಿನ ಬುಲೆಟ್ ಫಡಫಡಿಸಿಕೊಂಡು ನಾನು ಹೋಗಿದ್ದೆ. ನನ್ನನ್ನ ನೋಡಿ ಅವಸರವಸರವಾಗಿ ಒಳಗೆದ್ದು ಹೋದವಳ ಮುಖದಲ್ಲಿ ನಾಚಿಕೆ ಇತ್ತಾ, ಅದು ಕೇವಲ ನನ್ನ ಭ್ರಮೆಯಾ ಅಥವಾ ಬಯಕೆಯಾ ಸರಿಯಾಗಿ ನೆನಪಿಲ್ಲ. ಆ ಮನೆಯ ಯಜಮಾನ ಮಾತ್ರ ನೀರು ಕೊಟ್ಟು, ಜೇನು ತುಪ್ಪದಲ್ಲಿ ಅದ್ದಿ ತೆಗೆದಂಥಾ ಹಲಸಿನ ಹಣ್ಣಿನ ತೊಳೆ ಕೊಟ್ಟು ಯಾಣದ ದಾರಿ ತೋರಿಸಿದ್ದ. ನಾನು ವಾಪಸ್ ಬುಲೆಟ್ ಹತ್ತಿರಕ್ಕೆ ಬಂದಾಗ ಆ ಹುಡುಗಿ ಕಿಟಕಿಯಲ್ಲಿ ನಿಂತಿದ್ಲು. ನಾನು ನೋಡಿದೆ ಅನ್ನೋದು ಗೊತ್ತಾದ ಮೇಲೆ, ಹಂಗೇ ಒಳಗೆ ಹೋಗಿಬಿಟ್ಟಳು. ಅಲ್ಲಿಂದ ಹೊರಟವನು ಯಾಣ ತಲುಪೋ ತನಕ ಹಾಡಿಕೊಂಡದ್ದು ಒಂದೇ ಹಾಡು.
                               'ಕಾಡ ನೋಡ ಹೋದೆ,
                                ಕವಿತೆಯೊಡನೆ ಬಂದೆ'
            ಆರು ವರ್ಷ ಆಗಿಹೋದವಲ್ಲ, ಆ ಕಡೆ ಹೋಗದೇ. ಪೇಟೆಯ ನಾರಾಯಣಸ್ವಾಮಿ ದೇವಸ್ಥಾನದ ಗರ್ಭ ಗುಡಿಯಲ್ಲಿನ ದೀಪ ಇನ್ನೂ ಉರಿಯುತ್ತಿದೆಯಾ..? ಅಲ್ಲಿನ ಮಿಥುನ ಶಿಲ್ಪಗಳಿಗೆ ಮತ್ತಷ್ಟು ಉನ್ಮಾದ ಬಂದಿದೆಯೇನೋ. ಆ ಕಲ್ಯಾಣಿಯಲ್ಲಿ ಈಸು ಬೀಳ್ತಿದ್ದ ಹೆಬ್ಬಾವು ಈಗ ಬದುಕಿರಲಿಕ್ಕಿಲ್ಲ. ತಪೋವನದ ಹಾದಿಯ ಕಾಡಿನಲ್ಲಿ ಅವೆಷ್ಟು ಕೊಡಲಿಗಳಾಡಿವೆಯೋ. ಬಾಳಾ ಸಾಹೇಬನಿಗೆ ಇನ್ನೂ ತನಕ ನಂದಿ ವಿಗ್ರಹದಲ್ಲಿ, ಹರೆಯದ ಹುಡುಗಿಯ ಮೊಲೆ ಹುಡುಕುವಷ್ಟು ಉತ್ಸಾಹ ಉಳಿದಿದೆಯೋ ಇಲ್ಲವೋ. ಪಾರಿಜಾತ ಗಿಡದ ಜೋಕಾಲಿಯಲ್ಲಿ ಕುಂತು ರಾಜಕುಮಾರನ ಕಥೆ ಓದ್ತಿದ್ದ ಹುಡುಗಿಗೆ ಇಷ್ಟೊತ್ತಿಗಾಗಲೇ ಮದುವೆಯಾಗಿ, ಒಂದೆರಡು ಮಕ್ಕಳಾಗಿ, ಸೊಂಟದ ಸುತ್ತ ಎರಡು ಸುತ್ತು ಟೈರುಗಳು ಬಂದು, ಅವನ್ನ ಓವರ್ ಸೈಜಿನ ನೈಟಿಯಲ್ಲಿ ಮುಚ್ಚಿಕೊಳ್ಳುವ ಚಿಂತೆಯೋ ಏನೋ. ಆಕೆಗೆ ನನ್ನ ನೆನಪಾದರೂ ಇದೆಯೋ ಇಲ್ಲವೋ.
            ಈ ಸಲ ಹುಬ್ಬಳ್ಳಿಗೆ ಹೋದಾಗ ಎರಡು ದಿನ ಬಿಡುವು ಮಾಡಿಕೊಂಡು ಮತ್ತೊಮ್ಮೆ ಆ ಕಡೆ ಹೋಗಿ ಬರಬೇಕು. ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ತಿರುಗಣಿಗೆ ಬಿದ್ದ ಮೇಲೆ, ಹಂಗೆಲ್ಲ ಕಾಡು ಸುತ್ತೋ ಸುಖ ಮರೆತಂತಾಗಿದೆ. ತೀರಾ ಬೇಜಾರಾದಾಗ, ಇದೇ ಬನ್ನೇರುಘಟ್ಟದ ಕಾಡು - ನಂದಿ ಬೆಟ್ಟದ ಏರು ಹಾದಿಯ ಮೇಲೆ ಆಕ್ಸಿಲರೇಟರ್ ತಿರುವಿ ಚಟ ತೀರಿಸಿಕೊಂಡದ್ದಷ್ಟೇ. ಈ ಧಡಂ ಧಡಕಿಯ ನಡುವೆ ನನಗೆ ಅದಷ್ಟೇ ಸಮಾಧಾನ. ಆದರೆ, ಶಿರಸಿ - ಯಲ್ಲಾಪುರದ ಕಾಡು ದಾರಿಯಲ್ಲಿ ಸುಸ್ತಾಗೋ ತನಕ ಪುಟಿಗೆ ಬಿದ್ದು ಓಡಿದ್ದ ನನ್ನ ಬುಲೆಟ್ಗೆ, ಇವೆಲ್ಲಾ ಯಾವ ಲೆಕ್ಕ. ನನ್ನ ಸಮಾಧಾನಕ್ಕೆ ಅಂತ ಅಲ್ಲದಿದ್ದರೂ, ಕೊನೆ ಪಕ್ಷ ಅದರ ಖುಷಿಗಾದರೂ ಈ ಸಲ ಮತ್ತೆ ತಪೋವನಕ್ಕೆ, ಪೇಟೆ ನಾರಾಯಣಸ್ವಾಮಿ ದೇವಸ್ಥಾನದ ಅಂಗಳಕ್ಕೆ ಹೋಗಿ ಬರಬೇಕು.