Monday, September 13, 2010

ಅಣ್ಣೀಗೇರಿಯಲ್ಲೊಂದು ಪೀಪ್ಲಿ ಲೈವ್..!

                        ಅಣ್ಣೀಗೇರಿಯಲ್ಲಿ ತಲೆಬುರುಡೆ ಸಿಕ್ಕವಂತೆ. ಇನ್ನೂರರಿಂದ ಮುನ್ನೂರರಷ್ಟಿವೆಯಂತೆ. ರಾಜರ ಕಾಲದಲ್ಲಿ ಶಿರಚ್ಛೇದನ ಮಾಡಿ ಹೂತಿದ್ರಂತೆ. ಈ ಸುದ್ದಿಗಳು ಒಂದರ ನಂತರ ಒಂದರ ಬರುತ್ತಿದ್ದರೆ ನಾನು ಕೂತಲ್ಲಿ ಕೂರಲಾಗದೇ ನಿಂತಲ್ಲಿ ನಿಲ್ಲಲಾಗದೇ ಚಡಪಡಿಸುತ್ತಿದ್ದೆ. ಅದೇ ಟೈಮಿಗೆ, ಅಲ್ಲಿಗೆ ಹೋಗಿ ಬುರುಡೆ ಪತ್ತೆ ಪ್ರಕರಣದ ಬಗ್ಗೆ ಒಂದು ವರದಿ ಮಾಡುವಂತೆ ದೊಡ್ಡವರಿಂದ ಆದೇಶ ಬಂತು. ರೋಗಿ ಬಯಸಿದ್ದೂ ಹಾಲು ಅನ್ನ - ವೈದ್ಯ ಹೇಳಿದ್ದೂ ಹಾಲೂ ಅನ್ನ..! ಎರಡೇ ತಾಸಿನೊಳಗೆ ಬ್ಯಾಗು ತುಂಬಿಕೊಂಡು ಬಸ್ ಹತ್ತಿದ್ದೆ. ಮಾರನೇ ದಿನ ಮಧ್ಯಾಹ್ನದ ಹೊತ್ತಿಗೆ ಬುರುಡೆಗಳ ಸಮ್ಮುಖದಲ್ಲಿ ನಾನು. ನೋಡೋಹಂಗಿತ್ತು ಅಲ್ಲಿನ ಸೀನು...                      
                          ಊರ ಹೊರಗಿನ ಕಚ್ಚಾ ರಸ್ತೆ ಅದು. ಅದರ ಇಕ್ಕೆಲಗಳಲ್ಲಿ ಚರಂಡಿ ಕಾಮಗಾರಿ ಶುರುವಾಗಿತ್ತು. ಅಲ್ಲಿ ಇದ್ದೂ ಇಲ್ಲದಂತಿದ್ದ ಕಾಲುವೆಯ ಮಣ್ಣು ಬಗೆದು ಅಗಲ ಮಾಡೋದಕ್ಕೆ ಬಂದದ್ದು ಬುಲ್ಡೋಜರು. ಕೆಲಸ ನಡೀತಿದ್ದಾಗ ಮೊದಲು ಏಳೆಂಟು ಬುರುಡೆ ಕಂಡಿವೆ. ಅವುಗಳ ಪೈಕಿ ಹೆಚ್ಚಿನವು ಆ ದೈತ್ಯ ಯಂತ್ರದ ಸೊಂಡಿಲಿಗೆ ಸಿಕ್ಕಿ ಪುಡಿಗುಟ್ಟಿ ಹೋಗಿದ್ದವು. ಆಗ ಯಾರೋ ಪುಣ್ಯಾತ್ಮರು ಅವನ್ನ ನೋಡಿ ಲೋಕಲ್ ಪೇಪರ್ನವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅದರಲ್ಲಿ ಬಂದ ಚೋಟುದ್ದ ವರದಿ ನ್ಯೂಸ್ ಚಾನೆಲ್ಲಿನವರ ಕಣ್ಣಿಗೆ ಬಿದ್ದದ್ದೇ ಅವಾಂತರವಾಗಿ ಹೋಯಿತು. ಎಲ್ಲಿ ನೋಡಿದರೂ, ಅಣ್ಣೀಗೇರಿ ಬುರುಡೆ ಪತ್ತೆ ಪ್ರಕರಣದ್ದೇ ಸುದ್ದಿ. ನೋಡ ನೋಡ್ತಿದ್ದಂತೆ ನ್ಯಾಷನಲ್ ಚಾನೆಲ್ಲುಗಳವರೂ ಅದರ ಮಾಹಿತಿ ಕೇಳಿಕೊಂಡು ಫೋನ್ ಮಾಡೋದಕ್ಕೆ ಶುರುಮಾಡಿದ್ದರು. ನಾನು ಹೋಗೋವಷ್ಟರಲ್ಲಿ ಸಿಕ್ಕ ಬುರುಡೆಗಳ ಸುತ್ತ ವರ್ಣರಂಜಿತ ಕಥೆಗಳು ಹುಟ್ಟಿಕೊಂಡುಬಿಟ್ಟಿದ್ದವು.

                          ಅವನ್ನ ನೋಡಿ ಒಂದು ಸಲ ಭ್ರಮನಿರಸನವಾಯಿತು. ಇನ್ನೂರೂ ಇಲ್ಲ - ಮುನ್ನೂರು ಇಲ್ಲ. ಒಂದು ಕಡೆಯಿಂದ ಎಣಸ್ತಾ ಬಂದರೆ ಅಲ್ಲಿ ಎಂಭತ್ತಕ್ಕಿಂತ ಜಾಸ್ತಿ ಬುರುಡೆಗಳಿಲ್ಲ. ಎಡಗಡೆ ಕಾಲುವೆಯಾಚೆ ಸಾಲಾಗಿ ದುಂಡನೆಯ ಬೆಣಚುಗಲ್ಲು ಜೋಡಿಸಿದಂತೆ ಬುರುಡೆಗಳು. ಕಾಲುವೆ ಈಚೆ ರಸ್ತೆಯ ಅಂಚಿಗೆ ಅವುಗಳ ಹತ್ತಿರ ಯಾರೂ ಹೋಗದಂತೆ ಪೊಲೀಸರ ಬ್ಯಾರೀಕೇಡು. ಅದರ ಮೇಲೆ ಗದ್ದ ಊರಿಕೊಂಡು ನಡೀತಿದ್ದ ದೊಂಬರಾಟವನ್ನ ಆಶ್ಚರ್ಯದಿಂದ ನೋಡ್ತಾ ನಿಂತಿದ್ದ ಹಳ್ಳೀ ಜನ. ಅವರಿಂದ ಎರಡು ಮಾರು ದೂರದಲ್ಲಿ ನ್ಯೂಸ್ ಚಾನೆಲ್ಲಿನವರ ಲೈವ್ ಗಾಡಿ. ಅದರಿಂದ, ಅಲ್ಲಿ ನಡೆದದ್ದು ಹಂಗ್ ಹಂಗೇ ಟೀವೀಲಿ ಬರತ್ತಂತೆ ಅನ್ನೋ ಸುದ್ದಿ ಹತ್ತಿ, ಬುರುಡೆ ನೋಡೋದಕ್ಕಿಂತಲೂ ಜಾಸ್ತಿ ಕುತೂಹಲದಿಂದ ಆ ವ್ಯಾನ್ ನೋಡೋದಕ್ಕೆ ಬಂದಿದದ್ದ ಜನ. ಅದರೆದುರಿಗೆ ಮೈಕು ಹಿಡಿದು ನಿಂತಿದ್ದ ರಿಪೋರ್ಟರ್ಗೆ ಲೈವ್ ಕೊಡೋ ಧಾವಂತ.

                          ಹಾಗೆ ಸೇರಿದ್ದ ಜನಜಂಗುಳಿಯ ನಡುವೆ ಊರ ಹಿರಿಯರ ಪೈಕಿ ಕೆಲವರು ಈ ಸಲವಾದರೂ ಟಿ.ವಿ ರಿಪೋರ್ಟರು ತಮ್ಮ ಇಂಟರ್ವ್ಯೂ ಮಾಡಬಹುದು ಅನ್ನೋ ಆಶಾಭಾವನೆಯಿಂದ ಕ್ರಾಪು ತೀಡಿಕೊಂಡು ಬಂದಿದ್ದರು. ಅವರ ಬಾಯ್ತುಂಬ ಹೈದರಾಬಾದ್ ನಿಜಾಮರಿಂದ ಹಿಡಿದು - ಬಹಮನಿ ಸುಲ್ತಾನರ ತನಕ ಜೋರು ಮಾತು. ತಾವು ಮಾತಾಡ್ತಿದ್ದದ್ದು ರಿಪೋರ್ಟರನ ಕಿವಿಗೆ ಬಿದ್ದು, ಅವನು ತಮ್ಮ ಇಂಟರ್ವ್ಯೂ ಮಾಡಿಯಾನು ಅನ್ನೋ ನಿರೀಕ್ಷೆ. ಅಂಥ, ಲೈವ್ ವ್ಯಾನಿನಿಂದ ಅನತಿ ದೂರದಲ್ಲಿ ನಿಂತಿದ್ದು ಬಂದೋಬಸ್ತಿಗೆ ಬಂದಿದ್ದ ಪೊಲೀಸರ ಗಾಡಿ. ಅದರಲ್ಲಿ ಪೇದೆಗಳು ಶೂ ಬಿಚ್ಚಿಟ್ಟು - ಪ್ಯಾಂಟು ಸಡಿಲ ಮಾಡಿಕೊಂಡು ಕಾಲು ಚಾಚಿ ಮಲಗಿದ್ದರು. ಹುಬ್ಬಳ್ಳಿ, ಬೆಂಗಳೂರುಗಳಿಂದ ಯಾರಾದರೂ ವಿ.ಐ.ಪಿ(!)ಗಳು ಬಂದರೆ ಹಂಗೇ  ಇಳಿದು ಹೋಗಿ ಜನರನ್ನ ದೂರ ಸರಿಸಿ, ಬಂದವರಿಗೆ ಬುರುಡೆ ಪರೀಕ್ಷಿಸೋದಕ್ಕೆ ಅನುವು ಮಾಡಿಕೊಟ್ಟು ಮತ್ತೆ ವ್ಯಾನ್ನೊಳಕ್ಕೆ ತೂರಿಕೊಳ್ಳುತ್ತಿದ್ದರು. ಅಲ್ಲೇ ಹತ್ತಿರದಲ್ಲಿದ್ದ ಚಹಾದಂಗಡಿಯವನಿಗೆ ಬುರುಡೆ ಸಿಕ್ಕಾಗಿನಿಂದ ವ್ಯಾಪಾರ ಜೋರಾಗಿದೆ ಅನ್ನೋ ಸಂಭ್ರಮ. ಇನ್ನು ಸ್ಕೂಲ್ ಮಕ್ಕಳು - ಕಾಲೇಜು ಹುಡುಗ ಹುಡುಗಿಯರು ಶೈಕ್ಷಣಿಕ ಪ್ರವಾಸಕ್ಕೆ ಬಂದವರಂತೆ ಸಾಲಾಗಿ ಬಂದು ಬುರುಡೆ ನೋಡೋರು. ಅವರ ಹಿಸ್ಟ್ರಿ ಮೇಸ್ಟ್ರಿಗೆ ಮಕ್ಕಳಿಗೆ ಹೊಸದೇನನ್ನೋ ಕಲಿಸೋ ಹುರುಪು.

                           ಎಲ್ಲಕ್ಕಿಂತ ತಮಾಷೆ ಅನ್ನಿಸಿದ್ದು, ನ್ಯೂಸ್ ಚಾನೆಲ್ಲಿನ ವರದಿಗಾರನ ಧಾವಂತ. ತಾಸಿಗೊಮ್ಮೆ ವಾರ್ತೆಗಳಲ್ಲಿ ಆತನ ಲೈವ್ ಇರತ್ತೆ. ತಾಸಿಗೊಮ್ಮೆ ಬುರುಡೆ ಪತ್ತೆ ಪ್ರಕರಣಕ್ಕೆ ಆತ ಹೊಸಾ angle ಕೊಡಬೇಕು. ಒಂದು ಸಲ ಜನರ ರುಂಡ ಕತ್ತರಿಸಿ ಹೂತು ಹಾಕಿದ ಆರೋಪ ಹೈದರಾಬಾದ್ ನಿಜಾಮರ ಮೇಲೆ. ಇನ್ನೊಂದು ಸಲ ವಿಜಯನಗರ ಸಾಮ್ರಾಜ್ಯ ಗೆದ್ದು ರಣೋತ್ಸಾಹದಲ್ಲಿ ಈ ದಿಕ್ಕಿಗೆ ಬಂದಿತ್ತೆನ್ನಲಾದ ಬಿಜಾಪುರದ ಬಹಮನಿ ಸುಲ್ತಾನರ ಸೈನ್ಯದ ಮೇಲೆ. ಮತ್ತೊಂದು ಸಲ ಸವಣೂರು ನವಾಬರು, ಮಗದೊಮ್ಮೆ ನರಗುಂದ ಬಾಬಾ ಸಾಹೇಬನ ಮೇಲೆ. ಏಕಾಏಕಿ ಪ್ಲೇಗು - ಕಾಲರಾದಂಥ ಮಹಾಮಾರಿಗಳ ಮೇಲೆ ನರಮೇಧದ ಆರೋಪ. ಎಲ್ಲಾ ಮುಗಿದವು ಅನ್ನಿಸಿದಾಗ, ಬುರುಡೆ ಸಿಕ್ಕ ಜಾಗ ದೇಸಾಯರಿಗೆ ಸೇರಿದ್ದು, ಅವರೇ ತಮ್ಮ ದೇಸಗತ್ತಿಯ ವಿರುದ್ಧ ಮಾತಾಡಿದ ಜೀತದಾಳುಗಳ ರುಂಡ ಕತ್ತರಿಸಿ ಹೂತು ಹಾಕಿದ್ದಾರಾ ಅನ್ನೋ ಹೊಚ್ಚ ಹೊಸಾ angle..! ಪಾಪ, ಅದನ್ನ ಕೇಳಿಸಿಕೊಂಡು ದೇಸಾಯರ ಮನೆಯ ಹಣ್ಣು ಹಣ್ಣು ಮುದುಕಿಯೊಬ್ಬಳು ಎಲ್ಲಿ ಕೊಲೆ ಆರೋಪ ತಮ್ಮ ಮೇಲೆ ಬರತ್ತೆ ಅಂತ ಹೆದರಿದಳೋ ಏನೋ. ತುಂಬ ಕಷ್ಟಪಟ್ಟುಕೊಂಡು ಅಲ್ಲೀತನಕ ಬಂದು, "ಈ ಜಮೀನು ನಮಗ ರಾಜರಿಂದ ಇನಾಮು ಬಂದಿದ್ದು. ಅವರೇ ಕೊಂದು ಹೂತಿರಬೇಕು ರುಂಡಾನ. ಸುಮ್ಸುಮ್ನ ನಮ್ ಮ್ಯಾಲೆ ಆರೋಪ ಮಾಡಬ್ಯಾಡ್ರಿ" ಅಂತ ಕೂಗಾಡಿ ಹೋಯಿತು. ಅದನ್ನ ಕೇಳಿಸಿಕೊಂಡ ಮೇಲೆ, ದೇಸಾಯರ ಮನೆತನ ತಡವಿಕೊಳ್ಳೋದಕ್ಕಿಂತ ನವಾಬರು, ಸುಲ್ತಾನರು, ನಿಜಾಮರ ಮೇಲೆ ಆರೋಪ ಮಾಡೋದೇ ಸೇಫು, ಅವರ ವಂಶಸ್ತರಾರೂ ಇರಲಿಕ್ಕಿಲ್ಲ, ಇದ್ದರೂ ಜಗಳಕ್ಕೆ ಬರಲಿಕ್ಕಿಲ್ಲ, ಬಂದರೂ ಈ ಮುದುಕಿಯಷ್ಟು ಘಾಟಿಯಾಗಿರಲಿಕ್ಕಿಲ್ಲ ಅನ್ನಿಸ್ತೋ ಏನೋ ರಿಪೋರ್ಟರ್ಗೆ. ಮತ್ತೆ ಓತಪ್ರೋತ ಲೈವ್ ಶುರು ಮಾಡಿದ. ಅದು ಸಾಕು ಅನ್ನಿಸಿದಾಗ ಇಲ್ಲಿ ಸಿಕ್ಕ ಬುರುಡೆಗಳ ರಕ್ಷಣೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ತಿಲ್ಲ, ಬುರುಡೆ ಸಿಕ್ಕು ಎರಡು ದಿನಗಳಾದರೂ ಇತಿಹಾಸ ಮತ್ತು ಪ್ರಚ್ಯಶಾಸ್ತ್ರ ಇಲಾಖೆಯವರು ಬಂದಿಲ್ಲ, ಬುರುಡೆ ನೋಡೋದಕ್ಕೆ ಬೇರೆ ಬೇರೆ ಊರುಗಳಿಂದ ಜನ ಬರುತ್ತಿದ್ದು ಈಗ ಇದು ಪ್ರೇಕ್ಷಣೀಯ ಸ್ಥಳವಾಗಿದೆ ಅನ್ನೋ ಆಫ್ ಬೀಟ್ ಸ್ಟೋರಿಗಳು.

                         ಅವೆಲ್ಲದರ ಮಧ್ಯೆ ನಿಜವಾದ ಕಿರಿಕಿರಿಯಾದದ್ದು ಅಲ್ಲಿನ ಬಡವರಿಗೆ. ಬಯಲು ಕಡೆ ಹೋಗೋದಕ್ಕೆ ಇದ್ದದ್ದು ಅದೊಂದೇ ಜಾಗ. ಬೆಳಿಗ್ಗೆದ್ದು ಗಂಡಸರು, ಹೊತ್ತು ಮುಳುಗಿದ ಮೇಲೆ ಹೆಂಗಸರು, ಹೊತ್ತು ಗೊತ್ತಿಲ್ಲದೇ ಮಕ್ಕಳು ಚೊಂಬು ಹಿಡಿದು ಬರುತ್ತಿದ್ದುದೇ ಆ ರಸ್ತೆಗೆ. ಅರ್ಧ ಊರಿನ ಭಾರವೆಲ್ಲ ಅಲ್ಲೇ ಇಳಿಯಬೇಕು. ಅಂಥಲ್ಲಿ ಬುರುಡೆಗಳು ಸಿಕ್ಕಿವೆ. ಇತಿಹಾಸ ತಜ್ಞರ ಸಂಶೋಧನೆಗಳಿಗೆ, ಪ್ರಾಚ್ಯವಸ್ತು ಇಲಾಖೆಯವರ ಸಂಭ್ರಮಕ್ಕೆ, ಪತ್ರಕರ್ತರ ಥಾನುಗಟ್ಟಲೆ ಬರಹಕ್ಕೆ - ಗಂಟೆಗೊಂದರ ಲೈವ್ಗೆ ಆಹಾರ ಸಿಗ್ತಿರೋದೇ ಅಲ್ಲಿ. ಅದನ್ನ ಕಟ್ಟಿಕೊಂಡು ಪಾಪ, ಆ ಬಡವರಿಗೇನಾಗಬೇಕು..? ಅವರದು genuine problem..! ಭಾರ ಇಳಿಸಿಕೊಳ್ಳೋದೆಲ್ಲಿ..? ಸಿಗಬಾರದ ಜಾಗದಲ್ಲಿ ಸಿಕ್ಕ ಆ ನಿಷ್ಪಾಪಿ ಬುರುಡೆಗಳನ್ನ ಅದೆಷ್ಟು ಶಪಿಸಿಕೊಂಡು, ಹೊಸ ಜಾಗದ ಹುಡುಕಾಟದಲ್ಲಿ ಹೋದರೋ ಯಾರಿಗೆ ಗೊತ್ತು..?

                             ಈ ಮಧ್ಯೆ ಹೊಸದೊಂದು ತಲೆ ನೋವು ಶುರುವಾಗಿತ್ತು. ಬುರುಡೆ ಸಿಕ್ಕ ಜಾಗದ ಸುತ್ತ ಒಂದು ಎಕರೆ ಜಮೀನನ್ನ ಸಂರಕ್ಷಿತ ಪ್ರದೇಶ ಅಂತ ಘೋಷಿಸಿಬಿಟ್ಟರು ಜಿಲ್ಲಾಧಿಕಾರಿ. ಅಧೆಂಗ್ ಎದ್ದಿತೋ ಗೊತ್ತಿಲ್ಲ, ಅಷ್ಟು ಜಾಗದಲ್ಲಿರೋ ಎಲ್ಲಾ ಮನೆ ಕೆಡವ್ತಾರಂತೆ ಅನ್ನೋ ಸುದ್ದಿ ಎದ್ದು ಬಿಟ್ಟಿತು. ಅಕ್ಕಪಕ್ಕದ ಮನೆಗಳವರು ಗುಂಪು ಗುಂಪಾಗಿ ನಿಂತು, "ಮನೀ ಕೆಡವ್ತಾರಂತ ಹೌದಾ" ಅಂತ ಮಾತಾಡಿಕೊಳ್ಳೋದಕ್ಕೆ ಶುರು ಮಾಡಿದರು. ಅಲ್ಲಿ ಏಕಾಏಕಿ ಕಾಣಿಸಿಕೊಂಡ ಯುವ ವಕೀಲನೊಬ್ಬ "ಪರಿಹಾರದ ಚೆಕ್ಕು ಕೈಗೆ ಸಿಗೂ ತನಕ ಮನೀಗೆ ಕೈ ಹಚ್ಚೂಹಂಗಿಲ್ಲ, ಕೇಸ್ ಹಾಕ್ತೀನಿ ಕೇಸು" ಅಂತ ಆರ್ಭಟಿಸೋದಕ್ಕೆ ಶುರು ಮಾಡಿದ್ದ. ಹುಬ್ಬಳ್ಳಿ ಕೋರ್ಟ್ನಲ್ಲಿ ಸೈಕಲ್ ಹೊಡೆದರೂ ಸಿಗದ ಕೇಸು ಇಲ್ಲಾದ್ರೂ ಸಿಕ್ಕಾವಾ ಅನ್ನೋ ನಿರೀಕ್ಷೆ ಅವಂದು. ಅದೇ ಹೊತ್ತಿಗೆ ಅಲ್ಲೊಬ್ಬ ಕಿತ್ತು ಹೋದ ಇಂಡಿಕಾ ಕಾರಿನಲ್ಲಿ ಬಂದ. ಗರಿ ಗರಿ ಖಾದಿ ಬಟ್ಟೆ, ನಾಲ್ಕು ಬೆರಳಿಗೆ ಉಂಗುರ, ಕೊರಳಲ್ಲಿ ಹೆಬ್ಬರಳ ಗಾತ್ರದ ಚೈನು ಹಾಕಿಕೊಂಡಿದ್ದ ಅವನು, "ಅಧೆಂಗ್ ಮನೀ ಕೆಡವ್ತಾರ, ನಾವು ಹೋರಾಟ ಮಾಡೂಣು, ಹೈವೇ ಬಂದ್ ಮಾಡೂಣು" ಅಂತ ಓಡಾಡೋದಕ್ಕೆ ಶುರು ಮಾಡಿದ್ದ. ತಾಲೂಕ್ ಪಂಚಾಯ್ತಿ ಇಲೆಕ್ಷನ್ ಬಂದಿರದಿದ್ರ ಈ ಸೂಳೇಮಗ ( ನೆನಪಿರಲಿ, ಆ ಕಡೆ ಇದು ಬೈಗುಳವಲ್ಲ ) ಎಲ್ಲಿ ಬರ್ತಿದ್ದ ಅಂತ ಆತನಿಗೆ ಕೇಳಿಸದಂತೆ ಮಾತಾಡಿಕೊಳ್ತಿದ್ರು ಮೂರ್ನಾಲ್ಕು ಹುಡುಗರು. ಬುರುಡೆ ಸಿಕ್ಕ ಜಾಗದ ಸುತ್ತಲಿನ ಬಡವರು ಮಾತ್ರ ನೀವು ನ್ಯಾಯ ಕೊಡಿಸಿದ್ರ ನಿಮ್ ಕಡೆ, ಅವರು ನ್ಯಾಯ ಕೊಡಿಸಿದರೆ ಅವರ ಕಡೆ ಅನ್ನೋ ಹಂಗೆ ವಕೀಲನ ಹಿಂದೆ - ರಾಜಕಾರಣಿಯ ಹಿಂದೆ ಓಡಾಡ್ತಿದ್ರು.

                             ಅದೇ ಟೈಮಿಗೆ ಅಲ್ಲಿಗೆ ಬಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರು ನಿಧಾನವಾಗಿ ಕಾಲುವೆ ಇಳಿದು, ಬುರುಡೆಗಳ ಸಮೀಪ ಹೋದರು. ಅವುಗಳ ಪೈಕಿ ಒಂದನ್ನ ಕಿತ್ತುಕೊಳ್ಳೋದಕ್ಕೆ ಅಂತ ಕೈ ಹಾಕಿದರೋ ಇಲ್ಲವೋ, ಆ ಕಡೆಯಿಂದ ಮತ್ತೊಂದು ಧ್ವನಿ. ಅವು ನಮ್ಮ ಐತಿಹಾಸಿಕ ಆಸ್ತಿ, ಸಾಂಸ್ಕೃತಿಕ ಸಂಪತ್ತು. ಅವನ್ನ ಮುಟ್ಟಬ್ಯಾಡ್ರಿ ಅಂತ ಧಾರವಾಡ ಯೂನಿವರ್ಸಿಟಿಯ ದೀಡುಪಂಡಿತನೊಬ್ಬ ಕೂಗಾಡ್ತಿದ್ದ. ನಿಮ್ಮ ಸಾಂಸ್ಕೃತಿಕ ಸಂಪತ್ತಿನ ಇತಿಹಾಸ ತಿಳಿದುಕೊಳ್ಳೋದಕ್ಕೆ ತಮ್ಮ ತನಿಖೆ ಎಷ್ಟು ಮುಖ್ಯ ಅನ್ನೋದರ ಬಗ್ಗೆ ಡಾ. ಗಜಾನನ್ ನಾಯಕ್ ತಿಳಿಸಿ ಹೇಳಿದ ಮೇಲೆ ಎರಡೇ ಎರಡು ತಗೊಳ್ಳಿ ಅಂದಿದ್ದ ಆ ದೀಡು ಪಂಡಿತ. ಅಷ್ಟು ಹೊತ್ತಿನ ತನಕ ನಾನು ದೂರದಲ್ಲಿ ನಿಂತು ಅದ್ಯಾವುದಕ್ಕೂ ಸಂಬಂಧವಿಲ್ಲದವನ ಹಾಗೆ ಎಲ್ಲವನ್ನೂ ನೋಡ್ತಿದ್ದೆ.

                           ಎರಡು ಬುರುಡೆ ಎತ್ತಿಕೊಂಡು ಬಂದ, ಗಜಾನನ್ ನಾಯಕ್ ತಮ್ಮ ಕಾರಿನ ಕಡೆ ಹೊರಟಿದ್ದರು. ಅವರನ್ನ ಬೆನ್ನತ್ತಿಕೊಂಡು ಹೋಗಿ, "ಇವನ್ನ ನೋಡಿದರ ಏನನ್ನಿಸತ್ತೆ ಸಾರ್" ಅಂತ ಕೇಳಿದೆ. "ಯಾವ ಬುರುಡೆಗೂ ಮ್ಯಾಂಡಿಬಲ್ (ಕೆಳದವಡೆ) ಇಲ್ಲ. ಸುತ್ತಲಿನ ಮಣ್ಣಿನಲ್ಲಿ ಕೂದಲು ಸಿಗಬೇಕಿತ್ತು, ಸಿಕ್ಕಿಲ್ಲ. ತಲೆಬುರುಡೆ ಮತ್ತು ಮೆದುಳಿನ ಮಧ್ಯೆ ಕನೆಕ್ಟೀವ್ ಟಿಶ್ಯೂನ ಒಂದು ತೆಳುವಾದ ಪದರ ಅಂಟಿಕೊಂಡಿರತ್ತೆ ಅದೂ ಇಲ್ಲ" ಅಂದರು. "ಏನಿದರರ್ಥ", ನನ್ನ ಮುಂದಿನ ಪ್ರಶ್ನೆ. "ಅಂದರೆ, ದೇ ಆರ್ ಆಲ್ ಯೂಸ್ಡ್ ಸ್ಕಲ್ಸ್. ಯಾರೋ ಅವನ್ನ ಸಮಾಧಿಯಿಂದ ಹೊರಗೆ ತೆಗೆದಿದಾರೆ. ಆಗ ಕೆಳದವಡೆ ಕಳಚಿಕೊಂಡಿವೆ. ಕೂದಲು ಅಲ್ಲೇ ಉಳಿದುಕೊಂಡಿವೆ. ನಂತರ ಡಿಟರ್ಜಂಟ್ ಹಾಕಿ ಬ್ರಷ್ನಿಂದ ಉಜ್ಜಿ ತೊಳೆದಿದಾರೆ. ಆಗ ಕನೆಕ್ಟೀವ್ ಟಿಶ್ಯೂನ ತೆಳುವಾದ ಪದರ ಹೊರಟುಹೋಗಿದೆ. ನಂತರ ತಂದು ಇಲ್ಲಿ ಹೂತಿದಾರೆ" ಅಂದವರೇ ಇನ್ನೊಂದೇ ಒಂದು ಮಾತು ಹೇಳೋದಿಲ್ಲ ಅನ್ನೋ ಹಾಗೆ ಕಾರು ಹತ್ತಿ ಹೊರಟುಬಿಟ್ಟರು. ಹಾಗಾದರೆ, ಯಾರು ಮಾಡೋದಕ್ಕೆ ಸಾಧ್ಯ ಆ ಕೆಲಸ..? ಥಟ್ಟಂತ ತಲೆಗೆ ಹೊಳೆದಿತ್ತು. ಆ ಭಾಗದಲ್ಲಿ ಸ್ಮಶಾನದಿಂದ ಮನುಷ್ಯರ ಮೂಳೆ ಮತ್ತು ತಲೆಬುರುಡೆ ತೆಗೆದು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾರುವ ಮಾಫಿಯಾ ಇದೆ. ಅದರ ಕಿಂಗ್ ಪಿನ್ ಇಲಿಯಾಸ್ ಖಾಜಿ ಅನ್ನೋನ ಮನೆ ಮೇಲೆ ಎರಡು ವರ್ಷಗಳ ಹಿಂದೆ ರೇಡ್ ಮಾಡಿದ್ದ ಗದಗ್ ಗ್ರಾಮೀಣ ಠಾಣೆ ಪೊಲೀಸರಿಗೆ ನಾಲ್ಕು ಮೂಟೆ ತುಂಬಿ ಉಳಿಯುವಷ್ಟು ಮನುಷ್ಯರ ಮೂಳೆಗಳು ಸಿಕ್ಕಿದ್ದವು. ಆವತ್ತು ತಲೆತಪ್ಪಿಸಿಕೊಂಡಿರುವ ಇಲಿಯಾಸ್ ಖಾಜಿ, ಇವತ್ತಿನ ತನಕ ಪತ್ತೆ ಇಲ್ಲ. ಅದೂ ಅಲ್ಲದೇ ಈಗ ಬುರುಡೆ ಸಿಕ್ಕಿರುವ ಜಾಗದಿಂದ ಐದಾರು ಕಿಲೋಮೀಟರ್ ದೂರದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದ ಆತ ವರ್ಷಗಟ್ಟಲೆ ಅಲ್ಲಿದ್ದ. ಅದು ನೆನಪಾಗುತ್ತಿದ್ದಂತೆಯೇ, ಇಲಿಯಾಸ್ ಖಾಜಿಯ ಬಗ್ಗೆ ಹೆಚ್ಚಿನ ಮಾಹಿತಿ ತಗೊಂಡರಾಯಿತು ಅಂತ ಗದಗ್ ರೂರಲ್ ಪೊಲೀಸ್ ಸ್ಟೇಷನ್ ಕಡೆ ಹೊರಟೆ.

                           ಈ ಕಡೆ ಹಿಂದೂ ಪರ ಸಂಘಟನೆಯವರು ಒಂದು ಪ್ರೆಸ್ ಮಾಡಿ, "ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳೋದಕ್ಕೆ ಒಪ್ಪದ ಹಿಂದೂಗಳ ರುಂಡಗಳನ್ನ ಕತ್ತರಿಸಿ ಮುಸ್ಲಿಂ ದೊರೆಗಳು ಹೂತಿದಾರೆ. ಅಣ್ಣೀಗೇರಿಯಲ್ಲಿ ಸಿಕ್ಕಿರುವ ಬುರುಡೆಗಳು ಮುಸ್ಲಿಂ ರಾಜರ ದಬ್ಬಾಳಿಕೆ ಮತ್ತು ಕ್ರೌರ್ಯಕ್ಕೆ ಸಾಕ್ಷಿ" ಅಂತ ಹೇಳಿಕೆ ಕೊಟ್ಟಿದ್ದರು. ನನಗ್ಯಾಕೋ ಇತ್ತೀಚೆಗೆ ನೋಡಿದದ ಪೀಪ್ಲಿ ಲೈವ್ ಸಿನೆಮಾ ತುಂಬ ನೆನಪಾಗುತ್ತಿತ್ತು.

Wednesday, September 8, 2010

ಕ್ರೈಂ ರಿಪೋರ್ಟರನ ಹಳವಂಡಗಳು...

                                       ಆಫೀಸಿನಲ್ಲೇ ಇದ್ದೆ. ಇಳಿಸಂಜೆ ಹೊತ್ತು. ಲ್ಯಾಂಡ್ ಲೈನ್ ಒಂದೇ ಸಮನೆ ಹೊಡೆದುಕೊಳ್ತಿತ್ತು. ಕೈಯಳತೆಯಲ್ಲೇ ಅದರ ರಿಸೀವರ್ ಇತ್ತು. ಆದರೂ ಅದನ್ನೆತ್ತಿಕೊಳ್ಳೋದೊಂದು ಹಿಂಸೆ. ಯಾರ್ಯಾರದೋ ಫೋನುಗಳು. ನಮ್ಮನೇಲಿ ಹಾವು ಬಂದಿದೆ, ಹಿಡಿಯೋದಕ್ಯಾರನ್ನಾದ್ರೂ ಕಳಿಸಿ, ಗರ್ಭಿಣಿಯರಿಗೆ ಯೋಗ ಕಲಿಸೋ ಪ್ರೋಗ್ರಾಂ ಬಂದಿತ್ತಲ್ಲ ಅದರ ಅಡ್ರೆಸ್ ಕೊಡಿ, ಚಿದಂಬರ ರಹಸ್ಯದಲ್ಲಿ ಒಂದು ದೇವಸ್ಥಾನ ತೋರ್ಸಿದ್ರಲ್ಲ, ಅದಕ್ಕೆ ಯಾವ ರೂಟ್ನಲ್ ಹೋದ್ರೆ ಹತ್ರ..? ಬರೀ ಇಂಥವೇ.
                                            ಫೊನ್ ಎತ್ತುವ ಪುಣ್ಯಾತ್ಮರಾರಾದರೂ ಹತ್ತಿರದಲ್ಲಿ ಇದಾರಾ ಅನ್ನೋಹಂಗೆ ತಲೆ ಎತ್ತಿ ನೋಡಿದೆ. ನನ್ನದೇ ಬ್ಯೂರೋದ ರಿಪೋರ್ಟರ್ ಒಬ್ಬ ಎದ್ದು ಬಂದ. ಇನ್ಯಾವುದೋ ಬೀಟ್ನಲ್ಲಿದ್ದ ಆತ ಕ್ರೈಂ ಬ್ಯೂರೊಗೆ ಬಂದು ಹದಿನೈದು ದಿನಗಳಷ್ಟೇ ಆಗಿದ್ವು. ಅಂಥವರಿಗಿನ್ನೂ ಆ ಲ್ಯಾಂಡ್ ಲೈನ್  ಕಾಲುಗಳನ್ನ ತುಂಬ ಸೀರಿಯಸ್ ಆಗಿ ಅಟೆಂಡ್ ಮಾಡುವ ಸಹನೆ ಇರತ್ತೆ. ಫೋನ್ ಎತ್ತಿಕೊಂಡ ಆತನಿಗೆ ಹತ್ತೇ ಸೆಕೆಂಡುಗಳಲ್ಲಿ ಮೈತುಂಬ ರೋಮಾಂಚನವಾಗಿತ್ತು. "ಹೌದಾ... ಎಲ್ಲಿ" ಅಂದ. ಮುಂದೆ ಆ ಕಡೆಯಿಂದ ಮಾತಾಡ್ತಿದ್ದವರು ಹೇಳುತ್ತಿದ್ದುದನ್ನ ಕೇಳಿಸಿಕೊಳ್ಳುವ ಸಹನೆ ಇರಲಿಲ್ಲ ಆತನಿಗೆ. "ಸರಿ... ಸರಿ... ನಾವೀಗ್ಲೇ ಇಲ್ಲಿಂದ ಹೊರಡ್ತೀವಿ, ಆನೇಕಲ್ ತನಕ ಬರೋದಕ್ಕೆ ಸ್ವಲ್ಪ ಲೇಟಾಗತ್ತೆ, ನಾವು ಬರೋ ತನಕ ಎತ್ತಬೇಡಿ" ಅಂದ. ಯಾವುದೋ ನವವಿವಾಹಿತೆ ನೇಣಿಗೆ ಬಿದ್ದಿರಬೇಕು ಅಂತ ನಾನು ಮನಸಿನಲ್ಲೇ ಅಂದುಕೊಳ್ಳುವುದಕ್ಕೂ, ಪಕ್ಕದಲ್ಲಿದ್ದ ಹಾಳೆಯೊಂದರಲ್ಲಿ ಫೋನ್ ಮಾಡಿದವರ ಮೊಬೈಲ್ ನಂಬರ್ ಗೀಚಿಕೊಂಡ ಆತ, ರಿಸೀವರನ್ನ ಕುಕ್ಕಿದಂತೆ ಕೆಳಗಿಡೋದಕ್ಕೂ ಸರಿ ಹೋಯಿತು. ಚಿದಂಬರ ರಹಸ್ಯವೊಂದನ್ನ ಹೇಳಬೇಕೇನೋ ಅನ್ನೋ ಹಾಗೆ ನನ್ನ ಮುಖದ ಹತ್ತಿರಕ್ಕೆ ಮುಖ ತಂದು ಆನೇಕಲ್ ಹತ್ರ ಒಂದು ಹಾಳು ಬಾವೀಲಿ ಮಗು ಮತ್ತು ಹಸು ಒಟ್ಟೊಟ್ಟಿಗೇ ಬಿದ್ದಿವೆಯಂತೆ, ಡಿ.ಎಸ್.ಎನ್.ಜಿ ( ಅದೇ ಛತ್ರಿ ಇರೋ ಲೈವ್ ಗಾಡಿ ) ಹಾಕಿದರೆ ಬೆಳತನಕ ಓಡಿಸಬಹುದು ಅಂದ. ಮಾತು ಮುಗಿಸುವಷ್ಟರಲ್ಲಿ ಕಾಲು ನೆಲದ ಮೇಲೆ ನಿಲ್ಲೋದೇ ಇಲ್ಲವೇನೋ ಅನ್ನೋವಷ್ಟು ರೋಮಾಂಚನ ಆತನಿಗೆ. ಗಾಬರಿಬಿದ್ದ ನಾನು, ಏನ್ ಎತ್ತಬೇಡಿ ಅಂದೆ ನೀನು ಅಂತ ಕೇಳಿದೆ. ಅದೇ ಮಗು ಮತ್ತು ಹಸೂನ್ನ. ನಾವು ಹೋಗೋವಷ್ಟರಲ್ಲಿ ಎತ್ತಿಬಿಟ್ರೆ ವಿಶ್ಯುವಲ್ ಮಿಸ್ ಆಗತ್ತೆ ಅಂದ. ಒಂದ್ ಸಲ ವಾಕರಿಕೆ ಬಂದು ಹೋಯಿತು. ಹಾಳೆಯಲ್ಲಿದ್ದ ಮೊಬೈಲ್ ನಂಬರನ್ನ ಕಿತ್ತುಕೊಂಡು ಚಕಚಕನೆ ಡಯಲ್ ಮಾಡಿದೆ. ಪುಣ್ಯಾತ್ಮ ಎರಡೇ ರಿಂಗಿಗೆ ಎತ್ತಿಕೊಂಡ. ನೀವು ಮೊದ್ಲು ಫೈರ್ ಬ್ರಿಗೇಡ್ಗೆ ಕಾಲ್ ಮಾಡಿ. ಮೊದ್ಲು ಮಗು ಇತ್ತಿ ನಂತರ, ಹಸು ಎತ್ತಿ. ಅಷ್ಟರಲ್ಲಿ ನಾವು ಬರ್ತೀವಿ ಅಂದೆ.

                                          ಪಕ್ಕದಲ್ಲಿ ಏನೂ ತಿಳಿಯದವನಂತೆ ನಿಂತಿದ್ದ ಕ್ರೈಂ ರಿಪೋರ್ಟರು, ನೀನೆಂಥಾ ಅನ್ ಪ್ರೊಫೆಷನಲ್ ಕಣಯ್ಯಾ ಅನ್ನೋ ಹಾಗೆ ನನ್ನೇ ನೋಡ್ತಿದ್ದ. ಬೇಗ ಹೊರಡು ಸ್ಟೋರಿ ಮಿಸ್ ಆಗತ್ತೆ ಅಂದೆ. ಡಿ.ಎಸ್.ಎನ್.ಜಿ..? ಒಂದೇ ಶಬ್ದದ ಪ್ರಶ್ನೆ ಆತಂದು. ಬೇಡ, ಅದು ತಲುಪೋವಷ್ಟರಲ್ಲಿ ಎಲ್ಲಾ ಮುಗಿದುಹೋಗಿರತ್ತೆ ಅಂದೆ. ನಿರಾಶನಾದ ಆತ ಕ್ಯಾಮೆರಾಮ್ಯಾನ್ನ ಕರೆದುಕೊಂಡು ಕೆಳಗಿಳಿದು ಹೋದ.

                                          ರಿಪೋರ್ಟರ್ ಅಲ್ಲಿಗೆ ತಲುಪುವಷ್ಟರಲ್ಲಿ ಜನ, ತಾವು ತಾವೇ ಸೇರಿಕೊಂಡು ಮಗು ಮತ್ತು ಹಸು ಎರಡನ್ನೂ ಮೇಲೆತ್ತಿದ್ದರು. ಆ ಸ್ಟೋರಿ ಅಂದುಕೊಂಡಂತೆ ಸಿಗಲಿಲ್ಲ. ಕತ್ತೆ ಬಾಲ - ಕುದುರೆ ಜುಟ್ಟು. ಆ ಹಾಳು ಬಾವಿಯೊಳಗೆ ಬಿದ್ದದ್ದು ಯಾರದೋ ಮನೆಯ ಮುದ್ದಿನ ಕೂಸಲ್ಲವಾ..? ನಾವು ಕ್ಯಾಮೆರಾ ತಗೊಂಡು ಬರೋ ತನಕ ಅದನ್ನ ಹಸುವಿನ ಜೊತೆ ಹಾಳು ಭಾವಿಯಲ್ಲಿ ಬಿಟ್ಟಿರಿ ಅನ್ನೋದು ಯಾವ ನ್ಯಾಯ..? ಒಂದು ಎಕ್ಸ್ ಕ್ಲೂಸೀವ್ ಕೊಡುವ ಹಪಹಪಿ, ರಿಪೋರ್ಟರ್ನಲ್ಲಿರುವ ಮಾನವೀಯತೆಯನ್ನ ಕೊಂದು ಬಿಡುತ್ತದಾ..? ಅರ್ಥ ಆಗ್ತಿಲ್ಲ