Tuesday, July 26, 2011

ಯುದ್ಧ ಅನ್ನೋ ಶಬ್ದ ಕಿವಿಗೆ ಬಿದ್ದರೆ ಸಾಕು...



                     ಹನ್ನೆರಡು ವರ್ಷಗಳ ಹಿಂದಿನ ಮಾತು... ಆಗಷ್ಟೇ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಮುಗಿಸಿದ್ದೆ. ಕಾರ್ಗಿಲ್  ಯುದ್ಧ ಉತ್ತುಂಗದಲ್ಲಿದ್ದ ದಿನಗಳವು. ಪೇಪರ್ ತೆಗೆದರೂ ಅದೇ ಸುದ್ದಿ - ಟಿ.ವಿ ಹಾಕಿದರೂ ಅದೇ ಸುದ್ದಿ. ಮನೆಯಲ್ಲಿ ದೂರದರ್ಶನ್ ಮಾತ್ರ ಬರ್ತಿತ್ತು. ಆವತ್ತೊಂದು ಮಧ್ಯಾಹ್ನದ ಹೊತ್ತು ಊಟ ಮಾಡ್ತಾ ಟಿ.ವಿ ಹಾಕಿದರೆ, ಒಬ್ಬ ಮಧ್ಯವಯಸ್ಕ ಮಹಿಳೆ ಸ್ಪಷ್ಟ ಹಿಂದಿಯಲ್ಲಿ ಮಾತಾಡ್ತಾ, ತಮ್ಮ ಮಗ ಸೌರಭ್ ಐದನೇ ಕ್ಲಾಸಿನಲ್ಲಿ ಓದ್ತಿದ್ದಾಗ ನಡೆದ ಘಟನೆಯೊಂದನ್ನ ನೆನಪು ಮಾಡಿಕೊಳ್ತಿದ್ರು.
                    "ಒಂದು ಸಲ ನಾನು ಟಿ.ವಿ ನೋಡ್ತಾ ಕುಳಿತಿದ್ದೆ. ಅದರಲ್ಲಿ ಕಪಿಲ್ ದೇವ್ ತಾಯಿಯ ಇಂಟರ್ವ್ಯೂ ಬರ್ತಿತ್ತು. ಸೌರಭ್ ಪಕ್ಕದಲ್ಲೇ ಆಟ ಆಡ್ತಾ ಕುಂತಿದ್ದ. ನಾನು ಅವನನ್ನ ಕರೆದು, ನೋಡು ಸೌರಭ್ ಕಪಿಲ್ ದೇವ್ ಎಷ್ಟು ದೊಡ್ಡ ಮನುಷ್ಯ, ಅವನಿಂದಾಗಿ ಅವನ ತಾಯಿ ಕೂಡ ಟಿ.ವೀಲಿ ಬರ್ತಿದಾರೆ ಅಂದೆ. ಅದಕ್ಕೆ ಸೌರಭ್, ನೋಡ್ತಿರು ಅಮ್ಮಾ ನಾನು ಮುಂದೆ ಎಷ್ಟು ದೊಡ್ಡ ಮನುಷ್ಯ ಆಗ್ತೀನಿ ಅಂದ್ರೆ, ನನ್ನಿಂದಾಗಿ ನೀನು ಕೂಡ ಟಿ.ವೀಲಿ ಬರ್ತಿಯಾ, ಅಂದುಬಿಟ್ಟ. ಇವತ್ತು ಅವನಿಂದಾಗಿ ನಾನು ಟಿ.ವೀಲಿ ಬರ್ತಿದೀನಿ, ನೋಡೋದಕ್ಕೆ ಅವನೇ ಇಲ್ಲ" ಅನ್ನುವಷ್ಟರಲ್ಲಿ ಅವರಿಗೆ ದುಃಖ ತಡೆದುಕೊಳ್ಳೋದಕ್ಕಾಗಲಿಲ್ಲ. ಮಾತು ಗದ್ಗದ.
                     ಆಕೆ ಸೌರಭ್ ಕಾಲಿಯಾ ತಾಯಿ. ಸೋಲು ಅನ್ನೋ ಶಬ್ದ ಅವರ ಮಗನಿಗೆ ಹತ್ತಿರಕ್ಕೂ ಸುಳಿದಿರಲಿಲ್ಲ. ಬಿ.ಎಸ್.ಸಿ ಮುಗಿಸಿದವನು ಮಿಲಿಟರಿಗೆ ಸೇರಿಕೊಳ್ತೀನಿ ಅಂತ ಹೋದ. ಡೆಹರಾಡೂನ್ ಇಂಡಿಯನ್ ಮಿಲಿಟರಿ ಅಕ್ಯಾಡಮಿ ಕೈ ಬೀಸಿ ಕರೆಯಿತು. ಒಂದು ವರ್ಷ ತರಬೇತಿ ಮುಗಿಸಿದವನು ಜಾಟ್ ರೆಜಿಮೆಂಟಿನಲ್ಲಿ ಕ್ಯಾಪ್ಟನ್ ಆದ. ಮೊದಲನೇ ಪೋಸ್ಟಿಂಗೇ ಕಾರ್ಗಿಲ್ ಸೆಕ್ಟರ್ನ ಕಸ್ಕರ್ ಗೆ. ಜನವರಿ ತಿಂಗಳ ಎರಡನೇ ವಾರದಲ್ಲಿ ಸೌರಭ್ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಾಗ ಅಲ್ಲಿ ಕಟಿಕಟಿ ಚಳಿ. ಬೆಟ್ಟದ ಮೇಲೆ ಮಂಜು ಬೀಳೋದಕ್ಕೆ ಶುರುವಾದ ನಂತರ ಅಲ್ಲಿನ ಬಂಕರುಗಳಲ್ಲಿ ಗಡಿ ಕಾಯೋ ಸೈನಿಕರು ಕೆಳಗಿಳಿದು ಬಂದುಬಿಡ್ತಾರೆ. ಮತ್ತೆ ಬರ್ಫು ಕರಗಿದ ನಂತರ ಮೇಲೆ ಹತ್ತಿ ಹೋಗಿ ಬಂಕರ್ ಸೇರಿಕೊಂಡು ಗಡಿಯ ದಿಕ್ಕಿಗೆ ಬಂದೂಕು ನೆಟ್ಟುಕೊಂಡು ನಿಲ್ತಾರೆ. ಅದು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಪದ್ಧತಿ. ಆ ಸಲ ಮೇ ಮಧ್ಯದಲ್ಲಿ ಮಂಜೆಲ್ಲ ಕರಗಿದ ಮೇಲೆ, ನಮ್ಮ ಬಂಕರುಗಳು ಸುಸ್ಥಿತಿಯಲ್ಲಿವೆಯಾ ಅಂತ ನೋಡಿಕೊಂಡು ಬರೋದಕ್ಕೆ ಒಂದು ಪೆಟ್ರೋಲಿಂಗ್ ಟೀಮ್ ಕಳಿಸಿದಾಗ ಅದರ ನೇತೃತ್ವ ವಹಿಸಿದವನು ಸೌರಭ್. ಅವನನ್ನೂ ಸೇರಿಸಿ ಆರು ಜನ ಇದ್ದರು.

                    ಬೆಟ್ಟ ಹತ್ತಿ ಹೋದ ಸೌರಭ್, ಇಲ್ಲಿ ಶತೃ ನೂರಾರು ಸಂಖ್ಯೆಯಲ್ಲಿ ಒಳಗೆ ನುಸುಳಿದಾನೆ ಅಂತ ವೈರ್ ಲೆಸ್ ಮೆಸೇಜ್ ಕೊಟ್ಟ. ತಾನು ಐದೇ ಐದು ಜನ ಸಿಪಾಯಿಗಳ ಸಮೇತ ಭಜರಂಗ್ ಪೋಸ್ಟ್ ಅಂತ ಕರೆಸಿಕೊಳ್ಳೋ ಬಂಕರಿನಲ್ಲಿ ಕಾಲೂರಿಕೊಂಡು ನಿಂತು ಶತೃವನ್ನ ಎದುರಿಸ್ತೀನಿ ಅಂತ ತಯಾರಾದ. ಅಷ್ಟೊತ್ತಿಗಾಗಲೇ ಆತನ ವೈರ್ ಲೆಸ್ ಸೆಟ್ ಕೆಟ್ಟು ಹೋಗಿ ಹೆಡ್ಕ್ವಾರ್ಟರ್ ಜೊತೆ ಸಂಪರ್ಕ ಇಲ್ಲದಂತಾಗಿತ್ತು. ಪರಿಸ್ಥಿತಿ ಹೇಗಿದೆ ಅಂತ ನೋಡಿಕೊಂಡು ಬರೋದಕ್ಕೆ ಇನ್ನೊಂದು ತಂಡ ಕಳೆಸಿದರೆ ಅವರ ಮೇಲೆ ಗುಂಡಿನ ಸುರಿಮಳೆ. ನೋಡ ನೋಡ್ತಿದ್ದಂತೆಯೇ ಕಾರ್ಗಿಲ್ ಯುದ್ಧಾನೇ ಶುರುವಾಗಿ ಹೋಗಿತ್ತು. ಭರ್ತಿ ಇಪ್ಪತ್ತೆರಡು ದಿನಗಳ ನಂತರ ಸೌರಭ್ ಕಾಲಿಯಾ ಮತ್ತು ಆತನ ಐವರು ಸಿಪಾಯಿಗಳ ಶವಗಳನ್ನ ಭಾರತಕ್ಕೆ ಕೊಟ್ಟಿತು ದುಷ್ಟ ಪಾಕಿಸ್ತಾನ. ಶವಗಳು ಗುರುತು ಹಿಡಿಯೋ ಸ್ಥಿತಿಯಲ್ಲಿರಲಿಲ್ಲ. ಅವರನ್ನ ಜೀವಂತವಾಗಿ ಸೆರೆಹಿಡಿದು ಚಿತ್ರಹಿಂಸೆ ಕೊಟ್ಟು ಸಾಯಿಸಲಾಗಿದೆ ಅಂತ postmortem report ಹೇಳಿತ್ತು. ಆ ಸೌರಭ್ ಕಾಲಿಯಾನ ತಾಯಿ ಆವತ್ತು "ನನ್ನ ಮಗ ನನಗೆ ಮಾತು ಕೊಟ್ಟಿದ್ದ, ತನ್ನಿಂದಾಗಿ ನಾನು ಟಿ.ವೀಲಿ ಬರ್ತೀನಿ ಅಂತ" ಅನ್ನೋ ಮಾತುಗಳನ್ನಾಡ್ತಿದ್ರೆ ಯಾಕೋ ಕೈಗೆತ್ತಿಕೊಂಡಿದ್ದ ತುತ್ತು ಹಂಗೇ ತಟ್ಟೆಯೊಳಕ್ಕೆ ಬಿದ್ದುಬಿಟ್ಟಿತ್ತು. ಅಷ್ಟಕ್ಕೇ ಊಟ ಬಿಟ್ಟು ಎದ್ದುಬಿಟ್ಟೆ.
                    ಧಾರವಾಡ ತಾಲೂಕಿನಲ್ಲಿ ಕೊಟಬಾಗಿ ಅಂತ ಒಂದು ಸಣ್ಣ ಹಳ್ಳಿ ಇದೆ, ಅಲ್ಲಿ ಕಲ್ಲಪ್ಪ ಪಾಗಾದ್ ಅನ್ನೋ ನನ್ನ ಪರಿಚಯದ ಸಿಪಾಯಿಯೊಬ್ಬ ಇದಾನೆ. ಆವತ್ತು ಗಡಿಯಲ್ಲಿ ಸೌರಭ್ ಮತ್ತು ಇತರ ಐವರ ಶವಗಳನ್ನ ಪಡೆದ ತಂಡದಲ್ಲಿ ಆತ ಕೂಡ ಇದ್ದ. ಯುದ್ಧ ಮುಗಿದು ಐದಾರು ತಿಂಗಳ ನಂತರ ಕಲ್ಲಪ್ಪ ರಜೆಗೆ ಬಂದಿದ್ದ. ಆವತ್ತೊಂದು ರಾತ್ರಿ ತೋಟದ ಮನೆಯ ಕಟ್ಟೆ ಮೇಲೆ ಮಾತಾಡ್ತಾ ಕುಳಿತಿದ್ದಾಗ ಆತ ಹೇಳಿದ್ದ. " ಆರೂ ಜನರ ಕಿವಿ ಕತ್ತರಿಸಿದ್ರು, ಇಕ್ಕಳ ಹಾಕಿ ಅಷ್ಟೂ ಹಲ್ಲು - ಉಗುರು ಕಿತ್ತಿದ್ರು, ಕಣ್ಣ ಗುಡ್ಡಿ ಮೀಟಿ ತೆಗೆದುಬಿಟ್ಟಿದ್ರು. ಅದರಲ್ಲೂ ಸೌರಭ್ ಗೆ, ಆತನ ಮರ್ಮಾಂಗ  ಕತ್ತರಿಸಿ ಅವನದೇ ಬಾಯಲ್ಲಿಟ್ಟು ಕಳಿಸಿದ್ದ ದುಶ್ಮನ್. ಹೆಣ ತಗೊಳ್ಳೋದಕ್ ಹೋದ ನಮ್ಮನ್ನ ನೋಡಿ ಅಪಹಾಸ್ಯ ಮಾಡಿ ನಕ್ಕರು. ಅವಡುಗಚ್ಚಿಕೊಂಡು ತಗೊಂಡು ಬಂದುಬಿಟ್ವಿ. ಆ ಸುದ್ದಿ ಸೈನ್ಯದ ತುಂಬ ಅದ್ಯಾವ ಪರಿ ಹರಡಿತೆಂದರೆ, ಹುಚ್ಚೆದ್ದು ನುಗ್ಗಿದ್ವಿ, ರಣಕೇಕೆ ಹಾಕಿಕೊಂಡು ಬೆಟ್ಟಹತ್ತಿ ಗುಂಡು ಹಾರಿಸಿದ್ವಿ, ಬಂಕರ್ ತಲುಪೋ ಹೊತ್ತಿಗೆ ಅಳಿದುಳಿದ ಶತೃಗಳು ಪಾಕಿಸ್ತಾನದ ದಿಕ್ಕಿಗೆ ಓಡಿ ಹೋಗಿರ್ತಿದ್ರು, ಉಳಿದವರ ಶವಗಳು ಅಲ್ಲೇ ಬಿದ್ದಿರ್ತಿದ್ವು, ಅವುಗಳ ನಡುವೆ ಗಾಯಗೊಂಡವರು ನರಳ್ತಾ ಮಲಗಿರ್ತಿದ್ರಲ್ಲ, ಅವರು ನಾವು ಹೋದ ಕೂಡಲೇ ಪ್ರಾಣ ಭಿಕ್ಷೆ ಬೇಡೋರು. ಮನೇಲಿ ವಯಸ್ಸಾದ ತಂದೆ - ತಾಯಿ ಇದಾರೆ, ಸಣ್ಣ - ಸಣ್ಣ ಮಕ್ಕಳಿದಾರೆ, ಹೆಂಡತಿ ಗರ್ಭಿಣಿ ಅನ್ನೋರು. ಅವರನ್ನ ನೋಡಿದ ಕೂಡಲೇ ಸೌರಭ್ ಕಾಲಿಯಾ ಮತ್ತು ಅವನ ಜೊತೆಗಿದ್ದ ಐದು ಜನ ಸೈನಿಕರು ನೆನಪಾಗಿಬಿಡ್ತಿದ್ರು. ಅವರಿಗಿರಲಿಲ್ಲವಾ ತಂದೆ - ತಾಯಿ, ಹೆಂಡತಿ ಮಕ್ಕಳು..? ಸಿಟ್ಟು ತಡೆಯೋದಕ್ಕಾಗ್ತಿರಲಿಲ್ಲ..." ಅಂತ ಇನ್ನೂ ಏನೇನೋ ಹೇಳಿದ್ದ ಕಲ್ಲಪ್ಪ. ಆವತ್ತು ನಾನು ಮೊಟ್ಟಮೊದಲ ಸಲ ಅವನ ಕಣ್ಣಿನಲ್ಲಿ ನೀರು ನೋಡಿದ್ದೆ. ಅನ ಕಣ್ಣು ಹಿಂದ್ಯಾವತ್ತೂ ಅಷ್ಟು ಕೆಂಪಗಾಗಿರಲಿಲ್ಲ...
                    ಹನ್ನೆರಡು ವರ್ಷಗಳಾಗಿ ಹೋದವು. ಇವತ್ತಿಗೂ ಕಾರ್ಗಿಲ್ ಅನ್ನೋ ಶಬ್ದ ಕಿವಿಗೆ ಬಿದ್ದರೆ ಸಾಕು, ಸೌರಭ್ ಕಾಲಿಯಾನ ತಾಯಿಯ ಮುಖ ಕಣ್ಣ ಮುಂದೆ ಬಂದಂತಾಗತ್ತೆ. ಯುದ್ಧ ಅನ್ನೋ ಶಬ್ದ ಕೇಳಿದರೆ ಸಾಕು, ನಿಗಿ ಕೆಂಡದಷ್ಟು ಕೆಂಪಗೆ ಕಣ್ಣು ಮಾಡಿಕೊಂಡು ಬಂದೂಕು ಹಿಡಿದ ಕಲ್ಲಪ್ಪ ಪಾಗಾದನ ಎದುರಿಗೆ ಪ್ರಾಣ ಭಿಕ್ಷೆ ಬೇಡ್ತಿರೋ ಪಾಕಿ ಸೈನಿಕ ನೆನಪಾಗ್ತಾನೆ. ಯಾಕೋ ಅವೆರಡು ಮುಖ ಮರೆಯೋದಕ್ಕೆ ಆಗ್ತಾನೇ ಇಲ್ಲ.

1 comment:

  1. very nice sir
    antha eshto sipahigalu kargilnalli amararadru ...........

    ReplyDelete