Friday, May 18, 2012

ಸದ್ದಿಲ್ಲದೇ ಕುಬೇರನಾದನಲ್ಲ ಸೋನಿಯಾ ಅಳಿಯ..!



                                    ಗೆಳೆಯ ಪ್ರೇಮ್, facebookಲ್ಲಿ ಒಂದು ವಿಡಿಯೋ ಕಳಿಸಿದ್ರು. ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಗಂಡ ರಾಬರ್ಟ್  ವದ್ರಾ ಅಲಿಯಾಸ್ ರಾಬರ್ಟ್ ವಡೇರಾ ಅಧೆಂಗೆ ಹತ್ತೇ ಹತ್ತು ವರ್ಷಗಳಲ್ಲಿ ಸಾವಿರಾರು ಕೋಟಿಯ ಒಡೆಯನಾಗಿಬಿಟ್ಟರು ಅನ್ನೋದನ್ನ ವಿವರಿಸುವ ವಿಡಿಯೋ ಅದು. ಅದನ್ನ ಭಾರತದಲ್ಲಿ ನಿಷೇಧಿಸಲಾಗಿದೆ. ಇಂಟರ್ನೆಟನಲ್ಲಿ ವಿಡಿಯೋಗಳ ಅತಿ ದೊಡ್ಡ ಗ್ಯಾಲರಿ ಅನ್ನಿಸಿಸಿಕೊಂಡಿರೋ youtube website ಕಳೆದ ವರ್ಷ ಒಟ್ಟು 12,426 ವಿಡಿಯೋಗಳನ್ನ ಭಾರತದಲ್ಲಿ ನಿಷೇಧಿಸಿದೆಯಂತೆ. ಅವುಗಳ ಪೈಕಿ 12,213 ವಿಡಿಯೋಗಳು ಸೋನಿಯಾ ಗಾಂಧಿಯ ವಿರುದ್ಧ ಇದ್ದವು ಅನ್ನೋ ಮಾಹಿತಿ ಇದೆ. ಅದೆಷ್ಟು ನಿಜಾನೋ ಗೊತ್ತಿಲ್ಲ. ಆದ್ರೆ, ಇದೇನ್ರೀ ಇದೂ ರಾಬರ್ಟ್ ವದ್ರಾ ಕಥೆ..? 1997ರ ತನಕ ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಆ ಮನುಷ್ಯನನ್ನ ಇವತ್ತು ಭಾರತದ ಕಾರ್ಪೊರೇಟ್ ಜಗತ್ತು "ಅತಿ ವೇಗವಾಗಿ ಕೋಟ್ಯಾಧೀಶನಾದ ವ್ಯಾಪಾರಿ" ಅನ್ನುತ್ತಿದೆ. ಟಾಟಾಗಳು ಸಾವಿರ ಕೋಟಿಯ ಸರದಾರರಾಗಲು ನೂರು ವರ್ಷ ತಗೊಂಡರು. ಧೀರೂಬಾಯಿ ಅಂಬಾನಿಯವರದ್ದು ಅದೇನೇ ವೇಗದ ಬೆಳವಣಿಗೆ ಅಂದರೂ ಅದು ಐವತ್ತು ವರ್ಷಗಳ ಶ್ರಮ. ಆದರೆ, ರಾಬರ್ಟ್ ಇವತ್ತಿಗಾಗಲೇ ಎರಡು ಸಾವಿರದ ನೂರು ಕೋಟಿಗೆ ಬಾಳೋ ಮನುಷ್ಯ ಅನ್ನೋ ಅಂದಾಜು ಇದೆ. ಮದುವೆ ಅನ್ನೋದು ಒಬ್ಬ ಮನುಷ್ಯನ ನಸೀಬನ್ನ ಈ ಪರಿ ತೆರೆದುಬಿಡತ್ತಾ..?



                                                                   ಗುಜರಿ ಅಂಗಡಿಯವನು..!



                                   ಉತ್ತರ ಪ್ರದೇಶದ ಮುರಾದಾಬಾದ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಹಿತ್ತಾಳೆ ಮತ್ತು ಕಟ್ಟಿಗೆಯ ಕರಕುಶಲ ವಸ್ತುಗಳ ವ್ಯಾಪಾರ ಮಾಡಿಕೊಂಡಿದ್ದ ರಾಜಿಂದರ್ ವದ್ರಾ ಮತ್ತು ಆತನ ಸ್ಕಾಟ್ಲ್ಯಾಂಡ್ ಮೂಲದ ಕ್ರಿಶ್ಚಿಯನ್ ಹೆಂಡತಿ ಮೌರೀನ್ ರ ಮೂರು ಮಕ್ಕಳ ಪೈಕಿ ಹಿರಿಯವನು ಈತ. ಕೆಲವು ಕಾಲ ರಾಬರ್ಟ್ ವದ್ರಾ ಗುಜರಿ ವಸ್ತುಗಳ wholesale ವ್ಯಾಪಾರ ಮಾಡಿಕೊಂಡಿದ್ದ, ಕೃತಕ ಆಭರಣಗಳ ರಫ್ತು ವ್ಯವಹಾರ ಮಾಡ್ತಿದ್ದ ಅಂತಾರೆ. ಆದರೆ 1997ರಲ್ಲಿ ಯಾರೋ ಫ್ರೆಂಡ್ ಮನೇಲಿ ಪ್ರಿಯಾಂಕಾ ಗಾಂಧಿ ಪರಿಚಯವಾಗಿ, ಅದು ಪ್ರೇಮ ಆಗಿ ಮುಂದೆ ಒಂದು ವರ್ಷದೊಳಗೆ ಮದುವೆ ಕೂಡ ಆಗೋದರೊಂದಿಗೆ ಇವನ ಖದರೇ ಬದಲಾಗಿಹೋಯಿತು.

                                                         ಸೋನಿಯಾ ತವರಿನಲ್ಲಿ ಅಂಗಡಿ ಇದೆ..!

                                   ಹಾಗೆ ನೋಡಿದರೆ ಈ ಮನುಷ್ಯ ಕಾರಣವಲ್ಲದ ಕಾರಣಗಳಿಗೆ ಸುದ್ದಿಯಾದದ್ದೇ ಹೆಚ್ಚು. ಮೊದಲ ಕಾರಣ, ರಾಬರ್ಟ್ ವದ್ರಾ ಈ ದೇಶದ ಅತ್ಯಂತ ಪ್ರಭಾವಶಾಲಿ ಕುಟುಂಬದ ಅಳಿಯ ಅನ್ನೋದು. ಅದನ್ನ ಹೊರತು ಪಡಿಸಿದರೆ fitness freak ಅನ್ನೋ ಕಾರಣಕ್ಕೆ, super bikeಗಳ ಖಯಾಲಿ ಇಟ್ಟುಕೊಂಡಿರೋನು ಅನ್ನೋದಕ್ಕೆ ಆವಾಗಾವಾಗ ಪತ್ರಿಕೆಗಳಲ್ಲಿ ಟಿ.ವಿಗಳಲ್ಲಿ ಕಾಣಿಸಿಕೊಳ್ತಿದ್ದ. ಆದರೆ, ಸದ್ದಿಲ್ಲದೇ ತನ್ನದೇ ಒಂದು ಬಿಸಿನೆಸ್ ಸಾಮ್ರಾಜ್ಯ ಸ್ಥಾಪಿಸಿಬಿಟ್ಟಿದ್ದ. ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ದೊಡ್ಡ ಮಟ್ಟದ ಭೂಮಿಗೆ ಒಡೆಯನಾಗಿದ್ದ. ರಾಬರ್ಟ್ ವದ್ರಾ ಭೂಮಿ ಖರೀದಿಸಿದ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳೇ ಇದ್ದುದ್ದನ್ನ ಕೇವಲ ಕಾಕತಾಳೀಯ ಅಂದ್ರೆ ಅನೇಕರು ನಗ್ತಾರೆ. ಈ ಮಧ್ಯೆ ಪಿತರಾರ್ಜಿತವಾಗಿ ಬಂದಿದ್ದ ಕೃತಕ ಆಭರಣಗಳು - ಕರಕುಶಲ ವಸ್ತುಗಳ ವ್ಯವಹಾರವನ್ನು  ಅರ್ಟಿಕ್ಸ್ ಅನ್ನೋ ಬ್ರಾಂಡನಡಿ ದೊಡ್ಡದಾಗಿ ಬೆಳೆಸಿದ ರಾಬರ್ಟ್ ವದ್ರಾ ಇಟಲಿಯಲ್ಲಿ ಮಾರಾಟ ಮಳಿಗೆ ತೆಗೆದ. ಅಲ್ಲಿ, ಭಾರತೀಯ ಮೂಲದ ಪ್ರಾಚ್ಯವಸ್ತುಗಳ ವ್ಯವಹಾರ ನಡೆಯತ್ತೆ. ಸೋನಿಯಾ ಗಾಂಧಿಯವರ ತಂಗಿ ಅನುಷ್ಕಾ ಮಾಯಿನೋ, "ಗಣಪತಿ" ಅನ್ನೋ ಹೆಸರಿನ ತನ್ನ ಮಳಿಗೆಗೆ ಕಳ್ಳದಾರಿಯಲ್ಲಿ ಭಾರತದ ಪ್ರಾಚ್ಯವಸ್ತುಗಳನ್ನ ತರಿಸಿಕೊಂಡು ಅವುಗಳನ್ನ ಲಂಡನ್ನಲ್ಲಿ ಕೋಟ್ಯಂತರ ಬೆಲೆಗೆ ಹರಾಜು ಹಾಕ್ತಾಳೆ ಅಂತ ಇತ್ತೀಚೆಗೆ ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದರು. ರಾಬರ್ಟ್ ವದ್ರಾರ export ವ್ಯವಹಾರ ಸೋನಿಯಾ ಗಾಂಧಿಯವರ ಹುಟ್ಟು ದೇಶ ಇಟಲಿಯಲ್ಲಿ ಬೆಳೆದದ್ದು - ಅದೇ ರೀತಿಯ ವ್ಯವಹಾರದಲ್ಲಿ ಸೋನಿಯಾ ಮೇಡಂ ಸಹೋದರಿ ಕೂಡ ಕಾಣಿಸಿಕೊಂಡದ್ದು ಕಾಕತಾಳೀಯ ಅಂದರೂ ಜನ ನಗ್ತಾರೆ. ಇನ್ನು ಯಾವುದೇ ಭದ್ರತಾ ತಪಾಸಣೆ ಇಲ್ಲದೇ ವಿಮಾನ ಪ್ರಯಾಣ ಮಾಡಬಲ್ಲ ವಿ.ವಿ.ಐ.ಪಿಗಳ ಲಿಸ್ಟ್ ನಲ್ಲಿ ರಾಬರ್ಟ್ ವದ್ರಾರ ಹೆಸರನ್ನ ಸೇರಿಸಿ 2005ರ ಸಪ್ಟೆಂಬರ್ 26ರಂದು ಅಧಿಸೂಚನೆ ಹೊರಡಿಸಿತು ಕೇಂದ್ರ ಸರಕಾರ. ನಮ್ಮ ಭೂಸೇನೆ, ವಾಯು ದಳ, ನೌಕಾ ಪಡೆಯ ಮುಖ್ಯಸ್ಥರಿಗೆ ಇಲ್ಲದ ಈ ಸೌಲಭ್ಯವನ್ನ, ಸ್ವತಃ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಇಲ್ಲದ ಈ ಫೆಸಿಲಿಟಿಯನ್ನ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿಲ್ಲದ ರಾಬರ್ಟ್ ವದ್ರಾಗೆ ಕೊಡೋದಕ್ಕೂ ಅವರ ಎಕ್ಸ್ ಪೋರ್ಟ್  ವ್ಯವಹಾರಕ್ಕೂ ಸಂಬಂಧ ಇತ್ತೆಂದು ತುಂಬ ಆರೋಪಗಳು ಕೇಳಿಬಂದವು. ಯಾಕೋ ಏನೋ ಅದು ಹಂಗ್ಹಂಗೇ ಮುಚ್ಚಿಹೋಯಿತು.

                                                   ಕಾಮನ್ವೆಲ್ತು - 2ಜಿ ತರಂಗಾಂತರವು..!

                                   ನಿಜಕ್ಕೂ ಜನ ರಾಬರ್ಟ್ ವದ್ರಾ ಕಡೆ ಹುಬ್ಬೇರಿಸಿ ನೋಡಿದ್ದು ಆತ ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಕಂಪನಿ D.L.Fನ ಪಾಲುದಾರನಾದಾಗ. ನಂತರ D.L.Fಗೆ ಕಾಮನ್ ವೆಲ್ತ್ ಗೇಮ್ಗಳ ಕಾಮಗಾರಿಯಲ್ಲಿ ಭಾರೀ ಟೆಂಡರ್ ಗಳು ಸಿಕ್ಕವು, ಸುರೇಶ್ ಕಲ್ಮಾಡಿ ಅನೇಕ ನಿಯಮ ಗಾಳಿಗೆ ತೂರಿ ಆ ಕಂಪನಿಗೆ ಉಪಕಾರ ಮಾಡಿದರು. ಡಿ.ಎಲ್.ಎಫ್, ಸೋನಿಯಾ ಅಳಿಯನ ರಾಬರ್ಟ್ ವದ್ರಾ ಒಡೆತನದ ಕಂಪನಿಗಳಿಗೆ ಯಾವುದೇ ಭದ್ರತೆ ಇಲ್ಲದೇ ಕೋಟ್ಯಂತರ ರುಪಾಯಿ ಸಾಲ ಕೊಟ್ಟಿದೆ. ಇವತ್ತಿನ ವ್ಯವಹಾರಿಕ ಜಗತ್ತಿನಲ್ಲಿ ಭದ್ರತೆ ಇಲ್ಲದೇ ಪಡೆಯುವ ಸಾಲವನ್ನ ಲಂಚ ಅಂತಲೇ ಪರಿಗಣಿಸಲಾಗೋದು. ಹಾಗೆ ತಮ್ಮ ಕಲೈಂಜರ್ ಟಿ.ವಿಗೆ ಭದ್ರತೆ ಇಲ್ಲದ ಸಾಲಗಳನ್ನ ಪಡೆದ ಕಾರಣಕ್ಕೇ ಇವತ್ತು ಕನಿಮೋಳಿ ಕಂಬಿ ಎಣೆಸ್ತಿರೋದು. ಆದರೆ, ಕಾಮನ್ವಲ್ತ್ ಗೇಮ್ಸ್ ಹಗರಣದ ತನಿಖೆಗೆ ಮಾತ್ರ ರಾಬರ್ಟ್ ವದ್ರಾ ವ್ಯವಹಾರಗಳು ಒಳಪಡಲೇ ಇಲ್ಲ.
                                  ಯುನಿಟೆಕ್ ಅನ್ನೋ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ರಾಬರ್ಟ್ ವದ್ರಾ ಶೇಕಡಾ 20 ರಷ್ಟು ಶೇರು ಕೊಂಡುಕೊಂಡರು. ನಂತರ ನೋಡಿದರೆ, ಮೊಬೈಲ್ ಕ್ಷೇತ್ರದಲ್ಲಿ ನಯಾಪೈಸೆ ಅನುಭವ ಇಲ್ಲದ ಆ ಕಂಪನಿಗೆ ಕೇವಲ 1658 ಕೋಟಿಗೆ 2ಜಿ ತರಂಗಾಂತರ ಕೊಡಲಾಯಿತು. ಕೆಲವೇ ತಿಂಗಳುಗಳ ನಂತರ ಯುನಿಟೆಕ್ ಕಂಪನಿ ಅದರ ಶೇ 67ರಷ್ಟನ್ನ ನಾರ್ವೆ ಮೂಲದ ಟೆಲಿನಾರ್ ಗೆ  ಮಾರಿದ್ದು ಅನಾಮತ್ತು 6,135 ಕೋಟಿಗೆ. ಟೆಲಿನಾರ್ ಕಂಪನಿಗೆ ಪಾಕಿಸ್ತಾನದಲ್ಲಿ ಸಂಶಯಾಸ್ಪದ ವ್ಯವಹಾರಗಳಿವೆ, ಅದು ಭಾರತಕ್ಕೆ ಪ್ರವೇಶಿಸುವುದರಿಂದ ರಾಷ್ಟ್ರದ ಭದ್ರತೆಗೆ ಧಕ್ಕೆ ಆಗಬಹುದು ಅಂತ ಗೃಹ ಇಲಾಖೆ ಹೇಳಿದರೂ ಸಹ ಆ ವ್ಯವಹಾರ ಸರಳವಾಗಿ ಮುಗಿದು ಹೋಯಿತು. ಈಗ 2ಜಿ ಹಗರಣದ ತನಿಖೆಯಲ್ಲಿ ಆ ವಿಷಯದ ಪ್ರಸ್ತಾಪವೇ ಇಲ್ಲ.

                                                         ಮನೆಅಳಿಯನ ಕಂಪನಿಗಳೆಷ್ಟು..?

                                  ರಾಬರ್ಟ್ ತನ್ನ ತಾಯಿಯನ್ನೇ ಪಾಲುದಾರಳನ್ನಾಗಿಸಿಕೊಂಡು ಆರಂಭಿಸಿದ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಡ್ ಗೆ  ದಕ್ಷಿಣ ದೆಹಲಿಯ "ಹಿಲ್ಟನ್ ಗಾರ್ಡನ್ ಇನ್" ಪಂಚತಾರಾ ಹೊಟೆಲ್ ನಲ್ಲಿ ಪಾಲುದಾರಿಕೆ ಇದೆ. ಬ್ಲೂ ಬ್ರೀಜ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಅನ್ನೋ ಹೆಸರಿನಲ್ಲಿ ಖಾಸಗಿ ವಿಮಾನಗಳನ್ನ ಬಾಡಿಗೆಗೆ ಕೊಡುವ ವ್ಯವಹಾರ ಶುರುಮಾಡಿದ್ದಾರೆ ರಾಬರ್ಟ್. ಜೊತೆಗೆ ತಮ್ಮ ಓಡಾಡಕ್ಕೆ ಎರಡು ಪ್ರತ್ಯೇಕ ವಿಮಾನಗಳನ್ನಿಟ್ಟುಕೊಂಡಿದ್ದಾರೆ. ಇನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ನಾತ್ ಇಂಡಿಯಾ ಐ.ಟಿ ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್, ರಿಯಲ್ ಅರ್ಥ್ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಕೈ ಲೈಟ್ ರಿಲಾಲಿಟಿ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿಗಳನ್ನಿಟ್ಟುಕೊಂಡಿದಾರೆ. ಹತ್ತು ವರ್ಷಗಳಲ್ಲಿ ಸಾವಿರ ಕೋಟಿಯ ಸರದಾರನಾಗದೇ ಇನ್ನೇನು..?

                                                                ಸಾಲು ಸಾಲು ಸಾವುಗಳು..!

                                  ಸೋನಿಯಾ ಗಾಂಧಿ ಅಳಿಯ ರಾತ್ರೋರಾತ್ರಿ ಕೋಟ್ಯಾಧೀಶನಾದ ವಿಷಯವೊಂದೇ ಅಲ್ಲ, ಆತನ ಮನೆಯಲ್ಲಾದ ಸಾವುಗಳು ಕೂಡ ಸಂಶಯಗಳನ್ನ ಹುಟ್ಟುಹಾಕ್ತವೆ. ರಾಬರ್ಟ್ ತಂದೆಗೆ ತಮ್ಮ ಮಗ ಪ್ರಿಯಾಂಕಾ ಗಾಂಧಿಯನ್ನ ಮದುವೆಯಾಗೋದು ಮೊದಲಿನಿಂದಲೂ ಇಷ್ಟ ಇರಲಿಲ್ಲ. ನಂತರ ಕೂಡ ಆ ಮನಸ್ತಾಪ ಹಾಗೆಯೇ ಉಳಿದು ಆ ಮನೆಯೇ ಒಡೆದು ಹೋಯಿತು. ರಾಬರ್ಟ್ ಜೊತೆಗೆ ಆತನ ತಾಯಿ ಮೌರೀನ್ ವಾದ್ರಾ ಬಂದರೆ, ತಂದೆ ರಾಜಿಂದರ್ ವಾದ್ರಾ, ಸಹೋದರ ರಿಚರಡ್  ವದ್ರಾ, ಸಹೋದರಿ ಮಿಷೆಲ್ ಪ್ರತ್ಯೇಕವಾಗಿ ಉಳಿದರು. ಮಿಷೆಲ್ 2001ರ ಎಪ್ರೀಲ್ ನಲ್ಲಿ ರಸ್ತೆ ಅಪಘಾತವೊಂದರಲ್ಲಿ ಮರಣ ಹೊಂದಿದಳು. ನಂತರ ರಾಬರ್ಟ್, "ತನ್ನ ತಂದೆ ಮತ್ತು ತಮ್ಮ ತನ್ನ ಹೆಸರನ್ನ ದುರುಪಯೋಗಪಡಿಸಿಕೊಂಡು ಹಣ ಪಡೆಯುತ್ತಿದ್ದಾರೆ, ಅವರಿಗ್ಯಾರೂ ಹಣ ಕೊಡಬೇಡಿ" ಅಂತ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ. ಅದಕ್ಕೆ ಉತ್ತರವಾಗಿ ಅವನು ನನ್ನ ಮಗನೇ ಅಲ್ಲ ಅಂತ ರಾಜಿಂದರ್ ವದ್ರಾ ಪತ್ರಿಕಾ ಹೇಳಿಕೆ ನೀಡಿದರು. ಇದಾದ ಮೇಲೆ ರಾಬರ್ಟ್ ಸಹೋದರ ರಿಚರಡ್ ಸಪ್ಟೆಂಬರ್ 2003ರಲ್ಲಿ ಮುರಾದಾಬಾದ್ ನ ವಸಂತ್ ವಿಹಾರ್ ಪ್ರದೇಶದ ತನ್ನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸತ್ತು ಹೋದ. ಪೊಲೀಸರು ಅದನ್ನ ಹಾರ್ಟ್ ಅಟ್ಯಾಕ್ ಅಂದರು. ಆನಂತರ ಕೂಡ ಸೋನಿಯಾ ಗಾಂಧಿ ಅಳಿಯ ತನ್ನ ತಂದೆಯ ಜೊತೆಗಿನ ಸಂಬಂಧ ಸುಧಾರಿಸಿಕೊಳ್ಳಲಿಲ್ಲ. 2009ರ ಎಪ್ರೀಲ್ 3 ನೇ ತಾರೀಖಿನ ದಿನ ರಾಜಿಂದರ್ ವಾದ್ರಾ ಶವ ದೆಹಲಿಯ  ಯೂಸೂಫ್ ಸರಾಯ್ ಪ್ರದೇಶದ ಸಿಟಿ ಇನ್ ಹೊಟೇಲ್ ನ ರೂಮೊಂದರಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಿಕ್ಕಿತ್ತು. ರಾಬರ್ಟ್ ನ ತಂಗಿ, ತಮ್ಮ ಮತ್ತು ತಂದೆಯ ಈ ಅನುಮಾನಾಸ್ಪದ ಸಾವುಗಳ ಬಗ್ಗೆ ಯಾರೂ ಪ್ರಶ್ನೆ ಎತ್ತಲಿಲ್ಲ.

                                                            ಫಾರಿನ್ ಗೆ ಹೋದದ್ದೆಷ್ಟು ಸಲ..?

                                 ರಾಬರ್ಟ್ ವದ್ರಾ ಒಬ್ಬರೇ ಏನು, ಗಾಂಧಿ ಕುಟುಂಬದ ಸದಸ್ಯರ ಬಗ್ಗೆ ಪ್ರಶ್ನೆ ಕೇಳೋದೇ ತಪ್ಪು ಅನ್ನೋ ಹಾಗಾಗಿದೆ. ಇತೀಚೆಗೆ ರಾಜಸ್ಥಾನದ ಕೈಲಾಶ್ ಕನ್ವರ್ ಅನ್ನೋರು ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ ಎರಡು ವರ್ಷಗಳಲ್ಲಿ  ಯಾವಾಗ್ಯಾವಾಗ - ಯಾವ ಕಾರಣಕ್ಕೆ ವಿದೇಶಕ್ಕೆ ಹೋಗಿದಾರೆ ಅನ್ನೋ ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ವಿದೇಶಾಂಗ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನ ವಿದೇಶಾಂಗ ಇಲಾಖೆ ಸಾಗಹಾಕಿದ್ದು ಸಂಸದೀಯ ವ್ಯವಹಾರಗಳ ಇಲಾಖೆಗೆ. ಅಲ್ಲಿನವರು ಆ ಅರ್ಜಿಯನ್ನ ಅಂಕಿಸಂಖ್ಯೆ ಮತ್ತು ಕಾರ್ಯಕ್ರಮ ಜಾರಿ ಇಲಾಖೆಗೆ ಕೊಟ್ಟು ಕೈ ತೊಳೆದುಕೊಂಡರು. ಅಂಕಿಸಂಖ್ಯೆ ಇಲಾಖೆಯವರು ಅದನ್ನು ನೇರವಾಗಿ ರಾಷ್ಟ್ರೀಯ ಸಲಹಾ ಸಮಿತಿಗೇ ಕಳಿಸಿದರು. ರಾಷ್ಟ್ರೀಯ ಸಲಹಾ ಸಮಿತಿಯವರು ಆ ಆರ್.ಟಿ.ಐ ಅರ್ಜಿಯನ್ನು ಕಳಿಸಿದ್ದು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ. ಕೊನೆಗೆ ಕೈಲಾಶ್ ಕನ್ವರ್ ಗೆ ಪ್ರಧಾನಿ ಕಾರ್ಯಾಲಯದಿಂದ ಬಂದ ಒಂದು ಸಾಲಿನ ಉತ್ತರ "ಸೋನಿಯಾ ಗಾಂಧಿಯವರ ವಿದೇಶ ಪ್ರವಾಸಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಅನ್ನೋದು. ಕೇಂದ್ರ ಸರಕಾರದ ಲಗಾಮು ಹಿಡಿದು ಕುಳಿತ ಹೆಣ್ಣುಮಗಳು ಕದ್ದು - ಮುಚ್ಚಿ ಫಾರಿನ್ ಟೂರ್ ಗಳನ್ನ ಮಾಡ್ತಿರೋದ್ಯಾಕೆ ಅನ್ನೋದು ಅರ್ಥ ಆಗ್ತಿಲ್ಲ.
                                 ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಅತ್ಯಂತ ಪ್ರಭಾವಶಾಲಿ ಕುಟುಂಬದ ಮನೆ ಅಳಿಯ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಧಿಕಾರ ಜನರಿಗೆ ಇದೆ. ಇತ್ತೀಚೆಗೆ "ನಿಮ್ಮೆಲ್ಲಾ ವ್ಯವಹಾರಗಳನ್ನ ನಾವು ಗಮನಿಸುತ್ತಿದ್ದೇವೆ" ಅಂತ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟು ಮಾಧ್ಯಮಗಳಲ್ಲಿ ಒಂದು ಜಾಹೀರಾತು ಕೊಟ್ಟಿತ್ತು. ನಮ್ಮದು ಬೇಕಿದ್ರೆ ಗಮನಿಸಿಕೊಂಡು ಏನಾದ್ರೂ ಮಾಡಿ, ರಾಬರ್ಟ್ ವದ್ರಾನ ವ್ಯವಹಾರಗಳನ್ನ ಗಮನಿಸೋದು ಯಾವಾಗ ಅನ್ನೋದು ಈಗಿನ ಪ್ರಶ್ನೆ.