Friday, April 8, 2011

ಅಜ್ಜನ ಗುಡುಗಿಗೆ ಪಾರ್ಲಿಮೆಂಟ್ ನಡುಗಿದ್ಯಾಕೆಂದರೆ...

                                    ಅಣ್ಣಾ ಹಜಾರೆ. ಒಂದೇ ಒಂದು ವಾರದ ಹಿಂದೆ, ಎಲೆಕ್ಟ್ರಾನಿಕ್ ಸಿಟಿಯ ಯಾವುದೇ ಸಾಫ್ಟವೇರ್ ಕಂಪನಿಯೆದುರಿಗೆ ನಿಂತು ಅಣ್ಣಾ ಹಜಾರೆ ಯಾರು ಅಂತ ಕೇಳಿದ್ರೆ, ಯಾರೋ ರಾಜಕಾರಣಿ ಇರಬೇಕು ಅನ್ನೋ ಉತ್ತರ ಬರ್ತಿತ್ತೇನೋ. ಅಲ್ಪ ಸ್ವಲ್ಪ ಓದಿಕೊಂಡವರ ಪಾಲಿಗೆ ಕೂಡ ಅಣ್ಣಾ ಹಜಾರೆ ಅಂದರೆ, ಅಲ್ಲೆಲ್ಲೋ ಮಹಾರಾಷ್ಟ್ರದಲ್ಲಿ ಗ್ರಾಮೀಣಾಭಿವೃದ್ಧಿಗೆ ಶ್ರಮಿಸ್ತಿರುವ ಗಾಂಧಿವಾದಿ ಅಷ್ಟೇ. ಆದರೆ, ಈ ವೃದ್ಧ ದೆಹಲಿಯ ಜಂತರ್ ಮಂತರ್ ಗೆ ಬಂದು, ನೀವು ಜನಲೋಕಪಾಲ್ ಮಸೂದೆ ಅಂಗೀಕರಿಸೋತನಕ ನಾನು ಊಟ ಮಾಡಲ್ಲ ಅಂತ ಸಂಸತ್ ಭವನಕ್ಕೊಂದು ಮೆಸೇಜ್ ಕಳಿಸಿ ಕುಳಿತುಬಿಟ್ಟರು ನೋಡಿ. ಸರಕಾರ ನಡುಗಿ ಹೋಯಿತು. ದೇಶದ ತುಂಬ ಸಂಚಲನ.
                                  ವರ್ಷಗಳ ಕಾಲ ಬಿ.ಜೆ.ಪಿಯವರು ತಮ್ಮ ಮಿತ್ರ ಪಕ್ಷಗಳ ಜೊತೆ ಸೇರಿಕೊಂಡು ಗಂಟಲು ಹರಕೊಂಡರು. ಆ ಸಭಾತ್ಯಾಗಗಳೇನು, ಧರಣಿ ಸತ್ಯಾಗ್ರಹಗಳೇನು, ಅಬಾಬಾಬಾ... ಯು.ಪಿ.ಎ ಸರಕಾರ ಕ್ಯಾರೆ ಅಂತ ಕೂಡ ಕೇಳಲಿಲ್ಲ. ಪೇಪರುಗಳವರು ಥಾನುಗಟ್ಟಲೆ ಬರೆದರು. ಟಿ.ವಿ ಗಳವರು ಗಂಟೆಗಟ್ಟಲೆ ಚರ್ಚೆ ಮಾಡಿದರು. ಸೋನಿಯಾಗಾಂಧಿ ಧೂಳು ಝಾಡಿಸಿಕೊಂಡು ಎದ್ದು ಹೋದರು. ಈಗ ಈ ತಾತಯ್ಯ, ನಾನು ಉಪವಾಸ ಸತ್ಯಾಗ್ರಹ ಮಾಡ್ತೀನಿ ಅಂತ ಒಂದು ಮಾತು ಹೇಳಿದರು ನೋಡಿ, ಸಿಂಹಾಸನದ ಮೇಲೆ ಕುಂತವರ ಬೆವರಿಳಿದು ಹೋಯಿತು. ದಟ್ ಈಸ್ ಅಣ್ಣಾ ಹಜಾರೆ.
                                 ನಮ್ಮ ನಿಮ್ಮೆಲ್ಲರ ಮನೆಯಲ್ಲಿದ್ದಿರಬಹುದಾದ ತಾತನಂಥವರೇ ಇವರು. ತಮ್ಮ ಹೆಸರು, ಕಿಸನ್ ಬಾಪಟ್ ಬಾಪುರಾವ್ ಹಜಾರೆ ಅನ್ನೋದು ಇವರಿಗೇ ಮರೆತು ಹೋಗಿದ್ಯೇನೋ. ಐದೆಕರೆ ಒಣ ಭೂಮಿ ಇದ್ದ ದಟ್ಟದರಿದ್ರ ರೈತ ಕುಟುಂಬದಲ್ಲಿ ಹುಟ್ಟಿದವರು. ಏಳನೇ ಕ್ಲಾಸಿಗಿಂತ ಮುಂದೆ ಓದಲಿಲ್ಲ. ಚಿಕ್ಕಂದಿನಿಂದಲೇ ಮಹಾತ್ಮಾ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕ ಓದೋ ಗೀಳು. ಭಾರತದ ಸೈನ್ಯದಲ್ಲಿ ಡ್ರೈವರ್ ನೌಕರಿಗೆ ಸೇರಿದರು. 1970ರಲ್ಲಿ ಆದ ಆಕ್ಸಿಡೆಂಟ್ನಲ್ಲಿ ಬದುಕುಳಿದದ್ದೇ ಹೆಚ್ಚು. ಐದು ವರ್ಷಗಳ ನಂತರ ವಾಲಂಟರಿ ರಿಟೈರ್ಮೆಂಟ್ ತೆಗೆದುಕೊಂಡು ವಾಪಸ್ ತಮ್ಮ ಊರು ರಾಲೇಗಾನ್ ಸಿದ್ದಿಗೆ ಬಂದವರು, ಸಾರಾಯಿ ವಿರುದ್ಧ ಹೋರಾಟ ಶುರುಮಾಡಿದರು. ಈ ವ್ಯಕ್ತಿಗೆ ಸ್ವಾರ್ಥ ಇಲ್ಲ ಅನ್ನೋದು ಗೊತ್ತಾಗಿ ಜನ ಬೆಂಬಲಿಸಿಕೊಂಡು ಬಂದರು. ಬರಗಾಲದಿಂದ ಬಸವಳಿದುಹೋಗಿದ್ದ ಊರಿನಲ್ಲಿ ಈ ಮನುಷ್ಯ ಸರಕಾರದಿಂದ ನಯಾಪೈಸೆ ಕೇಳದೇ ಕೆರೆ ಕಟ್ತೀನಿ ಅಂತ ಹೊರಟರು. ಊರ ಜನ ರೊಟ್ಟಿ ಕಟ್ಟಿಕೊಂಡು ಬಂದರು. ನೋಡನೋಡ್ತಿದ್ದಂತೆ ಎಪ್ಪತ್ತೈದು ಊರುಗಳಲ್ಲಿ ಕೆರೆ, ಕಾಲುವೆಗಳಾದವು. ಅದೇ ಜನರನ್ನು ಕಟ್ಟಿಕೊಂಡು ಈ ತಾತ ಶಾಲೆ, ಆಸ್ಪತ್ರೆ ಕಟ್ಟಿದರು. ಆ ಕಟ್ಟುವಿಕೆಯ ಕೆಲಸದಲ್ಲಿ, ಕಿಸನ್ ಬಾಪಟ್ ಬಾಪುರಾವ್ ಹಜಾರೆ, ಅದ್ಯಾವಾಗ ಅಣ್ಣಾ ಹಜಾರೆ ಆದರೋ ಇವರಿಗೇ ಗೊತ್ತಾಗಲಿಲ್ಲ. 1992ರಲ್ಲಿ ಕೇಂದ್ರ ಸರಕಾರ ಅಣ್ಣಾ ಹಜಾರೆಯವರನ್ನ ಹುಡುಕಿಕೊಂಡು ಬಂದು ಪದ್ಮ ಭೂಷಣ ಪ್ರಶಸ್ತಿ ಕೊಟ್ಟಿತು. ಅದರಿಂದ ಸಮಾಧಾನ ಪಟ್ಟುಕೊಂಡು ಮನೇಲಿ ಕುಳಿತುಕೊಳ್ಳದ ಅಣ್ಣಾ, ಇದೇ ರೀತಿ ಹರತಾಳಕ್ಕಿಳಿದು, ಮಹಾರಾಷ್ಟ್ರ ಸರಕಾರ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತರುವಂತೆ ನೋಡಿಕೊಂಡರು. ಅಲ್ಲಿಗೆ, ಅಣ್ಣಾ ಹಜಾರೆ, ಮಹಾರಾಷ್ಟ್ರದ ನೊಂದ ಜನರ ಪಾಲಿನ ನಾಯಕನಾಗಿಹೋಗಿದ್ದರು.


                                        ಮಹಾರಾಷ್ಟ್ರದ ಕಟ್ಟಕಡೆಯ ವ್ಯಕ್ತಿಯ ಕೈಯಲ್ಲಿ ಕೂಡ ಸರಕಾರ ಮಾಡುವ ಲೆಕ್ಕ ಹೊರತೆಗೆಯೋ ಅಸ್ತ್ರ ಕೊಟ್ಟ ಅಣ್ಣನಿಗಿದ್ದದ್ದು ಒಂದೇ ಆಸೆ. ಸಂಸತ್ ಭವನದಲ್ಲಿ ಕುಳಿತಿರುವವರ ನೇತಾಗಳ ಹಗಲುದರೋಡೆಗೊಂದು ಮೂಗುದಾರ ಹಾಕಬೇಕು ಅನ್ನೋದು. ಅದರ ಅಸ್ತ್ರ ಅದೇ ಪಾರ್ಲಿಮೆಂಟಿನ ಮೂಲೆಯೊಂದರಲ್ಲಿ ನಲವತ್ತೆರಡು ವರ್ಷಗಳಿಂದ ಧೂಳು ತಿನ್ನುತ್ತಾ ಬಿದ್ದಿತ್ತು.
                                       ಪ್ರಧಾನಮಂತ್ರಿ, ಕೇಂದ್ರಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗ ಅವುಗಳನ್ನ ತನಿಖೆ ಮಾಡೋದಕ್ಕೆ ಒಂದು ಸಮಿತಿ ಇರಬೇಕು ಅನ್ನೋ ಮಸೂದೆ 1968ರಲ್ಲೇ ಲೋಕಸಭೆಗೆ ಬಂತು. ಅಲ್ಲಿಂದ ಪಾಸಾಗಿ ರಾಜ್ಯಸಭೆಯಲ್ಲಿ ಉಳಿದ ಅದು, ಇವತ್ತಿನ ತನಕ ಅಲ್ಲೇ ಇದೆ. ಅದು ಜಾರಿಗೆ ಬಂದರೆ ಭ್ರಷ್ಠರೆಲ್ಲಾ ಜೈಲಿಗೆ ಹೋಗ್ತಾರೆ ಅಂತೇನೂ ಇಲ್ಲ. ಸಂಸತ್ತಿನಲ್ಲಿರುವ ಹಗಲುದರೋಡೆಕೋರರು ಅದರ ನರ ಕತ್ತರಿಸಿಟ್ಟಿದ್ದಾರೆ. ಅದನ್ನೇ ನಮ್ಮ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯಂಥವರು ಮತ್ತೆ ಬರೆದು ಜನಲೋಕಪಾಲ್ ಬಿಲ್ ಅಂತ ಹೆಸರಿಟ್ಟರು. ಅದು ಒಂದು ವೇಳೆ ಜಾರಿಗೆ ಬಂದರೆ, ಇವತ್ತು ಸಂಸತ್ತಿನಲ್ಲಿರುವವರ ಪೈಕಿ ಅರ್ಧ ಜನ ಜೈಲಲ್ಲಿರ್ತಾರೆ. ಅಂಥ ಮಸೂದೆಯನ್ನ ಅಂಗೀಕರಿಸಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ತಾರಾ ಆ ಕಳ್ಳರು..? ಜನಲೋಕಪಾಲ್ ಮಸೂದೆಯನ್ನ ಕಸದ ಬುಟ್ಟಿಗೆಸೆದು, ಮತ್ತೆ ಅಂಧಾದುಂಧಿ ಶುರುವಿಟ್ಟುಕೊಂಡರು. ಹಾಗೆ ಪಂಕ್ತಿ ಊಟಕ್ಕೆ ಕುಂತಿದ್ದ ಖಬರುಗೇಡಿಗಳು ಬೆಚ್ಚಿಬಿದ್ದದ್ದು, ಈ ತಾತಯ್ಯ ಆ ಮಸೂದೆ ಜಾರಿಗೆ ಬರೋ ತನಕ ನಾನು ಊಟ ಮಾಡಲ್ಲ ಅಂದಾಗ.
                                      ಈ ಅಜ್ಜ, ನಾನು ಉಪವಾಸ ಸತ್ಯಾಗ್ರಹ ಮಾಡ್ತೀನಿ ಅಂತ ಘೋಷಿಸಿದಾಗ, ಏನ್ ಮಾಡ್ತೀಯೋ ಮಾಡ್ಕೋ ಅಂತ ಪಾರ್ಲಿಮೆಂಟಿನಲ್ಲಿ ಕೆಲವರಾದರೂ ಅಂದಿದ್ದರೇನೋ. ಆದರೆ, ದೇಶಕ್ಕೆ ದೇಶವೇ ಇವರ ಜೊತೆ ಎದ್ದು ನಿಂತ ರೀತಿ ನೋಡಿ, ಸಂಸತ್ ಭವನದ ಅಡಿಪಾಯವೇ ಅಲುಗಾಡಿತ್ತು. ಸುಮ್ನೆ ಯೋಚ್ನೆ ಮಾಡಿ, ದೇವರನ್ನೇ ನೆಟ್ಟಗೆ ನಂಬದ ಜನ ನಾವು. ಎಲ್ಲಿಂದಲೋ ಬಂದ ಈ ಅಜ್ಜನ್ನ ಯಾಕೆ ನಂಬಿದ್ವಿ..? ಯಾಕಂದ್ರೆ, ಈ ಅಣ್ಣಾ ಹಜಾರೆ ಸ್ವಾರ್ಥ ಇಲ್ಲ. ಸಮಾಜ ಸೇವೆಗೆ ನಿಂತ ಮೇಲೆ ಮದುವೆ ಮಾಡಿಕೊಳ್ಳುವುದನ್ನೂ ಮರೆತ ವ್ಯಕ್ತಿ ಇವರು. ಹಳ್ಳಿಯ ದೇವಸ್ಥಾನದ ಮೂಲೆಯೊಂದರಲ್ಲಿ ಮಲಗ್ತಾರೆ. ಯಾರು ಕರೆದರೆ ಅವರ ಮನೆಗೆ ಹೋಗಿ ಉಂಡು ಬರ್ತಾರೆ. ಉಳಿದ ಸಮಯವೆಲ್ಲ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಮೀಸಲು. ಯಾವಾಗ ಹೀಗೆ ಸತ್ಯಾಗ್ರಹ ಮಾಡೋದಕ್ಕೆ ತಯಾರಾದ ವ್ಯಕ್ತಿಗೆ ಅದರಿಂದ ವಯಕ್ತಿಕ ಲಾಭ ಏನೂ ಆಗಬೇಕಾಗಿಲ್ಲ ಅನ್ನೋದು ಗೊತ್ತಾಯ್ತೋ, ಜನ ತಿರುಗಿ ನೋಡಿದರು. ಅದೇ ಹೊತ್ತಿಗೆ ಟಿ.ವಿ ಗಳಲ್ಲಿ ಪೇಪರುಗಳಲ್ಲಿ ಇದೇ ಸುದ್ದಿ.
                                   ತಮ್ಮ ಹೋರಾಟಕ್ಕೆ ಇಷ್ಟು ದೊಡ್ಡ ಬೆಂಬಲ ಸಿಗತ್ತೆ ಅಂತ ಸ್ವತಃ ಇವರಾದರೂ ಅಂದುಕೊಂಡಿದ್ದರೋ ಇಲ್ಲವೋ. ದೆಹಲಿಯ ಜಂತರ್ ಮಂತರ್ ಗೆ ಜನ ಸಾಲುಗಟ್ಟಿ ಬರೋದಕ್ಕೆ ಶುರು ಮಾಡಿದರು. ಅದರಲ್ಲೂ ಹುಡುಗ - ಹುಡುಗಿಯರು.
                               ನೆನಪಿರಲಿ, ಅಣ್ಣಾ ಹಜಾರೆ ಜನರೇಷನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಬಡಿದಾಡಿತು. ಜೈಲಿಗೆ ಹೋದವರೆಷ್ಟೋ, ನೇಣುಗಂಭ ಹತ್ತಿದವರೆಷ್ಟೋ. ಅವರು ಭವ್ಯ ಭಾರತದ ಕನಸು ಕಂಡರು. ನಂತರ ಬಂದ ಒಂದಿಡೀ ಜನಾಂಗಕ್ಕೆ ಅದೇನಾಯಿತೋ ಏನೋ. ಭ್ರಷ್ಟಾಚಾರವನ್ನ ಒಪ್ಪಿಕೊಂಡುಬಿಟ್ಟರು. ಕೊಡೋದು ಕೊಟ್ಟರಾಯಿತು ನಮ್ಮ ಕೆಲಸ ಆದರೆ ಸಾಕು ಅನ್ನೋ ಮನೋಭಾವ. ದೇಶದ ಕೊಳ್ಳೆ ಹೊಡೆದ ರಾಜಕಾರಣಿ, ನನ್ನ ಆಸ್ತಿಯನ್ನೇನು ಮುಟ್ಟಿಲ್ಲವಲ್ಲ ಅನ್ನೋ ನಿರ್ಲಜ್ಜ ಸಮರ್ಥನೆ. ಆದರೆ, ನಂತರ ಬಂದ ಈ ಹೊಸ ಜನರೇಷನ್ನಿದೆ ನೋಡಿ. ಇವರಲ್ಲಿ ಪ್ರಶ್ನೆ ಕೇಳೋ ಹುರುಪು. ಈ ಹುಡುಗ ಹುಡುಗಿಯರು ದೇಶ ವಿದೇಶ ನೋಡಿದವರು. ಹೆಂಗೆ, ಸುರೇಶ್ ಕಲ್ಮಾಡಿ ಎಂಬ ನುಂಗುಬಾಕ ಕಾಮನ್ವೆಲ್ತ್ ಗೇಮ್ ಹೆಸರಿನಲ್ಲಿ ಕೊಳ್ಳೆ ಹೊಡೆದ, 2 ಜಿ ಸ್ಪೆಕ್ಟ್ರಮ್ ನೆಪದಲ್ಲಿ ರಾಜಾ ಎಂಬ ಮಂತ್ರಿ ಲಕ್ಷಾಂತರ ಕೋಟಿ ರುಪಾಯಿ ಮನೆಗೆ ಒಯ್ದ ಅನ್ನೋದು ಇವರಿಗೆ ಗೊತ್ತು. ಯುದ್ಧದಲ್ಲಿ ಸತ್ತ ಸೈನಿಕರ ಹೆಂಡತಿ ಮಕ್ಕಳಿಗೆ ಕೊಡಬೇಕಾದ ಮನೆಗಳನ್ನೂ ಕೂಡ ಬಿಡದಷ್ಟು ಬರಗೆಟ್ಟ ರಾಜಕಾರಣಿಗಳು ನಮ್ಮಲ್ಲಿದಾರೆ ಅನ್ನೋದನ್ನ ಇವರು ತಿಳಿದುಕೊಂಡಿದ್ದಾರೆ. ಇವರಿಗೆ ಒಳಗೊಳಗೇ frustration. ಅದೇ ಹೊತ್ತಿಗೆ ಕಂಪ್ಯೂಟರ್ ಎದುರಿಗೆ ಕುಳಿತು ಇಂಟರ್ನೆಟ್ ಓಪನ್ ಮಾಡಿದರೆ ಈಜಿಪ್ತಿನ ಹುಡುಗರು ತಮ್ಮ ಭ್ರಷ್ಟ ಅಧ್ಯಕ್ಷನನ್ನ ಮನೆಗೆ ಕಳಿಸಿದ ಸುದ್ದಿ ಬರತ್ತೆ. ಲಿಬಿಯಾದ ಯುವಕ ಯುವತಿಯರು ಕ್ರೂರಿ ಸರ್ವಾಧಿಕಾರಿಯ ವಿರುದ್ಧ ಯುದ್ಧ ಘೋಷಿಸಿದ ವಿಷಯ ಗೊತ್ತಾಗತ್ತೆ. ಇವರ ಪೈಕಿ ಎಷ್ಟು ಜನರಿಗೆ ಅಂಥದ್ದೊಂದು ಕ್ರಾಂತಿ ನಮ್ ದೇಶದಲ್ಯಾಕೆ ನಡೆಯೋದಿಲ್ಲ ಅಂತ ಒಳಗೊಳಗೇ ಅನ್ನಿಸ್ತಿತ್ತೋ ಏನೋ. ಅಣ್ಣಾ ಹಜಾರೆ ಜಂತರ್ ಮಂತರ್ ಗೆ ಬಂದು ಕುಳಿತುಕೊಳ್ತಿದ್ದಂತೆ, ಕ್ರಾಂತಿಯ ಕಾಲ ಬಂದೇಬಿಟ್ಟಿತು ಅಂತ ಅನ್ನಿಸಿಬಿಟ್ಟಿತೇನೋ ಇವರಿಗೆ. ಎಷ್ಟು ಜನ ಬಂದರು ನೋಡಿ.
                                    ದೆಹಲಿಗೆ ಬರೋದಕ್ಕಾಗದವರು ತಮ್ಮ ತಮ್ಮ ಊರುಗಳಲ್ಲೇ ಧರಣಿಗಿಳಿದರು. ಕರ್ನಾಟಕದಲ್ಲೇ ಕನಿಷ್ಠ ಇಪ್ಪತ್ತು ಊರುಗಳಲ್ಲಿ ಆಂದೋಲನ ಶುರುವಾಗಿದೆ. ಜನ್ಮದಲ್ಯಾವತ್ತೂ ಈ ದೇಶ ಸತ್ತಿದೆಯಾ ಬದುಕಿದೆಯಾ ಅಂತ ನೋಡದ ಸಾಫ್ಟವೇರಿಗಳು, ಶ್ರೀಮಂತರು, ಉದ್ಯಮಿಗಳು ಮೊಟ್ಟಮೊದಲ ಸಲ ಬೀದಿಗಿಳಿದಿದಾರೆ. ಎಲ್ಲರದೂ ಒಂದೇ ಬೇಡಿಕೆ. ಇನ್ನು ಈ ದೇಶ ಲೂಟಿಯಾಗೊದಕ್ ಬಿಡಲ್ಲ, ಜನಲೋಕಪಾಲ್ ಮಸೂದೆ ಜಾರಿಗೆ ಬರಲಿ ಅನ್ನೋದು. ಈಗ ಬಿ.ಜೆ.ಪಿಯವರು ಸೇರಿದಂತೆ ವಿರೋಧ ಪಕ್ಷಗಳವರು ಅಣ್ಣಾ ಹಜಾರೆಯವರಿಗೆ ಬೆಂಬಲ ಕೊಡ್ತಿದಾರೆ. ಕಳ್ರು. ತಾವು ಅಧಿಕಾರದಲ್ಲಿದ್ದಾಗ ಇವರು ಮನಸು ಮಾಡಿದ್ರೆ, ಆ ಮಸೂದೆ ಯಾವತ್ತೋ ಜಾರಿಗೆ ಬಂದಿರೋದು. ಈಗ ಭಾಷಣ ಮಾಡೋದಕ್ ಬಂದಿದಾರೆ. ಹೋರಾಟದ ಕಿಚ್ಚು ನೋಡಿದರೆ, ಇವರ ಮುಖವಾಡ ಕಳಚಿ ಬೀಳೋ ದಿನ ದೂರವಿಲ್ಲ.
                                   ಇದು, ಎಪ್ಪತ್ತು ವರ್ಷಗಳಿಂದ ಜನಸಾಮಾನ್ಯರಲ್ಲಿ ಹೆಪ್ಪುಗಟ್ಟಿದ್ದ ಫ್ರಸ್ಟ್ರೇಷನ್ ಪರಿಣಾಮ. ಇಷ್ಟು ದಿನ ಈ ದೇಶವನ್ನ ಹರಿದು ತಿಂದಿರಿ. ಇನಫ್ ಈಸ್ ಇನಫ್. ಇನ್ನು ಸಾಕು. ಇದನ್ನ ಸಹಿಸಿಕೊಳ್ಳೋದಿಲ್ಲ ಅಂತ ಸಂಸತ್ನಲ್ಲಿ ಕುಳಿತಿರುವ ಗಂಟುಗಳ್ಳರಿಗೆ ಸ್ಪಷ್ಟವಾದ ಸಂದೇಶವನ್ನ ದೇಶದ ಪರವಾಗಿ ಅಲ್ಲಿಗೆ ತಲುಪಿಸೋದಕ್ಕೆ ಬಂದಿರುವವರು ಅಣ್ಣಾ ಹಜಾರೆ. ಅದನ್ನವರು ಸಮರ್ಥವಾಗಿ ಮಾಡ್ತಿದಾರೆ.
                                    ಈ ಚಳವಳಿಗೆ ಇತ್ತೀಚೆಗೆ ತುನೇಷಿಯಾ, ಈಜಿಪ್ತ್, ಲಿಬಿಯಾಗಳಲ್ಲಿ ನಡೆದ ಕ್ರಾಂತಿ ಪ್ರೇರಣೆ ಕೊಟ್ಟಿತಾ..? ಹೌದು ಅಂತ ಹೇಳೋದು ಕಷ್ಟ. ಅಲ್ಲಿ ನಡೆದ ಕ್ರಾಂತಿ ಕ್ರೂರಿ ಸರ್ವಾಧಿಕಾರಿಗಳ ವಿರುದ್ಧ. ಪುಣ್ಯಕ್ಕೆ ಇಲ್ಲಿ ಅಂಥದ್ದಿಲ್ಲ. ಅಲ್ಲಿ ನಡೆದ ದಂಗೆಗಳಿಗೆ ಇಂಥವನೇ ನಾಯಕ ಅಂತಲೇ ಇರಲಿಲ್ಲ. ಅದರಲ್ಲೂ ಈಜಿಪ್ತಿನಲ್ಲಿ. ಅಲ್ಲಿನ ಹುಡುಗ-ಹುಡುಗಿಯರು ಫೇಸ್ ಬುಕ್ನಲ್ಲಿ, ಟ್ವಿಟರ್ನಲ್ಲಿ ಮಾತಾಡಿಕೊಂಡು ಒಂದು ಮುಂಜಾನೆ ಕೈರೋದ ತೆಹರೀರ್ ಸ್ಕ್ವೇರ್ನಲ್ಲಿ ಸೇರಿದರು. ನೋಡನೋಡ್ತಿದ್ದಂತೆಯೇ ಆ ಸಂಖ್ಯೆ ಒಂದು ಲಕ್ಷದಷ್ಟಕ್ಕೆ ಬಂದು, ಅಧ್ಯಕ್ಷ ಮುಬಾರಕ್ ಕುರ್ಚಿ ಬಿಟ್ಟು ಇಳಿಯಬೇಕು ಅಂತ ಒತ್ತಾಯಿಸಿದರು. ಕ್ರಾಂತಿ ದೇಶದ ತುಂಬ ಹರಡಿತು. ಬಂಡಾಯವೆದ್ದವರ ಮೇಲೆ ಗುಂಡು ಹಾರಿಸೋದಿಲ್ಲ ಅಂತ ಪೊಲೀಸರು, ಮಿಲಿಟರಿಯವರು ಘೋಷಿಸಿಬಿಟ್ಟರು. ಮುಬಾರಕ್ ಟಿ.ವಿ, ರೇಡಿಯೋ, ಪೇಪರು, ಇಂಟರ್ನೆಟ್ಟುಗಳನ್ನೆಲ್ಲ ಬ್ಯಾನ್ ಮಾಡಿದರೂ ಜನಾಂದೋಲನ ನಿಲ್ಲಿಸೋದಕ್ಕಾಗಲಿಲ್ಲ. ಬದಲಾವಣೆ ಬಂದೇ ಬಿಟ್ಟಿತು.
 
                                   ಆದರೆ ಇಲ್ಲಿ ಯಾರನ್ನೂ ಕುರ್ಚಿ ಬಿಟ್ಟು ಇಳಿಸೋದಕ್ಕೆ ಅಣ್ಣಾ ಹಜಾರೆ ಉಪವಾಸ ಕುಳಿತಿಲ್ಲ. ಗದ್ದುಗೆಯ ಮೇಲೆ ಕುಳಿತವರು ಹಗಲುದರೋಡೆಗಿಳಿಯದಂತೆ ಕಾಯೋದಕ್ಕೆ ಒಂದು ಸಮಿತಿ ಇರಬೇಕು ಅನ್ನೋದೊಂದೇ ಇವರ ಬೇಡಿಕೆ. ಆ ಸಮಿತಿಯಲ್ಲಿ ಅರ್ಧದಷ್ಟು ಜನ ಸಾಮಾನ್ಯ ಜನರಿರಲಿ. ಭ್ರಷ್ಟಾಚಾರದ ಆರೋಪ ಬಂದಾಗ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಶಿಕ್ಷೆ ಕೊಡೋ ಅಧಿಕಾರ ಆ ಸಮಿತಿಗಿರಲಿ ಅಂತ ಇವರಂತಾರೆ. ಅದಕ್ಕೊಂದು ವೇಳೆ ಹ್ಞೂಂ ಅಂದುಬಿಟ್ಟರೆ, ಪಾರ್ಲಿಮೆಂಟಿನಲ್ಲಿರೋ ಅರ್ಧಕ್ಕರ್ಧ ಜನ ಜೈಲಿನಲ್ಲಿ ಮುದ್ದೆ ಮುರೀಬೇಕಾಗತ್ತೆ ಅಂತ ಗೊತ್ತು ಅವರಿಗೆ. ಅದಕ್ಕೇ ಸಮಿತಿ ಮಾಡೋದಕ್ಕೆ ಒಪ್ತಿಲ್ಲ. ನೂರೆಂಟು ನೆಪ ಹೇಳ್ತಿದಾರೆ. ಸಮಿತಿ ಮಾಡಿದ್ರೂ ಅದಕ್ಕೆ ಅಧ್ಯಕ್ಷರಾಗಿ ಮಂತ್ರಿಗಳೇ ಇರಬೇಕು ಅನ್ನೋದು ಕೇಂದ್ರ ಸರಕಾರದ ಇತ್ತೀಚಿನ ಮಾತು.
              ಇದಕ್ಕೆ ಆಂದೋಲನಕ್ಕೆ ನಿಂತವರು ಒಪ್ತಿಲ್ಲ. ಈ ಸಲ ಆಗಿದ್ದು ಆಗಿಹೋಗಲಿ ಅನ್ನೋದು ಇವರ ನಿರ್ಧಾರ. ಒಂದು ಮಾತು ನೆನಪಿರಲಿ, ಇದೊಂದು ಚಳವಳಿಯಿಂದ ಭ್ರಷ್ಟರೆಲ್ಲ ಜೈಲಿಗೆ ಹೋಗ್ತಾರೆ, ಭಾರತ ರಾಮರಾಜ್ಯ ಆಗಿಬಿಡತ್ತೆ ಅಂತಲ್ಲ. ಒಬ್ಬ ಮುಬಾರಕ್ ಹೋದ ಮಾತ್ರಕ್ಕೆ ಈಜಿಪ್ತ್ ಉದ್ಧಾರವಾಗಲ್ಲ. ಒಬ್ಬ ಗಡಾಫಿ ತೊಲಗಿದ ಮಾತ್ರಕ್ಕೆ ಲಿಬಿಯಾದಲ್ಲಿ ಸುವರ್ಣ ಯುಗ ಶುರುವಾಗಲ್ಲ. ಒಂದು ಬದಲಾವಣೆಯ ಗಾಳಿ ಬೀಸತ್ತೆ ಅಷ್ಟೆ. ಈಗ ಬೀದಿಗಿಳಿದಿರುವವರ ಪೈಕಿ ಕಾಲು ಭಾಗ ಜನ, ಇನ್ಯಾವತ್ತೂ ನಾವು ಯಾರಿಗೂ ಲಂಚ ಕೊಡಲ್ಲ, ಲಂಚ ಕೇಳಿದವರನ್ನ ಸುಮ್ಮನೆ ಬಿಡಲ್ಲ ಅಂತ ಪ್ರತಿಜ್ಞೆ ಮಾಡಿದ್ರೆ ಅಷ್ಟು ಸಾಕು. ಮುಂದ್ಯಾವತ್ತಾದ್ರೂ, ಎ ರಾಜಾನಂಥ ಮಂತ್ರಿ ಕೋಟಿಗಟ್ಟಲೆ ಲಂಚ ತೆಗೆದುಕೊಳ್ಳುವಾಗ ಒಂದು ಸಲ ಇದನ್ನೆಲ್ಲ ನೆನಪು ಮಾಡಿಕೊಂಡರೂ ಸಾಕು. ಅದು ಆಗಲಿ ಅಂತಾನೇ ಇದನ್ನ ಬೆಂಬಲಿಸ್ತಿರೋದು. ಏನೇ ಆಗಲಿ, ತಮ್ಮ ದೇಶಕ್ಕಾಗಿ ಹೋರಾಡೋ ಸೌಭಾಗ್ಯ ಎಲ್ಲರಿಗೂ ಸಿಗಲ್ಲ. ನಮ್ಮ ತಾತನ ಪೀಳಿಗೆಯವರಿಗೆ ಸ್ವಾತಂತ್ರ್ಯ ಹೋರಾಟ ಮಾಡೋ ಅವಕಾಶ ಸಿಕ್ಕಿತ್ತು. ನಮ್ಮ ತಂದೆಯ ಪೀಳಿಗೆಯವರು ಕೊನೆಪಕ್ಷ ಎಮರ್ಜನ್ಸಿ ವಿರುದ್ಧದ ಹೋರಾಟ ನೋಡಿದರು. ನಮಗೆ, ಯುವ ಜನರಿಗೆ ಈ ಆಂದೋಲನದಲ್ಲಿ ಭಾಗವಹಿಸುವ ಸೌಭಾಗ್ಯ. ಮಿಸ್ ಮಾಡಿಕೊಂಡರೆ ನಮ್ಮಷ್ಟು ಅವಿವೇಕಿಗಳು ಇನ್ಯಾರೂ ಇಲ್ಲ.