Wednesday, April 2, 2014

ಸೋನಿಯಾ ಕೋಟೆ ಯಾಕೆ ಭದ್ರವಾಗಿದೆ ಅಂದರೆ....

                    ಲಖ್ನೋದ ನೆತ್ತಿಯ ಮೇಲೆ ಸೂರ್ಯ ಬಿಸಿಲು ಚಿಮುಕಿಸತೊಡಗಿದ್ದ. ಅಲಹಾಬಾದ್ ಹೈವೇ ಸೇರಿಕೊಂಡಿತ್ತು ನಾವು ಪ್ರಯಾಣಿಸುತ್ತಿದ್ದ ಕಾರು. ರಾಯಬರೇಲಿ 83 ಕಿ.ಮೀ ಅನ್ನೋ ಬೋರ್ಡು. "ರಾಯಬರೇಲಿ" - ಅದೊಂದು ಹೆಸರೇ ಸಾಕು, ಮೆದುಳಿನ ಸುಕ್ಕುಗಳಲ್ಲಿ ಕಳೆದುಹೋಗಿದ್ದ ಆ ಕಥೆ ಮತ್ತೆ ಎದ್ದು ಬಂದು ಚಿತ್ರಗಳಾಗಿ ಕದಲುವಂತಾಗಲು...
                    1930ರ ಒಂದು ಮಟಮಟ ಮಧ್ಯಾಹ್ನ ಇಲ್ಲಿಂದ ದೂರದ ಮುಂಬೈನ ಈವಿಂಗ್ ಕ್ರಿಶ್ಚಿಯನ್ ಕಾಲೇಜಿನ ಎದುರಿಗೆ ಯುವ ಕಾಂಗ್ರೆಸ್ನವರು ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅದರ ಮುಂಚೂಣಿಯಲ್ಲಿದ್ದ ಹೆಣ್ಣುಮಗಳೊಬ್ಬಳು ಬಿಸಿಲು ತಾಳೋದಕ್ಕಾಗದೇ ಬಿದ್ದುಬಿಟ್ಟರು. ಪಕ್ಕದಲ್ಲಿ ನಿಂತು ನೋಡುತ್ತಿದ್ದ ಹದಿನೆಂಟರ ವಯಸ್ಸಿನ ಫಾರ್ಸಿ ಹುಡುಗನೊಬ್ಬ ಓಡಿಬಂದು ತಲೆಗೆ ನೀರುತಟ್ಟಿ ಉಪಚರಿಸಿದ. ಹಾಗೆ ಬಿದ್ದವರು ಪಂಡಿತ್ ಜವಾಹರಲಾಲ್ ನೆಹರೂರ ಧರ್ಮಪತ್ನಿ ಕಮಲಾ ನೆಹರೂ ಆಗಿರದಿದ್ದರೆ - ಓಡಿಬಂದು ಉಪಚರಿಸಿದವನು ಫಿರೋಜ್ ಜಹಾಂಗೀರ್ ಖಾನ್ ಆಗಿರದಿದ್ದರೆ, ರಾಯಬರೇಲಿ ಲೋಕಸಭಾ ಕ್ಷೇತ್ರಕ್ಕೆ ಬಹುಶಃ ಇಂಥದ್ದೊಂದು ಆಕರ್ಷಣೆ ಇರುತ್ತಿರಲಿಲ್ಲ. ನಾವು ಬೆಂಗಳೂರಿನಿಂದ ಇದನ್ನ ಹುಡುಕಿಕೊಂಡು ಇಲ್ಲೀ ತನಕ ಬರುತ್ತಿರಲಿಲ್ಲ..!
ಫಿರೋಜ್ ಜಹಾಂಗೀರ್ ಖಾನ್ - ಕಮಲಾ ನೆಹರೂ

                   ಮಾರನೇ ದಿನ ಕಾಲೇಜು ತೊರೆದ ಫಿರೋಜ್ ಜಹಾಂಗೀರ್ ಖಾನ್ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ. ಕಮಲಾ ನೆಹರೂರ ಆತ್ಮೀಯತೆಯಿಂದ ಆಕೆಯ ಊರು, ಉತ್ತರ ಪ್ರದೇಶದ ಅಲಹಾಬಾದಿಗೆ ಬಂದ. ಅಂತಿಮವಾಗಿ ಶ್ರೀಮತಿ ಕಮಲಾ ನೆಹರೂ ಟಿ.ಬಿಯಿಂದ ಚೇತರಿಸಿಕೊಳ್ಳಲಾಗದೇ ಸ್ವಿಡ್ಜರ್ಲೆಂಡಿನಲ್ಲಿ ಪ್ರಾಣ ಬಿಟ್ಟಾಗ ಫಿರೋಜ್ ಜಹಾಂಗೀರ್ ಖಾನ್ ಶವದ ತಲೆಯ ಬಳಿ ಕುಳಿತು ಬಿಕ್ಕಳಿಸುತ್ತಿದ್ದ. ನಂತರ ಆತನಿಗೂ - ನೆಹರೂ ಪುತ್ರಿ ಇಂದಿರಾ ಪ್ರಿಯದರ್ಶಿನಿಗೂ ಅನುರಕ್ತಿ ಆಯಿತು. ಫಿರೋಜ್ ಜಹಾಂಗೀರ್ ಖಾನ್, ತನ್ನ ಸರ್ ನೇಮ್ಅನ್ನು ಗಾಂಧಿ ಅಂತ ಬದಲಿಸಿಕೊಂಡರು. ಇಂದಿರಾ ಪ್ರಿಯದರ್ಶಿನಿ ನೆಹರೂ, ಫಿರೋಜ್ ಗಾಂಧಿಯ ಕೈ ಹಿಡಿದು ಇಂದಿರಾ ಗಾಂಧಿ ಆದರು. ಉಕ್ಕಿನ ಮಹಿಳೆಗೆ ಗಾಂಧಿ ಅನ್ನೋ ಸರ್ನೇಮು ಕೊಟ್ಟ ಮನುಷ್ಯ ಆತ. ರಾಜೀವ್ ಗಾಂಧಿಗೆ ಅಂಥದ್ದೊಂದು ಸ್ಫುರದ್ರೂಪ - ಸಂಜಯ್ ಗಾಂಧಿಗೆ ಅಷ್ಟೊಂದು ಜೀವನ ಪ್ರೀತಿ ಬಂದದ್ದು ಕೂಡ ತಂದೆಯ ರಕ್ತದಿಂದಲೇ ಏನೋ. ಅಂಥ ಫಿರೋಜ್ ಗಾಂಧಿ ಮೊದಲ ಚುನಾವಣೆಯಲ್ಲಿ ನಿಂತು ಗೆದ್ದ ಕ್ಷೇತ್ರ ಇದು - ರಾಯಬರೇಲಿ..!
ಫಿರೋಜ್ ಗಾಂಧಿ ವೆಡ್ಸ್ ಇಂದಿರಾ ಪ್ರಿಯದರ್ಶಿನಿ
 ಇಂದಿರಾರನ್ನ ಮದುವೆಯಾದ ನಂತರ ಫಿರೋಜ್ ಅಲಹಾಬಾದಿಗೆ ಬಂದು ಮಾವ ನಡೆಸುತ್ತಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಜವಾಬ್ದಾರಿ ವಹಿಸಿಕೊಂಡರು. ಸ್ವಾತಂತ್ರ್ಯ ದೊರೆತು 1951ರಲ್ಲಿ ಮೊದಲ ಚುನಾವಣೆ ನಡೆದಾಗ ರಾಯಬರೇಲಿಯಿಂದ ನಾಮಪತ್ರ ಸಲ್ಲಿಸಿದರು. ಪಂಡಿತಜಿ ಅಳಿಯ ಅಂತ ಜನ ಬೆನ್ನತ್ತಿಕೊಂಡು ಬಂದು ಓಟು ಕೊಟ್ಟರು. ಗೆದ್ದು ಸಂಸತ್ತಿಗೆ ಹೋದ ಫಿರೋಜ್ ಗಾಂಧಿ, ಸಂಸತ್ತಿನ ಅಧಿವೇಶನದಲ್ಲಿ ಮಾವ ಪಂಡಿತ್ ಜವಾಹರಲಾಲ್ ನೆಹರೂ ವಿರುದ್ಧ ಧ್ವನಿ ಎತ್ತಿದ ಮೊಟ್ಟಮೊದಲ ಗಂಡು. ಬಹುಶಃ ಈ ದೇಶದ ಮೊದಲ ಹಗರಣ "ಎಲ್.ಐ.ಸಿ ಷಡ್ಯಂತ್ರ" ಹೊರಹಾಕಿ ಹೆಣ್ಣುಕೊಟ್ಟ ಮಾವನನ್ನೇ ದೊಡ್ಡ ಇರುಸು ಮುರುಸಿಗೆ ಈಡು ಮಾಡಿದ ವ್ಯಕ್ತಿ. ಆ ಮನುಷ್ಯನ ರಾಜಕಾರಣದ ರೀತಿಯೇ ಬೇರೆ ಇತ್ತು - ಅದಕ್ಕೊಂದು ತೂಕ ಇತ್ತು. ಅಂಥ ಫಿರೋಜ್ ಗಾಂಧಿ ತಮ್ಮ ನಲವತ್ತೆಂಟನೇ ವಯಸ್ಸಿನಲ್ಲಿ ಕಣ್ಣುಮುಚ್ಚಿಕೊಂಡರು. ಮುಂದೆ ಇದೇ ರಾಯಬರೇಲಿಯಿಂದ ಇಂದಿರಾ ಗಾಂಧಿ ಗೆಲುವನ್ನು ಅಸಿಂಧುಗೊಳಿಸಿತ್ತು ಅಲಹಾಬಾದ್ ಹೈಕೋರ್ಟ್. ಅದಕ್ಕೇ ಸಿಟ್ಟಿಗೆದ್ದ ಇಂದಿರಮ್ಮ ತುರ್ತು ಪರಿಸ್ಥಿತಿ ಹೇರಿದ್ದು. ನಂತರ ನಡೆದ ಚುನಾವಣೆಯಲ್ಲಿ ಇದೇ ರಾಯಬರೇಲಿ ಜನ ಇಂದಿರಾಗಾಂಧಿಯವರನ್ನ ಹೀನಾಯವಾಗಿ ಸೋಲಿಸಿದ್ದರು..! ಸಧ್ಯಕ್ಕೆ ಇಂದಿರಾ ಸೊಸೆ ಸೋನಿಯಾ ಗಾಂಧಿಯವರ ಭದ್ರ ಕೋಟೆ. ನಾಲ್ಕು ಸಲ ಭಾರಿ ಬಹುಮತದಿಂದ ಗೆದ್ದಿದ್ದಾರೆ - ಐದನೇ ಸಲ ನಿಂತಿದ್ದಾರೆ.
                   ದಾರಿಯುದ್ದಕ್ಕೂ ಸಮೃದ್ಧ ಗೋಧಿ ಬೆಳೆ. ಕಟಾವಿಗೆ ಬಂದಿದೆ. ಇಲ್ಲಿ ಮಣ್ಣು ಬಿಳಿ. ಬೂದಿಯಷ್ಟು ಬಿಳಿ. ಅಷ್ಟೇ ನುಣುಪು. ಬಹುಶಃ ನಮ್ಮ ಕಡೆಯ ರೈತರು ಇದಕ್ಕೆ ಫಲವತ್ತತೆ ಇದೆ ಅಂತ ಒಪ್ಪೋದೇ ಇಲ್ಲವೇನೋ. ಅಲ್ಲಲ್ಲಿ ಮಿಲ್ಗಳು - ಕಾರ್ಖಾನೆಗಳು. ಇಲ್ಲಿನ ಇಟ್ಟಿಗೆ ಭಟ್ಟಿಗಳು ನಮ್ಮ ಕಡೆಯಂತಿಲ್ಲ. ಹೊಗೆ ಹೋಗಲು ಮುಗಿಲೆತ್ತರದ ಚಿಮಣಿಗಳಿವೆ ಈ ಕಡೆ. ರಾಯಬರೇಲಿ ಹತ್ತಿರಕ್ಕೆ ಬರ್ತಿದ್ದಂತೆ ಶಾಲೆ - ಕಾಲೇಜುಗಳ ಸಂಖ್ಯೆ ಹೆಚ್ಚಾಗ್ತಾ ಹೋಗ್ತವೆ. ಇನ್ನೂ ಹತ್ತಿರ ಬರ್ತಿದ್ದಂತೆ ವಾಹನಗಳ ಶೋ ರೂಮುಗಳು. ರಾಯಬರೇಲಿ ಒಂದು ಜಿಲ್ಲಾ ಕೇಂದ್ರ. ಮೂರು ವರ್ಷಗಳ ಹಿಂದಿನ ಜನಗಣತಿಯಲ್ಲಿ ಮೂವತ್ತನಾಲ್ಕು ಲಕ್ಷ ಜನಸಂಖ್ಯೆ ಇತ್ತು.
                   ನಗರಕ್ಕೆ ಹತ್ತಿರದಲ್ಲೇ ರಸ್ತೆ ಪಕ್ಕದಲ್ಲಿ ಒಂದು ರೈತ ಕುಟುಂಬ ಟೊಮ್ಯಾಟೋ ಬೆಳೆಯಲ್ಲಿ ಕಳೆ ತೆಗೆಯುತ್ತಿತ್ತು. ಮಾತಾಡಿಸಿದರಾಯಿತು ಅಂತ ಹೋದೆವು. ಕಾರಿಳಿದು - ಕೈಯಲ್ಲಿ ಕ್ಯಾಮರಾ ಹಿಡಕೊಂಡು ಬಂದ ನಮ್ಮನ್ನ ನೋಡಿ ಅವರೆಲ್ಲ ಗಾಬರಿಯಾಗಿದ್ದರು. ಮಳೆ - ಬೆಳೆ, ಬೆಲೆಗಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿ ನಂತರ ರಾಜಕೀಯದ ಸುದ್ದಿ ಎತ್ತಿದ್ದು. "ಯಾರಿಗೆ ಈ ಸಲ ಓಟು..?" ಅಂದೆ. "ನಾವು ಬಿ.ಎಸ್.ಪಿಗೆ" ಅಂದ ಅವರ ಪೈಕಿ ಚಿಕ್ಕವಯಸ್ಸಿನ ಒಬ್ಬ. ಅದು ಅನಿರೀಕ್ಷಿತ ಉತ್ತರ. ಇಲ್ಲಿ ಕಾಲಿಡ್ತಿದ್ದಂತೆಯೇ ಸೋನಿಯಾ ಗಾಂಧಿ ಜೈಕಾರ ಕೇಳತ್ತೆ ಅಂದುಕೊಂಡಿದ್ದರೆ, ಈ ರೈತ ಮಾಯಾವತಿ ಜಿಂದಾಬಾದ್ ಅನ್ನುತ್ತಿದ್ದಾನೆ. ಹೆಸರೇನಾದರೂ ಕನ್ಫ್ಯೂಸ್ ಮಾಡಿಕೊಂಡಿದಾನಾ ಅಂದುಕೊಂಡು "ಬಿ.ಎಸ್.ಪಿಯ ಚುನಾವಣಾ ಚಿನ್ಹೆ ಏನು" ಅಂತ ಕೇಳಿದೆ. "ಆನೆ" ಅಂದ. ಸರಿಯಾದ ಉತ್ತರ..! "ನಿಮ್ಮ ಸಂಸದರ್ಯಾರು..?" ನನ್ನ ಪ್ರಶ್ನೆ. ಆತ ತಲೆಕೆರೆದುಕೊಂಡು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದ. "ಸೋನಿಯಾ ಗಾಂಧಿ ಅನ್ನೋ ಹೆಸರು ಕೇಳಿದ್ದೀಯಾ..?" ನನ್ನ ಮತ್ತೊಂದು ಪ್ರಶ್ನೆ. "ಹ್ಞಾಂ... ಹ್ಞಾಂ... ಅವರೇ... ಅವರೇ ನಮ್ಮ ಸಂಸದೆ" ಅಂದ ಆತ. ಈ ಸಲ ನಾನು ತಲೆಕೆರೆದುಕೊಂಡೆ. ಒಂದು ಅನುಭವದ ಆಧಾರದ ಮೇಲೆ ಇಡೀ ಲೋಕಸಭಾ ಕ್ಷೇತ್ರದ ಬಗ್ಗೆ ನಿರ್ಧಾರಕ್ಕೆ ಬಂದುಬಿಡಬಾರದು.
                   ರಾಯಬರೇಲಿ ಹೃದಯ ಭಾಗಕ್ಕೆ ಬರುತ್ತಿದ್ದಂತೆ ಫಿರೋಜ್ ಗಾಂಧಿ ಕಾಲೇಜ್ ಅನ್ನೋ ದೊಡ್ಡ ಬೋರ್ಡು. ಅದರೆದುರಿಗೆ ನಿಂತು ಜನರನ್ನ ಮಾತನಾಡಿಸೋದಕ್ಕೆ ಶುರುಮಾಡಿದ್ವಿ. ಮೂರು ಜನ ವಕೀಲರು ನಿಂತುಕೊಂಡಿದ್ದರು. ಅವರ ಪೈಕಿ ಸುರೇಶ್ಚಂದ್ರ ಶ್ರೀವಾಸ್ತವ್ "ರಾಯಬರೇಲಿಯ ಅಂತಃಕರಣದಲ್ಲಿ ಸೋನಿಯಾ ಗಾಂಧಿ ಇದಾರೆ ಸಾರ್" ಅಂತಲೇ ಮಾತು ಶುರು ಮಾಡಿದರು. ಸುರೇಶ್ಚಂದ್ರರ ಲಾಜಿಕ್ಕುಗಳೇ ಬೇರೆ ಇದ್ದವು. ಅವರ ಸ್ಟೇಟ್ಮೆಂಟ್ನ ಕೆಲ ಸ್ಯಾಂಪಲ್ಗಳು ಇಲ್ಲಿವೆ "ಕೇಂದ್ರದಲ್ಲಿ ನರೇಂದ್ರ ಮೋದಿ ಗೆಲ್ಲಬೇಕು - ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಗೆಲ್ಲಬೇಕು..!" "ಸೋನಿಯಾ ಹೊರತು ಪಡಿಸಿ ಬೇರೆ ಯಾರಾದರೂ ಗೆದ್ದರೆ ಸಾವಿರಾರು ಕೋಟಿಯ ದೊಡ್ಡ ದೊಡ್ಡ ಯೋಜನೆಗಳು ಇಲ್ಲಿಗೆ ಬರೋದಿಲ್ಲ..!" "ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಹೊರತುಪಡಿಸಿ ಬೇರೆ ಇನ್ಯಾರಾದರೂ ಕಾಂಗ್ರೆಸ್ನಿಂದ ಚುನಾವಣೆಗೆ ನಿಂತರೆ ಕುಡಿಯೋದಕ್ಕೆ ನೀರು ಕೂಡ ಸಿಗಲ್ಲ - ಠೇವಣಿ ಕಳೆದುಕೊಂಡು ಮನೆಗೆ ಹೋಗ್ತಾರೆ..!" ಅವರವರ ಭಾವಕ್ಕೆ - ಅವರವರ ಭಕ್ತಿಗೆ. ಇಲ್ಲಿನ ವಕೀಲರು ಸಂಸದರ ನಿಧಿಯಲ್ಲಿ ಬಾರ್ ಅಸೋಸಿಯೇಷನ್ಗೆ ಒಂದು ಸಭಾಂಗಣ - ಅದಕ್ಕೆ ಎ.ಸಿ ಸಿಕ್ಕಿದೆ ಅಂತ ಖುಷಿಯಾಗಿದಾರೆ. ಸೋನಿಯಾ ಗಾಂಧಿ ದೆಹಲಿಯಿಂದ ರಾಯಬರೇಲಿಗೆ ಅಂತ ಕೋಟಿ ಕೋಟಿ ಫಂಡ್ ಕಳಿಸ್ತಾರೆ, ಅದನ್ನ ಇಲ್ಲಿ ಸಮಾಜವಾದಿ ಪಕ್ಷದ ರಾಜ್ಯ ಸರಕಾರ ನುಂಗಿ ನೀರು ಕುಡಿಯತ್ತೆ ಅನ್ನೋದು ಈ ವಕೀಲರ ವಾದ. ಇದನ್ನ ಹೊರತುಪಡಿಸಿದರೆ ರಾಯಬರೇಲಿ ನಗರದಲ್ಲಿ ಮತ್ತೆ ಮತ್ತೆ ಕೇಳಿಬಂದಿದ್ದು ಸೋನಿಯಾ ಗಾಂಧಿ ಏಮ್ಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಕೊಟ್ಟಿದಾರೆ - ರೇಲ್ವೆ ಕೋಚ್ ಫ್ಯಾಕ್ಟರಿ ಕೊಟ್ಟಿದಾರೆ ಅನ್ನೋ ಮಾತು. ಅದರಿಂದ ಸ್ಥಳೀಯರಿಗೆ ನಯಾಪೈಸೆ ಪ್ರಯೋಜನ ಆಗಿಲ್ಲ, ಎಲ್ಲಾ ಹೊರಗಿನವರೇ ತುಂಬಿಕೊಂಡಿದಾರೆ ಅಂತ ಇಬ್ಬರು ಮೂವರು ಯುವಕರು ಜೋರಾಗಿ ಕೂಗಾಡಿದರು. ಅವರು ಬಿ.ಜೆ.ಪಿ ಕಾರ್ಯಕರ್ತರು.
                  ಇಲ್ಲಿನ ಮುನ್ಶೀಗಂಜ್ನಲ್ಲಿ ಮೊದಲು ಒಂದು ಸಕ್ಕರೆ ಕಾರ್ಖಾನೆ ಇತ್ತು. ಅದು ಬಾಗಿಲು ಹಾಕಿಕೊಂಡ ಮೇಲೆ ಅದನ್ನ ಕೆಡವಿ, ಸುತ್ತಲಿನ ರೈತರಿಂದ ಒಂದಷ್ಟು ಜಮೀನು ಪಡೆದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ಕಟ್ತಿದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಸೋನಿಯಾ - ಪ್ರಿಯಾಂಕಾ ಭೂಮಿ ಪೂಜೆ ಮಾಡಿರುವ ಯೋಜನೆ ಇದು. ಕಾಮಗಾರಿ ಜೋರಾಗಿ ನಡೀತಿದೆ. ಅದನ್ನ ನೋಡಿಕೊಂಡು ಹಂಗೇ ಮುಂದೆ ಹೋದರೆ ಬೇಲಾ ಖಾರಾ ಅನ್ನೋ ಹಳ್ಳಿ ಸಿಕ್ಕಿತು. ಅಲ್ಲಿ ಬಗೆಹರಿಯಿತು ಸೋನಿಯಾ ಗಾಂಧಿಯವರ ಭಾರೀ ಬಹುಮತದ ಗೆಲುವಿನ ರಹಸ್ಯ..!
ಸೋನಿಯಾ ಗಾಂಧಿ

                  ನಮ್ಮೊಂದಿಗೆ ಮಾತನಾಡೋದಕ್ಕೆ ಸೇರಿದ ಜನಜಂಗುಳಿಯಲ್ಲಿ ಕುಡಿಮೀಸೆಯ ಹುಡುಗರಿದ್ದರು - ಮುಪ್ಪಾನು ಮುದುಕರಿದ್ದರು, ಮಹಿಳೆಯರು - ಮಧ್ಯವಯಸ್ಕರು, ಪದವೀಧರರು - ಒಂದಕ್ಷರ ಕಲಿಯದವರು, ಎಲ್ಲರೂ ಇದ್ದರು. ಹಸ್ತ ಮತ್ತು ಸೋನಿಯಾ ಗಾಂಧಿ ಬಿಟ್ಟು ಇನ್ನೇನೂ ಹೇಳಲಿಲ್ಲ ಅವರು. "ಧಮ್ ಇದ್ದರೆ ನರೇಂದ್ರ ಮೋದಿಗೆ ಇಲ್ಲಿ ಬಂದು ಎಲೆಕ್ಷನ್ಗೆ ನಿಲ್ಲೋದಕ್ಕೆ ಹೇಳಿ" ಅಂದ ಒಬ್ಬ. ಕೆಟ್ಟ ರಸ್ತೆಗಳು - ಕಚ್ಚಾ ಮನೆಗಳ ಬಗ್ಗೆ ಮಾತನಾಡಿದರೆ ಇಲ್ಲಿ ಕೂಡ ಅದೇ ಉತ್ತರ. ದೆಹಲಿಯಿಂದ ಸೋನಿಯಾ ಗಾಂಧಿ ನಮಗೋಸ್ಕರ ಏನೇನೆಲ್ಲಾ ಕಳಿಸ್ತಾರೆ ಗೊತ್ತಾ ಸಾರ್, ಮಧ್ಯದಲ್ಲಿ ಈ ಹರಾಮಖೋರರು ಎಲ್ಲವನ್ನೂ ತಿಂದು ಹಾಕ್ತಾರೆ ಅಂತ. ಒಬ್ಬ ಮುದುಕನ ಪಕ್ಕದಲ್ಲಿ ಕುಳಿತು "ಅಜ್ಜಾ, ನೀನು ಜೀವನದಲ್ಲಿ ಯಾವತ್ತಾದರೂ ಹಸ್ತಕ್ಕೆ ಬಿಟ್ಟು ಇನ್ಯಾವುದಕ್ಕಾದರೂ ಓಟ್ ಹಾಕಿದೀಯಾ..?" ಅಂತ ಕೇಳಿದೆ. ಕೇಳಬಾರದ್ದೇನನ್ನೋ ಕೇಳಿಬಿಟ್ಟೆನೇನೋ ಅನ್ನೋಹಾಗೆ ಸಿಟ್ಟಿಗೆದ್ದ ಆತ "ಎಂಥಾ ಮಾತು ಅಂತ ಆಡ್ತೀಯಾ ಮಗಾ... ಪಕ್ಷಾಂತರ ಅನ್ನೋದು ಆ ಆಸೆಬುರುಕ ನೇತಾಗಳ ಕೆಲಸ. ಮನುಷ್ಯನಿಗೆ ನಿಷ್ಠೆ ಅನ್ನೋದಿರಬೇಕು. ನಾನು ಯಾವತ್ತೂ ಪಕ್ಷಾಂತರ ಮಾಡಿಲ್ಲ" ಅಂದುಬಿಟ್ಟ. ಪಕ್ಷಾಂತರ ಅನ್ನೋ ಶಬ್ದಕ್ಕೆ ತಾತ ಕೊಟ್ಟ ಡೆಫಿನಿಷನ್ನು ತಲೆ ತಿರುಗಿಸಿತ್ತು. ಪಕ್ಕದಲ್ಲಿದ್ದ ಮಧ್ಯವಯಸ್ಕಳೊಬ್ಬಳಿಗೆ "ನಿನ್ನ ಓಟು ಯಾರಿಗೆ ತಾಯಿ ಈ ಸಲ" ಅಂತ ಕೇಳಿದೆ. "ಮಾಯಾವತಿಗೆ" ಅಂದಳು ಆಕೆ. ನಾನೇ ತಪ್ಪಾಗಿ ಕೇಳಿಸಿಕೊಂಡೆನಾ..? ಯಾರಿಗೆ ಹಾಕ್ತೀರಿ..? ಮತ್ತೆ ಕೇಳಿದೆ. ಮಾಯಾವತಿಗೆ - ಮತ್ತಷ್ಟು ಖಡಕ್ಕಾಗಿ ಉತ್ತರಿಸಿದಳು. ಇನ್ನೊಂದು ಸಲ ಕನ್ಫರ್ಮ್ ಮಾಡಿಕೊಳ್ಳೋಣ ಅಂದುಕೊಂಡು "ಮಾಯಾವತಿಯವರ ಪಕ್ಷದ ಚಿನ್ಹೆ ಯಾವುದು" ಅಂದೆ. ಥಟ್ಟಂತ ಉತ್ತರ ಬಂತು - "ಹಸ್ತ..!"
                   ಬೇಲಾ ಖಾರಾದಿಂದ ವಾಪಸ್ ಹೊರಟಾಗ ಇಳಿ ಸಂಜೆ. ಬಿಸಿಲಿನಲ್ಲಿ ಮನೆ ಸೇರಿದ್ದ ರೈತರು ಮತ್ತೆ ಜಮೀನುಗಳಿಗೆ ವಾಪಸಾಗಿ ಕೆಲಸದಲ್ಲಿ ತೊಡಗಿದ್ದರು. ಒಂದು ಕಡೆ ಹೆಣ್ಣುಮಕ್ಕಳು ಗೋಧಿ ಕೊಯ್ಲು ಮಾಡುತ್ತಿದ್ದರೆ ಪಕ್ಕದಲ್ಲಿ ನವಿಲಿಗಿಂತ ದೊಡ್ಡದಾದ - ಆಸ್ಟ್ರೀಚ್ಗಿಂತ ಚಿಕ್ಕದಾದ ಬಿಳಿ ಬಣ್ಣದ ಐದಾರು ಸುಂದರ ಪಕ್ಷಿಗಳು ಅಡ್ಡಾಡುತ್ತಿದ್ದವು. ಮನಮೋಹಕ ದೃಶ್ಯ ಅದು. ಆ ಪಕ್ಷಿಯ ಒಂದಷ್ಟು ಫೋಟೊ ತೆಗೆದು, ಅವುಗಳ ಹೆಸರೇನು ನೋಡಬೇಕು ಅಂದುಕೊಂಡು ಗೂಗಲ್ ಇಮೇಜ್ನಲ್ಲಿ "ರಾಯಬರೇಲಿ ಪಕ್ಷಿಗಳು" ಅಂತ ಸಚರ್್ ಕೊಟ್ಟೆ. ಸಾಲುಸಾಲಾಗಿ ಪ್ರಿಯಾಂಕಾ ಗಾಂಧಿ ಫೋಟೊಗಳು ಬಂದವು. ಥತ್..!
                  ಈ ದೊಡ್ಡವರ ಕ್ಷೇತ್ರಗಳ ಬಗ್ಗೆ ವರದಿ ಮಾಡುವಾಗ, ಅವರು ಗೆದ್ದು ದೆಹಲಿ ಕಡೆ ಹೋದ ನಂತರ ಕ್ಷೇತ್ರದ ಜೊತೆ ಹೇಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಅನ್ನೋದನ್ನ ನೋಡಬೇಕು. ಅದನ್ನನೋಡೋದಕ್ಕೆ ಅಂತಲೇ ರಾಯಬರೇಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ತಿಲಕ್ ಭವನಕ್ಕೆ ಹೋಗಿದ್ದು. ದುರಸ್ತಿ ಕೆಲಸ ನಡೆಯುತ್ತಿದ್ದ ಆ ಕಚೇರಿಯ ಒಂದು ಭಾಗದ ಒಂದು ಚೇಂಬರ್ನಲ್ಲಿ ಕೆ.ಎಲ್ ಶರ್ಮಾ ಅಂತ ಒಬ್ಬರು ಮಧ್ಯವಯಸ್ಕ ತುಂಬು ತೋಳಿನ ಸಫಾರಿ ಧರಿಸಿಕೊಂಡು ಕುಳಿತಿದ್ದರು. ಅವರು ರಾಯಬರೇಲಿಯಲ್ಲಿ ಸೋನಿಯಾ ಪ್ರತಿನಿಧಿ. "ತಿಂಗಳಿಗೆ ಕನಿಷ್ಠ ಹತ್ತು ದಿನ ನಾನು ಇಲ್ಲಿರ್ತೀನಿ. ಉಳಿದಂತೆ ನನಗೆ ದೆಹಲಿಯಲ್ಲಿ ಸಂಸತ್ ಭವನದ ಬಳಿ ಒಂದು ಆಫೀಸ್ ಇದೆ. ಕ್ಷೇತ್ರಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಅರ್ಜಿಗಳನ್ನ ಇಲ್ಲೇ ತೆಗೆದುಕೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸ್ತೀವಿ. ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯ ಆಸ್ಪತ್ರೆಗಳಿವೆ. ದೊಡ್ಡ ಮಟ್ಟದ ಚಿಕಿತ್ಸೆ ಬೇಕು ಅಂತ ಇಲ್ಲಿನ ವೈದ್ಯರು ಶಿಫಾರಸು ಮಾಡಿದರೆ ದೆಹಲಿಗೆ ಕರೆದುಕೊಂಡು ಹೋಗಿ ಸಂಬಂಧಪಟ್ಟ ಸ್ಪೆಷಲಿಸ್ಟ್ಗಳ ಹತ್ತಿರ ಚಿಕಿತ್ಸೆ ಕೊಡಿಸ್ತೀವಿ. ಇಲ್ಲೀ ತನಕ ಸುಮಾರು ಒಂದೂವರೆ ಸಾವಿರ ಜನರಿಗೆ ಹಂಗೆ ಚಿಕಿತ್ಸೆ ಸಿಕ್ಕಿದೆ. ಒಂದು ಸಲ ಏಮ್ಸ್ ಉದ್ಘಾಟನೆ ಆಗಿಬಿಟ್ಟರೆ ನಂತರ ಸಮಸ್ಯೆ ಇರಲ್ಲ ಬಿಡಿ. ಈ ಕಚೇರಿಯಿಂದ ಸರಕಾರಿ ನೌಕರಿಗಳಿಗೆ ಶಿಫಾರಸು ಮಾಡೋದಿಲ್ಲ. ಆದರೆ, ಬೇರೆ - ಬೇರೆ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಸೇರಿಕೊಂಡು ಯುವಕರಿಗೆ ತರಬೇತಿ ಕೊಡೋ ವ್ಯವಸ್ಥೆ ಮಾಡಿದೀವಿ. ನೀವು ನೋಡಿರಬಹುದಲ್ಲ - ಕೋಚ್ ಫ್ಯಾಕ್ಟರಿ ಹೆಂಗಿದೆ ಅಂತ..?" ಅಂತೆಲ್ಲ ತುಂಬ ಕಾನ್ಫಿಡೆನ್ಸ್ನಿಂದ ಮಾತನಾಡುತ್ತಾ ಹೋದರು ಶಮರ್ಾ. "ಕೋಚ್ ಫ್ಯಾಕ್ಟರಿಯಲ್ಲಿ ಸ್ಥಳೀಯರಿಗೆ ಎಷ್ಟು ನೌಕರಿ ಸಿಕ್ಕಿವೆ..?" ಕೇಳಿದೆ. "ಒಂದು ಸಾವಿರದ ನಾಲ್ಕುನೂರ ನಲವತ್ತೇಳು. ಜಮೀನು ಕಳೆದುಕೊಂಡ ಕುಟುಂಬಕ್ಕೊಬ್ಬರಂತೆ ನೌಕರಿ ಕೊಟ್ಟಿದೀವಿ" ಅಂದರು. "ಅವರವರ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಕ್ಕಿದೆಯಾ..?" ಮರುಪ್ರಶ್ನೆ ಹಾಕಿದೆ. "ನಿಮಗೆ ಗೊತ್ತಿರಬೇಕಲ್ಲ, ಜಮೀನು ಕಳೆದುಕೊಂಡ ಮನೆಯವರೊಬ್ಬರಿಗೆ ಡಿ ಗ್ರೂಪ್ ಕೆಲಸ ಸಿಗತ್ತೆ. ಅವರು ಡಾಕ್ಟರೇಟ್ ಓದಿದ್ದರೂ ಡಿ ಗ್ರೂಪ್ ನೌಕರಿಯೇ" ಅಂದರು. "ನಿಮಗೂ - ಸೋನಿಯಾ ಗಾಂಧಿಯವರಿಗೂ ಸಂಪರ್ಕ ಹೇಗೆ..?" ಮತ್ತೆ ಕೇಳಿದೆ. "ಎನಿ ಟೈಮ್... ಫೋನ್ ಮಾಡ್ತೀನಿ. ಅವರು ಬಿಜಿ ಇದ್ದರೆ ಮೆಸೇಜ್ ಹಾಕಿರ್ತೀನಿ - ಫ್ರೀ ಆದ ತಕ್ಷಣ ಫೋನ್ ಮಾಡ್ತಾರೆ" ಅಂದರು ಶರ್ಮಾ. ನಂಬೋದಕ್ಕಾಗಲಿಲ್ಲ. ಇಲ್ಲಿ ಕೆಟ್ಟ ರಸ್ತೆಗಳು - ಕಚ್ಚಾ ಮನೆಗಳು - ಕೈಕೊಡುವ ಕರೆಂಟುಗಳ ಬಗ್ಗೆ ಕೇಳಿದರೆ ಇವರದೂ ಅದೇ ಉತ್ತರ "ರಾಜ್ಯ ಸರಕಾರ ಸಾರ್... ಹೊಟ್ಟೆಕಿಚ್ಚು ಈ ಕ್ಷೇತ್ರದ ಮೇಲೆ" ಅಂತ.
                  ಅಲ್ಲಿಂದ ಹೊರಟು ರಾತ್ರಿ ವಸತಿಗೆ ಅಂತ ಸರಸ್ ಹೊಟೇಲ್ಗೆ ಬಂದರೆ ಸ್ವಲ್ಪ ಹೊತ್ತಿನಲ್ಲಿ ಮೂರು ಅಚ್ಚಬಿಳಿ ಟಾಟಾ ಸಫಾರಿಗಳು ಧೂಳೆಬ್ಬಿಸಿಕೊಂಡು ಬಂದವು. ಮೂರಕ್ಕೂ ಒಂದೇ ನಂಬರ್. 5500..! ಮೂರರ ಮೇಲೂ ಬಿ.ಜೆ.ಪಿಯ ಧ್ವಜ. ಮೊದಲ ಸಫಾರಿಯಿಂದ ನಲವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ಇಳಿದರು. ಹಿಂದಿನ ಸಫಾರಿಗಳಿಂದ ಧಡಧಡನೆ ಇಳಿದು ಬಂದ ಹುಡುಗರು ತಲೆಗೆ ಬಿ.ಜೆ.ಪಿ ಧ್ವಜ ಸುತ್ತಿಕೊಂಡಿದ್ದರು. ಕಣ್ಣಿಗೆ ರೇಬಾನ್ ಗ್ಲಾಸು. ವಿಚಾರಿಸಿ ನೋಡಿದಾಗ ಆ ಒಡ್ಡೋಲಗದ ನಾಯಕ ಪುಷ್ಪೇಂದ್ರ ಸಿಂಗ್, ಸೋನಿಯಾ ಗಾಂಧಿ ವಿರುದ್ಧ ಬಿ.ಜೆ.ಪಿ ಟಿಕೆಟ್ ಕೇಳಿರೋ ವ್ಯಕ್ತಿ ಅನ್ನೋದು ಗೊತ್ತಾಯಿತು. ಹೊಟೇಲ್ನ ಲಾಬಿಯಲ್ಲಿ ಕುಳಿತು ಮಾತನಾಡಿದರು ಪುಷ್ಪೇಂದ್ರ ಸಿಂಗ್. ಮುಂದಕ್ಕೆ ಬಾಗಿ, ಮುಖದೆದುರಿಗೆ ಮುಖ ತಂದು, ಊರಗಲ ಕಣ್ಣು ಬಿಟ್ಟು ಪ್ರಶ್ನೆ ಕೇಳಿಸಿಕೊಳ್ಳುತ್ತಿದ್ದರು. ನಂತರ ಕುರ್ಚಿಗೆ ಒರಗಿ ಕಣ್ಣು ಮುಚ್ಚಿಕೊಂಡು ಗಾಢ ನಿದ್ದೆಯಲ್ಲಿ ಕನವರಿಸುವವರಂತೆ ಇಡೀ ಉತ್ತರ ಹೇಳಿ ಮುಗಿಸೋರು. ಮಧ್ಯದಲ್ಲಿ ಯಾರೂ ಮಾತನಾಡುವಂತಿಲ್ಲ..! "ನನಗೆ ಟಿಕೆಟ್ ಒಂದು ಕೊಟ್ಟು ನೋಡಲಿ ಸಾರ್... ಒಂದು ಲಕ್ಷ ಓಟಿನಿಂದ ಸೋನಿಯಾ ಗಾಂಧೀನ ಸೋಲಿಸದಿದ್ದರೆ ಹೆಸರು ಬದಲಿಸಿಕೊಂಡು ಬಿಡ್ತೀನಿ, ಹೆಸರು. ಕ್ಯಾ ಸಮಝೇ ಹೋ ಆಪ್ ಮುಝೆ..? ರಾಯಬರೇಲಿಯ ಹಳ್ಳಿಹಳ್ಳಿಯಲ್ಲಿ ನನ್ನ ಜನ ಇದಾರೆ" ಅಂದರು ಆತ. ಅಂಥ ಒಂದು ಹಳ್ಳಿಯನ್ನ ನಾನು ಈಗಷ್ಟೇ ನೋಡಿಕೊಂಡು ಬಂದಿದ್ದೆ. ರಾಯಬರೇಲಿಯಲ್ಲಿ ಸೋನಿಯಾ ಗಾಂಧಿಯವರನ್ನ ಸೋಲಿಸೋದು ಯಾಕೆ ಅಸಾಧ್ಯ ಅನ್ನೋದು ಅಲ್ಲಿ ಅರ್ಥ ಆಗಿತ್ತು - ಬಿ.ಜೆ.ಪಿ ಚಿಗಿತುಕೊಳ್ಳೋದು ಯಾಕೆ ಅಸಾಧ್ಯ ಅನ್ನೋದು ಇಲ್ಲಿ ಅರ್ಥ ಆಯಿತು..!

No comments:

Post a Comment