Wednesday, January 5, 2011

ಆರು ವರ್ಷಗಳ ನಂತರ ಮತ್ತದೇ ಆಸೆ...

ಹಾ... ಎಷ್ಟು ದಿನಗಳಾಗಿವೆ ಅಂಥದ್ದೊಂದು ಲಾಂಗ್ ರೈಡ್ ಮಾಡಿ... ಹಾವಿನಂತೆ ಹೊರಳಾಡುವ ಹಚ್ಚ ಹಸುರ ಕಾಡು ದಾರಿಯ ನಡುವೆ ಬುಲೆಟ್ ಗುಡುಗುಡಿಸುತ್ತಾ ಸಾಗುವ ಮೋದ. ಹೇಳದೇ ಕೇಳದೇ ಸುರಿವ ಮಳೆಗೆ ಮುಖವೊಡ್ಡಿ ಒದ್ದೆಯಾಗುವ ಖುಷಿ. ಬೈಕು ಓಡಿಸ್ತಾ ಓಡಿಸ್ತಾ, ಮೈಯಲ್ಲಿನ ಸತುವೆಲ್ಲ ಮುಗಿದುಹೋಗಿ, ಕಣ್ಣು ಕತ್ತಲೆ ಬಂದಂತಾಗಿ ಇನ್ನು ನನ್ ಕೈಯಲ್ಲಾಗಲ್ಲ ಅಂದುಕೊಳ್ತಿರುವಾಗಲೇ, ತಲುಪಬೇಕಾದ ಗಮ್ಯ ತಲುಪಿಕೊಂಡುಬಿಡುವ ಸಂತೋಷ. ನನಗಿಂತ ಜಾಸ್ತಿ ಆ ರೋಮಾಂಚನವನ್ನ ನನ್ನ ಬುಲೆಟ್ ಮಿಸ್ ಮಾಡಿಕೊಳ್ತಿದೆಯೇನೋ. 

ಹುಬ್ಬಳ್ಳಿಯಲ್ಲಿದ್ದ ದಿನಗಳಲ್ಲಾದರೆ ಹೇಳೋರು ಕೇಳೋರು ಯಾರೂ ಇರಲಿಲ್ಲ. ಬೆಳ್ ಬೆಳಿಗ್ಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ಊರಲ್ಲಿ ಕಿಕ್ ಒದ್ದರೆ ತಡಸ, ಮುಂಡಗೋಡ ದಾಟಿ ಭರತನಹಳ್ಳಿ ಮಾವಿನಕಟ್ಟಾ. ಅಲ್ಲಿ ಗುಡಿಸಲಿನಂಥಾ ಹೊಟೇಲಿನೆದುರಿಗೆ ಹೋಗಿ ನಿಲ್ಲಿಸಿದರೆ, ಒಳಗಿದ್ದ ಅಜ್ಜಿಗೆ ಸ್ವಂತ ಮೊಮ್ಮಗನೇ ಬಂದನೇನೋ ಅನ್ನುವಷ್ಟು ಸಂತೋಷ. ಆ ದಾರಿಯಲ್ಲಿ ಅದೆಷ್ಟು ಸಲ ಹೋಗಿದ್ದೆನೋ, ಅದೆಷ್ಟು ಸಲ ಆಕೆಯ ಹೊಟೇಲ್ನಲ್ಲಿ ತಿಂಡಿಗೆ ನಿಲ್ಲಿಸಿದ್ದೆನೋ. ಆ ಅಜ್ಜಿ ಕೈಯಲ್ಲಿ ಮೊಸರವಲಕ್ಕಿ ತಿನ್ನುವ ಸುಖ ತಿಂದವರಿಗೇ ಗೊತ್ತು. ಹಿಂದಿನ ದಿನವೇ ಎಮ್ಮೆ ಹಾಲಿಗೆ ನೀರು ಸೋಕಿಸದೇ ಹದವಾಗಿ ಕಾಯಿಸಿ ಹೆಪ್ಪು ಹಾಕಿರ್ತಿದ್ದಳು. ಬೆಳಿಗ್ಗೆ ಹೊತ್ತಿಗೆ ಅದು ಗಿಣ್ಣದಷ್ಟು ಗಟ್ಟಿ ಮೊಸರು. ದಪ್ಪ ಅವಲಕ್ಕಿಯನ್ನ ನೀರಿನಲ್ಲಿ ಅದ್ದಿ ತೆಗೆದು, ಅದಕ್ಕೆ ಹದವಾಗಿ ಮೊಸರು ಹಾಕಿ ಕಲಸ್ತಿತ್ತು ಅಜ್ಜಿ. ಹಾಗೆ ತಯಾರಾದ ಮೊಸರವಲಕ್ಕಿಯನ್ನ ಮಡಿಕೆಗೆ ತುಂಬಿ ಅದರ ಸುತ್ತ ಒದ್ದೆ ಬಟ್ಟೆ ಹಾಕಿ ಹೊಟೇಲಿನ ಮೂಲೆಯ ತಂಪಿನಲ್ಲಿಟ್ಟಿರ್ತಿದ್ದಳು. ನಾನು ಬೈಕು ನಿಲ್ಲಿಸಿ ಕೈತೊಳೆದುಕೊಂಡು ಗುಡಿಸಲಿನ ಸಣ್ಣ ಬಾಗಿಲು ದಾಟಿಕೊಂಡು ಒಳಗಿದ್ದ ಬಾಕಿನ ಮೇಲೆ ಕುಳಿತುಕೊಳ್ಳುವಷ್ಟರಲ್ಲಿ, ದೊಡ್ಡ ತಟ್ಟೆಯ ಮೂಲೆಯಲ್ಲಿ ಮಿಡಿಗಾಯಿ ಉಪ್ಪಿನಕಾಯಿ ಹಾಕಿ, ಆ ತಟ್ಟೆಲ್ಲೊಂದು ಸಣ್ಣ ತಟ್ಟೆ ಇಟ್ಟು ಅದರಲ್ಲಿ ತುಂಬಿ ತುಳುಕುವಷ್ಟು ಮೊಸರವಲಕ್ಕಿ ಹಾಕಿ, ಅದರ ಮೇಲೆ ಹುರಗಡಲೆ ಚಟ್ನಿ ಉದುರಿಸಿ ಕೊಡ್ತಿತ್ತು. ಆರು ಪಾಯಿಯೇನೋ ಇತ್ತು ಒಂದು ಪ್ಲೇಟಿಗೆ. ಎರಡು ಪ್ಲೇಟ್ ತಿಂದುಬಿಟ್ಟರೆ, ಅಲ್ಲೇ ಮಲಗಿಬಿಡಬೇಕು ಅನ್ನಿಸೋದು. ಕೆಲವು ಸಲ ಹೋಗುವಾಗ ತೋಟದ ಸಪೋಟ ತಗೊಂಡು ಹೋಗ್ತಿದ್ದೆ. ಅವನ್ನ ಕೊಟ್ಟರೆ ಅಜ್ಜಿ ದುಡ್ಡೇ ಮುಟ್ತಿರಲಿಲ್ಲ. ಅಲ್ಲಿ ತಿಂಡಿ ಮುಗಿಸಿಕೊಂಡು ಮತ್ತೆ ಹೊರಟರೆ ನೇರವಾಗಿ ಸೋಂದಾ. ಅದಕ್ಕೆ ಬ್ರಾಹ್ಮಣರು ಸೋದೆ ಅಂತಾರೆ. ಅಲ್ಲಿಂದ ಹಂಗೇ ಶಿರಸಿಯ ದಿಕ್ಕಿಗೆ ಒಂದೈದಾರು ಕಿಲೋಮೀಟರ್ ಹೋದರೆ, ಎಡ ಮಗ್ಗುಲಿಗೆ 'ಪೇಟೆ ನಾರಾಯಣಸ್ವಾಮಿ ದೇವಸ್ಥಾನಕ್ಕೆ ದಾರಿ' ಅನ್ನೋ ಸಣ್ಣ ಬೋರ್ಡು. ಆ ಕಾಡು ದಾರೀಲಿ ಅರ್ಧ ಕಿಲೋಟಮೀಟರ್ ದೂರ ಹೋಗಿ ದೇವಸ್ಥಾನದ ಅಂಗಳದಲ್ಲಿ ಬುಲೆಟ್ ನಿಲ್ಲಿಸೋ ಹೊತ್ತಿಗೆ ಟೈಮು ಹತ್ತೂವರೇನೋ - ಹನ್ನೊಂದೋ ಆಗಿರ್ತಿತ್ತು.
 ಯಾವ ಕಾಲದಲ್ಲಿ, ಅದ್ಯಾವ ರಾಜ ಕಟ್ಟಿಸಿದ ಗುಡಿಯೋ ಅದು. ಒಳಗಿದ್ದ ದೇವರು, ಅದರ ಮಹಾತ್ಮೆಗಳೆಲ್ಲ ಈಗ ನೆನಪಿಲ್ಲ. ಆದರೆ, ಅದರ ಪ್ರಾಂಗಣದ ತಂಪು ಮರೆಯುವಂಥದ್ದಲ್ಲ. ಬೆಳಿಗ್ಗೆ ಪೂಜಾರಿ ಬಂದು ಪೂಜೆ ಮಾಡಿ ಗರ್ಭ ಗುಡಿಯ ಬಾಗಿಲು ಹಾಕಿಕೊಂಡು ಹೋಗಿಬಿಟ್ಟರೆ, ಅಲ್ಲಿ ಬೇರೆ ಯಾರಾದರೂ ಬಂದಿದ್ದನ್ನ ನಾನು ನೋಡಿಲ್ಲ. ದೇವರ ಮೂರ್ತಿಯೆದುರಿನ ದೀಪ ಮಾತ್ರ ಉರಿಯುತ್ತಿರುತ್ತಿತ್ತು. ಹೊರಗೆ ಬಂದು ದೇವಸ್ಥಾನದ ಸುತ್ತ ಒಂದು ಸುತ್ತು ಹಾಕಬೇಕು. ಗೋಡೆಯ ತುಂಬ ಮೈಥುನ ಶಿಲ್ಪಗಳು. ಗುಡಿಯೆದುರಿಗೆ ಬಿಲ್ವ ಪತ್ರೆ ಗಿಡ. ಮುಂದೆ ನಾಲ್ಕು ಹೆಜ್ಜೆ ನಡೆದರೆ ಪಾಳು ಬಿದ್ದ ಕಲ್ಯಾಣಿ. ಅದರಾಚೆಗೆ ಕಾಡು. ಬಿಸಿಲು ಏರೋ ಹೊತ್ತಿಗೆಲ್ಲ ಕಲ್ಯಾಣಿಯ ಕಲ್ಲಿನ ಕಟ್ಟೆ ಮೇಲೆ ಕಾಲು ಇಳಿಬಿಟ್ಟುಕೊಂಡು ಕುಳಿತು ನೆನಪಿಗೆ ಬಂದ ಯಾವುದೋ ಹಾಡು ಗುನುಗುನಿಸುವುದರಲ್ಲಿ ಅದೆಂಥಾ ಸುಖ ಇತ್ತು..?
                                        'ರಂಜಿಶ್ ಹಿ ಸಹಿ, ದಿಲ್ ಹಿ ದುಖಾನೆ ಕೆ ಲಿಯೆ ಆ,
                                         ಆ ಫಿರ್ ಸೆ ಛೋಡ್ ಕೆ ಜಾನೇ ಕೆ ಲಿಯೆ ಆ'
 ಕಾಡ ನಡುವಿನ ಪಾಳು ಗುಡಿಯೆದುರಿಗಿನ ಕಲ್ಯಾಣಿಯ ಕಟ್ಟೆಯ ಮೇಲೆ ಒಬ್ಬಂಟಿಯಾಗಿ ಕುಳಿತವನಿಗೆ ಯಾರದೋ ನೆನಪು. ಸುಮ್ಸುಮ್ನೆ ಕನವರಿಕೆ. ಅದೆಷ್ಟು ಹೊತ್ತು ನಿಶ್ಚಲನಾಗಿ, ಕಲ್ಲುಗಳ ನಡುವೆ ಕಲ್ಲಿನಂತೆ, ಪೊದೆಯ ಮಧ್ಯೆ ಪೊದೆಯಂತೆ ಕುಳಿತಿರುತ್ತಿದ್ದೆನೋ. ಅಲ್ಲಿ ನಾನು ಕುಳಿತದ್ದೇ ಸುಳ್ಳೇನೋ ಅನ್ನೋ ಹಾಗೆ ಕಾಡ ನಡುವಿನಿಂದ ನಿಧಾನವಾಗಿ ತವಳಿಕೊಂಡು ಬರುತ್ತಿದ್ದ ಹೆಬ್ಬಾವು ಕಲ್ಯಾಣಿಯಲ್ಲಿ ಈಜು ಬಿದ್ದದ್ದು ಅದೆಷ್ಟು ಸಲವೋ. ಅಲ್ಲಿಂದ ಮೇಲೇಳ್ತಿದ್ದದ್ದೇ ಮಧ್ಯಾಹ್ನದ ಹೊತ್ತಿಗೆ. ಮತ್ತೆ ಸೋಂದಾದ ಕಡೆ ಬುಲೆಟ್ ತಿರುಗಿಸಿದರೆ, ದಾರಿಯಲ್ಲಿ ಎಳನೀರು - ಏಲಕ್ಕಿ ಬಾಳೆಹಣ್ಣು. ಹಂಗೇ ಜೈನ ಮಠದ ದಾರಿಯಲ್ಲಿ ಹೋಗಿ, ಬಲಕ್ಕೆ ಕಚ್ಚಾ ರಸ್ತೆಯಲ್ಲಿ ಬೈಕು ತಿರುಗಿಸಿ ಆ ರಸ್ತೆ ಕಾಡಿನಲ್ಲಿ ಲೀನವಾಗುವ ತನಕ ಹೋಗಬೇಕು. ನಂತರ ಅಲ್ಲೇ ಸೈಡಿನಲ್ಲಿ ಬೈಕು ನಿಲ್ಲಿಸಿ ಕಾಡು ದಾರಿಯಲ್ಲಿ ನಡೆಯಲು ಶುರು ಮಾಡಿದರೆ, ಎರಡು ಮೂರು ಕಡೆ ಸಣ್ಣ ಸಣ್ಣ ತೊರೆಗಳು ಸಿಗ್ತವೆ. ಮೊಳಕಾಲ ತನಕ ಪ್ಯಾಂಟ್ ಏರಿಸಿಕೊಂಡು ಆ ತೊರೆಗಳನ್ನ ದಾಟಿಕೊಂಡು ನಡೆಯಬೇಕು. ದಟ್ಟ ಕಾಡದು. ಒಳಗೆ ಅರೆಗತ್ತಲು. ಅಲ್ಲಿ ಮರಗಳು ಒತ್ತಟ್ಟಿಗಿರಲಿ, ಬಳ್ಳಿಗಳೇ ಬಲಿಷ್ಠ ವ್ಯಕ್ತಿಯೊಬ್ಬನ ತೊಡೆ ಗಾತ್ರಕ್ಕಿವೆ. ಅವುಗಳ ನಡುವಿನಿಂದ ಯಾವತ್ತೂ ಕೇಳಿರದಂಥ ಹಕ್ಕಿಗಳ ಕೂಗು. ಮಳೆಗಾಲದಲ್ಲಾದರೆ, ಏಲಕ್ಕಿ ಬಾಳೆಹಣ್ಣಿನ ಅಂಗಡಿಯಲ್ಲಿ ದೊಡ್ಡದೊಂದು ಹೊಗೆಸೊಪ್ಪಿನ ಎಲೆಯನ್ನೂ ತೆಗೆದುಕೊಂಡಿತರ್ಿದ್ದೆ. ಕಾಡಿಗೆ ಹೆಜ್ಜೆ ಇಡುವ ಮೊದಲೇ ಅದನ್ನ ನೀರಿನಲ್ಲಿ ನೆನೆಸಿ ಕಾಲಿಗೆ ತಿಕ್ಕಿಕೊಳ್ಳಬೇಕು. ಇಲ್ಲದಿದ್ರೆ, ಉಂಬಳಗಳಿಗೆ (ಜಿಗಣೆ ಅಂತೀವಲ್ಲ, ಅವು) ನಾವೇ ಮೃಷ್ಠಾನ್ನ ಭೋಜನ. ಹಾಗೆ ಗಂವೆನ್ನುವ ದಾರಿಯಲ್ಲಿ ನಡೆದು ನಡೆದು, ದಾರಿ ತಪ್ಪಿಹೋಯಿತೇನೋ ಅಂತ ಭಯವಾಗುವ ಹೊತ್ತಿಗೆ ಛಕ್ಕಂತ ಕಾಡು ಮುಗಿದು ಹೋಗೋದು. ಅಲ್ಲೊಂದು ನದಿ. ಕಲ್ಲು ಬಂಡೆಗಳ ಸೊಂಟ ಬಳಸಿಕೊಂಡು ತುಂಬ ವ್ಯವಧಾನದಿಂದ ಹರಿಯೋ ನೀರು. ಅಲ್ಲೇ ಒಂದು ಬಂಡೆ ಮೇಲೆ, ಯಾವುದೋ ಕಾಲದಲ್ಲಿ ಕೆತ್ತಿದ ಪಾದುಕೆಗಳು. ಅವುಗಳ ಮೇಲೆ ಯಾರೋ ಆಸ್ತಿಕರು ಇಟ್ಟು ಹೋದ ದಾಸವಾಳದ ಹೂವು, ಅರಮರ್ಧ ಕುಂಕುಮ, ಕಪರ್ೂರ. ತಪೋವನ ಅಂತ ಆ ಜಾಗದ ಹೆಸರು. ಒಂದೊಂದೇ ಬಂಡೆ ಜಿಗಿದುಕೊಂಡು ಆಚೆ ಹೋದರೆ, ಬಿಳಿ ಮರಳು. ಅದರ ಮೇಲೆ ಮರದ ತಂಪು ನೆರಳಿನಲ್ಲಿ ಕುಳಿತರೆ ಮತ್ತೆ ಮನಸಿನ ತುಂಬ ಹಾಡು.
                                'ಜಾನೆ ವೋ ಕೈಸೆ ಲೋಗ ಥೆ ಜಿನಕೆ ಪ್ಯಾರ ಕೋ ಪ್ಯಾರ್ ಮಿಲಾ,
                                 ಹಮ್ ನೆ ಜಬ್ ಕಲಿಯಾ ಮಾಂಗೆ, ಕಾಂಟೊ ಕಾ ಹಾರ್ ಮಿಲಾ'
ಆ ಮರಳ ಮೇಲೆ ಚಿತ್ರ ಬಿಡಿಸ್ತಾ, ಹಾಡು ಗುನುಗುನಿಸ್ತಾ ಕುಳಿತಿದ್ರೆ ಸಂಜೆ ಆಗಿದ್ದೇ ಗೊತ್ತಾಗ್ತಿರಲಿಲ್ಲ. ಮತ್ತದೇ ಕಾಡು ದಾರಿ. ಅದೇ ಹಕ್ಕಿಯ ಹಾಡು. ಮತ್ತೆ ಬೈಕಿನ ಮೈ ತಡವಿ, ಕಿಕ್ಕು ಒದ್ದರೆ ವಾಪಸ್ ಯಲ್ಲಾಪುರ. ಅಲ್ಲಿಂದ ಹುಬ್ಬಳ್ಳಿ ತನಕ ಕೆನ್ನೆನುಣುಪಿನ ಹೈವೇ. ಬುಲೆಟ್ಟಿನ ತಾಕತ್ತು ಪರೀಕ್ಷಿಸುವಂತೆ ಆಕ್ಸಿಲರೇಟರ್ ತಿರುವಲು ಶುರು ಮಾಡಿದರೆ, ಒಡಗಟ್ಟಾ ನಾಕಾ ಅನ್ನೋ ಒಂದು ಫಾರೆಸ್ಟ್ ಚೆಕ್ಪೋಸ್ಟ್ನಲ್ಲಿ ನಿಲ್ಲಿಸಿ ಟೀ ಕುಡೀತಿದ್ದೆ. ನಂತರ ಊರು ತಲುಪಿಕೊಳ್ಳೋದು ಅದೆಷ್ಟು ಹೊತ್ತಿನ ಮಾತು..?
 ಇಂಥ ಒಬ್ಬಂಟಿ ಪ್ರವಾಸಗಳನ್ನ ಅವೆಷ್ಟು ಮಾಡಿದೆ ಆ ದಿನಗಳಲ್ಲಿ..? ಅಲ್ಲಿ ಪರಿಚಯವಾದ ಜನರೆಷ್ಟು, ಆ ಅನುಭವಗಳೇನು..? ನಟ್ಟ ನಡು ಕಾಡಿನಲ್ಲಿ ಇಳಿ ಸಂಜೆ ಹೊತ್ತಿನಲ್ಲಿ ಬುಲೆಟ್ಟಿನ ಕಿಕ್ ನಾಜ್ ಮುರಿದುಹೋಗಿ ಅನುಭವಿಸಿದ ಕಷ್ಟ ಏನ್ ಕಡಿಮೇನಾ..? ಪೇಟೆ ನಾರಾಯಣಸ್ವಾಮಿ ದೇವಸ್ಥಾನದ ಒಂದರ್ಧ ಕಿಲೋಮೀಟರ್ ದೂರದ ಹವ್ಯಕರ ಮನೆಯ ಯಜಮಾನ ಸೀತಾರಾಮ್ ಹೆಗಡೆ, ಬಾಯ್ತುಂಬ ಕವಳ ತುಂಬಿಕೊಂಡು, ಮಾತಿಗೊಮ್ಮೆ 'ಕಡೆಗೆ, ಕಡೆಗೆ' ಅನ್ತಿದ್ದರು. 'ಈ ಮಾಣಿಗೆ ಅದೆಂತ ಹುಚ್ಚು, ಬುಲೆಟ್ನಲ್ಲಿ ಹುಬ್ಬಳ್ಳಿಯಿಂದ ಬತ್ತದೆ' ಅನ್ನೋರು. ಅದೊಂದು ದಿನ ಎಷ್ಟು ಒಲ್ಲೆ ಅಂದರೂ ಕೇಳದೇ ಮನೆಗೆ ಕರಕೊಂಡು ಹೋಗಿ ಊಟ ಮಾಡಿಸಿದ್ದರು. ಅದೆಂಥದ್ದೋ ಅಪ್ಪೆ ಹುಳಿ ಅಂತೆ, ಅದರ ರುಚಿ ಮರೆತವರುಂಟಾ..? ಅಲ್ಲೇ ಪಕ್ಕದ ಕಕ್ಕಳ್ಳಿಯ ಹತ್ರ ದೊಡ್ಡ ಅಡಿಕೆ ತೋಟದ ಯಜಮಾನ ಬಾಳಾ ಸಾಹೇಬ್. ಓಶೋನ ಬಗ್ಗೆ ಮಾತು ಶುರು ಮಾಡಿದರೆ, ಹಗಲ್ಯಾವುದು ರಾತ್ರಿ ಯಾವುದು ಆತನಿಗೆ..? ಸಾವಿರಾರು ಜನ ಆಸ್ತಿಕರು ಭಕ್ತಿಯಿಂದ ಬಂದು ಪೂಜೆ ಮಾಡೋ ಸಹಸ್ರಲಿಂಗಕ್ಕೆ ಕರಕೊಂಡು ಹೋಗಿ, ಅಲ್ಲಿನ ನಂದಿ ವಿಗ್ರಹದ ಹಿಂಭಾಗದಲ್ಲಿ ನನ್ನನ್ನ ನಿಲ್ಲಿಸಿ, "ಅದು ಆ ಕಡೆಯಿಂದ ನಂದಿ ಕಣೋ, ಈ ಕಡೆಯಿಂದ ಬಂಡೆಯ ಮೇಲೆ ಬೆತ್ತಲೆ ಮಲಗಿರೋ ಹರೆಯದ ಹುಡುಗಿ. ಅದನ್ನ ಬಿಟ್ಟರೆ ಆಧ್ಯಾತ್ಮ ಪೂರ್ತಿ ಆಗಲ್ಲ. ಸೃಷ್ಠಿ ಮೂಲವನ್ನೇ ಅಲ್ಲಗಳೆದರೆ ಸೃಷ್ಠಿಕರ್ತನಿಗೆ ಅವಮಾನ ಮಾಡಿದಂತೆ" ಅಂತ ಫಿಲಾಸಫಿ ಮಾತಾಡ್ತಿದ್ನಲ್ಲ ಪುಣ್ಯಾತ್ಮ. ಯಾಣಕ್ಕೆ ಕಾಡನಡುವಿನ ದಾರಿ ಹುಡುಕಿಕೊಂಡು ಹೋಗ್ತಿದ್ದಾಗ ದಾರಿ ತಪ್ಪಿ ಮನೆಯೊಂದಕ್ಕೆ ಹೋಗಿದ್ದೆನಲ್ಲ, ಆ ಮನೆಯ ಅಂಗಳದಲ್ಲಿ ಪಾರಿಜಾತ ಗಿಡಕ್ಕೆ ಕಟ್ಟಿದ ಜೋಕಾಲಿಯಲ್ಲಿ ಕುಂತು ಹುಡುಗಿಯೊಬ್ಬಳು ಯಾವುದೋ ಕಾದಂಬರಿ ಓದ್ತಿದ್ದಳು. ಅದರಲ್ಲಿ ಬಿಳಿ ಕುದುರೆಯ ಮೇಲೆ ರಾಜಕುಮಾರ ಬರೋ ಸೀನಿಗೆ ಬಂದಿದ್ದಳೋ ಏನೋ. ಆಮರ್ಿ ಗ್ರೀನ್ ಕಲರಿನ ಬುಲೆಟ್ ಫಡಫಡಿಸಿಕೊಂಡು ನಾನು ಹೋಗಿದ್ದೆ. ನನ್ನನ್ನ ನೋಡಿ ಅವಸರವಸರವಾಗಿ ಒಳಗೆದ್ದು ಹೋದವಳ ಮುಖದಲ್ಲಿ ನಾಚಿಕೆ ಇತ್ತಾ, ಅದು ಕೇವಲ ನನ್ನ ಭ್ರಮೆಯಾ ಅಥವಾ ಬಯಕೆಯಾ ಸರಿಯಾಗಿ ನೆನಪಿಲ್ಲ. ಆ ಮನೆಯ ಯಜಮಾನ ಮಾತ್ರ ನೀರು ಕೊಟ್ಟು, ಜೇನು ತುಪ್ಪದಲ್ಲಿ ಅದ್ದಿ ತೆಗೆದಂಥಾ ಹಲಸಿನ ಹಣ್ಣಿನ ತೊಳೆ ಕೊಟ್ಟು ಯಾಣದ ದಾರಿ ತೋರಿಸಿದ್ದ. ನಾನು ವಾಪಸ್ ಬುಲೆಟ್ ಹತ್ತಿರಕ್ಕೆ ಬಂದಾಗ ಆ ಹುಡುಗಿ ಕಿಟಕಿಯಲ್ಲಿ ನಿಂತಿದ್ಲು. ನಾನು ನೋಡಿದೆ ಅನ್ನೋದು ಗೊತ್ತಾದ ಮೇಲೆ, ಹಂಗೇ ಒಳಗೆ ಹೋಗಿಬಿಟ್ಟಳು. ಅಲ್ಲಿಂದ ಹೊರಟವನು ಯಾಣ ತಲುಪೋ ತನಕ ಹಾಡಿಕೊಂಡದ್ದು ಒಂದೇ ಹಾಡು.
                               'ಕಾಡ ನೋಡ ಹೋದೆ,
                                ಕವಿತೆಯೊಡನೆ ಬಂದೆ'
            ಆರು ವರ್ಷ ಆಗಿಹೋದವಲ್ಲ, ಆ ಕಡೆ ಹೋಗದೇ. ಪೇಟೆಯ ನಾರಾಯಣಸ್ವಾಮಿ ದೇವಸ್ಥಾನದ ಗರ್ಭ ಗುಡಿಯಲ್ಲಿನ ದೀಪ ಇನ್ನೂ ಉರಿಯುತ್ತಿದೆಯಾ..? ಅಲ್ಲಿನ ಮಿಥುನ ಶಿಲ್ಪಗಳಿಗೆ ಮತ್ತಷ್ಟು ಉನ್ಮಾದ ಬಂದಿದೆಯೇನೋ. ಆ ಕಲ್ಯಾಣಿಯಲ್ಲಿ ಈಸು ಬೀಳ್ತಿದ್ದ ಹೆಬ್ಬಾವು ಈಗ ಬದುಕಿರಲಿಕ್ಕಿಲ್ಲ. ತಪೋವನದ ಹಾದಿಯ ಕಾಡಿನಲ್ಲಿ ಅವೆಷ್ಟು ಕೊಡಲಿಗಳಾಡಿವೆಯೋ. ಬಾಳಾ ಸಾಹೇಬನಿಗೆ ಇನ್ನೂ ತನಕ ನಂದಿ ವಿಗ್ರಹದಲ್ಲಿ, ಹರೆಯದ ಹುಡುಗಿಯ ಮೊಲೆ ಹುಡುಕುವಷ್ಟು ಉತ್ಸಾಹ ಉಳಿದಿದೆಯೋ ಇಲ್ಲವೋ. ಪಾರಿಜಾತ ಗಿಡದ ಜೋಕಾಲಿಯಲ್ಲಿ ಕುಂತು ರಾಜಕುಮಾರನ ಕಥೆ ಓದ್ತಿದ್ದ ಹುಡುಗಿಗೆ ಇಷ್ಟೊತ್ತಿಗಾಗಲೇ ಮದುವೆಯಾಗಿ, ಒಂದೆರಡು ಮಕ್ಕಳಾಗಿ, ಸೊಂಟದ ಸುತ್ತ ಎರಡು ಸುತ್ತು ಟೈರುಗಳು ಬಂದು, ಅವನ್ನ ಓವರ್ ಸೈಜಿನ ನೈಟಿಯಲ್ಲಿ ಮುಚ್ಚಿಕೊಳ್ಳುವ ಚಿಂತೆಯೋ ಏನೋ. ಆಕೆಗೆ ನನ್ನ ನೆನಪಾದರೂ ಇದೆಯೋ ಇಲ್ಲವೋ.
            ಈ ಸಲ ಹುಬ್ಬಳ್ಳಿಗೆ ಹೋದಾಗ ಎರಡು ದಿನ ಬಿಡುವು ಮಾಡಿಕೊಂಡು ಮತ್ತೊಮ್ಮೆ ಆ ಕಡೆ ಹೋಗಿ ಬರಬೇಕು. ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ತಿರುಗಣಿಗೆ ಬಿದ್ದ ಮೇಲೆ, ಹಂಗೆಲ್ಲ ಕಾಡು ಸುತ್ತೋ ಸುಖ ಮರೆತಂತಾಗಿದೆ. ತೀರಾ ಬೇಜಾರಾದಾಗ, ಇದೇ ಬನ್ನೇರುಘಟ್ಟದ ಕಾಡು - ನಂದಿ ಬೆಟ್ಟದ ಏರು ಹಾದಿಯ ಮೇಲೆ ಆಕ್ಸಿಲರೇಟರ್ ತಿರುವಿ ಚಟ ತೀರಿಸಿಕೊಂಡದ್ದಷ್ಟೇ. ಈ ಧಡಂ ಧಡಕಿಯ ನಡುವೆ ನನಗೆ ಅದಷ್ಟೇ ಸಮಾಧಾನ. ಆದರೆ, ಶಿರಸಿ - ಯಲ್ಲಾಪುರದ ಕಾಡು ದಾರಿಯಲ್ಲಿ ಸುಸ್ತಾಗೋ ತನಕ ಪುಟಿಗೆ ಬಿದ್ದು ಓಡಿದ್ದ ನನ್ನ ಬುಲೆಟ್ಗೆ, ಇವೆಲ್ಲಾ ಯಾವ ಲೆಕ್ಕ. ನನ್ನ ಸಮಾಧಾನಕ್ಕೆ ಅಂತ ಅಲ್ಲದಿದ್ದರೂ, ಕೊನೆ ಪಕ್ಷ ಅದರ ಖುಷಿಗಾದರೂ ಈ ಸಲ ಮತ್ತೆ ತಪೋವನಕ್ಕೆ, ಪೇಟೆ ನಾರಾಯಣಸ್ವಾಮಿ ದೇವಸ್ಥಾನದ ಅಂಗಳಕ್ಕೆ ಹೋಗಿ ಬರಬೇಕು.

2 comments:

  1. ಪ್ರಿಯ ಅಜಿತ್
    ಮೊನ್ನೆಯಷ್ಟೇ ನಿಮಗೆ ಫೋನ್ ಮಾಡಿದ್ದೆ. ಆದ್ರೆ ತೆಗೆದುಕೊಂಡವರು ಮಾತ್ರ ಬೇರೆ ಯಾರೋ. ನಂಬರ್ ಬದಲಾಗಿದೆಯಾ? ಇದ್ದರೆ ತಿಳಿಸಿ.
    ಅಜ್ಜಿಯ ಕೆನೆಹಾಲಿನ ಮೊಸರು... ಬೈಕ್ ಸವಾರಿ...ನಮ್ಮ ಪರ್ಸನಲ್ ಬದುಕು ಎಲ್ಲವನ್ನೂ ಪತ್ರಿಕೋದ್ಯಮ ನುಂಗಿಹಾಕಿಬಿಡ್ತಾ, ಗೊತ್ತಿಲ್ಲ. ಕಳೆದು ಹೋದದ್ದರಲ್ಲೇ ಇನ್ನೇನೋ ಹುಡುಕೋ ಜಾಯಮಾನ ನಾವು ಪತ್ರಕರ್ತರದ್ದು. ಬರಹ ಇಷ್ಟವಾಯ್ತು. ಆಗಾಗ್ಗೆ ಬರೆಯುತ್ತಿರಿ.
    ಮತ್ತೆ ಫೆಬ್-12ಕ್ಕೆ ನಯನ ಸಭಾಂಗಣದಲ್ಲಿ ನನ್ನ ಪುಸ್ತಕ ;ನೆನಪಿರಲಿ ಪ್ರೀತಿ ಕಾಮವಲ್ಲ' ಬಿಡುಗಡೆ ಇದೆ.ಬನ್ನಿ ಅಜಿತ್ ಆ ನೆಪದಲ್ಲಾದ್ರೂ ಸಿಗೋಣ.
    invitAtion ಕಳುಹಿಸುತ್ತಿದ್ದೇನೆ. ನಿಮ್ಮ ಸ್ನೇಹಿತರಿಗೂ ತಿಳಿಸಿ.
    ಮಿಸ್ ಮಾಡಬೇಡಿ.

    ಮತ್ತದೇ ಪ್ರೀತಿಯೊಂದಿಗೆ.

    ReplyDelete
  2. ee nimma baravanigene nange tumba ista agodu.idannu odtiruvaga naanu nimma jothe idneno anusthu:) thanku very much

    ReplyDelete