Tuesday, March 15, 2011

ಸರ್ವನಾಶದ ಘಳಿಗೆಯಲ್ಲೂ ಕರುಳು ಚುರ್ರೆನ್ನದಿದ್ದರೆ...

                      ಅದ್ಯಾಕೋ, ಇದೊಂದು ಡಾಕ್ಯುಮೆಂಟರಿ ತುಂಬ ಮನಸು ಕಲಕಿಬಿಟ್ಟಿತು. "If you don't want to be Nero's guests, then resist" ಅಂತ ಹೆಸರು. "ನಿಮಗೆ ನೀರೋನ ಅತಿಥಿಗಳಾಗಲು ಇಷ್ಟವಿಲ್ಲದಿದ್ದರೆ, ವಿರೋಧಿಸಿ" ಅನ್ನೋದು ಅದರ ಕೆಟ್ಟ ಕನ್ನಡ ಟ್ರಾನ್ಸ್ಲೇಷನ್ನು. ರೈತರ ಆತ್ಮಹತ್ಯೆಗಳ ಬಗ್ಗೆ ಇದೆ. ಹಿಂದೂ ಪತ್ರಿಕೆಯ ರೂರಲ್ ಅಫೇರ್ಸ್ ಎಡಿಟರ್ ಪಿ ಸಾಯಿನಾಥರನ್ನ ಮುಂದಿಟ್ಟುಕೊಂಡು ದೀಪಾ ಭಾಟಿಯಾ ಇದನ್ನ ಮಾಡಿದಾರೆ. ಒಬ್ಬ ಟಿ.ವಿ ಪತ್ರಕರ್ತನಾಗಿ ನನಗೆ ಇದರ ನರೇಷನ್ನು ಅದ್ಭುತ ಅನ್ನಿಸಿತು. ಒಂದೇ ಒಂದು ಸಾಲಿನ ಸ್ಕ್ರಿಪ್ಟ್ ಬರೆಯದೇ ಇಡೀ ಕಥೇನ ಇಷ್ಟು ಚನ್ನಾಗಿ ಹೇಳಬಹುದಾ..? straight to the viewers heart..? ಅದು ನನಗೆ ಈ ಹೊತ್ತಿನ ತನಕ ಆಶ್ಚರ್ಯ. ಡಾಕ್ಯುಮೆಂಟರಿಯನ್ನ ಎಡಿಟ್ ಮಾಡಿದ ರೀತಿ amazing. ಕ್ಯಾಮೆರಾ ಕೆಲಸದ ಬಗ್ಗೆ ದೂಸರಾ ಮಾತೇ ಇಲ್ಲ. ಡಾಕ್ಯುಮೆಂಟರಿ ಮುಗಿಯುವ ರೀತಿ ಇದೆಯಲ್ಲ, ಅದು mind blowing. ಇದಕ್ಕಿಂತ ಚನ್ನಾಗಿರುವ screen playನ ನಾನು ಇದುವರೆಗಂತೂ ನೋಡಿಲ್ಲ. ಇವೆಲ್ಲ, ನನ್ನೊಳಗಿನ ಪತ್ರಕರ್ತನ observationಗಳಾದವು.
                      ಆದರೆ ಒಳಗೊಬ್ಬ ಮನುಷ್ಯನಿದಾನಲ್ಲ..? ಅವನು ಕಂಡಿದ್ದನ್ನ ಏನು ಅಂತ ಹೇಳಲಿ..? "If you don't want..." ನನ್ನನ್ನ ಈ ಪರಿ ಹಿಡಿದಿಟ್ಟಿದ್ದು, ನಾನು ಕೂಡ ಇದರಲ್ಲಿ ಬರುವಂಥಾ ದಟ್ಟ ದರಿದ್ರ ಹಳ್ಳಿಗಳ ಪೈಕಿ ಒಂದರಲ್ಲಿ ಹುಟ್ಟಿ ಬೆಳೆದೆ ಅನ್ನೋ ಕಾರಣಕ್ಕಾ..? ನನ್ನ ಅಪ್ಪ ಕೂಡ, ಸಾಕಷ್ಟು ಜಮೀನಿದ್ದರೂ, ಅದರಲ್ಲಿ ಹರಿಸಿದ ಬೆವರಿಗೆ ಬೆಲೆ ಸಿಗದೇ ಕಂಗಾಲಾಗಿದ್ದ ಅಂತಾನಾ..? ಮೈತುಂಬ ಸಾಲ ಮಾಡಿಕೊಂಡು, ಬೆಳೆ ಕೈಕೊಟ್ಟು, ಬಂದಷ್ಟು ಬೆಳೆಗೆ ನೆಟ್ಟಗೆ ಬೆಲೆ ಕೂಡ ಸಿಗದೇ ಕಂಗಾಲಾಗಿ ಓಡಾಡ್ತಿದ್ದ ನನ್ನ ಹಳ್ಳಿಯ ರೈತರು, ಇನ್ನೂ ಯಾಕೆ ನೇಣು ಹಾಕಿಕೊಂಡಿಲ್ಲ ಅಂತ ಆಶ್ಚರ್ಯ ಪಡ್ತಿದ್ದೆ ಅನ್ನೋ ಕಾರಣಕ್ಕಾ ಅಥವಾ ಇದರಲ್ಲಿ ಬರುವ ಹಲವು ರೈತರಂತೆ ನನ್ನ ಸ್ವಂತ ದೊಡ್ಡಪ್ಪ ಕೂಡ ವಿಷ ಕುಡಿದು ಸತ್ತು ಹೋಗಿದ್ದ ಮತ್ತು ಆತನ ಚಿತೆಗೆ ನಾನೇ ಬೆಂಕಿ ಇಟ್ಟಿದ್ದೆ ಅನ್ನೋ ಕಾರಣಕ್ಕಾ, ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ರೈತರ ಆತ್ಮಹತ್ಯೆಗಳಿಗೂ ನಮಗೂ ಸಂಬಂಧವೇ ಇಲ್ಲ ಅಂತ ತಮ್ಮಷ್ಟಕ್ಕೆ ತಾವು ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟವೇರ್ ಆಫೀಸುಗಳಲ್ಲಿ ಕುಳಿತು ಅಮೇರಿಕಕ್ಕೆ ಜೀತ ಮಾಡುವವರಿಗೆ, ಸೆನ್ಸೆಕ್ಸು, ಅಂಡರ್ ಪಾಸು, ಫ್ಲೈ ಓವರು, ಮೆಟ್ರೋ ಟ್ರೇನು, ಇಂಟರ್ನ್ಯಾಷನಲ್ ಏರ್ಪೋರ್ಟುಗಳನ್ನೇ ಅಭಿವೃದ್ಧಿ ಅಂದುಕೊಂಡಿರುವವರಿಗೆ, ಗ್ಲೋಬಲ್ ರಿಸೆಷನ್ನಿಗಿಂತ ದೊಡ್ಡ ಸಂಕಟ ಜಗತ್ತಿಗೆ ಬಂದೇ ಇಲ್ಲ ಅಂತ ನಂಬಿಕೊಂಡವರಿಗೆ ಮತ್ತು ಯಾರಿಗೂ ಬೇಡವಾದ ಸುದ್ದಿಯನ್ನ ಮೊದಲ ಬ್ರೇಕ್ ಮಾಡಿ ಖಾಲಿ - ಪೀಲಿ ಸಂಭ್ರಮ ಪಡುವ ನಮಗೆ, ರೈತರ ಆತ್ಮಹತ್ಯೆಗಳು ಅಂದ್ರೆ ಅದ್ಯಾರೋ ಹಳ್ಳೀ ಜನರ ಪರ್ಸನಲ್ ಪ್ರಾಬ್ಲಮ್ ಅಂತ ಅನ್ನಿಸುವುದಿದೆಯಲ್ಲ, ಅದಕ್ಕಿಂತ ದುರಂತ ಇಲ್ಲ. ಆ ದುರಂತವನ್ನೇ ಈ ಡಾಕ್ಯುಮೆಂಟರಿ ಎಳೆಎಳೆಯಾಗಿ ಬಿಡಿಸಿಡ್ತಾ ಹೋಗತ್ತೆ.
                       ಸ್ವಲ್ಪ ದೊಡ್ಡದಿದೆ, ಪುರುಸೊತ್ತಿದ್ರೆ ಮಾತ್ರ ನೋಡಿ. ಇದನ್ನ ನೋಡಿದ ಮೇಲೂ ಯಾವುದಾದರೂ ರೈತ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಅನ್ನೋ ಸುದ್ದಿ ಕೇಳಿದಾಗ ಹೃದಯಕ್ಕೆ ಕೊಕ್ಕೆ ಹಾಕಿ ಎಳೆದ ಅನುಭವ ಆಗದಿದ್ರೆ, ಆತನ ಸಾವಿಗೆ ಎಲ್ಲೋ ಒಂದು ಕಡೆ ನಾವು ಕೂಡ ಪರೋಕ್ಷ ಕಾರಣ ಅಂತ ಅನ್ನಿಸದಿದ್ದರೆ, ಪೂರ್ ಫಾರ್ಮರ್ ಅಂತ ಲೊಚಗುಟ್ಟಿ ಚಾನಲ್ ಚೇಂಜ್ ಮಾಡಿದ್ರೆ, ಪೇಪರ್ ಮಡಚಿಟ್ಟು ಎದ್ದುಬಿಟ್ಟರೆ, I really feel sorry for you...

                                            0-0-0-0-0-0-0-0-0-0-0-0-0-0-0

                       ತುಂಬ ಹಿಂದೆ ರೋಮ್ ಸಾಮ್ರಾಜ್ಯವನ್ನ ನೀರೊ ದೊರೆ ಆಳ್ತಿದ್ದ. ಚಿಂತೆ ಇಲ್ಲದವನಿಗೆ ಸಂತೇಲೂ ನಿದ್ದೆ ಅನ್ನೋ ಅರ್ಥದಲ್ಲಿ, ರೋಮ್ ನಗರ ಹೊತ್ತಿ ಉರೀತಿದ್ದಾಗ ನೀರೊ ದೊರೆ ಪಿಟೀಲು ಬಾರಿಸ್ತಿದ್ನಂತೆ ಅನ್ನೋ ಗಾದೆ ಮಾತಿದೆಯಲ್ಲ..? ಅದರಲ್ಲಿನ ನೀರೊ ಇವನೇ. ಹಾಗೆ ರೋಮ್ ಹೊತ್ತಿ ಉರೀತಿದ್ದಾಗ, ಇವನಿಗೆ ತನ್ನ ಇಮೇಜ್ ಏನಾಗಿಬಿಡತ್ತೋ ಅನ್ನೋ ಚಿಂತೆ ಶುರುವಾಯಿತು. ಆವಾಗ ಆತ, ತನ್ನ ಸಾಮ್ರಾಜ್ಯದ ಪ್ರಭಾವಿಗಳಿಗೆ, ಬುದ್ಧಿವಂತರಿಗೆ, ಗಣ್ಯರಿಗೆ ತನ್ನ ಅರಮನೆಯ ಉದ್ಯಾನದಲ್ಲಿ ಒಂದು ಪಾರ್ಟಿ ಕೊಡ್ತಾನೆ. ರೋಮ್ ಸಾಮ್ರಾಜ್ಯದ ಇತಿಹಾಸದಲ್ಲೇ ಯಾರೂ ಕೊಟ್ಟಿರದಂಥಾ ಪಾರ್ಟಿ ಅದು. ಆ ಪಾರ್ಟಿಗೂ ಭಾರತದ ರೈತರ ಆತ್ಮಹತ್ಯೆಗಳಿಗೂ ಇರುವ ಒಂದು common factorನ ಸಣ್ಣ ಎಳೆ ಇಟ್ಟುಕೊಂಡು ಮಾತು ಶುರುಮಾಡ್ತಾರೆ ಸಾಯಿನಾಥ್. ಆ ಎಳೆ ಅರ್ಥ ಆಗಬೇಕಾದರೆ, ಇದನ್ನ ನೀವು ಪೂರ್ತಿ ನೋಡಬೇಕು. ನನಗೆ, ನೀರೋನ ಬಗ್ಗೆ ಬೇಸರ ಇಲ್ಲ. ಆದರೆ, ಆತ ಕೊಟ್ಟ ಪಾರ್ಟಿಗೆ ಬಂದಿದ್ದ ಗಣ್ಯರು, ಬುದ್ಧಿ ಜೀವಿಗಳು, ಬರಹಗಾರರು ಮತ್ತು ಸೆಲೆಬ್ರಿಟಿಗಳ ಬಗ್ಗೆ ಯೋಚಿಸುತ್ತೇನೆ ಅಂತ ಸಾಯಿನಾಥ್ ಯಾಕೆ ಹೇಳ್ತಾರೆ ಅನ್ನೋದು ಆವಾಗಲೇ ಅರ್ಥ ಆಗೋದು...






                       ಸಾಯಿನಾಥ್, ಸ್ವತಃ ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿದ್ಯಮಾನಗಳ ಸಂಪಾದಕರಾದರೂ, ಒಟ್ಟಾರೆ ಮಾಧ್ಯಮದ ಸೋಗಲಾಡಿತನದ ಬಗ್ಗೆ ಮಾತಾಡೋದಕ್ಕೆ ಹಿಂದೆ - ಮುಂದೆ ನೋಡುವುದಿಲ್ಲ.
                        ಜಗತ್ತಿನಲ್ಲೇ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ನಮ್ಮ ದೇಶದ್ದು. ಇದು ರಾಜಕೀಯದ ಕಪಿಮುಷ್ಠಿಯಲ್ಲಿಲ್ಲ ( ಈ ಮಾತು ಇವತ್ತಿಗೆ ಅದೆಷ್ಟು ಸತ್ಯವೋ..! ) ಆದರೆ, ಲಾಭ ಅನ್ನೋ ಕಬ್ಬಿಣದ ಕೋಳ ಮಾಧ್ಯಮವನ್ನ ಅಲ್ಲಾಡೋದಕ್ಕೂ ಆಗದಂತೆ ಕಟ್ಟಿ ಹಾಕಿದೆ. ನಮ್ಮಲ್ಲಿ ಫ್ಯಾಷನ್ ವರದಿಗಾರರಿದ್ದಾರೆ, ಗ್ಲಾಮರ್, ಸೊಸೈಟಿ, ಪೇಜ್ ಥ್ರೀ, ಎಲ್ಲದಕ್ಕೂ ವಿಶೇಷ ವರದಿಗಾರರಿದ್ದಾರೆ. ಆದರೆ, ಯಾವ ನ್ಯೂಸ್ ಚಾನೆಲ್ - ಯಾವ ಪತ್ರಿಕೆ ಬಡತನದ ವರದಿ ಮಾಡೋದಕ್ಕೆ ರಿಪೋರ್ಟರನ್ನ ಇಟ್ಟುಕೊಂಡಿದೆ..?
                       ಈ ಸಲದ ಲ್ಯಾಕ್ಮೆ ಫ್ಯಾಷನ್ ವೀಕ್ ಮುಂಬೈಯಲ್ಲಿ ನಡೀತು. ಬೇರೆ ಬೇರೆ ಟಿ.ವಿ ಚಾನೆಲ್, ಪತ್ರಿಕೆಗಳಿಂದ ಐನೂರ ಹನ್ನೆರಡು ಜನ ಪತ್ರಕರ್ತರು ಅದನ್ನ ವರದಿ ಮಾಡೋದಕ್ಕೆ ಬಂದಿದ್ರು. ಅದರಲ್ಲಿ ಮಾಡೆಲ್ಗಳು ಹತ್ತಿ ಬಟ್ಟೆ ಹಾಕಿಕೊಂಡು ರಾಂಪ್ ಮೇಲೆ ನಡೆದರು. ಆದರೆ, ದುರಂತ ನೋಡಿ. ಅವರು ಹಾಕಿಕೊಂಡ ಡಿಸೈನರ್ ಬಟ್ಟೆಗಳಿಗೆ ಹತ್ತಿ ಬೆಳೆದು ಕೊಟ್ಟ ರೈತರು ಅದೇ ಮಹಾರಾಷ್ಟ್ರದ ವಿದರ್ಭದಲ್ಲಿದ್ದರು. ಅವರು ಸಾಲದ ಹೊಡೆತ ತಾಳಲಾರದೇ ದಿನಕ್ಕೆ ಆರರಿಂದ ಎಂಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅದನ್ನ ವರದಿ ಮಾಡೋದಕ್ಕೆ ಒಬ್ಬೇ ಒಬ್ಬ ಪತ್ರಕರ್ತ ಹಳ್ಳಿಗೆ ಹೋಗಲಿಲ್ಲ.



ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಮನೆ. ಅಂಗಳದಲ್ಲಿ ಹೆಂಡತಿ ಬದುಕಿನ ಅಷ್ಟೂ ಭರವಸೆಗಳು ಮುಗಿದುಹೋದವಳಂತೆ ಕುಳಿತಿದ್ದಾಳೆ. ಪಕ್ಕದಲ್ಲಿ ಮಗ. ತಂದೆಯ ಅಂಗಿ ಹಾಕಿಕೊಂಡು ಕುಳಿತಿದ್ದಾನೆ. ಅವನಿಗೆ ತನ್ನ ಅಪ್ಪನ ಆತ್ಮಹತ್ಯೆಯ ಕಾರಣಗಳನ್ನ ಹೇಳಿ ಹೇಳಿ ಸಾಕಾಗಿಹೋಗಿದೆ. ಅವನ ಹೆಗಲ ಮೇಲೆ ಮನೆಯ ಜವಾಬ್ದಾರಿ ಬಿದ್ದಿದೆ. ಅದನ್ನ ಹೊರಲಾರದಷ್ಟು ಎಳಸು ಆತ. ಅಪ್ಪ ವಿಷ ಕುಡಿದು ಸತ್ತು ಹೋದ ಮೇಲೆ ಆ ಹುಡುಗ ಜವಾಬ್ದಾರಿಯುತ ಗಂಡಸಾಗಬೇಕು. ಆತನ ಕಣ್ಣುಗಳಲ್ಲಿ ಆ ಭಯ.
                          ಐದೂವರೆ ವರ್ಷಗಳ ಕಾಲ ನಿರಂತರವಾಗಿ ರೈತರ ಆತ್ಮಹತ್ಯೆಗಳ ವರದಿ ಮಾಡಿದ ಸಾಯಿನಾಥ್ ಇಂಥ ಅವೆಷ್ಟು ಹುಡುಗರ ಕಣ್ಣುಗಳಲ್ಲಿನ ಬೇಗುದಿ ನೋಡಿದರೋ.



ಟೈಮ್ಸಾಫ್ ಇಂಡಿಯಾದ ಸಂಪಾದಕೀಯ ಪುಟದಲ್ಲಿ ರಾಹುಲ್ ಬಜಾಜ್ ಒಂದು ಲೇಖನ ಬರೆದಿದ್ರು. "ಸರಕಾರಕ್ಕೆ ನಿಜವಾಗಿಯೂ ಬಡವರನ್ನ ಉದ್ಧಾರ ಮಾಡುವ ಮನಸಿದ್ರೆ, ಮೊದಲು ಶ್ರೀಮಂತರಿಗೆ ಸಹಾಯ ಮಾಡಬೇಕು" ಅನ್ನೋದು ಅದರ ಸಾರಾಂಶ. ಬಡತನ ನಿವಾರಣೆಗೆ ತೆಗೆದುಕೊಳ್ಳಲಾಗ್ತಿರುವ ಕ್ರಮಗಳೆಲ್ಲ ಬೊಗಳೆ, ಬಡವರಿಗೆ ಸಹಾಯ ಮಾಡುವ ಹಳೇ ಯೋಜನೆಗಳೆಲ್ಲ ಅವಿವೇಕಿತನಗಳು. ಅವೆಲ್ಲ ವಿಫಲವಾಗಿವೆ. ಅದಕ್ಕೆ, ನಮ್ಮ ಸಮಾಜದಲ್ಲಿರುವ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿ. ಟೇಬಲ್ ತನ್ನ ಶಕ್ತಿ ಮೀರಿ ತುಂಬಿ ಹೋದಾಗ ಅದರಿಂದ ಏನಾದರೂ ಕೆಳಗೆ ಬೀಳಲೇ ಬೇಕಲ್ಲ. ಅದು ಬಡವರಗೆ ಸಿಗುತ್ತದೆ ಅಂತಾರೆ ರಾಹುಲ್ ಬಜಾಜ್. ಇಂಥವರಿಂದ ರೈತರ ಆತ್ಮಹತ್ಯೆ ಬಗ್ಗೆ ವರದಿ ನಿರೀಕ್ಷೆ ಮಾಡೋದಕ್ಕಿಂತ ದೊಡ್ಡ ದಡ್ಡತನ ಇದೆಯಾ..?



ಮುಂಬೈನಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಅಲ್ಲಿ ಇಪ್ಪತ್ತನಾಲ್ಕು ಗಂಟೆಯೂ ವಿದ್ಯುತ್ ಸರಬರಾಜು. ಅದನ್ನ ಹೊರತು ಪಡಿಸಿ ಮಹಾರಾಷ್ಟ್ರದ ಉಳಿದ ಕೆಲವು ದೊಡ್ಡ ಊರುಗಳಲ್ಲಿ ಎರಡು ತಾಸು ಲೋಡ್ ಶೆಡ್ಡಿಂಗ್ ಇದೆ. ಇನ್ನು ಹಳ್ಳಿಗಳಲ್ಲಿ ಎಂಟು ತಾಸು ಲೋಡ್ ಶೆಡ್ಡಿಂಗ್. ಆದರೆ, ಭಾರತದಲ್ಲೇ ಮೊಟ್ಟಮೊದಲ ಸಲ ವಿದರ್ಭದ ನಾಲ್ಕು ಜಿಲ್ಲೆಗಳಲ್ಲಿ ಶವಾಗಾರ ಮತ್ತು ಪೋಸ್ಟ್ ಮಾರ್ಟಂ ಸೆಂಟರ್ ಗಳಿಗೆ ದಿನದ ಇಪ್ಪತ್ತನಾಲ್ಕೂ ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿದೆ ಸರಕಾರ. ಅಲ್ಲಿ ಹಗಲೂ ರಾತ್ರಿ ಕೆಲಸ ನಡೆಯುತ್ತಿದೆ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಶವಗಳ ಪೋಸ್ಟ್ ಮಾರ್ಟಂ ಮಾಡುವುದು ಕಷ್ಟವಾಗಿಬಿಡುತ್ತದೆ.



ಹದಿನೈದು ವರ್ಷಗಳಿಂದ ಭಾರತದಲ್ಲಿ ತೀವ್ರವಾಗಿ ಬೆಳೆಯುತ್ತಿರುವುದು ಏನು..? ಐ.ಟಿ..? ಊಹ್ಞೂಂ. ಸಾಫ್ಟ್ ವೇರ್..? ಅಲ್ಲ. ಅಸಮಾನತೆ. ಬ್ರಿಟಿಷ್ ವಸಾಹತುಷಾಹಿ ಆಡಳಿತದ ನಂತರ ಮೊಟ್ಟಮೊದಲ ಸಲ ಈ ಸ್ಥಿತಿ ಬಂದಿರೋದು. ಹಸಿವಿನಿಂದ ಜನ ಸಾಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆರು ರಾಜ್ಯ ಸರಕಾರಗಳನ್ನ ತರಾಟೆಗೆ ತೆಗೆದುಕೊಂಡಿದೆ. 1943ರ ಬಂಗಾಲ ಬರಗಾಲದ ನಂತರ ಇಂಥ ಸ್ಥಿತಿ ಬಂದಿರುವುದು ಇದೇ ಮೊದಲು. ಇಲ್ಲಿ ಜನ ಹಸಿವಿನಿಂದ ಸಾಯ್ತಿದ್ರೆ, ನಮ್ಮ ಸರಕಾರ ಐದು ರುಪಾಯಿ ನಲವತ್ತೈದು ಪೈಸೆ ಪ್ರತಿ ಕೆ.ಜಿ ಬೆಲೆಗೆ ಎರಡು ಕೋಟಿ ಟನ್ ಆಹಾರ ಧಾನ್ಯ ರಫ್ತು ಮಾಡಿದೆ. ಭಾರತದ ಬಡವರಿಗಾದರೆ ಅದನ್ನೇ ಆರು ರುಪಾಯಿ ನಲವತ್ತು ಪೈಸೆಗೆ ಕೆ.ಜಿಯಂತೆ ಮಾರಲಾಗುತ್ತಿತ್ತು. ಹೋಗಲಿ, ಆಹಾರ ಧಾನ್ಯ ರಫ್ತು ಮಾಡಿರುವುದಾದರೂ ಯಾರಿಗೆ..? ಯುರೋಪಿನ ಹಸುಗಳಿಗೆ. ಯುರೋಪಿನ ಹಸುಗಳು ಜಗತ್ತಿನಲ್ಲೇ ಅತಿ ಹೆಚ್ಚು ಆಹಾರ ಭದ್ರತೆಹೊಂದಿರುವ ಜೀವಿಗಳು. ಅವುಗಳ ಆಹಾರಕ್ಕಾಗಿ ಪ್ರತಿದಿನ 2.7 ಡಾಲರ್ ಖರ್ಚು ಮಾಡಲಾಗತ್ತೆ.
                       ವಿದರ್ಭದ ರೈತ ಪರ ಹೋರಾಟಗಾರ ವಿಜಯ್ ಝಾವಂಡಿಯಾರನ್ನ ಅದ್ಯಾರೋ ಪತ್ರಕರ್ತ ಕೇಳಿದನಂತೆ, ಭಾರತದ ರೈತರ ಅತಿ ದೊಡ್ಡ ಕನಸು ಯಾವುದು ಅಂತ. ಅದಕ್ಕೆ ಝಾವಂಡಿಯಾ ಕೊಟ್ಟ ಮಾರ್ಮಿಕ ಉತ್ತರ, "ಮುಂದಿನ ಜನ್ಮ ಅಂತಿದ್ದರೆ, ಯುರೋಪಿನಲ್ಲಿ ಹಸುವಾಗಿ ಹುಟ್ಟುವುದು."
                                         ನಿದ್ದೆಯಿಂದೆದ್ದ ಮಗು ಅಮ್ಮನನ್ನ ಕೇಳಿತು,
                                         ಅಮ್ಮಾ ಹಸಿವು, ರೊಟ್ಟಿ ಕೊಡು.

                                         ಕಣ್ತುಂಬ ನೀರು ತುಂಬಿಕೊಂಡ ಅಮ್ಮ,
                                         ಮುಳುಗುತ್ತಿದ್ದ ಸೂರ್ಯನನ್ನ ತೋರಿಸದಳು.

                                         ಹಾಗಾದರೆ, ಆ ರೊಟ್ಟಿ ತಾ.
                                         ನಾನು ನಿನ್ನೆ ರಾತ್ರಿಯಿಂದ ಏನೂ ತಿಂದಿಲ್ಲ, ಮಗುವಿನ ಹಟ.
      
                                         ಸುಡುತ್ತಿರುವ ರೊಟ್ಟಿ ತಣ್ಣಗಾಗಲಿ ಇರು ಮಗು, ಅದು ಬಿಸಿ ಇದೆ.
                                         ಈಗಲೇ ತಿಂದರೆ ಬಾಯಿ ಸುಟ್ಟೀತು, ಅಮ್ಮನ ಸಮಾಧಾನ.

                                         ದಿನದ ವ್ಯವಹಾರ ಮುಗಿಸಿದ ಸೂರ್ಯ
                                         ಬೆಟ್ಟಗಳಾಚೆ ಮುಳುಗಿ ಮರೆಯಾದ.
  
                                         ರೊಟ್ಟಿಯ ನಿರೀಕ್ಷೆಯಲ್ಲಿದ್ದ ಮಗು,
                                         ಹಸಿದ ಹೊಟ್ಟೆಯಲ್ಲೇ ಮತ್ತೆ ನಿದ್ದೆಗೆ ಜಾರಿತು.

                                                                    ಕವಿ - ದಿ. ಕೃಷ್ಣ ಕಲಂಬ್
                                                                           (ಆತ್ಮಹತ್ಯೆಗೆ ಶರಣಾದ ವಿದರ್ಭದ ರೈತ)




ಸಾಯಿನಾಥ್ ಮನೆಗೆ ಫಿನ್ಲೆಂಡಿನಿಂದ ಒಬ್ಬ ಬಂದಿರ್ತಾನೆ. ಅವನಿಗಿವರು ಕಾಫಿ ಮಾಡಿ ಕೊಡ್ತಿದಾರೆ. ಅವನು ತೆಪ್ಪಗೆ ಕಾಫಿ ಕುಡಕೊಂಡು ವಾಪಸ್ ಹೋಗೋದ್ ಬಿಟ್ಟು, ಕ್ಯಾಲಿಫೋರ್ನಿಯಾದಲ್ಲಿ ಸಿಗುವಷ್ಟು ಒಳ್ಳೇ ಕಾಫಿ ನಿಮ್ಮಲ್ಲೂ ಸಿಗತ್ತಾ ಅಂತ ಕೇಳಿಬಿಟ್ಟ.  ಎಲ್ಲಿತ್ತೋ ಇವರಿಗೆ ಸಿಟ್ಟು...



ಒಂದು ಸಲ ಮುಂಬೈ ಷೇರ್ ಮಾರ್ಕೆಟ್ ಏಕಾಏಕಿ ಕುಸಿದು ಹೋಯಿತು. ತಕ್ಷಣ ಸ್ವತಃ ಹಣಕಾಸು ಮಂತ್ರಿಯೇ ದೆಹಲಿಯಿಂದ ಎರಡೇ ತಾಸುಗಳಲ್ಲಿ ವಿಶೇಷ ವಿಮಾನದಲ್ಲಿ ಹೊರಟು ಬಂದರು. ಕಂಗಾಲಾಗಿದ್ದ ಕೋಟ್ಯಾಧೀಶರಿಗೆ ಸಮಾಧಾನ ಹೇಳಿ, ಷೇರು ಮಾರುಕಟ್ಟೆ ಚೇತರಿಸೋದಕ್ಕೆ ಬೇಕಾದ ಕ್ರಮ ಕೈಗೊಂಡರು. ಆದರೆ, ವಿದರ್ಭಕ್ಕೆ.? ಸರಕಾರಿ ಅಂಕಿ ಅಂಶಗಳ ಪ್ರಕಾರ ನಲವತ್ತು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿದರ್ಭಕ್ಕೆ ಸಂಬಂಧಪಟ್ಟವರು ಭೇಟಿ ಕೊಟ್ಟು ರೈತರ ಆತ್ಮಹತ್ಯೆ ತಡೆಗಟ್ಟುವ ಯೋಜನೆ ಜಾರಿ ಮಾಡುವುದಕ್ಕೆ ತೆಗೆದುಕೊಂಡಿದ್ದು..?  ಹತ್ತು ವರ್ಷ..! ಅದೇ ಮಹಾರಾಷ್ಟ್ರದ ರಾಜಧಾನಿ ಮುಂಬೈನ ದಲಾಲ್ ಸ್ಟ್ರೀಟ್ನಲ್ಲಿರುವ ಷೇರ್ ಮಾರ್ಕೆಟ್ - ಅದೇ ಮಹಾರಾಷ್ಟ್ರದ ವಿದರ್ಭ. ಈ ಸರಕಾರ ಯಾರ ಪರವಾಗಿದೆ ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ..?
                      ಕಡಿಮೆ ಬಡ್ಡಿಗೆ ಎಂಟು ಸಾವಿರ ಸಾಲ ಸಿಗಲಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ವರದಿ ಬರೆದು ಮನೆಗೆ ಬಂದರೆ, ಅಲ್ಲೊಂದು ಪತ್ರ ಇತ್ತು. ನನ್ನ ಬ್ಯಾಂಕಿನ ಪತ್ರ. ನಿಮಗೆ, ಆರು ಪರ್ಸೆಂಟ್ ಬಡ್ಡಿಗೆ ಮರ್ಸಿಡೀಸ್ ಬೆಂಝ್ ಕಾರು ಕೊಳ್ಳೋದಕ್ಕೆ ಸಾಲ ಕೊಡ್ತೀವಿ, ಜಾಮೀನುದಾರರ ಅವಶ್ಯಕತೆ ಇಲ್ಲ ಅಂತಿತ್ತು ಅದರಲ್ಲಿ. ಇದು ಯಾವ ಸೀಮೆ ನ್ಯಾಯ..?
                                                                                       ಪಿ ಸಾಯಿನಾಥ್



ನೀರೋ ಕೊಟ್ಟ ಪಾರ್ಟಿ ಅದ್ಭುತವಾಗಿತ್ತು. ಆದರೆ ಒಂದೇ ಸಮಸ್ಯೆ. ಅಷ್ಟು ದೊಡ್ಡ ಗಾರ್ಡನ್ನಿಗೆ ಬೆಳಕು ಎಲ್ಲಿಂದ ತರೋದು ಅಂತ. ಆಗ ಆ ಮಹಾರಾಜ ಒಂದು ಐಡಿಯಾ ಮಾಡಿದ. ಜೈಲಿನಲ್ಲಿ ಖೈದಿಗಳನ್ನ ಒಬ್ಬೊಬ್ಬರನ್ನಾಗಿ ಕರೆಸಿ ಬೆಂಕಿ ಹಚ್ಚಿಸಿದ. ಅವರು ಧಗಧಗನೇ ಹೊತ್ತಿ ಉರೀತಿದ್ರೆ ಗಾರ್ಡನ್ ತುಂಬ ಬೆಳಕು.
                     ನನಗೆ ನೀರೋ ಮಹಾರಾಜನ ಬಗ್ಗೆ ಬೇಜಾರಿಲ್ಲ. ಬೇಜಾರಿರೋದು ಆ ಪಾರ್ಟಿಗೆ ಬಂದಿದ್ದ ಗಣ್ಯರ ಬಗ್ಗೆ. ಅವರು ಸಮಾಜದಲ್ಲಿ ಪ್ರತಿಷ್ಠಿತರೆನ್ನಿಸಿಕೊಂಡಿದ್ದವರು. ಶ್ರೀಮಂತರು, ಬರಹಗಾರರು, ಬುದ್ಧಿ ಜೀವಿಗಳು, ಸೆಲೆಬ್ರಿಟಿಗಳು. ಅಲ್ಲಿ, ತಮ್ಮಂತಹ ಮನುಷ್ಯನೊಬ್ಬ ಬೆಂಕಿಯ ಧಗೆಯಲ್ಲಿ ಬೆಂದು ಹೋಗ್ತಿದ್ರೆ, ಇವರು ಆ ಬೆಳಕಿನಲ್ಲಿ ಒಂದೊಂದೇ ಗುಟುಕು ವೈನ್ ಕುಡಿದರಲ್ಲ, ಒಂದೊಂದೇ ತುತ್ತು ಊಟ ಮಾಡಿದರಲ್ಲ, ದ್ರಾಕ್ಷಿ ಹಣ್ಣನ್ನ ಒಂದೊಂದಾಗಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿಕೊಂಡು ತಿಂದರಲ್ಲ. ಅವರು ಅದಿನ್ನೆಂಥವರಿರಬೇಕು.
                     ಐದೂವರೆ ವರ್ಷಗಳ ಕಾಲ ರೈತರ ಆತ್ಮಹತ್ಯೆಗಳ ಬಗ್ಗೆ ವರದಿ ಮಾಡಿ - ಮಾಡಿ, ನನಗೆ ನೀರೋನ ಅತಿಥಿಗಳ್ಯಾರು ಅನ್ನೋದು ಅರ್ಥ ಆಗಿದೆ. ಈಗ ಅದು ನಿಮಗೆ ಕೂಡ ಅರ್ಥ ಆಗಿರಬಹುದು.



Mahatma Gandhi who was the most prolific journalists India has ever produced, said, "recall the face of the weakest and the poorest  person you have met and ask yourself, how the action you contemplate will place him in a greater control of his life." I will give the same principle to journalism.

                                                                                                * P Sainath



4 comments:

  1. Really a touching one ajit.
    Very hard to digest facts of Vidarbha District farmers.
    If the present system is not giving any results then we have to have an alternate system. We all have to evolve that system which may give a little happiness to farmers of Vidarbha and other farmers through out the Country.

    ReplyDelete
  2. Really its fantastic articles ur presenting sir...... am also eager to work related to farmers n society sir..... thanks a lot

    ReplyDelete
  3. Ohh god give us an attitude which can beat d ignorance so deep rooted n selfishness so wide spread...make us really feel d agony of fellow human beings who suffer d darkness in the process of giving out light..:(

    ReplyDelete
  4. Its really shameful on Indians who are not thinking of those who are providing daily bread to them. . This post is inspiring me to do something for them . . hopefully will inspire many others too... Thanks a lot sir for this

    ReplyDelete