Saturday, December 25, 2010

ರಾಜಬೀದಿಯಲ್ಲಿ ಪಟ್ಟದ ಆನೆ ಬಂದಂತೆ..!


ಆಗಷ್ಟೇ ಬಿ.ಎ ಅಡ್ಮಿಷನ್ ಮಾಡಿಸಿದ್ದೆ. ನಮ್ಮಮ್ಮನಿಗೆ ನನಗೊಂದು ಬೈಕ್ ಕೊಡಿಸುವ ಹುರುಪು. ಬೈಕು ಅಂದ ತಕ್ಷಣ ನನ್ನ ಕಣ್ಣ ಮುಂದೆ ಚಿತ್ರವಾಗಿ ಕದಲುತ್ತಿದ್ದವನು ನನ್ನ ಸೋದರ ಮಾವ. ಧಾರವಾಡ ತಾಲೂಕಿನ ಮೂಲೆಯಲ್ಲಿ ಇವತ್ತಿಗೂ ಕುಗ್ರಾಮವಾಗೇ ಇರುವ ಲೋಕೂರು ನಮ್ಮಮ್ಮನ ತವರು. ಆ ಊರಿನಲ್ಲಿ ನನ್ನ ಸೋದರಮಾವ ಯಜಮಾನನಂತಿರುವ ಮನುಷ್ಯ. ಊರವರ ಪಾಲಿಗೆ ಚಂದ್ರಪ್ಪ ಸಾಹುಕಾರ, ನಮ್ಮ ಪಾಲಿಗೆ ಚಂದ್ರೂ ಮಾವ. ಅಚ್ಚ ಬಿಳಿ ಧೋತರ, ನೀಲಿ ಹಾಕಿದ ನೆಹರೂ ಶರ್ಟು, ಎಣ್ಣೆ ಹಾಕಿ ನೀಟಾಗಿ ಕ್ರಾಪು ತೆಗೆದ ಕೂದಲು, ತಿದ್ದಿ ತೀಡಿ ಹುರಿಗೊಳಿಸಿದ ಮೀಸೆ, ಕುರುಚಲು ಗಡ್ಡ. ಕಣ್ಣಿಗೆ ಕಡುಗಪ್ಪು ರೇಬಾನ್ ಗ್ಲಾಸು. ಸಂತೆ ಚೀಲ ಹಿಡಿದ ಆಳು ಮನುಷ್ಯನೊಬ್ಬನನ್ನ ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡು, ಇಷ್ಟಗಲದ ಬುಲೆಟ್ ಮೇಲೆ ನಗಾರಿ ಬಾರಿಸಿದಂಥ ಶಬ್ದ ಮಾಡಿಕೊಂಡು ಕಚ್ಚಾ ರಸ್ತೆಯಲ್ಲಿ ಧೂಳೆಬ್ಬಿಸಿಕೊಂಡು ಅವನು ಬರುತ್ತಿದ್ದರೆ, ರಾಜಬೀದಿಯಲ್ಲಿ ಗಜಗಾಂಭೀರ್ಯದಿಂದ ಪಟ್ಟದ ಆನೆ ನಡೆದು ಬಂದಂತೆ ಅನ್ನಿಸ್ತಿತ್ತು. ಚಂದ್ರಪ್ಪ ಸಾಹುಕಾರ್ರು ಬಂದ್ರು ಅಂತ ಇಡೀ ಊರಿಗೆ ಗೊತ್ತಾಗ್ತಿತ್ತು. ಓಣಿಯಲ್ಲಿನ ಹೆಣ್ಣುಮಕ್ಕಳೆಲ್ಲ ತಲೆ ಮೇಲೆ ಸೆರಗು ಹಾಕಿಕೊಳ್ಳೋರು. ಅಂಗಳದಲ್ಯಾರಾದರೂ ಮನೆಯ ಹೆಣ್ಣುಮಕ್ಕಳಿದ್ದರೆ ಬುಲೆಟ್ ಸೌಂಡ್ ಕೇಳಿಯೇ ಒಳಗೆ ಹೋಗಬೇಕು. ಅಲ್ಲೇ ಪಕ್ಕದ ಖಾಲಿ ಜಾಗದಲ್ಲಿ ಆಲೂಗಡ್ಡೆಯ ಮೊಳಕೆ ಬಿಡಿಸುವುದಕ್ಕೋ, ಈರುಳ್ಳಿಯ ಪಾಚಿ ತೆಗೆಯುವುದಕ್ಕೋ ಬಂದಿರ್ತಿದ್ದ ಹೆಣ್ಣಾಳುಗಳು ನಿಟಾರಾಗಿ ಕುಂತು ಜನ್ಮದಲ್ಯಾವತ್ತೂ ಕೆಲಸ ಬಿಟ್ಟು ಮತ್ತೇನೂ ಮಾಡೇ ಇಲ್ಲವೇನೋ ಅನ್ನೋ ಹಾಗೆ ನಾಟಕ ಮಾಡೋರು. ಅಷ್ಟು ಹೊತ್ತಿನ ತನಕ ಕಿರ ಕಿರ ಕಿರುಚಾಡ್ತಿದ್ದ ಮಕ್ಕಳು ಸ್ಥಬ್ಧ. ಮಾವ, ಬುಲೆಟ್ನ ಅಂಗಳದಲ್ಲಿ ನಿಲ್ಲಸಿ ಕೆಳಗಿಳಿದರೆ, ಹಿಂದಿನ ಸೀಟಿನಿಂದ ಇಳಿದು ನಿಂತಿರುತ್ತಿದ್ದ ಆಳುಮಗ ಅದನ್ನ ನಿಧಾನವಾಗಿ ತಳ್ಳಿಕೊಂಡು ಹೋಗಿ ಶೆಡ್ಗೆ ಹಾಕಬೇಕು. ಆತ ಸ್ಟ್ಯಾಂಡ್ ಹಾಕಿ ನಿಲ್ಲಿಸೋತನಕ ಮಾವ ಸುಮ್ಮನೆ ನಿಂತು ನೋಡ್ತಿರ್ತಿದ್ದ. ಬೀಜಕ್ಕೆ ಬಿಟ್ಟ ಕೋಣದಂತಿದ್ದ ಆ ಬೈಕನ್ನ ಜೋಲಿ ಹೋಗದಂತೆ ಶೆಡ್ಡಿನತನಕ ಎಳೆದೊಯ್ದು ಸರಿಯಾಗಿ ಸ್ಟ್ಯಾಂಡ್ ಹಾಕೋವರೆಗೆ ಆತನ ಎದೆತುಂಬ ನಗಾರಿ. ಅದನ್ನ ನಿಲ್ಲಿಸಿ, ಅಲ್ಲಾಡಿಸಿ ನೋಡಿ, ಮಕ್ಕಳು ಆಟ ಆಡೋವಾಗ ಒಂದು ಕಡೆ ಹತ್ತಿನಿಂತರೂ ಬೀಳುವುದಿಲ್ಲ ಅಂತ ಖಚಿತ ಪಡಿಸಿಕೊಂಡ ಮೇಲೆ "ಹೆಂಗೆ?" ಅನ್ನುವವರಂತೆ ಮಾವನ ಕಡೆ ನೋಡುತ್ತಿದ್ದ. ಚಂದ್ರಪ್ಪ ಮಾವನ ಮುಖದಲ್ಲಿ ಆಗ ಮೆಚ್ಚುಗೆ ಇರ್ತಿತ್ತೋ, ತನ್ನ ಬೈಕನ್ನ ಬೀಳಿಸದಂತೆ ಒಯ್ದು ನಿಲ್ಲಿಸಿ, ಬೈಯ್ಯುವ ಮತ್ತೊಂದು ಅವಕಾಶ ತಪ್ಪಿಸಿದ ಆತನ ಬಗ್ಗೆ ಅಸಹನೆ ಇರ್ತಿತ್ತೋ ಈಗ ಸರಿಯಾಗಿ ನೆನಪಿಲ್ಲ. ಒಟ್ಟಿನಲ್ಲಿ ಆ ಕಡೆ ಬುಲೆಟ್ ಶೆಡ್ನೊಳಕ್ಕೆ ಸೇರ್ತಿದ್ದಂತೆಯೇ ಈ ಕಡೆ ಅತ್ತೆ ತಾಮ್ರದ ತಂಬಿಗೆಯಲ್ಲಿ ನೀರು ಹಿಡಿದು ನಿಂತಿರ್ತಿದ್ದಳು.

                                    ಪಕ್ಕದಲ್ಲೇ ಇರೋ ಗರಗದ ದಿಂಡಲಕೊಪ್ಪ ಸಾಹುಕಾರ ಮನೆ ಮಗಳು ಆಕೆ. ಆಕೆಗಿಂತ ಕೆಂಪಗಿರೋ ಇನ್ನೊಬ್ಬ ಹೆಣ್ಣುಮಗಳನ್ನ ನೋಡಿದ ನೆನಪು ನನಗಿಲ್ಲ. ತನಗಿಂತ ಕೆಂಪಗಿನ ಕುಂಕುಮವನ್ನ ಕಾಸಗಲ ಹಚ್ಚಿಕೊಂಡಿರ್ತಿದ್ದಳು. ಜನ್ಮದಲ್ಯಾವತ್ತಾದರೂ ಮಾವನ ಮುಖವನ್ನ ತಲೆಯೆತ್ತಿ ನೋಡಿದ್ದಳೋ ಇಲ್ಲವೋ. ಆಕೆಯ ಕೈಯಿಂದ ಒಂದೇ ಒಂದು ಮಾತಾಡದೇ ತಂಬಿಗೆ ಇಸಿದುಕೊಂಡು ಕಾಲಿಗೆ ನೀರು ಚೆಲ್ಲಿಕೊಳ್ತಿದ್ದ ಮಾವ, ಹಂಗೇ ಹೆಣ್ಣಾಳುಗಳು ಎಷ್ಟು ಕೆಲಸ ಮಾಡಿದ್ದಾರೆ ಅಂತ ಕಣ್ಣಲ್ಲೇ ಒಂದು ಅಂದಾಜು ಮಾಡ್ತಿದ್ದ. ಕಾಲು ತೊಳೆದುಕೊಂಡ ಆತ ಧೋತರ ಚಿಮ್ಮಿಕೊಂಡು ಮೊಳಕಾಲೆತ್ತರದ ಹೊಸ್ತಿಲು ದಾಟಿಕೊಂಡು ಮನೆಯೊಳಕ್ಕೆ ಹೋಗ್ತಿದ್ರೆ, ಖಾಲಿ ತಂಬಿಗೆ ಹೊಡಿದುಕೊಂಡ ಅತ್ತೆ ತಲೆ ತಗ್ಗಿಸಿಕೊಂಡು ಹಿಂಬಾಲಿಸ್ತಿದ್ದಳು. ನಂತರ, ಕೆಲಸ ಮಾಡ್ತಿದ್ದ ಹೆಣ್ಣುಮಕ್ಕಳು ಪಿಸು ಪಿಸು ಮಾತಾಡೋದರಿಂದ ಶುರುವಾಗಿ, ಮಕ್ಕಳು ಮತ್ತೆ ಕಳ್ಳ ಹೆಜ್ಜೆ ಇಟ್ಟುಕೊಂಡು ಅಂಗಳಕ್ಕೆ ಬರೋದರ ಮೂಲಕ ವಾತಾವರಣ ಯಥಾಸ್ಥಿತಿಗೆ ಬರುತ್ತಿತ್ತು.
                   ಪ್ರತಿ ವರ್ಷ ಮಹಾನವಮಿ ಜಾತ್ರೆಗೆ ಅಂತ ಹತ್ತು ಹನ್ನೆರಡು ದಿನ ಲೋಕೂರಿಗೆ ಊರಿಗೆ ಹೋಗ್ತಿದ್ದ ನಾನು, ಚಂದ್ರಪ್ಪ ಮಾವನ ಈ ಪುರ ಪ್ರವೇಶದ ವೈಭವವನ್ನ ಕಣ್ಣರಳಿಸಿಕೊಂಡು ನೋಡ್ತಿದ್ದೆ. ನನ್ನ ಸೋದರಮಾವನ ಮಕ್ಕಳಿಗೂ, ಅತ್ತೆಯ ತವರು ಮನೆಯಿಂದ ಜಾತ್ರೆಗೆ ಬಂದಿರ್ತಿದ್ದ ಇತರ ಮಕ್ಕಳಿಗೂ ನನ್ನ ಬಗ್ಗೆ ಭಯ ಮತ್ತು ಗೌರವ ಬಂದದ್ದೇ ಆ ಕಾರಣಕ್ಕೆ..! ಮಾವನ ಬುಲೆಟ್ ಶಬ್ದ ಕಿವಿಗೆ ಬೀಳ್ತಿದ್ದಂತೆಯೇ ಅವರೆಲ್ಲ ಆಡ್ತಿದ್ದ ಆಟಗಳನ್ನೆಲ್ಲ ಅಷ್ಟಷ್ಟಕ್ಕೇ ಬಿಟ್ಟು ಪೇರಿ ಕೀಳೋರು. ಅದಕ್ಕೆ ನಿರ್ದಿಷ್ಟ ಕಾರಣ ಏನು ಅನ್ನೋದು ನನಗೆ ಇವತ್ತಿಗೂ ಗೊತ್ತಿಲ್ಲ. ಬಹುಶಃ ಅವರು ಮನೆಯ ಹೆಣ್ಣುಮಕ್ಕಳು ಮಾವನ ಆಗಮನಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿಯನ್ನ ಅನುಕರಣೆ ಮಾಡ್ತಿದ್ದರೋ ಏನೋ. ಒಟ್ಟಿನಲ್ಲಿ ಅಂಗಳದಲ್ಲಿ ಬುಲೆಟ್ ಬಂದು ನಿಂತಾಗ ಮಕ್ಕಳ್ಯಾರೂ ಇರ್ತಿರಲಿಲ್ಲ. ನಾನು ಮಾತ್ರ ಛಾವಣಿಯ ಕಂಭಕ್ಕೆ ಒಂದು ಕಾಲು ಸುತ್ತಿಕೊಂಡು ನಿಂತು ನೋಡ್ತಿದ್ದೆ. ನನ್ನನ್ನ ನೋಡಿಯೂ ನೋಡದವನಂತೆ ಒಳಗೆ ಹೋಗಿ ಕಂಬಳಿಯ ಮೇಲೆ ಕೂಡ್ತಿದ್ದಂತೆಯೇ ಆತನ ಹಿಂದೆಯೇ ಹೋಗಿ ನಾನೂ ಕೂಡ್ತಿದ್ದೆ. ಉಳಿದ ಮಕ್ಕಳ್ಯಾರಾದ್ರೂ ಕಾಡಿಸಿದರಾ ಅನ್ನೋ ಅರ್ಥದ ಪ್ರಶ್ನೆ ಕೇಳ್ತಿದ್ದ ಮಾವ. ಊಹ್ಞೂಂ, ನನ್ನನ್ನ ಕಾಡಿಸುವ ಧೈರ್ಯ ಆ ಮನೆಯ ಯಾವ ಹುಡುಗನಿಗೂ ಇರಲಿಲ್ಲ. ಯಾಕಂದ್ರೆ, ನಾನು ಮಾವ ಬಂದಾಗ ಹೆದರಿ ಓಡಿ ಹೋಗ್ತಿರಲಿಲ್ಲ. ಆತನ ಜೊತೆಗೆ ಆತ ಕುಳಿತ ಕಂಬಳಿಯ ಮೇಲೇ ಕುಳಿತುಕೊಳ್ತಿದ್ದೆ. ಮಾವ ಪರಾತದಂಥ ತಟ್ಟೆಯಿಟ್ಟುಕೊಂಡು ಊಟಕ್ಕೆ ಕುಳಿತಾಗ ನನ್ನನ್ನೂ ಜೊತೆಗೆ ಕೂಡಿಸಿಕೊಂಡು ಅದೇ ತಟ್ಟೆಯಲ್ಲಿ ಊಟ ಮಾಡಿಸ್ತಿದ್ದ.
                   ಎಷ್ಟು ಪ್ರೀತಿ ಚಂದ್ರೂ ಮಾವನಿಗೆ ನನ್ನ ಮೇಲೆ..? ಬಹುಶಃ ಅದಕ್ಕೆ ಕಾರಣ ಅಮ್ಮ. ಆ ಮನೆತನದಲ್ಲಿ ಯಶಸ್ವಿಯಾಗಿ ಪ್ರೈಮರಿ ಸ್ಕೂಲು ಮುಗಿಸಿದ ಮೊಟ್ಟಮೊದಲ ಹೆಣ್ಣುಮಗಳು ಆಕೆ. ನಂತರ ಹೈಸ್ಕೂಲಿಗೆ ಹೋದಳು. ಎಸೆಸೆಲ್ಸಿ ಪಾಸು ಮಾಡುವ ಮೂಲಕ ಮಾವನ ದಾಖಲೆ ಮುರಿದುಬಿಟ್ಟಳು. ಆಮೇಲೆ ಧಾರವಾಡದ ಕೆ.ಸಿ.ಡಿ ಕಾಲೇಜಿನ ಹಾಸ್ಟೆಲ್ನಲ್ಲಿದ್ದುಕೊಂಡು ಪಿ.ಯು.ಸಿ ಮುಗಿಸಿದ್ಲು. ಅದಕ್ಕಿಂತ ಹೆಚ್ಚಿಗೆ ಓದಿಸುವುದು ಬೇಡ ಅಂತ ಆ ಮನೆಯಲ್ಲಿ ಯಾರಿಗೆ ಅನ್ನಿಸಿತೋ ಏನೋ, ನಮ್ಮಪ್ಪನಿಗೆ ಗಂಟು ಹಾಕಿಬಿಟ್ಟರು. ಆ ಮನೆಯಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಕೀರ್ತಿ ಮಾತ್ರ ಅಮ್ಮನ ಹೆಸರಿನಲ್ಲೇ ಉಳಿದಿತ್ತು. ಬಹುಶಃ ಆ ಕಾರಣಕ್ಕಾಗಿ ತವರಿನಲ್ಲಿ ಎಲ್ಲರಿಗೂ ಅಮ್ಮ ಅಂದರೆ ಎಲ್ಲಿಲ್ಲದ ಪ್ರೀತಿ. ಚಂದ್ರಪ್ಪ ಮಾವ ಮನಸು ಬಿಚ್ಚಿ ನಕ್ಕ ನೆನಪು ನನಗಂತೂ ಇಲ್ಲ. ಮನೆಯ ಹೆಣ್ಣುಮಕ್ಕಳು ತನ್ನೆದುರಿಗೆ ನಿಂತು ಮುಖಕ್ಕೆ ಮುಖ ಕೊಟ್ಟು ಮಾತಾಡೋದೇ ಮಹಾಪರಾಧ ಅನ್ನೋಹಂಗಾಡ್ತಿದ್ದ. ಅಮ್ಮನ ಮಾತು ಮಾತ್ರ ಮೀರುತ್ತಿರಲಿಲ್ಲ. ಅಜ್ಜನ್ನ ಬಿಟ್ರೆ, ಆ ಮನೆಯಲ್ಲಿ ಆತನ ಮೇಲೆ ಸಿಟ್ಟು ಮಾಡಿಕೊಳ್ಳುವ, ಬೈಯ್ಯುವ ಅಧಿಕಾರ ಮತ್ತು ಧೈರ್ಯ ಇದ್ದದ್ದು ಅಮ್ಮನಿಗಷ್ಟೇ. ಅಂಥ ಪ್ರೀತಿಯ ತಂಗಿಯ ಮಗ ನಾನು ಅನ್ನೋ ಕಾರಣಕ್ಕೋ, ಧಾರವಾಡದ ಶಾಲೆಯಲ್ಲಿ ಫಸ್ಟ್ ಬರ್ತೀನಿ ಅನ್ನೋ ಕಾರಣಕ್ಕೋ, ಉಳಿದ ಮಕ್ಕಳಂತೆ ಹಳ್ಳದಲ್ಲಿ ಈಜೋದು, ಮರ ಹತ್ತೋದೆಲ್ಲ ಮಾಡೋದಿಲ್ಲ ಅನ್ನೋ ಕಾರಣಕ್ಕೋ ಏನೋ, ಮಾವನಿಗೆ ನನ್ನ ಮೇಲೆ ವಿಪರೀತ ಪ್ರೀತಿ. ಅದರ ದುರುಪಯೋಗ ಪಡಿಸಿಕೊಂಡ ನಾನು ಆತನಿಗೆ ಆದಷ್ಟೂ ಹತ್ತಿರ ಇರುವ ಮೂಲಕ, ನನ್ನನ್ನ ಮರಕೋತಿ ಆಟಕ್ಕೆ ಸೇರಿಸಿಕೊಳ್ಳದ ಓರಗೆಯ ಹುಡುಗರ ಮೇಲೆ ಸೇಡು ತೀರಿಸಿಕೊಂಡ ಸಮಾಧಾನ ಪಡ್ತಿದ್ದೆ. ಅವರೆಲ್ಲ ಬುಲೆಟ್ ಹತ್ತಿರ ಸುಳಿದಾಡಿದರೂ ರೇಗ್ತಿದ್ದ ಚಂದ್ರಪ್ಪಮಾವ, ನಾನು ಅದರ ಫೂಟ್ ರೆಸ್ಟ್ ಮೇಲೆ ಹತ್ತಿನಿಂತರೂ ಸುಮ್ಮನಿರ್ತಿದ್ದ. ಆತ ನೋಡ್ತಿಲ್ಲ ಅನ್ನೋದನ್ನ ಖಚಿತ ಪಡಿಸಿಕೊಂಡ ಮೇಲೆ, ಒಂದೊಂದು ಸಲ ಅದರ ಕಿಕ್ ಪೆಡಲ್ ಮೇಲೆ ಎರಡೂ ಕಾಲಿಟ್ಟು ನಿಲ್ತಿದ್ದೆ. ಮಾವನ ಬಲಗಾಲಿನ ಒಂದೇ ಒದೆತಕ್ಕೆ, ಭಡಭಡನೆ ಶುರುವಾಗ್ತಿತ್ತು ಮಗಂದು. ನಾನು ಹತ್ತಿ ನಿಂತು ಪೂರ್ತಿ ಭಾರ ಹಾಕಿದರೂ, ಕಿಕ್ ಪೆಡಲು ಕೆಳಗೆ ಕೂಡ ಇಳೀತಿರಲಿಲ್ಲ. ಮುಂದಿನ ಮಡ್ ಗಾರ್ಡ್ ಮೇಲಿನ ಎತ್ತಿನ ಆಕೃತಿ, ಇಷ್ಟಗಲ ಬಂಪರ್ರು, ಹ್ಯಾಂಡಲ್ಲಿನ ಎರಡೂ ಕಡೆ ಜೋತು ಬಿದ್ದ ರಿಬ್ಬನ್ನು, ಲಾರಿಗಳಿಗೆ ಹಾಕ್ತಿದ್ದಂಥ ಹಾರ್ನು, ಸೂಟ್ಕೇಸ್ ಸೈಜಿನ ಸೈಡ್ ಬಾಕ್ಸು, ಹಿಂದೆ ಮ್ಯಾಟ್ ಮೇಲಿದ್ದ ಹುಲಿ ಮುಖದ ಚಿತ್ರ, ಒಟ್ಟಿನಲ್ಲಿ ಚಂದ್ರೂ ಮಾವನ ಆ ಬೈಕಿನ ಚಿತ್ರ ಮನಸಿನಲ್ಲಿ ಹಂಗ್ಹಂಗೇ ಉಳಿದುಬಿಟ್ಟಿತ್ತು. ಆವತ್ತಿನಿಂದಲೂ ಯಾಕೋ ಬುಲೆಟ್ಟು ಅಂದ್ರೆ ಕಣ್ಣು ಇಷ್ಟಗಲ ಆಗ್ತಿದ್ವು.
                   ಅಲ್ಲಿಂದ ನಮ್ಮೂರಿಗೆ ವಾಪಸ್ ಬಂದ್ರೆ, ಇಲ್ಲಿ ಶಂಕರಗೌಡ ಪಾಟೀಲರದೂ ಒಂದು ಬುಲೆಟ್ ಇತ್ತು. ಅದರದೂ ಥೇಟ್ ಮಾವನ ಬುಲೆಟ್ನಂಥದ್ದೇ ಬಣ್ಣ, ಅದೇ ನಗಾರಿ ಶಬ್ದ. ಆದರೆ, ಶಂಕರಗೌಡರಿಗೆ ನಮ್ಮ ಮಾವನಂಥ ಖದರು ಇರಲಿಲ್ಲ. ಆತ ಬುಲೆಟ್ ಹತ್ತಿಕೊಂಡು ಬಂದರೆ ನನಗೆ ಚಂದ್ರೂ ಮಾವನ ನೆನಪಾಗ್ತಿತ್ತೇ ಹೊರತು ಮತ್ತೇನೂ ಅಲ್ಲ.
                   ಅಂಥದ್ದರಲ್ಲಿ, ಕಾಲೇಜಿಗೆ ಹೊರಟುನಿಂತ ನನಗೊಂದು ಬೈಕ್ ತೆಗೆಸಿಕೊಡಬೇಕು ಅಂತ ಅಮ್ಮ ಯೋಚಿಸಿದಾಗ, ತಲೆ ತುಂಬ ಫಡ ಫಡ ಶಬ್ದ. ಆವತ್ತು ನಾನು - ಅಪ್ಪ ಒಟ್ಟೊಟ್ಟಿಗೇ ಊಟಕ್ಕೆ ಕುಳಿತಿದ್ವಿ. ಅಮ್ಮ ಬಡಿಸ್ತಿದ್ದಳು. "ಬುಲೆಟ್ ತಗೋತೀನಿ" ಅಂತ ಒಂದ್ ಮಾತು ಅಂದೆ. ಅಮ್ಮ ಕಣ್ಣಲ್ಲಿ ಸಾವಿರ ನಕ್ಷತ್ರ. ತನ್ನ ಅಣ್ಣ ಆ ದೈತ್ಯ ಬೈಕ್ ಹತ್ತಿಕೊಂಡು ಓಡಾಡ್ತಿದ್ದದ್ದನ್ನ ನನಗಿಂತ ಜಾಸ್ತಿ ನೋಡಿದ್ದವಳು ಆಕೆ. ಈಗ ಮಗನೂ ಅದೇ ಗಾಡಿ ಬೇಕು ಅಂದಾಗ, ಅದು ತನ್ನ ತವರಿಗೆ ಸಂದ ಗೌರವ ಅಂದುಕೊಂಡು ಆನಂದ ತುಂದಿಲಳಾದಳು. ಆಕೆಗೆ ಮೈಲೇಜು, ಮೇಂಟೇನೆನ್ಸು ಎಲ್ಲ ಅರ್ಥ ಆಗೋದಿಲ್ಲ. ಆದರೆ ಪಕ್ಕದಲ್ಲಿ ಕುಂತಿದ್ದ ಅಪ್ಪ ಮಾತ್ರ, "ತಲೀ ಕೆಟ್ಟೈತೇನು" ಅಂದು ಊಟ ಮುಗಿಸಿ ಮೇಲೆದ್ದ. ನನ್ನ ಸೋದರ ಮಾವನ ಬಗ್ಗೆ ಹೇಳಿದೆನಲ್ಲ ಇಷ್ಟು ಹೊತ್ತು..? ಆ ಪಾತ್ರಕ್ಕೆ ತದ್ವಿರುದ್ಧವಾದ ಕ್ಯಾರೆಕ್ಟರು ನಮ್ಮಪ್ಪಂದು. ದೊಡ್ಡ ನಗು, ಮಕ್ಕಳ ಮೇಲೆ ಮುದ್ದು ಬಂದರೆ ಹೆಗಲ ಮೇಲೆ ಹಾಕಿಕೊಂಡು ಕಚಕುಳಿ ಇಡುವ ಮೋಜು, ಸ್ವಲ್ಪ ದೊಡ್ಡವರಾದರೆ ಹೆಗಲ ಮೇಲೆ ಕೈ ಹಾಕಿಕೊಂಡೇ ಮಾತು. ಸೀರಿಯಸ್ನೆಸ್ಸು ಅನ್ನೋ ಶಬ್ದ ಅಕ್ಕ-ಪಕ್ಕ ಸಹಿತ ಸುಳಿದಾಡಿಲ್ಲ. ಸ್ವಭಾವತಃ ಪುಣ್ಯಕೋಟಿ, ಹಟಕ್ಕೆ ಬಿದ್ದರೆ ವಿಶ್ವಾಮಿತ್ರ. ಅಂಥ ಅಪ್ಪ, ನಾನು ಬುಲೆಟ್ ತಗೋತೀನಿ ಅಂದಾಗ ಸಿಟ್ಟಿಗೆದ್ದುಬಿಟ್ಟ. "ತಗೊಳ್ಳೋದಾದ್ರೆ ಹೀರೊ ಹೊಂಡಾ ಸಿ.ಡಿ ಹಂಡ್ರೆಡ್ ತಗೋ, ಬುಲೆಟ್ ಎಲ್ಲಾ ಬ್ಯಾಡ" ಅನ್ನೋದು ಫರ್ಮಾನು. ಹಿರಿ ತಂಗಿಯ ಬೆಂಬಲ ನನ್ನ ಕಡೆಗೇ ಇತ್ತಾದರೂ, ಅದರಿಂದ ಹೆಚ್ಚಿನ ಪ್ರಯೋಜನ ಆಗುವ ಲಕ್ಷಣಗಳಿರಲಿಲ್ಲ. ಇನ್ನು ಚಿಕ್ಕವಳು. ಆಕೆಯ ಮಾತನ್ನ ಅಪ್ಪ ಕೇಳ್ತಿದ್ದ. ಆದರೆ, ಆಕೆಗೆ ನಾನು ಟ್ರೆಂಡಿಯಾಗಿರೋ ಹೊಸದ್ಯಾವುದಾದರೂ ಬೈಕು ಹತ್ತಬೇಕು ಅನ್ನೋ ಆಸೆ. ಅಪ್ಪ ಬುಲೆಟ್ ಬೇಡ ಅಂದಾಗಲೆಲ್ಲ ಎದುರುತ್ತರ ಕೊಡದ ನಾನು, ಅಮ್ಮನ ಕಡೆ ಕಣ್ಣೀರು ತುಂಬಿಕೊಂಡು ನೋಡ್ತಿದ್ದೆ. "ಎಲ್ಯಾದ್ರೂ ಇದ್ರ ಹುಡುಕು, ನಿಮ್ಮಪ್ಪಂಗ್ ನಾನು ಹೇಳ್ತೇನಿ" ಅಂತ ಅಮ್ಮ ಗುಟ್ಟಾಗಿ ಮಾತು ಕೊಟ್ಟಳು. ಅಷ್ಟೊತ್ತಿಗಾಗಲೇ ನಾನು ಒಂದು ಬುಲೆಟ್ನ ನೋಡಿ ರೇಟ್ ಕೂಡ ಫಿಕ್ಸ್ ಮಾಡಿ, ನೂರೊಂದು ರುಪಾಯಿ ಅಡ್ವಾನ್ಸ್ ಕೂಡ ಕೊಟ್ಟು ಬಂದಿದ್ದೆ ಅನ್ನೋದು ಆಕೆಗಾದ್ರೂ ಎಲ್ಲಿ ಗೊತ್ತಿತ್ತು..?
                    ಧಾರವಾಡ ದಾಟಿ ಬೆಳಗಾವಿ ಕಡೆ ಹೈವೇದಲ್ಲಿ ಒಂದಿಪ್ಪತ್ ಕಿಲೋಮೀಟರ್ ಹೋದ್ರೆ ಕೋಟೂರು ಅಂತ ಊರು ಸಿಗತ್ತೆ. ಅಲ್ಲಿ ಮುಲ್ಲಾ ಢಾಬಾ ಅಂತ ಕರೆಸಿಕೊಳ್ಳೋ ಒಂದು ಢಾಬಾ. ಐದು ರುಪಾಯಿಗೆ ಮೊರದಗಲ ತಂದೂರಿ ರೋಟಿ, ಹತ್ತು ರೂಪಾಯಿಗೆ ಹೆಸರುಬೇಳೆಯ ದಾಲ್ ಸಿಗ್ತಿದ್ದ ಆ ಢಾಬಾ, ಲಾರಿ ಡ್ರೈವರ್ಗಳ ಪಾಲಿಗೆ ಅಗ್ಗದ ಅನ್ನಪೂರ್ಣೆ. ಅದರ ಮಾಲೀಕ ತುಂಬ ಪ್ರೀತಿಯಿಂದ ಒಂದು ಬುಲೆಟ್ ಇಟ್ಟುಕೊಂಡಿದ್ದ. 1973 ಮಾಡೆಲ್ಲಿನ ಹಳೇ ಗಾಡಿ ಅದು. MEW 2030. ಅದಕ್ಕೆ  Army green ಬಣ್ಣ ಹೊಡೆಸಿ ಮಿರ ಮಿರ ಮಿಂಚೋಹಂಗೆ ತಯಾರು ಮಾಡಿದ್ದ ಮುಲ್ಲಾ ಢಾಬಾದ ಮಾಲೀಕ. ಅದೇ ಟೈಮಿಗೆ ಏನೋ ಹಣದ ಅಡಚಣೆ ಬಂದು ಆತ ಬುಲೆಟ್ ಮಾರುವ ನಿರ್ಧಾರಕ್ಕೆ ಬಂದಿದ್ದ. ಆ ಸುದ್ದಿ ನನಗೆ ತಲುಪಿ, ಹೋಗಿ ನೋಡಿದಾಗ ಢಾಬಾದ ಅಂಗಳದಲ್ಲಿ ಸೈಡ್ ಸ್ಟ್ಯಾಂಡ್ ಹಾಕಿದ್ದ ಬುಲೆಟ್ ಸ್ವಲ್ಪ ಎಡಗಡೆ ಒರಗಿ ಬಲಗಡೆ ಮುಖ ತಿರುಗಿಸಿಕೊಂಡು ನಿಂತಿತ್ತು. ಹಾ... ಅದು Love at first sight . ಆಗತಾನೇ ಸವಾರಿ ಮಾಡಿ ತಂದಿದ್ದ ಕಾಥೇವಾಡದ ಕುದುರೆಯನ್ನ ಅಂಗಳದಲ್ಲಿ ಕಟ್ಟಿ ಮನೆಯ ಯಜಮಾನ ಒಳಗೆ ಹೋಗಿದ್ದಾನೇನೋ ಅನ್ನೋಹಂಗಿತ್ತು...
                  ಆಗಿನ್ನೂ ನಿಧಾನಕ್ಕೆ ಮುಖದ ಮೇಲೆ ಮೀಸೆ ಮೊಳಕೆಯೊಡೀತಿದ್ದ ಹುಡುಗ ನಾನು. ಇವನೇನು ಬುಲೆಟ್ ತಗೋತಾನೆ ಅನ್ನೋ ಹಂಗೆ ನನ್ನ ನೋಡಿದ ಅದರ ಮಾಲೀಕ. ನಾನು, ಚಂದ್ರಪ್ಪ ಮಾವನ ಪರಿಚಯ ಹೇಳಿ ಅವರ ಸ್ವಂತ ಸೋದರಳಿಯ ಅಂದೆ. ಆಗ ಅವನಿಗೆ ನಂಬಿಕೆ ಬಂತು. ಆದರೆ, ಪುಣ್ಯಾತ್ಮ ಏನು ಮಾಡಿದರೂ ರೇಟು ಹೇಳ್ತಿಲ್ಲ. ಕೊನೆಗೆ ನಾನೇ, "ಹದಿನೆಂಟು ಸಾವಿರ ಕೊಡ್ತೀನಿ" ಅಂದೆ. "ಆಯ್ತು, ಸರಿಯಾಗಿ ನೋಡ್ಕೊಳ್ಳೂಹಂಗಿದ್ರೆ ತಗೊಂಡ್ಹೋಗ್ರಿ" ಅಂದ. ಮನೆಗೆ ಬಂದ ನಂತರ ಅಮ್ಮನೇ ಅಷ್ಟೂ ದುಡ್ಡು ಎಣೆಸಿಕೊಟ್ಟಳು. ಅದನ್ನ ತಗೊಂಡ್ಹೋಗಿ ಆತನಿಗೆ ಕೊಟ್ಟೆ. ಜಾತಿಯಿಂದ ಮುಸ್ಲಿಮನಾದ ಆತ, ಬುಲೆಟ್ನ ಸ್ವಚ್ಛವಾಗಿ ತೊಳೆದು ಅಪ್ಪಟ ಹಿಂದೂಗಳಂತೆ ಪೂಜೆ ಮಾಡಿದ. ನನ್ನ ಕೈಗೆ ಕೀ ಕೊಟ್ಟವನ ಕಣ್ಣುಗಳಲ್ಲಿ ನೀರಿದ್ದವು. ಢಾಬಾದ ಕೆಲಸದವರೆಲ್ಲ ಬಂದು ಬಾಗಿಲಿಗೆ ಬಂದು ನಿಂತಿದ್ದರು. ನಾನು ಫಡ ಫಢಾ ಅಂತ ಸ್ಟಾರ್ಟ್ ಮಾಡಿಕೊಂಡು ಹೊರಟರೆ, ಹೈವೇದಲ್ಲಿ ಮರೆಯಾಗುವ ತನಕ ಅವರೆಲ್ಲ ಅಲ್ಲೇ ನಿಂತು ನೋಡ್ತಿದ್ರು.
                 ಈ ಕಡೆ ನಿಟಾರಾಗಿ ಕುಳಿತುಕೊಂಡು ವಿನಾಕಾರಣ ಆಕ್ಸಿಲರೇಟರ್ ಕೊಡ್ತಾ ನಾನು ಗತ್ತಿನಿಂದ ಊರೋಳಕ್ಕೆ ಬುಲೆಟ್ ಹತ್ತಿಕೊಂಡು ಬರ್ತಿದ್ರೆ, ಯಾವ ಹೆಣ್ಣುಮಕ್ಕಳೂ ತಲೆ ಮೇಲೆ ಸೆರಗು ಹಾಕಿಕೊಳ್ಳಲಿಲ್ಲ, ಮಕ್ಕಳು ಆಟ ಆಡೋದು ಬಿಟ್ಟು ಓಡಿಹೋಗಲಿಲ್ಲ. ಶಂಕರಗೌಡ್ರು ಬಂದ್ರು ಅಂತ ತಿರುಗಿ ನೋಡಿದವರಿಗೆ, ಬಂದವನು ನಾನು ಅನ್ನೋದು ಗೊತ್ತಾಗಿ ಆಶ್ಚರ್ಯ. ಮನೆ ತಲುಪುವಷ್ಟರಲ್ಲಿ ಐದಾರು stop ಗಳಾದವು. ಶಂಕರಗೌಡರಿಗೆ ಆಗದವರಂತೂ ನಾನೇನೋ ಮಹಾನ್ ಸಾಧನೆ ಮಾಡಿದ್ದೀನೇನೋ ಅನ್ನೋ ಹಾಗೆ ಬಂದು ಬೆನ್ನು ತಟ್ಟಿದರು. ಅವರಲ್ಲಿ ಎಂಟ್ಹತ್ತು ಜನ ಮನೆತನಕ ನಡೆದು ಬಂದರು. ಅಲ್ಲಿ ಅಮ್ಮ, ತಂಗಿಯರಿಬ್ಬರೂ ಪೂಜೆಗೆ ತಯಾರಾಗಿದ್ರು. ನನಗೂ ಬೈಕಿಗೂ ಒಟ್ಟೊಟ್ಟಿಗೇ ದೃಷ್ಟಿತೆಗೆದು, ಬಂದವರಿಗೆಲ್ಲ ಪ್ರಸಾದ ಕೊಡ್ತಿದ್ರೆ ಅಪ್ಪ ಗಾಡಿ ಹೆಂಗಿದೆ ಅಂತ ನೋಡೋದಕ್ಕೂ ಎದ್ದು ಬರಲಿಲ್ಲ.
                ಮುಂದೆ ಏನೇನೋ ಆಯಿತು. ಅಲ್ಲೀತನಕ ನನ್ನೊಂದಿಗೆ ಸಹಜವಾಗೇ ಮಾತಾಡ್ತಿದ್ದ ಶಂಕರಗೌಡರು ನಾನು ಬುಲೆಟ್ ತಗೊಂಡ ಮೇಲೆ ಮಾತು ಬಿಟ್ಟರು. ನಂತರ, "ಚಡ್ಡಿ ಹಾಕ್ಕೋಳೋದಕ್ಕೆ ಬರದವರೆಲ್ಲ ಬುಲೆಟ್ ಹತ್ತೋಹಂಗಾದ್ರೆ, ಅದರ ಕಿಮ್ಮತ್ತೇನು" ಅಂತ ತಮ್ಮ ಬುಲೆಟ್ ಮಾರಿದ್ರು. ನಾನು ಮಾತ್ರ, debate compitition ಗಳಲ್ಲಿ ಗೆದ್ದ ದುಡ್ಡಿನಲ್ಲಿ ಪೆಟ್ರೋಲ್ ತುಂಬಿಸಿ, ಆ ಕುದುರೆಯಂಥಾ ಬೈಕಿನ ಬೆನ್ನ ಮೇಲೆ ಕುಂತು ಕಾಡು ಮೇಡು, ಗವಿ ಗಂವ್ಹರ ಎಲ್ಲ ಅಲೆದೆ. ಬೆಂಗಳೂರಿನಲ್ಲಿ ಕೆಲಸ ಅಂತ ಸಿಕ್ಕ ಮೇಲೆ ಅದನ್ನ ರೈಲಿಗೆ ತುಂಬಿಕೊಂಡು ಇಲ್ಲಿಗೆ ತಂದೆ. ಮತ್ತೆ ಬಣ್ಣ ಬಳಿಸಿ, ಸಿಂಗಾರ ಮಾಡಿದೆ.
                 ಆ ಕಡೆ ಸೋದರ ಮಾವ. ಆತನ ಬಗ್ಗೆ ಬರೆಯೋದಕ್ಕೆ ನಿಜಕ್ಕೂ ಬೇಜಾರಾಗತ್ತೆ. ಕಾರಣವಲ್ಲದ ಕಾರಣಕ್ಕೆ ಒಂದು ಕೊಲೆ ಮಾಡಿದ. ಅದೇ ಬುಲೆಟ್ ಹತ್ತಿಕೊಂಡು, ಹಿಂದಿನ ಸೀಟಿನಲ್ಲಿ ಅದೇ ಆಳುಮಗನನ್ನ ಕೂಡಿಸಿಕೊಂಡು ಗರಗ ಪೊಲೀಸ್ ಸ್ಟೇಷನ್ಗೆ ಹೋದ. ಅಲ್ಲಿಂದ, ಮತ್ತೆ  ಅದರ ಮೇಲೇ ಕುಂತು ಆತ ಹೊರಟರೆ ಹಿಂದೆ - ಹಿಂದೆ ಪೊಲೀಸ್ ಜೀಪು. ಮೊದಲು ನ್ಯಾಯಾಧೀಶರ ಮನೆ, ನಂತರ ಧಾರವಾಡದ ಜೈಲು. ಜೈಲಿನ ಬಾಗಿಲ ಹತ್ರ ಮಾವ ಬುಲೆಟ್ ನಿಲ್ಲಿಸ್ತಿದ್ದಂತೆಯೇ ಹಿಂದೆ ಕುಳಿತಿದ್ದ ಆಳು ಅದನ್ನ ತಳ್ಳಿಕೊಂಡು ಹೋಗಿ ಪಕ್ಕಕ್ಕೆ ನಿಲ್ಲಿಸಿದನಂತೆ. ಅದು ಸರಿಯಾಗಿ ನಿಂತಿದೆ ಅನ್ನೋದನ್ನ ಖಚಿತಪಡಿಸಿಕೊಂಡ ಮೇಲೆ ಮಾವ ನಡುಬಗ್ಗಿಸಿಕೊಂಡು ಜೈಲಿನ ಮೋಟುಬಾಗಿಲಿನೊಳಕ್ಕೆ ನಡೆದುಹೋದನಂತೆ. ಅಲ್ಲಿ ಆತನಿಗೆ ಕಾಲು ತೊಳೆದುಕೊಳ್ಳೋದಕ್ಕೆ ನೀರಿನ ತಂಬಿಗೆ ಹಿಡಿದು ಯಾರೂ ನಿಂತಿರಲಿಲ್ಲ. ಇಲ್ಲಿ ಬೆಂಗಳೂರಿನಲ್ಲಿ, "ಹಾಯ್ ಬೆಂಗಳೂರು" ಆಫೀಸಿನಲ್ಲಿ ಕುಂತು ಆ ವರದಿಯನ್ನ ನಾನು ಬರೆಯಬೇಕಾಗಿ ಬಂತು. ತಲೆ ತಗ್ಗಿಸಿಕೊಂಡು ಕುಳಿತು ಬರೆದೆ. ಆತ ಕೊಂದದ್ಯಾರನ್ನ ಅನ್ನೋದು ತಿಳಿದ ಮೇಲೆ ಚಂದ್ರಪ್ಪ ಮಾವನ್ನ ನಾನು ಕ್ಷಮಿಸಿಲ್ಲ. ಮೊನ್ನೆ ನಿರಪರಾಧಿ ಅಂತ ಬಿಡುಗಡೆಯಾದನಂತೆ. ನಾನು ಆತನ ಜೊತೆ ಮಾತಾಡಿ ನಾಲ್ಕು ವರ್ಷಗಳಾದವು. ಬುಲೆಟ್ ನನ್ನ ಕೈಗೆ ಬಂದು ಎಂಟು ವರ್ಷ. ಇವತ್ತಿನ ತನಕ ಅಪ್ಪ ಅದರ ಮೇಲೆ ಕುಂತಿಲ್ಲ.

4 comments:

 1. Akkareya ajit,
  baraha chennaagide.
  heege neevi kandaddanne baritaa hogi.
  baraha nimage sukha kodali...oduvavarige khushi kodali...
  Preetiyinda...
  Manikanth

  ReplyDelete
 2. It makes us feel all those emotions u had when u wrote it...a complete write up..!!!

  ReplyDelete
 3. ah............. its my favorite bike too.missing its sound:(....... wen u were in d next road of d college i used to guess it was our sir

  ReplyDelete
 4. ದೃಶ್ಯಗಳೆಲ್ಲ ಕಣ್ಮುಂದೆ ಬಂದಂತಿತ್ತು.. ಬೈಕ್ ಕೊಂಡುಕೊಳ್ಳೋ ಸಾಲುಗಳು, ಅವರು ಬೈಕ್ ಕಳಿಸಿಕೊಟ್ಟದ್ದು.. ಎಲ್ಲಾ ಒಂಥರಾ ಎಮೋಷನಲ್ ಅನಿಸ್ತು...
  ಆಗಾಗಾದ್ರೂ ಹೀಗೆ ಬರೆದು ನಮ್ಮನ್ನು ಓದಿಸ್ತಾ ಇರಿ ಅಜಿತ್.

  ReplyDelete